ಇಂಡಿಯಾನಪೊಲಿಸ್ನ ನರರಾಕ್ಷಸಿ ಹೆಂಗಸು ತನ್ನ ಸುಪರ್ದಿಗೆ ಬಿಟ್ಟಿದ ಹೆಣ್ಣುಮಗುವೊಂದನ್ನು ತಿಂಗಳುಗಟ್ಟಲೆ ಹಿಂಸಿಸಿ ಕೊಂದಳು!
ಮಕ್ಕಳನ್ನು ನೋಡಿಕೊಳ್ಳಲು, ಅವರ ಬೇಕು ಬೇಡಗಳನ್ನು ಪೂರೈಸಲು ಸಿಲ್ವಿಯಾಳ ತಂದೆ ಬನಿಜೆವಸ್ಕಿಗೆ ಪ್ರತಿವಾರ 20 ಡಾಲರ್ ಗಳನ್ನು ಕೊಡುತ್ತಿದ್ದ. ಆದರೆ ಅವನಿಂದ ಹಣ ಬರುವುದು ಕೊಂಚ ತಡವಾದರರೂ ಬನಿಜೆವಸ್ಕಿ ತನ್ನ ಕೋಪವನ್ನು ಸಿಲ್ವಿಯಾ ಮತ್ತು ಜೆನ್ನಿ ಮೇಲೆ ತೀರಿಸುತ್ತಿದ್ದಳು.
ಇದೊಂದು ಭಯಾನಕ ಕ್ರೈಮ್ ಕತೆ. ಅಮೆರಿಕದ ಅಲೆಮಾರಿ ಜನಾಂಗಕ್ಕೆ ಸೇರಿದ್ದ ದಂಪತಿಯ ಇಬ್ಬರು ಮಕ್ಕಳು ತಮ್ಮ ಬಾಲ್ಯದಲ್ಲಿ ಅನುಭವಿಸಿ ಅವರಲ್ಲೊಬ್ಬಳು ಚಿತ್ರಹಿಂಸೆ ಅನುಭವಿಸುತ್ತಲೇ ಸಾವಿಗೀಡಾದ ಕರುಣಾಜನಕ ಕತೆಯಿದು. ಸೆನ್ಸೇಷನಲ್ ಕ್ರೈಮ್ ಕತೆಗಳ ಸರಣಿಯಲ್ಲಿ ನಾವಿಂದು ಅಮೆರಿಕ ಇಂಡಿಯಾನಪೊಲಿಸ್ ನಲ್ಲಿ (Indianapolis) ವಾಸವಾಗಿದ್ದ ಮತ್ತು ಕೇವಲ 16ನೇ ವಯಸ್ಸಿನಲ್ಲಿ ನರಕಯಾತನೆ ಅನುಭವಿಸಿ ಸತ್ತ ಸಿಲ್ವಿಯಾ ಲೈಕೆನ್ಸ್ ಳ (Sylvia Likens) ದಾರುಣ ಕತೆಯನ್ನು ಹೇಳುತ್ತಿದ್ದೇವೆ. 1965 ರಲ್ಲಿ ನರರಾಕ್ಷಸಿ ಗೆಟ್ರುಡೆ ಬನಿಜೆವಸ್ಕಿ (Gertrude Baniszewski) ಮನೆಯಲ್ಲಿ ನರಪೇತಲಳಂತಿದ್ದ ಸಿಲ್ವಿಯಾಳ ಮೃತದೇಹ ಸಿಕ್ಕಾಗ ಅವಳ ಮೈತುಂಬಾ ಉರಿಯುವ ಸಿಗರೇಟ್ ನಿಂದ ಸುಟ್ಟ ಗಾಯಗಳಿದ್ದವು. ಆ ಮುಗ್ಧ ಹುಡುಗಿ ಅನುಭವಿಸರಬಹುದಾದ ಹಿಂಸೆ ಎಷ್ಟು ಅನ್ನೋದನ್ನು ನೀವು ಆರ್ಥಮಾಡಿಕೊಂಡಿರಬಹುದು. 60 ರ ದಶಕದ ಉತ್ತರಾರ್ಧದಲ್ಲಿ ಅವಳ ಕತೆಯನ್ನು ಇಂಡಿಯಾನಪೊಲಿಸ್ ಮಾಸಪತ್ರಿಕೆ ಪ್ರಕಟಿಸಿತ್ತು.
ಆಗಲೇ ಹೇಳಿದಂತೆ ಸಿಲ್ವಿಯಾ ಮತ್ತು ಅವಳ ತಂಗಿ ಜೆನ್ನಿ ಅಲೆಮಾರಿ ದಂಪತಿಯ ಮಕ್ಕಳಾಗಿದ್ದರಿಂದ ಬನಿಜೆವಸ್ಕಿ ಮನೆಯಲ್ಲಿ ವಾಸವಾಗಿದ್ದರು. ದಂಪತಿ ಪ್ರತಿದಿನ ಒಂದೂರಿನಿಂದ ಮತ್ತೊಂದೂರಿಗೆ ಪ್ರಯಾಣಿಸುತ್ತಿದ್ದುದ್ದರಿಂದ ಮಕ್ಕಳನ್ನು ಬನಿಜೆವಸ್ಕಿಯ ಮನೆಯಲ್ಲಿ ಬಿಟ್ಟಿದ್ದರು. ಮಕ್ಕಳನ್ನು ನೋಡಿಕೊಳ್ಳಲು, ಅವರ ಬೇಕು ಬೇಡಗಳನ್ನು ಪೂರೈಸಲು ಸಿಲ್ವಿಯಾಳ ತಂದೆ ಬನಿಜೆವಸ್ಕಿಗೆ ಪ್ರತಿವಾರ 20 ಡಾಲರ್ ಗಳನ್ನು ಕೊಡುತ್ತಿದ್ದ. ಆದರೆ ಅವನಿಂದ ಹಣ ಬರುವುದು ಕೊಂಚ ತಡವಾದರರೂ ಬನಿಜೆವಸ್ಕಿ ತನ್ನ ಕೋಪವನ್ನು ಸಿಲ್ವಿಯಾ ಮತ್ತು ಜೆನ್ನಿ ಮೇಲೆ ತೀರಿಸುತ್ತಿದ್ದಳು.
ಆಗ 37-ವರ್ಷದವಳಾಗಿದ್ದ ಬನಿಜೆವಸ್ಕಿ ಕ್ರಮೇಣ ತನ್ನ ಕೋಪಕ್ಕೆ ಸಿಲ್ವಿಯಾಳನ್ನು ಮಾತ್ರ ಟಾರ್ಗೆಟ್ ಮಾಡತೊಡಗಿದಳು. ಇದು ಕೇವಲ ಒಬ್ಬ ಹಿರಿ ಹೆಂಗಸು ಚಿಕ್ಕ ಮಗುವನ್ನು ದಂಡಿಸುವ ಪ್ರಕರಣವಾಗಿರಲಿಲ್ಲ. ಬನಿಜೆವಸ್ಕಿಗೆ 7 ಜನ ಮಕ್ಕಳಿದ್ದರು ಮತ್ತು ಎಲ್ಲರೂ ಒಂದೇ ಮನೆಯಲ್ಲಿ ವಾಸವಾಗಿದ್ದರು.
ಸಿಲ್ವಿಯಾ ಮೇಲೆ ಬನಿಜೆವಸ್ಕಿ ನಡೆಸುತ್ತಿದ್ದ ಹಿಂಸಾವಿನೋದಿ ಮತ್ತು ಕ್ರೂರ ಹಲ್ಲೆಗಳಲ್ಲಿ ಅವಳ ಮಕ್ಕಳು ಸಹ ಪಾಲ್ಗೊಳ್ಳುತ್ತಿದ್ದರು. ಅಷ್ಟು ಮಾತ್ರವಲ್ಲ ಅವರೆಲ್ಲ ಸೇರಿ ಸಿಲ್ವಿಯಾಳನ್ನು ಹಿಂಸಿಸುವಾಗ ನೆರೆಹೊರೆಯ ಮಕ್ಕಳು ಅಲ್ಲಿಗೆ ಬಂದು ‘ತಮಾಷೆ’ ನೋಡುತ್ತಿದ್ದರು. ಆದರೆ ಯಾರಿಗೂ ಸಿಲ್ವಿಯಾ ಮೇಲೆ ಕನಿಕರ ಹುಟ್ಟಲಿಲ್ಲ ಅವಳ ಸಂಕಟ ಅರ್ಥವಾಗಲಿಲ್ಲ. ನೆರೆಹೊರೆಯ ಮಕ್ಕಳು, ಸಹಾಯವಾಣಿಗೆ ಕರೆ ಮಾಡಿ ತಿಳಿಸುವ ಮಾತು ಹಾಗಿರಲಿ ತಮ್ಮ ತಂದೆತಾಯಿಗಳ ಮುಂದೆ ಕೂಡ ಬನಿಜೆವಸ್ಕಿಯ ಕ್ರೌರ್ಯದ ಬಗ್ಗೆ ಬಾಯಿಬಿಡಲಿಲ್ಲ.
ಅಕ್ಟೋಬರ್, 1965 ರ ಒಂದು ದಿನ ಬನಿಜೆವಸ್ಕಿ ಹೆಸರಿನ ರಾಕ್ಷಸಿ ಸಿಲ್ವಿಯಾಳನ್ನು ಹೊಡೆದು ಕೊಂದೇಬಿಟ್ಟಳು. ಬಳಿಕ ಅವಳು ನೆರೆಮನೆಯವನ ಬಳಿ ಹೋಗಿ ಸಿಲ್ವಿಯಾ ಮನೆ ಬಿಟ್ಟು ಓಡಿಹೋಗಿದ್ದಾಳೆ ಅಂತ ಪೊಲೀಸರಿಗೆ ಫೋನ್ ಮಾಡುವಂತೆ ಒತ್ತಾಯಿಸಿದಳು. ಪೊಲೀಸರು ಬನಿಜೆವಸ್ಕಿಯ ಮನೆಗೆ ಬಂದಾಗ ಸಿಲ್ವಿಯಾಳ ತಂಗಿ ಜೆನ್ನಿ ಲೈಕನ್ಸ್ ಒಬ್ಬ ಅಧಿಕಾರಿಯ ಕಿವಿಯಲ್ಲಿ, ‘ಪ್ಲೀಸ್, ನನ್ನನ್ನು ಇಲ್ಲಿಂದ ಹೊರಗೆ ಕರೆದುಕೊಂಡು ಹೋಗಿ, ಏನು ನಡೆಯಿತು ಅನ್ನೋದನ್ನ ಹೇಳುತ್ತೇನೆ,’ ಅಂತ ಪಿಸುಗುಟ್ಟಿದಳು.
ಜೆನ್ನಿ ಹೇಳಿದ್ದನ್ನೇ ಸಾಕ್ಷ್ಯವಾಗಿಟ್ಟುಕೊಂಡು ಪೊಲೀಸರು ಬನಿಜೆವಸ್ಕಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಕೋರ್ಟ್ ಆ ಕ್ರೂರ ಹೆಂಗಸಿಗೆ 20-ವರ್ಷ ಜೈಲುವಾಸದ ಶಿಕ್ಷೆ ವಿಧಿಸಿತು. ಜೈಲಿನಿಂದ ಬಿಡುಗಡೆಯಾದ ನಂತರ ಅವಳು ಅಯೋವಾಗೆ ಹೋಗಿ ತನ್ನ ಹೆಸರನ್ನು ಬದಲಾಯಿಸಿಕೊಂಡು ಜೀವಿಸಿಲಾರಂಭಿಸಿದಳು. ಕೊನೆಗೆ 1990 ರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಗೆ ಬಲಿಯಾದಳು. ಅವಳೊಂದಿಗೆ ಸಿಲ್ವಿಯಾ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದವರು ಮಕ್ಕಳಾಗಿದ್ದರಿಂದ ಸಣ್ಣ ಪ್ರಮಾಣದ ಶಿಕ್ಷೆಗೊಳಗಾಗಿ ಹೊರಬಂದರು.
ಮತ್ತಷ್ಟು ಕ್ರೈಮ್ ಕತೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ