ಸಿದ್ದೇಶ್ವರ್ ಪತ್ನಿಗೆ ಟಿಕೆಟ್ ನೀಡಿದ್ದಕ್ಕೆ ಆಕ್ರೋಶ: ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆಗೆ ಯತ್ನ
ಲೋಕಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನ ನಿನ್ನೆ(ಮಾ.13) ಬಿಡುಗಡೆ ಮಾಡಿದೆ. ಅದರಂತೆ ದಾವಣಗೆರೆ(Davanagere) ಹಾಲಿ ಸಂಸದ ಸಿದ್ದೇಶ್ವರ್ (GM Siddeshwara) ಪತ್ನಿ ಗಾಯತ್ರಿ ಅವರನ್ನ ಈ ಬಾರಿ ಲೋಕಾ ಸಮರಕ್ಕೆ ಬಿಜೆಪಿ ಇಳಿಸಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನಲೆ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಬೆಂಬಿಲಿಗನೊಬ್ಬ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ದಾವಣಗೆರೆ, ಮಾ.14:ಲೋಕಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನ ನಿನ್ನೆ(ಮಾ.13) ಬಿಡುಗಡೆ ಮಾಡಿದೆ. ಕೆಲವು ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪಿದೆ. ಅದರಂತೆ ದಾವಣಗೆರೆ(Davanagere) ಹಾಲಿ ಸಂಸದ ಸಿದ್ದೇಶ್ವರ್ (GM Siddeshwara) ಪತ್ನಿ ಗಾಯತ್ರಿ ಅವರನ್ನ ಈ ಬಾರಿ ಲೋಕಾ ಸಮರಕ್ಕೆ ಬಿಜೆಪಿ ಇಳಿಸಿದೆ. ಆದರೆ, ಈ ಬಾರಿ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಕೂಡ ಲೋಕಾ ಟಿಕೆಟ್ ಆಕಾಂಕ್ಷಿ ಆಗಿದ್ದರು. ಇದೀಗ ಅವರಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಅವರ ಬೆಂಬಲಿಗನೊಬ್ಬ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿಯಲ್ಲಿರುವ ಎಸ್.ಎ.ರವೀಂದ್ರನಾಥ್ ನಿವಾಸದ ಬಳಿಯೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಸಿದ್ದೇಶ್ವರ್ ವಿರುದ್ಧ ಕೆಂಡಕಾರಿದ ಎಂ.ಪಿ.ರೇಣುಕಾಚಾರ್ಯ
ಇನ್ನು ಸಿದ್ದರೇಶ್ವರ್ ಪತ್ನಿಗೆ ದಾವಣಗೆರೆ ಟಿಕೆಟ್ ನೀಡಿದ್ದಕ್ಕೆ ಎಂ.ಪಿ.ರೇಣುಕಾಚಾರ್ಯ ಕೆಂಡಾಮಂಡಲವಾಗಿದ್ದಾರೆ. ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶ ಇಲ್ಲ, ಸರ್ವೆಯಲ್ಲಿಯೂ ಕೂಡ ಸಂಸದ ಸಿದ್ದೇಶ್ವರ ಕುಟುಂಬದ ಹೆಸರಿಲ್ಲ. ಸರ್ವೆ ಸಂಪೂರ್ಣ ಸಂಸದ ಸಿದ್ದೇಶ್ವರ್ ವಿರುದ್ಧ ಬಂದಿದೆ. ಗೂಂಡಾಗಳನ್ನ ಇಟ್ಕೊಂಡು ದಬ್ಬಾಳಿಕೆ ಮಾಡುತ್ತಿದ್ದಾರೆ. ಕೂಡಲೇ ಹಾಲಿ ಸಂಸದರ ಕುಟುಂಬಕ್ಕೆ ನೀಡಿದ ಟಿಕೆಟ್ ಹಿಂಪಡೆಯಲಿ ಎಂದು ಕಿಡಿಕಾರಿದರು. ಜೊತೆಗೆ ಸಂಸದರ ಆಪ್ತ ಸಹಾಯಕ ಆಗಿರುವ ದೇವರಾಜ ದಬ್ಬಾಳಿ ಎಂಬಾತ ಒಂದು ರೀತಿಯಲ್ಲಿ ಸಂಸದರ ರೀತಿಯಲ್ಲಿಯೇ ವರ್ತಿಸುತ್ತಿದ್ದಾನೆ. ಆತನ ಸೊಕ್ಕು ಹೆಚ್ಚಾಗಿದೆ. ನಾವು ಹೋರಾಟದಿಂದ ಹಿಂದೆ ಸರಿಯಲ್ಲ, ಹೋರಾಟ ಮಾಡುತ್ತೇವೆ ಎಂದರು.
ಇದನ್ನೂ ಓದಿ:ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕಾಗೇರಿಗೆ ಫಿಕ್ಸ್ ಆಗಿದ್ಯಾ? ಅವರು ಕೊಟ್ಟ ಸುಳಿವು ಹೀಗಿದೆ
ನನ್ನ ಪತ್ನಿಗೆ ಟಿಕೆಟ್ ನೀಡಿದ್ದರಿಂದ ಇಡೀ ಜಿಲ್ಲೆ ಖುಷಿಯಾಗಿದೆ-ಸಿದ್ದೇಶ್ವರ್
ಪತ್ನಿಗೆ ಟಿಕೆಟ್ ನೀಡಿದ ಕುರಿತು ಬೆಂಗಳೂರಿನಲ್ಲಿ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್ ಮಾತನಾಡಿ, ‘ಆರೋಗ್ಯದ ಸಮಸ್ಯೆಯಿಂದ ನಾನು ಸ್ಪರ್ಧೆ ಮಾಡಲ್ಲ. ನನ್ನ ಕುಟುಂಬ ಸದಸ್ಯರಿಗೆ ಟಿಕೆಟ್ ಕೊಡಿ ಎಂದು ಹೇಳಿದ್ದೆ. ಅಂತಿಮವಾಗಿ ನನ್ನ ಪತ್ನಿಗೆ ವರಿಷ್ಠರು ಟಿಕೆಟ್ ಕೊಟ್ಟಿದ್ದಾರೆ. ನನ್ನ ಪತ್ನಿಗೆ ಟಿಕೆಟ್ನಿಂದ ಇಡೀ ಜಿಲ್ಲೆ ಖುಷಿಯಾಗಿದೆ. ಅಲ್ಲೋ ಇಲ್ಲೋ ಒಬ್ಬರು ಮಾತಾಡುತ್ತಿದ್ದಾರೆ. ಎಲ್ಲರನ್ನೂ ಒಟ್ಟಾಗಿ ತೆಗದುಕೊಂಡು ಚುನಾವಣೆ ಮಾಡುತ್ತೇನೆ. ಜಿಲ್ಲೆಯಲ್ಲಿ ಡೀಸೆಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ಬರೀ ನಾಟಕ ಅಷ್ಟೇ, ಎಂ.ಪಿ. ರೇಣುಕಾಚಾರ್ಯ ನನ್ನ ಮಿತ್ರ, ನಾನು ಅವನ ಜೊತೆ ಮಾತಾಡುತ್ತೇನೆ. ಅವನು ನನ್ನ ಪತ್ನಿ ಗೆಲುವಿಗೆ ಸಹಕಾರ ಕೊಡುತ್ತಾನೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ