ಕುವೈತ್​ನಲ್ಲಿ ಉದ್ಯೋಗದ ಆಮಿಷ: 30 ಯುವಕರಿಗೆ ಒಟ್ಟು 52 ಲಕ್ಷ ರೂ. ಪಂಗನಾಮ

ವಿದೇಶದಲ್ಲಿ ಉದ್ಯೋಗದ ಆಮಿಷ ತೋರಿಸಿ ಸುಮಾರು 30 ಯುವಕರಿಗೆ ತಂಡವೊಂದು ಮಕ್ಮಲ್​ ಟೋಪಿ ಹಾಕಿರುವ ಬಗ್ಗೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುವೈತ್ ಡಿಫೆನ್ಸ್ ಆಸ್ಪತ್ರೆಯಲ್ಲಿ ಉದ್ಯೋಗ ಕೊಡಿಸೋದಾಗಿ ನಂಬಿಸಿ, ಆರೋಪಿಗಳು ವಂಚನೆ ಮಾಡಿದ್ದಾರೆ ಎಂದು ದೂರಲ್ಲಿ ತಿಳಿಸಲಾಗಿದೆ.

ಕುವೈತ್​ನಲ್ಲಿ ಉದ್ಯೋಗದ ಆಮಿಷ: 30 ಯುವಕರಿಗೆ ಒಟ್ಟು 52 ಲಕ್ಷ ರೂ. ಪಂಗನಾಮ
ಯುವಕರಿಗೆ ವಂಚನೆ
Updated By: ಪ್ರಸನ್ನ ಹೆಗಡೆ

Updated on: Oct 08, 2025 | 12:05 PM

ಕಾರವಾರ, ಅಕ್ಟೋಬರ್​ 08: ಕುವೈತ್ (Kuwait ) ಡಿಫೆನ್ಸ್ ಆಸ್ಪತ್ರೆಯಲ್ಲಿ ಉದ್ಯೋಗವಿದ್ದು ಸಾಕಷ್ಟು ಸಂಬಳ ಸಿಗಲಿದೆ. ಕೆಲ ವರ್ಷ ದುಡಿದು ಊರಿಗೆ ವಾಪಾಸ್ ಆಗಿ ಲೈಫ್​ ಸೆಟಲ್ ಮಾಡಿಕೊಳ್ಳಬಹುದು ಎಂದು ನಂಬಿಕೆ ಹುಟ್ಟಿಸಿ 30 ಯುವಕರಿಂದ 52 ಲಕ್ಷ ರೂಪಾಯಿ ಹಣ ಪಡೆದು ತಂಡವೊಂದು ವಂಚಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಆರೋಪಿಗಳಾದ ಹೊನ್ನಾವರ ತಾಲೂಕಿನ ಹೇರಂಗಡಿಯ ಜಾಫರ್ ಸಾದಿಕ್ ಮೋಕ್ತೆಸರ್, ನೌಶಾದ್ ಕ್ವಾಜಾ ಹಾಗೂ ಹೈದ್ರಾಬಾದ್ ಮೂಲದ ಸುಜಾತ ಜಮ್ಮಿ, ನಿರುದ್ಯೋಗಿ ಯುವಕರನ್ನೇ ಟಾರ್ಗೆಟ್​ ಮಾಡುತ್ತಿದ್ದರು. ಕಳೆದ ಡಿಸೆಂಬರ್​​ ನಲ್ಲಿ ಕರ್ನಾಟಕ ಹಾಗೂ ಕೇರಳ ರಾಜ್ಯದ ನಿರುದ್ಯೋಗಿ ಯುವಕರಿಗೆ ಬಲೆ ಬೀಸಿದ್ದ ತಂಡ,  ಕುವೈತ್ ಡಿಫೆನ್ಸ್ ಆಸ್ಪತ್ರೆಯಲ್ಲಿ ಉದ್ಯೋಗ ಖಾಲಿ ಇದೆ ಎಂಬ ಜಾಲತಾಣದ ಪ್ರಕಟಣೆ ತೋರಿಸಿ ಆಮಿಷ ಒಡ್ಡಿತ್ತು. ಅಲ್ಲಿ ಕೆಲಸ ಮಾಡಿದರೆ ನೀವು ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸಬಹುದು ಎಂದು ನಂಬಿಸಿ ಸುಮಾರು 30 ಜನರಿಂದ 52,01,185 ರೂಪಾಯಿ ಹಣವನ್ನ ಇವರು ಪಡೆದಿದ್ದರು ಎಂಬುದು ಗೊತ್ತಾಗಿದೆ.

ಇದನ್ನೂ ಓದಿ: ಗಂಗಾವತಿ: ಬಿಜೆಪಿ ಯುವ ಮುಖಂಡ ವೆಂಕಟೇಶ್ ಬರ್ಬರ ಹತ್ಯೆ

ಮಂಗಳೂರು ಹಾಗೂ ಕಾಸರಗೋಡಿನಲ್ಲಿ ಉತ್ತಮ ಸಂಪರ್ಕ ಹೊಂದಿದ್ದ ನೌಶಾದ್​ ಎಂಬಾತನ ಜೊತೆ ಜಾಫರ್, ನಿರಂತರ ಸಣಪರ್ಕ ದಲ್ಲಿದ್ದ. ಕುವೈತ್​ನಲ್ಲಿ ಕೆಲಸ ಕೊಡಿಸುವ ಈತನ ಭರವಸೆಯನ್ನ ನಂಬಿದ್ದ ನೌಶಾದ್​, ತನಗೆ ಪರಿಚಯ ಇರುವ ಯುವಕರಿಗೆ ವಿಷಯ ತಿಳಿಸಿದ್ದ. ಉದ್ಯೋಗದ ಆಸೆಯಿಂದ ಹಂತ ಹಂತವಾಗಿ ಜಾಫರ್​ ಖಾತೆಗೆ ಹಣವನ್ನೂ ವರ್ಗಾವಣೆ ಮಾಡಲಾಗಿತ್ತು. ಹಣ ಹಾಕುವ ಸಂದರ್ಭ ನೌಶಾದ್​ ಜೊತೆ ನಿರಂತರ ಸಂಪರ್ಕದಲ್ಲಿರುತ್ತಿದ್ದ ಜಾಫರ್ ಕೆಲವೊಮ್ಮೆ ಮೊಬೈಲ್​ ಸ್ವಿಚ್ಆಫ್ ಮಾಡುತ್ತಿದ್ದ. ಈ ವೇಳೆ ಅನುಮಾನಪಟ್ಟ ನೌಶಾದ್​ ಪ್ರಶ್ನಿಸಿದಾಗ, ನನ್ನ ಮೇಲೆ ನಿಮಗೆ ನಂಬಿಕೆ ಇಲ್ಲದೆ ಇರಬಹುದು. ಆದರೆ, ಕುವೈತ್​ನ ಡಿಫೆನ್ಸ್ ವೆಬ್​ಸೈಟ್​ನಲ್ಲಿ ಹಾಕಿರುವ ಪ್ರಕಟಣೆಯನ್ನಾದರೂ ನಂಬಿ ಎಂದು ಗದರಿದ್ದ. ಹೀಗಾಗಿ ಆತನನ್ನು ನಂಬಿದ್ದ ನೌಶಾದ್​ ಮತ್ತೆ ಕೆಲವರ ಕಡೆಯಿಂದ ಹಣ ಹಾಕಿಸಿದ್ದಾರೆ. ಆದರೆ ಹಣ ನೀಡಿ ವರ್ಷ ಕಳೆದರೂ ಉದ್ಯೋಗದ ಬಗ್ಗೆ ಸುಳಿವಿಲ್ಲದ ಕಾರಣ ಜಾಫರ್​ನನ್ನು ನೌಶಾದ್​ ಮತ್ತೆ ಪ್ರಶ್ನಿಸಿದ್ದಾರೆ. ಈ ವೇಳೆ ಮೊಬೈಲ್​ ಸ್ವಿಚ್​​ಆಫ್​ ಮಾಡಿರುವ ಆತ ಇನ್ನೂ ಸಂಪರ್ಕಕ್ಕೆ ಸಿಕ್ಕಿಲ್ಲ ಎಂಬುದು ನೌಶಾದ್​ ಅಳಲು.

ಘಟನೆ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ಜಾಫರ್​ ಬಗ್ಗೆ ಮಾಹಿತಿ ಕಲೆಹಾಕಲಾಗಿದ್ದು, ಆತನ ಜೊತೆ ಇನ್ನಿಬ್ಬರು ಇರೋದು ಈ ವೇಳೆ ಗೊತ್ತಾಗಿದೆ. ಮೂವರು ಆರೋಪಿಗಳ ಪೈಕಿ ನೌಶಾದ್ ಕ್ವಾಜಾ ಹೊನ್ನಾವರದಲ್ಲಿಯೇ ಇದ್ದು, ಆತನನ್ನು ವಶಕ್ಕೆ ಪಡೆದು ತನಿಖೆ ಮಾಡುವಂತೆ ಹೊನ್ನಾವರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ನೌಕರಿಯ ಆಸೆಗೆ ಹಣ ಕೊಟ್ಟು ಯಾಮಾರಿದ ಯುವಕರು ಒಂದೆಡೆಯಾದ್ರೆ, ಜಾಫರ್​ ನಂಬಿ ಮಧ್ಯವರ್ತಿ ಕೆಲಸ ಮಾಡಿದ್ದ ನೌಶಾದ್​ ಈಗ ತ್ರಿಶಂಕು ಸ್ಥಿತಿಯಲ್ಲಿದ್ದಾರೆ.

ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.