ಗ್ರೀನ್ ರಿವರ್ ಕಿಲ್ಲರ್ ಅಂತ ಗುರುತಿಸಿಕೊಂಡಿದ್ದ ಸರಣಿ ಹಂತಕ ರಿಜ್ವೇ 80ಕ್ಕೂ ಹೆಚ್ಚು ಮಹಿಳೆಯರನ್ನು ಕೊಂದಿದ್ದ, ಅವರಲ್ಲಿ ಹೆಚ್ಚಿನವರು ವೇಶ್ಯೆಯರು!
ಅವನು ಕೊಂದ ಮಹಿಳೆಯರ ಶವಗಳು ಗ್ರೀನ್ ನದಿತೀರದಲ್ಲಿ ಪತ್ತೆಯಾಗಿದ್ದರಿಂದ ಹಂತಕನಿಗೆ ‘ಗ್ರೀನ್ ರಿವರ್ ಕಿಲ್ಲರ್’ ಎಂಬ ಉಪನಾಮ ಬಂದಿತ್ತು. ಬೇರೆ ಕೆಲ ಶವಗಳು ಅರಣ್ಯ ಪ್ರದೇಶಗಳಲ್ಲಿ ಪತ್ತೆಯಾಗಿದ್ದವು. 1984 ರ ನಂತರ ಅವನು ಹೆಚ್ಚಿನ ಸಂಖ್ಯೆಯ ಮಹಿಳೆಯರನ್ನು ಕೊಂದಿದ್ದ ಮತ್ತು ಅವನಿಂದ ಕೊನೆಯ ಕೊಲೆ 1998ರಲ್ಲಿ ನಡೆದಿತ್ತು.
ಗ್ಯಾರಿ ರಿಜ್ವೇನ ಪೂರ್ತಿ ಹೆಸರು ಗ್ಯಾರಿ ಲಿಯಾನ್ ರಿಜ್ವೇ (Gary Leon Ridgway) ಆದರೂ ಅಮೆರಿಕ ಮತ್ತು ವಿಶ್ವದ ಪಾತಕ ಇತಿಹಾಸದಲ್ಲಿ ಅವನನ್ನು ಗ್ರೀನ್ ರಿವರ್ ಕಿಲ್ಲರ್ (Green River Killer) ಅಂತಲೇ ಗುರುತಿಸಲಾಗುತ್ತದೆ. ಫೆಬ್ರುವರಿ 18, 1949 ರಂದು ಅಮೆರಿಕ ಉಟಾಹ್ ನಲ್ಲಿರುವ ಸಾಲ್ಟ್ ಲೇಕ್ ಸಿಟಿಯಲ್ಲಿ (Salt Lake City) ಹುಟ್ಟಿದ ರಿಜ್ವೇ 1980 ಮತ್ತು 1990 ರ ನಡುವೆ ವಾಷಿಂಗ್ಟನ್ ನಲ್ಲಿ ಕನಿಷ್ಟ 80 ಮಹಿಳೆಯರನ್ನು ಕೊಂದಿದ್ದ, ಅವರಲ್ಲಿ ಹೆಚ್ಚಿನವರು ವೇಶ್ಯೆಯರು ಅನ್ನೋದು ಗಮನಿಸಬೇಕಾದ ಸಂಗತಿ. ಆದರೆ, ಕೋರ್ಟ್ ನಲ್ಲಿ ಅವನು ಒಪ್ಪಿಕೊಂಡಿದ್ದು 48 ಕೊಲೆಗಳು. ವಾಷಿಂಗ್ಟನ್ ನಗರದಲ್ಲಿ ಸೀಟ್ಯಾಕ್ ಅಂತ ಈಗ ಕರೆಯಲಾಗುವ ಪ್ರದೇಶದಲ್ಲಿ ರಿಜ್ವೇನ ಬಾಲ್ಯ ಕಳೆದಿತ್ತು. ಅವನ ತಂದೆ ಒಬ್ಬ ಬಸ್ ಡ್ವೈವರ್ ಆಗಿದ್ದ ಮತ್ತು ತಾಯಿ ಸೂಪರ್ ಮಾರ್ಕೆಟೊಂದರಲ್ಲಿ ಸೇಲ್ಸ್ ಕ್ಲರ್ಕ್ ಆಗಿದ್ದಳು. ತನ್ನ ತಾಯಿಯ ನಡತೆ ಸರಿಯಿರಲಿಲ್ಲ ಎಂದು ಅವನು ನಂತರದ ವರ್ಷಗಳಲ್ಲಿ ಹೇಳಿದ್ದ.
ಅಮ್ಮನನ್ನು ಇಷ್ಟಪಡುತ್ತಿರಲಿಲ್ಲ !
ಚಿಕ್ಕವನಿರುವಾಗ ಅವನಿಗೆ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿಕೊಳ್ಳುವ ಸಮಸ್ಯೆಯಿತ್ತು ಮತ್ತು ಹದಿಹರೆಯದಲ್ಲೂ ಅವನು ಅದರಿಂದ ಬಳಲುತ್ತಿದ್ದ. ಅವನು ಹಾಸಿಗೆಯಲ್ಲಿ ಉಚ್ಚೆ ಮಾಡಿಕೊಂಡಾಗಲೆಲ್ಲ ಅವನಮ್ಮ ಖಾಸಗಿ ಅಂಗಗಳನ್ನು ತೊಳೆಯುತ್ತಿದ್ದಳಂತೆ. ಹಾಗೆ ತೊಳೆಯುವಾಗ ಅವಳನ್ನು ಕೊಲ್ಲುವ ಬಗ್ಗೆ ರಿಜ್ವೇ ಕಲ್ಪನೆ ಮಾಡಿಕೊಳ್ಳುತ್ತಿದ್ದನಂತೆ. ತನ್ನ 20ನೇ ವಯಸ್ಸಿನಲ್ಲಿ ಅಂದರೆ 1969 ರಲ್ಲಿ ಹೈಸ್ಕೂಲೊಂದರಲ್ಲಿ ವಿದ್ಯಾಭ್ಯಾಸ ಪೂರೈಸಿದ ನಂತರ ರಿಜ್ವೇ ಯುಎಸ್ ನೌಕಾದಳಕ್ಕೆ ಸೇರಿ ಸಿಯಾಟಲ್ ನಲ್ಲಿ ಎರಡು ವರ್ಷಗಳ ಕಾಲ ಟ್ರಕ್ ಪೇಂಟರ್ ಆಗಿ ಕೆಲಸ ಮಾಡಿದ. ನಂತರದ 30 ವರ್ಷಗಳಲ್ಲಿ ಅವನು ಮರು ಬಾರಿ ಮದುವೆಯಾದ ಮತ್ತು ಒಬ್ಬ ಮಗ ಅವನಿಗಿದ್ದಾನೆ.
ಮೊದಲ ಕೊಲೆ 1980ರಲ್ಲಿ
1980 ರಲ್ಲಿ ರಿಜ್ವೇ ಒಬ್ಬ ವೇಶ್ಯೆಯನ್ನು ಉಸಿರುಗಟ್ಟಿಸಿ ಸಾಯಿಸಿದ್ದ. ಅದರೆ ಅವನು ಕೋರ್ಟ್ ನಲ್ಲಿ ಆಕೆಯೆ ತನ್ನನ್ನು ಮನಬಂದಂತೆ ಕಚ್ಚಿದ್ದಳು ಅಂತ ಹೇಳಿದ್ದರಿಂದ ಅವನ ವಿರುದ್ಧ ಯಾವುದೇ ಚಾರ್ಜ್ ವಿಧಿಸಿರಲಿಲ್ಲ. ಎರಡು ವರ್ಷಗಳ ಬಳಿಕ ಅವನು ಕಳ್ಳತನದ ಅಪರಾಧವೊಂದರಲ್ಲಿ ಅರೆಸ್ಟ್ ಆಗಿದ್ದ. ಅಲ್ಲಿಂದ ಅವನು ಮಹಿಳೆಯರನ್ನು ಕೊಲ್ಲುವ ಕೃತ್ಯಗಳನ್ನು ಶುರುವಿಟ್ಟುಕೊಂಡ. ಪೊಲೀಸರ ಪ್ರಕಾರ ಅವನ ಮೊದಲ ಬಲಿ 16-ವರ್ಷ-ವಯಸ್ಸಿನ ಹುಡುಗಿಯಾಗಿದ್ದಳು. 1982 ರ ಜುಲೈನಲ್ಲಿ ಅವಳು ತನ್ನನ್ನು ದತ್ತುಪಡೆದ ಮನೆಯಿಂದ ನಾಪತ್ತೆಯಾಗಿದ್ದಳು. ಒಂದು ವಾರದ ನಂತರ ಅವಳ ದೇಹ ಗ್ರೀನ್ ರಿವರ್ ನಲ್ಲಿ ಪತ್ತೆಯಾಗಿತ್ತು. ಅದಾದ ಎರಡು ವರ್ಷಗಳ ಅವಧಿಯಲ್ಲಿ ರಿಜ್ವೇ ಕನಿಷ್ಟ 40 ಮಹಿಳೆಯರ ಮೇಲೆ ಲೈಂಗಿಕ ಅತ್ಯಾಚಾರವೆಸಗಿ ಕೊಂದು ಹಾಕಿದ್ದ. ಅವರಲ್ಲಿ ಹೆಚ್ಚಿನವರು ವೇಶ್ಯೆಯವರಾಗಿದ್ದರು ಇಲ್ಲವೇ ಮನೆಗಳನ್ನು ತೊರೆದು ಬಂದವರಾಗಿದ್ದರು.
ಇದನ್ನೂ ಓದಿ: ಏರ್ ಇಂಡಿಯಾದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದ ಶಂಕರ್ ಮಿಶ್ರಾ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ದೆಹಲಿ ಕೋರ್ಟ್
ಅವನು ಕೊಂದ ಮಹಿಳೆಯರ ಶವಗಳು ಗ್ರೀನ್ ನದಿತೀರದಲ್ಲಿ ಪತ್ತೆಯಾಗಿದ್ದರಿಂದ ಹಂತಕನಿಗೆ ‘ಗ್ರೀನ್ ರಿವರ್ ಕಿಲ್ಲರ್’ ಎಂಬ ಉಪನಾಮ ಬಂದಿತ್ತು. ಬೇರೆ ಕೆಲ ಶವಗಳು ಅರಣ್ಯ ಪ್ರದೇಶಗಳಲ್ಲಿ ಪತ್ತೆಯಾಗಿದ್ದವು. 1984 ರ ನಂತರ ಅವನು ಹೆಚ್ಚಿನ ಸಂಖ್ಯೆಯ ಮಹಿಳೆಯರನ್ನು ಕೊಂದಿದ್ದ ಮತ್ತು ಅವನಿಂದ ಕೊನೆಯ ಕೊಲೆ 1998ರಲ್ಲಿ ನಡೆದಿತ್ತು.
ಟಾಸ್ಕ್ ಫೋರ್ಸ್ ರಚನೆಯಾಗಿತ್ತು
ಒಬ್ಬ ಸರಣಿ ಹಂತಕನೇ ಕೊಲೆಗಳನ್ನು ನಡೆಸುತ್ತಿರುವನೆನ್ನುವುದು ಪೊಲೀಸರಿಗೆ 1982 ರಲ್ಲೇ ಮನದಟ್ಟಾಗಿ ಕೊಲೆಗಾರನನ್ನು ಸೆರೆಹಿಡಿಯಲು ಒಂದು ಟಾಸ್ಕ್ ಫೋರ್ಸ್ ರಚಿಸಿದ್ದರು. ಅವರಿಗೆ ರಿಜ್ವೇ ಶಂಕಿತನಾಗಿ ಕಾಣತೊಡಗುವುದಕ್ಕೆ ಹೆಚ್ಚಿನ ಸಮಯ ಬೇಕಾಗಲಿಲ್ಲ. 1983 ರಲ್ಲಿ ನಾಪತ್ತೆಯಾದ ವೇಶ್ಯೆಯೊಬ್ಬಳು ರಿಜ್ವೇ ಓಡಿಸುತ್ತಿದ್ದ ಟ್ರಕ್ ಹತ್ತಿದನ್ನು ನೋಡಿದ್ದಾಗಿ ಒಬ್ಬರು ಸಾಕ್ಷ್ಯ ನುಡಿದಾಗ ಅವನನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ತನ್ನ ಮೇಲೆ ಹೊರೆಸಿದ ಆರೋಪವನ್ನು ರಿಜ್ವೇ ಅಲ್ಲಗಳೆದ ಮತ್ತು ಪೊಲೀಸರು ನಡೆಸಿದ ಪಾಲಿಗ್ರಾಫ್ ಟೆಸ್ಟ್ ನಲ್ಲಿ ನಿಷ್ಕಳಂಕಿತನಾಗಿ ಹೊರಬಂದ.
1982 ರಲ್ಲಿ ರಿಜ್ವೇ, ಪಾರ್ಕ್ ಮಾಡಿದ್ದ ಕಾರೊಂದರಲ್ಲಿ ಒಬ್ಬ ವೇಶ್ಯೆ ಜೊತೆ ಇದ್ದಿದನ್ನು ಪೊಲೀಸರು ನೋಡಿದ ಬಗ್ಗೆ ವರದಿಯೊಂದು ತನಿಖಾಧಿಕಾರಿಗಳ ಕೈಗೆ ಸಿಕ್ಕಿತ್ತು. ಎರಡು ವರ್ಷಗಳ ನಂತರ ಅದೇ ಸ್ಥಳದಲ್ಲಿ ಮೃತದೇಹವೊಂದು ಪತ್ತೆಯಾಗಿತ್ತು. 1987 ರಲ್ಲಿ ಪೊಲೀಸ್ ಅಧಿಕಾರಿಗಳು ಅವನ ವಿರುದ್ಧ ಸರ್ಚ್ ವಾರಂಟೊಂದನ್ನು ಪಡೆದರು.
ಸಾಕ್ಷ್ಯಗಳೆಲ್ಲ ಫೇಲ್!
ಪೊಲೀಸರು ಸಂಗ್ರಹಿಸಿದ ಸಾಕ್ಷ್ಯಗಳೆಲ್ಲ ರಿಜ್ವೇಯ ಅಪರಾಧ ಕೃತ್ಯಗಳನ್ನು ಸಾಬೀತು ಮಾಡಲು ವಿಫಲವಾಗುತ್ತಿದ್ದವು. ಅವನ ಡಿಎನ್ ಎ ಸ್ಯಾಂಪಲ್ ಸಹ ಆಗ ಲಭ್ಯವಿದ್ದ ಟೆಕ್ನಾಲಜಿಗೆ ಮಹಿಳೆಯರ ದೇಹದ ಮೇಲೆ ಪತ್ತೆಯಾಗಿರುತ್ತಿದ್ದ ಹಂತಕ ವೀರ್ಯದ ಕಲೆಗಳೊಂದಿಗೆ ತಾಳೆ ಹಾಕಿ ನೋಡುವುದು ಸಾಧ್ಯವಾಗಿರಲಿಲ್ಲ. ಆದರೆ ವರ್ಷಗಳು ಉರುಳಿದಂತೆ ಆಧುನಿಕ ಟೆಕ್ನಾಲಜಿಯು ನಿಖರವಾದ ಫಲಿತಾಂಶಗಳನ್ನು ನೀಡಲಾರಂಭಿಸಿದ ಬಳಿಕ 2001ರಲ್ಲಿ ಪುನಃ ರಿಜ್ವೇನ ಟೆಸ್ಟ್ ಗಳನ್ನು ನಡೆಸಲಾಯಿತು. ಆದೇ ವರ್ಷದ ಕೊನೆಯಲ್ಲಿ ಅಮೆರಿಕದ ಕುಖ್ಯಾತ ಸರಣಿ ಹಂತಕನನ್ನು ಬಂಧಿಸಲಾಯಿತು.
ಇದನ್ನೂ ಓದಿ: ಗಾಂಧಿ-ಗೋಡ್ಸೆ ನಡುವಿನ ಸೈದ್ಧಾಂತಿಕ ಯುದ್ಧದ ಕಥೆ ಹೇಳ ಹೊರಟ ನಿರ್ದೇಶಕ ರಾಜ್ಕುಮಾರ್ ಸಂತೋಷಿ
ಆರಂಭದಲ್ಲಿ ರಿಜ್ವೇ ತಾನು ಅಮಾಯಕ ಅಂತ ವಾದಿಸಿದನಾದರೂ, ವಿಚಾರಣೆ ತೀಕ್ಷ್ಣಗೊಂಡಾಗ ಅವನು ತಾನು ನಡೆಸಿದ ಹೀನ ಮತ್ತು ಭೀಕರ ಅಪರಾಧಗಳನ್ನು ಒಪ್ಪಿಕೊಂಡ. ತನ್ನಿಂದ ಸಾಧ್ಯವಾಗುವಷ್ಟು ವೇಶ್ಯೆಯರನ್ನು ಕೊಲ್ಲುವ ಗುರಿ ಅವನಿಟ್ಟುಕೊಂಡಿದ್ದನಂತೆ. ಅವನು ವೇಶ್ಯೆಯರನ್ನು ಭಯಂಕರವಾಗಿ ದ್ವೇಷಿಸುತ್ತಿದ್ದನಂತೆ ಮತ್ತು ಅವರು ಕಡೆಗಣಿಸಲ್ಪಟ್ಟ ಸಮುದಾಯಕ್ಕೆ ಸೇರಿದ್ದರಿಂದ ಕೊಂದರೂ ಅದೇನೂ ಸುದ್ದಿಯಾಗದು ಎಂಬ ಕಾರಣಕ್ಕೆ ಟಾರ್ಗೆಟ್ ಮಾಡುತ್ತಿದ್ದನಂತೆ!
48 ಕೊಲೆ ಪ್ರಕರಣಗಳಲ್ಲಿ ಸತತ ಜೀವಾವಧಿ ಶಿಕ್ಷೆ
2003 ರಲ್ಲಿ ಅವನಿಗೆ 48 ಕೊಲೆ ಪ್ರಕರಣಗಳಲ್ಲಿ ಸತತವಾಗಿ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಪರೋಲ್ ಗೆ ಮನವಿ ಸಲ್ಲಿಸಲು ಅವನಿಗೆ ಕೋರ್ಟ್ ಅವಕಾಶ ನೀಡಿರಲಿಲ್ಲ. ಪತ್ತೆಯಾಗದ ಮಹಿಳೆಯರ ದೇಹಗಳನ್ನು ಹುಡುಕಲು ಪೊಲೀಸರಿಗೆ ನೆರವಾಗುವುದಾಗಿ ಅವನು ನ್ಯಾಯಾಧೀಶರಿಗೆ ಹೇಳಿದ. ಅವನು ಇನ್ನೂ ಹಲವಾರು ಮಹಿಳೆಯರನ್ನು ಕೊಂದಿರವನೆಂದು ಪೊಲೀಸರು ಭಾವಿಸುತ್ತಾರೆ ಮತ್ತು 2013 ರಲ್ಲಿ ಖುದ್ದು ಅವನೇ 80ಕ್ಕಿಂತ ಹೆಚ್ಚು ಮಹಿಳೆಯರನ್ನು ಕೊಂದಿದ್ದಾಗಿ ಹೇಳಿಕೊಂಡಿದ್ದ.
ಮತ್ತಷ್ಟು ಕ್ರೈಮ್ ಕತೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ