ಬೆಳಗಾವಿ, (ಫೆಬ್ರವರಿ 15): ಬೆಳಗಾವಿಯಲ್ಲಿ ಗೋವಾ ರಾಜ್ಯದ ಮಾಜಿ ಶಾಸಕನ ಕೊಲೆಯಾಗಿದೆ. ಇಂದು (ಫೆಬ್ರವರಿ 15) ಬೆಳಗಾವಿಯ ಖಡೇಬಜಾರ್ ನಲ್ಲಿ ಇರೋ ಶ್ರೀನಿವಾಸ ಲಾಡ್ಜ್ ಮುಂದೆ ಗೋವಾದ ಪೋಂಡಾ ಕ್ಷೇತ್ರದ ಶಾಸಕರಾಗಿದ್ದ ಲಾವೂ ಮಾಮಲೇದಾರ್ ಎನ್ನುವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕನೇ ಲಾವೂ ಮಾಮಲೇದಾರ್ ಮೇಲೆ ಏಕಾಏಕಿ ದಾಳಿ ಮಾಡಿದ್ದಾನೆ. ಪರಿಣಾಮ ಮಾಜಿ ಶಾಸಕ ಲಾವೂ ಮಾಮಲೇದಾರ್ ಸ್ಥಳದಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದಾರೆ.
ಗೋವಾದ ಪೋಂಡಾ ಕ್ಷೇತ್ರದ ಶಾಸಕರಾಗಿದ್ದ ಲಾವೋ ಮಾಮಲೇದಾರ್ ಇಂದು ಬೆಳಗಾವಿಗೆ ಆಗಮಿಸಿದ್ದರು. ಈ ವೇಳೆ ಬೆಳಗಾವಿಯ ಖಡೇಬಜಾರ್ ಬಳಿಕ ಆಟೋಗೆ ಮಾಜಿ ಶಾಸಕರ ಕಾರು ಟಚ್ ಆಗಿದೆ. ರಸ್ತೆಯಲ್ಲಿ ಎಷ್ಟೇ ಕೂಗಿದರೂ ಕೇರ್ ಮಾಡದೇ ಹೊರಟ ಮಾಜಿ ಶಾಸಕ ಲಾವೋ ಮಾಮಲೇದಾರ್ ಕಾರನ್ನು ಆಟೋ ಚಾಲಕ ಹಿಂಬಾಲಿಕೊಂಡು ಹೋಗಿದ್ದಾನೆ. ಬಳಿಕ ಲಾವೋ ಮಾಮಲೇದಾರ್ ಅವರು ಶ್ರೀನಿವಾಸ ಲಾಡ್ಜ್ ಬಳಿ ಬಂದು ನಿಂತಿದ್ದಾಗ ಆಟೋ ಚಾಲಕ ಜಗಳ ಆರಂಭಿಸಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಆಟೋ ಚಾಲಕ ಲಾವೋ ಮಾಮಲೇದಾರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಆಗ ಸ್ಥಳೀಯರು ಹಾಗೂ ಲಾಡ್ಜ್‌ನ ಸಿಬ್ಬಂದಿ ಬಂದು ಇಬ್ಬರ ಜಗಳವನ್ನು ಬಿಡಿಸಿದ್ದಾರೆ ಎಂದು ತಿಳಿದುಬಂದಿದೆ.
ಬಳಿಕ ಮಾಜಿ ಶಾಸಕ ಲಾವೂ ಮಾಮಲೇದಾರ್ ತಾವು ತಂಗಿದ್ದ ಲಾಡ್ಜ್‌ಗೆ ಹೋಗುವಾಗ ಮೆಟ್ಟಿಲು ಏರಲು ಆಗದೇ ಕುಸಿದು ಬಿದ್ದು ಮೃತಟ್ಟಿದ್ದಾರೆ. ಇನ್ನು ಘಟನೆಯ ಸಂಪೂರ್ಣ ದೃಶ್ಯ ಲಾಡ್ಜ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಾರ್ಕೆಟ್ ಠಾಣೆ ಪೊಲೀಸರು ತಕ್ಷಣವೇ ಆಟೋ ಚಾಲಕ ಆರೋಪಿ ಮುಜಾಹಿದ್ ಶಕೀಲ್ ಸನದಿ ಎನ್ನುವಾತನನ್ನು ಬಂಧಿಸಿದ್ದಾರೆ. ಇನ್ನು ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್ ಹಾಗೂ ಕಮಿಷನರ್ ಭೇಟಿ, ಪರಿಶೀಲನೆ ನಡೆಸಿದ್ದು, ಮಾಜಿ ಶಾಸಕ ಲಾವೂ ಮಾಮಲೇದಾರ್ ಮೃತದೇಹವನ್ನು ಬೆಳಗಾವಿ ಬಿಮ್ಸ್‌ಗೆ ರವಾನೆ ಮಾಡಲಾಗಿದೆ.
ಬೆಳಗಾವಿಯ ಮಾರ್ಕೆಟ್ ಠಾಣೆಯಲ್ಲಿ ಆರೋಪಿ ಮುಜಾಹಿದ್ ವಿಚಾರಣೆ ನಡೆಸಲಾಗುತ್ತಿದೆ. ಡಿಸಿಪಿ ರೋಹನ್ ಜಗದೀಶ್, ಎಸಿಪಿ ನೇತೃತ್ವದಲ್ಲಿ ಆರೋಪಿಯನ್ನು ವಿಚಾರಣೆ ನಡೆಸಿದ್ದು, ಕೊಲೆ ಮಾಡಿದ್ದು ಯಾಕೆ? ಗೂಂಡಾಗಿರಿ ಮಾಡುತ್ತಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಘಟನೆ ಸಂಬಂಧ ಬಿಜೆಪಿ ಶಾಸಕ ಅಭಯ್ ಪಾಟೀಲ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿಯಲ್ಲಿ ಎನಾಗುತ್ತಿದೆ. ಎಲ್ಲಿ ಬೇಕಲ್ಲಿ ಮಟ್ಕಾ ದಂಧೆ, ಕೊಲೆಗಳು ನಡೆಯುತ್ತಿವೆ. ಅನ್ಯ ಕೋಮಿನ ಜನ ಹೋಗಿ ಮಾಜಿ ಶಾಸಕರ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಆಗಬೇಕು. ಹೀಗಾದರೆ ನಾಳೆ ಯಾರೂ ಸಹ ಬೆಳಗಾವಿಗೆ ಬರೋದಿಲ್ಲ ಎಂದು ಕಿಡಿಕಾರಿದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:14 pm, Sat, 15 February 25