ಪತಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಮಹಿಳೆಯಿಂದ ಕಿಡ್ನಿ ದಾನ ಪಡೆದು ಮೋಸ: ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ
ಪತಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಮಹಿಳೆಯಿಂದ ಕಿಡ್ನಿ ದಾನ ಪಡೆದು ಮೋಸ ಮಾಡಿದ್ದು, ಇದೀಗ ಮಹಿಳೆ ಪೊಲೀಸ್ ಮೆಟ್ಟಿಲೇರಿದ್ದಾಳೆ.
ಚಂಡೀಗಢ: ಕಿಡ್ನಿ ದಾನ (kidney donate) ಮಾಡಿದ್ರೆ ಗಂಡನಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆಗೆ ಮೋಸ ಮಾಡಿರುವ ಘಟನೆ ನಡೆದಿದೆ. ಗಂಡನಿಗೆ ಸರ್ಕಾರಿ ಕೆಲಸ ಆಮಿಷವೊಡ್ಡಿ ನನ್ನಿಂದ ಕಿಡ್ನಿ ದಾನ ಮಾಡಿಸಿಕೊಂಡು ವಂಚಿಸಿದ್ದಾರೆ ಎಂದು ಹರಿಯಾಣದ ಬಲ್ಲಭಗಢ ಮೂಲದ ಮಹಿಳೆಯೊಬ್ಬಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಎರಡು ವರ್ಷಗಳ ಹಿಂದೆ ಕಿಡ್ನಿ ಕಸಿಗೆ ಸಂಬಂಧಿಸಿದ ಜಾಹಿರಾತನ್ನು ಮಹಿಳೆ ನೋಡಿದ್ದಳು. ಬಳಿಕ ಜಾಹಿರಾತಿನಲ್ಲಿ ಪ್ರಕಟವಾಗಿದ್ದ ಮೊಬೈಲ್ ನಂಬರ್ಗೆ ಕರೆ ಮಾಡಿ, ತಾನು ಕಿಡ್ನಿ ದಾನ ಮಾಡುವುದಾಗಿ ಹೇಳಿದ್ದಳು. ನಂತರ ಮನಸ್ಸು ಬದಲಿಸಿ ಕಿಡ್ನಿ ದಾನ ಮಾಡುವುದರಿಂದ ಹಿಂದೆ ಸರಿದಿದ್ದಳು. ಇದಾದ ಬಳಿಕ ಜಾಹಿರಾತು ನೀಡಿದವರು ಮಹಿಳೆಗೆ ಹಲವು ಬಾರಿ ಕರೆ ಮಾಡಿ ಕಿಡ್ನಿ ದಾನ ಮಾಡುವಂತೆ ಮನವೊಲಿಸಿದ್ದಾರೆ.
ಕಿಡ್ನಿ ದಾನ ಮಾಡಿದರೆ ಗಂಡನಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಆಫರ್ ನೀಡಿದ್ದಾರೆ. ಈ ಆಫರ್ಗೆ ಮಹಿಳೆ ಒಪ್ಪಿಕೊಂಡು ತನ್ನ ಒಂದು ಕಿಡ್ನಿಯನ್ನು ದಾನ ಮಾಡಿದ್ದಾಳೆ. ಫರೀದಾಬಾದ್ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಿಡ್ನಿ ಕಸಿ ಮಾಡಲಾಯ್ತು. ಇದಾದ ಬಳಿಕ ಸಾಕಷ್ಟು ತಿಂಗಳು ಕಳೆದರು ಗಂಡನಿಗೆ ಮಾತ್ರ ಸರ್ಕಾರಿ ಕೆಲಸ ಸಿಕ್ಕಿಲ್ಲ.
ಕರೆ ಮಾಡಿ ಕೇಳಿದ್ರೆ ಯಾವುದೇ ಸ್ಪಂದನೆ ನೀಡಿಲ್ಲ. ಇದರಿಂದ ಮಹಿಳೆ ಪೊಲೀಸರ ಮೊರೆ ಹೋಗಿದ್ದು, ಅವರ ವಿರುದ್ಧ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದು. ಈ ಪ್ರಕರಣದ ಹಿಂದೆ ಅಂಗಾಂಗ ಮಾಫಿಯಾ ಏನಾದರೂ ಇದೆಯಾ? ಎಂಬ ಆಯಮದಲ್ಲೂ ತನಿಖೆ ನಡೆಸುವುದಾಗಿ ತನಿಖಾಧಿಕಾರಿ ತಿಳಿಸಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 4:07 pm, Mon, 19 December 22