ಸರ್ವೇ ಅಧಿಕಾರಿ ಸಾವಿನ ಹಿಂದೆ ಮಹಿಳೆಯ ಕರಿನೆರಳು: ಸ್ವಪ್ನ ಸುಂದರಿಯ ಮೊಬೈಲ್ ರಹಸ್ಯ ಬಯಲು
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಂದಾಯ ಇಲಾಖೆಯಲ್ಲಿ 15 ವರ್ಷಗಳಿಂದ ಸರ್ವೇ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ತುಮಕೂರು ಮೂಲದ ಬೆಣ್ಣೆಹಳ್ಳಿ ಗ್ರಾಮದ ಶಿವಕುಮಾರ್ ಗುರುವಾರ ಮೂಡಿಗೆರೆ ಪ್ಟಣದ KSRTC ಬಸ್ ನಿಲ್ದಾಣದ ಸಮೀಪದಲ್ಲಿರುವ ಬಾಡಿಗೆ ರೂಮ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ಇದೀಗ ಈ ಆತ್ಮಹತ್ಯೆಯಿಂದೆ ಮಹಿಳೆಯ ಕರಿನೆರಳು ಬಿದ್ದಿರುವುದು ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು, (ಫೆಬ್ರವರಿ 14): ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಂದಾಯ ಇಲಾಖೆಯ ಸರ್ವೇ ಅಧಿಕಾರಿ ಶಿವಕುಮಾರ್ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತುಮಕೂರು ಮೂಲದ ಬೆಣ್ಣೆಹಳ್ಳಿ ಗ್ರಾಮದ ಶಿವಕುಮಾರ್ ಅವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಂದಾಯ ಇಲಾಖೆಯಲ್ಲಿ 15 ವರ್ಷಗಳಿಂದ ಸರ್ವೇ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದ್ರೆ ನಿನ್ನೆ(ಫೆಬ್ರವರಿ 13) ಮೂಡಿಗೆರೆ ಪ್ಟಣದ KSRTC ಬಸ್ ನಿಲ್ದಾಣದ ಸಮೀಪದಲ್ಲಿರುವ ಬಾಡಿಗೆ ರೂಮ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಕಚೇರಿಯಲ್ಲಿ ಸಿಕ್ಕ ಡೆತ್ ನೋಟ್ ನಿಂದ ಶಿವಕುಮಾರ್ ಆತ್ಮಹತ್ಯೆ ರಹಸ್ಯ ಬಯಲಾಗಿದೆ. ಡೆತ್ನೋಟ್ನಲ್ಲಿ ಮೂವರ ಹೆಸರು ಬರೆದು ಬಳಿಕ ಶಿವಕುಮಾರ್ ನೇಣಿಗೆ ಶರಣಾಗಿದ್ದು, ಪರಸ್ತ್ರೀ ಜೊತೆ ಮೊಬೈಲ್ ನಲ್ಲಿ ಆಡಿದ ಅಶ್ಲೀಲ ಮಾತು ಶಿವಕುಮಾರ್ ಆತ್ಮಹತ್ಯೆಗೆ ಕಾರಣ ಎನ್ನುವುದು ಬೆಳಕಿಗೆ ಬಂದಿದೆ.
ಶಿವಕುಮಾರ್ ಚಿಕ್ಕಮಗಳೂರು ಜಿಲ್ಲೆಯ ನೌಕರರ ಸಂಘದ ನಿರ್ದೇಶಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಶಿವಕುಮಾರ್ ನಿನ್ನೆ(ಫೆಬ್ರವರಿ 13) ಏಕಾಏಕಿ ಆತ್ಮಹತ್ಯೆ ನೂರೆಂಟು ಅನುಮಾನಕ್ಕೆ ಕಾರಣವಾಗಿತ್ತು. ಮೂಡಿಗೆರೆ ಸರ್ವೇ ಕಚೇರಿಯ ತನ್ನ ಟೇಬಲ್ ಮೇಲೆ ಸಿಕ್ಕ ಡೆತ್ ನೋಟ್ ಶಿವಕುಮಾರ್ ಆತ್ಮಹತ್ಯೆಯ ರಹಸ್ಯ ಬಯಲು ಮಾಡಿದೆ. ಮೂಲತಃ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬೆಣ್ಣೆಹಳ್ಳಿ ಗ್ರಾಮದ ಶಿವಕುಮಾರ್ ಕಳೆದ 15 ವರ್ಷಗಳಿಂದ ಹೆಂಡತಿ ಮಕ್ಕಳಿಂದ ದೂರವಿದ್ದು ಮೂಡಿಗೆರೆ ಪಟ್ಟಣದಲ್ಲಿ ಬಾಡಿಗೆ ರೂಮ್ ಮಾಡಿ ವಾಸವಾಗಿದ್ದರು. ಮೂಡಿಗೆರೆ ತಾಲೂಕಿನ ತೋಟ ಒಂದರ ಸರ್ವೇಗೆ ತೆರಳಿದಾಗ ಸ್ವಪ್ನ ಎಂಬ ಮಹಿಳೆ ಶಿವಕುಮಾರ್‌ಗೆ ಪರಿಚಯವಾಗಿದ್ದರು. ಪರಿಚಯ ಶಿವಕುಮಾರ್ ಸ್ವಪ್ನ ಜೊತೆ ಅಶ್ಲೀಲವಾಗಿ ಮಾತನಾಡುವಷ್ಟು ಸಲಿಗೆಗೆ ಕಾರಣವಾಗಿತ್ತು. ಇದನ್ನೇ ಅಸ್ತ್ರ ಮಾಡಿಕೊಂಡ ಸ್ವಪ್ನ ಮೊಬೈಲ್ ನಲ್ಲಿ ಮಾತನಾಡಿದ ಆಡಿಯೋ ರೆಕಾರ್ಡ್ ಮಾಡಿ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಶಿವಕುಮಾರ್ ಡೆತ್ನೋಟ್ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ನೇಣು ಬಿಗಿದುಕೊಂಡು ಸರ್ವೆ ಅಧಿಕಾರಿ ಆತ್ಮಹತ್ಯೆಗೆ ಶರಣು
ಹನಿ ಟ್ರ್ಯಾಪ್ ಗೆ ಒಳಗಾದ ಶಿವಕುಮಾರ್ ಆತ್ಮಹತ್ಯೆಗೆ ಶರಣಾಗುವ ಒಂದು ದಿನದ ಹಿಂದೆಯಷ್ಟೇ ತಾನು ಬಳಸುತ್ತಿದ್ದ ಮೊಬೈಲ್ ನಂಬರ್ ಚೇಂಜ್ ಮಾಡಿದ್ದರು. ಕಳೆದ ಮೂರು ತಿಂಗಳ ಹಿಂದೆ ಮೂಡಿಗೆರೆ ತಾಲೂಕಿನ ಕುನ್ನಹಳ್ಳಿ ಗ್ರಾಮದ ಸಹೋದರರಾದ ಡ್ರೋನಾಲ್ಡ್ ಡಿಸೋಜ, ಗ್ರೆಗೋರಿಯನ್ ಡಿ ಕುನ್ನ ಅವರ ಸರ್ವೇ ನಂಬರ್ 99 ರಲ್ಲಿದ್ದ ಜಮೀನಿನ ಸರ್ವೇಯನ್ನ ಶಿವಕುಮಾರ್ ಮಾಡಿದ್ದರು. ಇದೆ ವಿಚಾರವಾಗಿ ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ ಎಂದು ಸಹೋದರರು ಚಿಕ್ಕಮಗಳೂರು ಡಿಸಿ ಮೀನಾ ನಾಗರಾಜ್ ಅವರಿಗೆ ದೂರು ನೀಡಿ ಕಿರುಕುಳ ನೀಡಿದ್ದಾರೆ ಎಂದು ಡೆತ್ ನೋಟ್ ನಲ್ಲಿ ಶಿವಕುಮಾರ್ ಬರೆದಿದ್ದಾರೆ.
ಸದ್ಯ ಕಚೇರಿಯಲ್ಲಿ ಸಿಕ್ಕ ಡೆತ್ ನೋಟ್ ಆಧಾರದ ಮೇಲೆ ಮೂಡಿಗೆರೆ ಪೊಲೀಸರು ಮೊಬೈಲ್ ನಲ್ಲಿ ಶಿವಕುಮಾರ್ ಆಡಿದ ಅಶ್ಲೀಲ ಮಾತುಗಳನ್ನ ರೆಕಾರ್ಡ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಸ್ವಪ್ನ ಸೇರಿದಂತೆ ಗ್ರೆಗೋರಿಯನ್ ಡಿ ಕುನ್ನ, ಡ್ರೊನಾಲ್ಡ್ ಡಿಸೋಜ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ BNS 108 ಸೆಕ್ಷನ್ ಅಡಿ FIR ದಾಖಲಿಸಿ ಮೂವರನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಒಟ್ಟಿನಲ್ಲಿ 52 ವರ್ಷದ ಶಿವಕುಮಾರ್ ಪರಸ್ತ್ರೀ ಮೋಹಕ್ಕೆ ಬಿದ್ದು, ಮೊಬೈಲ್ ನಲ್ಲಿ ಆಡಿದ ಅಶ್ಲೀಲ ಮಾತು, ಸರ್ವೆ ವಿಚಾರವಾಗಿ ನಡೆದ ಸಹೋದರರ ಕಿರುಕುಳ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂಡಿಗೆರೆ ಪೊಲೀಸರು ಡೆತ್ ನೋಟ್ ಆಧಾರದ ಮೇಲೆ ಮೂವರನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದು ಇನ್ನಷ್ಟು ಅಸಲಿ ಸತ್ಯ ತನಿಖೆಯಿಂದಷ್ಟೇ ಹೊರಬರಬೇಕಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:31 pm, Fri, 14 February 25