ಪಿಎಫ್ಐ ನಿಷೇಧದ ಬಳಿಕವೂ ದುಷ್ಕೃತ್ಯಕ್ಕೆ ಸಂಚು; ಮಂಗಳೂರಿನಲ್ಲಿ ಐವರು ಅರೆಸ್ಟ್
ಪಿಎಫ್ಐ ಸಂಘಟನೆ ನಿಷೇಧಗೊಂಡರೂ ದುಷ್ಕೃತ್ಯಕ್ಕೆ ಸಂಚು ರೂಪಿಸಿದ ಐವರನ್ನು ಪೊಲೀಸರು ಮಂಗಳೂರಿನಲ್ಲಿ ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಹಾಸನ: ಪಿಎಫ್ಐ ಸಂಘಟನೆ ನಿಷೇಧಗೊಂಡರೂ ಬುದ್ಧಿ ಬಾರದ ದುಷ್ಕರ್ಮಿಗಳು ಸಂಚು ರೂಪಿಸುವುದನ್ನು ಮುಂದುವರಿಸಿದ್ದಾರೆ. ಸಂಘಟನೆ ಬ್ಯಾನ್ ನಂತರವೂ ದುಷ್ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಆರೋಪದ ಮೇಲೆ ಪಿಎಫ್ಐಗೆ ಸೇರಿದ ಐವರನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ. ಈ ಬಗ್ಗೆ ಹಾಸನದಲ್ಲಿ ಮಾತನಾಡಿದ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್, ಬಂಧಿತ ಐವರನ್ನು ವಿಚಾರಣೆ ನಡೆಸಲಾಗುತ್ತಿದೆ. ವಿಶೇಷವಾಗಿ ಆರೋಪಿಗಳಿಗೆ ಯಾರ ಜೊತೆ ಸಂಪರ್ಕ ಇತ್ತು, ಎಲ್ಲೆಲ್ಲಿ ತರಬೇತಿ ನೀಡುತ್ತಿದ್ದರು, ಯಾವ ರೀತಿ ಸಂಚು ರೂಪಿಸಿದ್ದರು ಎಂಬಿತ್ಯಾದಿ ಆಯಾಮಗಳಲ್ಲಿ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಕಾನೂನು ಇತಿಮಿಯಲ್ಲಿ ಪ್ರತಿಭಟನೆ ಮಾಡಿದರೆ ನಮ್ಮ ಕಡೆಯಿಂದ ತಡೆ ಇರುವುದಿಲ್ಲ. ಕಾನೂನು ಮೀರಿ ಯಾರಾದರು ಪ್ರತಿಭಟನೆ ಮಾಡಿದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಪಿಎಫ್ಐ ಸಂಘಟನೆ ಬ್ಯಾನ್ ಆಗಿದ್ದರೂ ಅವರ ಮೇಲೆ ನಾವು ಕಣ್ಣು ಇಟ್ಟಿದ್ದೇವೆ. ಕರಾವಳಿ ಭಾಗವಾದ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ಮೈಸೂರು, ದಾವಣಗೆರೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ನಮ್ಮ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಎಲ್ಲಾ ವಿಚಾರಗಳನ್ನು ತನಿಖಾಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಪುತ್ತೂರಿನಲ್ಲಿ ನಡೆಯುತ್ತಿದ್ದ ತರಬೇತಿ ಬಿಟ್ಟು ಬೇರೆ ಬೇರೆ ಕಡೆ ಎಲ್ಲೆಲ್ಲಿ ತರಬೇತಿ ನಡೆಯುತ್ತಿದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಅಲೋಕ್ ಕುಮಾರ್ ಹೇಳಿದರು. ಇದಕ್ಕೂ ಮುನ್ನ ಎಡಿಜಿಪಿ ಅಲೋಕ್‌ಕುಮಾರ್ ಅವರು ಹಾಸನಾಂಬೆ ದೇವಿ ದರ್ಶನ ಪಡೆದರು. ಈ ವೇಳೆ ಎಸ್ಪಿ ಹರಿರಾಂ ಶಂಕರ್, ಎಎಸ್‌ಪಿ ಮಿಥುನ್, ಡಿವೈಎಸ್‌ಪಿ ಉದಯ್‌ಭಾಸ್ಕರ್ ಇದ್ದರು.
ಅಯೋಧ್ಯೆ ರಾಮಮಂದಿರ ಸ್ಫೋಟಿಸಲು ಪಿಎಫ್ಐ ಸಂಚು
ಬೆಂಗಳೂರು: ಪಿಎಫ್ಐ ದೇಶದ್ರೋಹಿ ಸಂಘಟನೆಯಾಗಿದ್ದು, ಮುಂಬೈ ದಾಳಿ ಮಾದರಿಯಲ್ಲಿ ಅಯೋಧ್ಯೆ ರಾಮಮಂದಿರ ಸ್ಫೋಟಿಸಲು ಸಂಚು ರೂಪಿಸಲಾಗಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ವಿಧ್ವಂಸಕ ಕೃತ್ಯ ಮಾಡುವ ಪಿಎಫ್ಐನ ಷಡ್ಯಂತ್ರ ಬಯಲಾಗಿದೆ. ಭಾರತದ ಅಸ್ಮಿತೆಗೆ ಧಕ್ಕೆ ತರುವ ಹುನ್ನಾರ ನಡೆಯುತ್ತಿದೆ. ಈಗಾಗಲೇ ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ ಎಂದರು.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:05 pm, Thu, 20 October 22