ಹಾಸನ, ಮಾ.15: ನಗರದ ಕೆ ಹೊಸಕೊಪ್ಪಲು ಬಡಾವಣೆಯಲ್ಲಿ ಬಾಡಿಗೆಗೆ ಮನೆ ಪಡೆದಿದ್ದ ದಂಪತಿಗಳು, ಶವವಾಗಿ ಪತ್ತೆಯಾಗಿದ್ದಾರೆ. ಮೂಲತಃ ಹೊಳೆನರಸೀಪುರ(Holenarasipur) ತಾಲ್ಲೂಕಿನ ಮೂಲದ ದೇವರಾಜ್(45) ಹಾಗೂ ಮಂಜುಳ(35) ಹದಿನೈದು ವರ್ಷಗಳ ಹಿಂದೆ ಮದುವೆಯಾಗಿದ್ದರು. ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಜೋಡಿ, ಮೂರು ತಿಂಗಳ ಹಿಂದೆ ವಾಪಸ್ ತವರಿಗೆ ಮರಳಿದ್ದರು. ಹಾಸನದಲ್ಲೂ ಗಾರ್ಮೆಂಟ್ಸ್ನಲ್ಲೆ ಕೆಲಸ ಮಾಡುವ ಉದ್ದೇಶದಿಂದ ಫ್ಯಾಕ್ಟರಿ ಸಮೀಪವೇ ಮನೆ ಹುಡುಕಿ ಬಾಡಿಗೆಗೆ ಮನೆ ಪಡೆದಿದ್ದರು.
ಹೀಗಿರುವಾಗ ಕಳೆದ ಸೋಮವಾರದಿಂದ ದಂಪತಿ ದಿಢೀರ್ ನಾಪತ್ತೆಯಾಗಿದ್ದಾರೆ. ಫೋನ್ ಮಾಡಿದರೂ ಕೂಡ ಸ್ವಿಚ್ ಆಫ್ ಆಗಿದೆ. ಎಲ್ಲೋ ಹೋಗಿರಬೇಕು ಎಂದುಕೊಂಡಿದ್ದವರಿಗೆ ನಿನ್ನೆ(ಮಾ.14) ಮನೆಯೊಳಗಿಂದ ದುರ್ವಾಸನೆ ಬರಲು ಶುರುವಾದಾಗ ಅನುಮಾನ ಮೂಡಿದೆ. ಕೂಡಲೇ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಬಡಾವಣೆ ಠಾಣೆ ಪೊಲೀಸರು ಬಾಗಿಲು ಮುರಿದು ಒಳ ಹೋದಾಗ ಭಯಾನಕ ದೃಶ್ಯ ಬಯಲಾಗಿದೆ. ಪತಿ ದೇವರಾಜ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಪತ್ನಿ ಮಂಚದ ಮೇಲೆ ಹೆಣವಾಗಿದ್ದಾರೆ.
ಇದನ್ನೂ ಓದಿ:ಮಂಗಳೂರು: ಆಳ್ವಾಸ್ ಕಾಲೇಜಿನ ಹಾಸ್ಟೆಲ್ನಲ್ಲಿ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆ
ಕುಡಿತದ ಚಟಕ್ಕೆ ದಾಸನಾಗಿದ್ದ ದೇವರಾಜ್ ಪದೆ ಪದೆ ಪತ್ನಿ ಜೊತೆಗೆ ಜಗಳ ಮಾಡಿಕೊಳ್ಳುತ್ತಿದ್ದನಂತೆ. ಹಾಗಾಗಿಯೇ ಪತ್ನಿಯನ್ನ ಕೊಂದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಅನುಮಾನ ಮೂಡಿದೆ. ಪರಿಚಿತರೊಬ್ಬರ ಮೂಲಕ ಬಾಡಿಗೆ ಮನೆ ಪಡೆದುಕೊಂಡಿದ್ದ ಮಂಜುಳಾ, ಮೂರು ತಿಂಗಳಿನಿಂದ ಮನೆಯಲ್ಲೇ ನೆಲೆಸಿದ್ದಾರೆ. ಮನೆ ಬಾಡಿಗೆ ಪಡೆದ ವಾರಗಳ ಬಳಿಕ ಪತಿ ಕೂಡ ಪತ್ನಿ ಜೊತೆ ಸೇರಿಕೊಂಡಿದ್ದ. ಆದ್ರೆ, ಇವರು ಬಹುತೇಕ ದಿನಗಳು ಮನೆಯಲ್ಲಿ ಇರದೇ ಹೊರಗೆ ಹೋಗಿದ್ದಾರೆ. ಎರಡು ದಿನಗಳ ಹಿಂದೆ ಮನೆ ಸುತ್ತಮುತ್ತ ಅದೇನೋ ದುರ್ವಾಸನೆ ಬರಲು ಶುರುವಾಗಿದೆ. ಅಕ್ಕ-ಪಕ್ಕದ ಮನೆಯವರು ಮನೆ ಮಾಲೀಕರಿಗೆ ಆ ಮನೆಯೊಳಗೆ ಏನೋ ವಾಸನೆ ಬರ್ತಿದೆ. ಹೆಗ್ಗಣ ಸತ್ತಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
ಕೂಡಲೇ ಮನೆ ಮಾಲೀಕರಿಗೆ ಕರೆ ಮಾಡಿದ್ರೆ, ಫೋನ್ ಸ್ವಿಚ್ ಆಫ್ ಬಂದಿದೆ. ಆದರೆ, ವಾಸನೆ ಹೆಚ್ಚಾದಾಗ ಬೇರೆ ದಾರಿಯಿಲ್ಲದೆ ಪೊಲೀಸರಿಗೆ ಮಾಹಿತಿ ನೀಡಿ ಬಾಗಿಲು ತೆರೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ದಂಪತಿಗಳ ಶವ ಪತ್ತೆಯಾಗಿದೆ. ಪತ್ನಿ ಕೊಂದು ಬಳಿಕ ಪತಿ ಆತ್ಮಹತ್ಯೆ ಮಾಡಿಕೊಂಡರೇ ಅಥವಾ ಕೌಟುಂಬಿಕ ಕಲಹದಿಂದ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡನೇ, ಬೇರೆ ಏನಾದ್ರು ಆಗಿದೆಯಾ ಎಂಬ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು, ಈ ಬಗ್ಗೆ ತನಿಖೆಯಾಗಲಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ 15 ವರ್ಷಗಳ ಹಿಂದೆ ಸಪ್ತಪದಿ ತುಳಿದ ಜೋಡಿ, ಕೊನೆಯುಸಿರೆಳೆದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರ ತನಿಖೆ ಬಳಿಕ ಸಾವಿನ ಹಿಂದಿನ ಸತ್ಯ ಬಯಲಾಗಬೇಕಿದೆ.
ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:06 pm, Fri, 15 March 24