ಹೆಚ್ ಡಿ ರೇವಣ್ಣ ಆಪ್ತ ವಲಯದ ಉದ್ಯಮಿಯ ಹತ್ಯೆ ಪ್ರಕರಣ: 14 ಆರೋಪಿಗಳ ಬಂಧನ
ಹೆಚ್ ಡಿ ರೇವಣ್ಣ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ, ಗ್ರಾನೈಟ್ ಉದ್ಯಮಿ ಕೃಷ್ಣೇಗೌಡರ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು 14 ಜನರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಕೊಲೆ ಹಣಕಾಸಿನ ವಿಚಾರವಾಗಿ ನಡೆದಿರುವುದಾಗಿ ತಿಳಿಸಿದ್ದಾರೆ.
ಹಾಸನ, ಆಗಸ್ಟ್ 26: ಗ್ರಾನೈಟ್ ಉದ್ಯಮಿ ಕೃಷ್ಣೇಗೌಡರ ಹತ್ಯೆಗೆ ಸಂಬಂಧಿಸಿದಂತೆ ಏಳು ಮಂದಿ ಸುಪಾರಿ ಕಿಲ್ಲರ್ಗಳನ್ನು ಹಾಸನ ಪೊಲೀಸರು (Hassana Police) ಬಂಧಿಸಿದ್ದಾರೆ. ಈ ಹತ್ಯೆಯಲ್ಲಿ ಬಂಧಿತ ಆರೋಪಿಗಳ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ. ಹತ್ಯೆಗೆ ಸುಪಾರಿ ನೀಡಿದ್ದ ಯೋಗಾನಂದ್, ಹತ್ಯೆಗೈದ ಮೈಸೂರು ಮೂಲದ ಧನಂಜಯ (21), ಹಾಸನ ತಾಲೂಕಿನ ಆಟೋ ಚಾಲಕ ಗುಡ್ಡೇನಹಳ್ಳಿಯ ಚಂದನ (20), ಚನ್ನರಾಯಪಟ್ಟಣ ತಾಲೂಕಿನ ಗೂರನಹಳ್ಳಿ ಗ್ರಾಮದ ಚೇತನ್ (22), ಬಾಗೂರು ಗ್ರಾಮದವರಾದ ಪ್ರದೀಪ (27), ಮಣಿಕಂಠ (27) ಬಂಧಿತ ಆರೋಪಿಗಳು.
ಹಣಕಾಸಿನ ವಿಚಾರಕ್ಕಾಗಿ ಉದ್ಯಮಿ ಕೃಷ್ಣೇಗೌಡರ ಹತ್ಯೆ
ಆಗಸ್ಟ್ 9 ರಂದು ಹಾಸನ ಹೊರವಯದ ಕೈಗಾರಿಕಾ ಪ್ರದೇಶದಲ್ಲಿ ಉದ್ಯಮಿ ಕೃಷ್ಣೇಗೌಡ ಅವರ ಶವ ಪತ್ತೆಯಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ತೆರಳಿದ್ದ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಗುತ್ತಿಗೆದಾರ, ಉದ್ಯಮಿ ಕೃಷ್ಣೇಗೌಡ ಶ್ರೀರಾಮ್ ಗ್ರಾನೈಟ್ ಕಂಪನಿ ಮಾಲಿಕರಾಗಿದ್ದರು. ಅಲ್ಲದೇ ಹೆಚ್ ಡಿ ರೇವಣ್ಣರವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.
ಹಾಸನದ ಹೊರವಯದ ಕೈಗಾರಿಕಾ ಪ್ರದೇಶದಲ್ಲಿ ಇವರ ಕಾರನ್ನು ಗುಂಪೊಂದು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿತ್ತು. ಹೀಗೆ ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಈ ಕೊಲೆ ಹಣಕಾಸಿ ವಿಚಾರವಾಗಿ ನಡೆದಿದೆ ಎಂದು ತಿಳಿದುಬಂದಿದೆ.
ಉದ್ಯಮಿ ಕೃಷ್ಣೇಗೌಡರ ಹತ್ಯೆ ಮಾಡಲು ಆರು ತಿಂಗಳ ಹಿಂದೆ ಸಂಚು ರೂಪಿಸಲಾಗಿತ್ತು. ಹತ್ಯೆಗೆ ಮೂರು ರೀತಿ ಸಂಚು ರೂಪಿಸಿ, ಯಾವುದೇ ಸಾಕ್ಷ್ಯ ಸಿಗದಂತೆ ಮಾಡಲು ಪ್ಲಾನ್ ಮಾಡಲಾಗಿತ್ತು ಎನ್ನಲಾಗಿದೆ. ಕೊಲೆ ನಡೆಯುವ ಮೂರು ದಿನಗಳ ಹಿಂದನಿಂದಲೇ ಸುಪಾರಿ ಕಿಲ್ಲರ್ಗಳು ಕೃಷ್ಣೇಗೌಡರನ್ನು ಹಿಂಬಾಲಿಸುತ್ತಿದ್ದರು. ಈ ವೇಳೆ ನಕಲಿ ದಾಖಲೆಗಳನ್ನು ನೀಡಿ ಸಿಮ್ ಖರೀದಿಸಿ ಪ್ಲಾನ್ ಬಗ್ಗೆ ಮಾತನಾಡಿದ್ದರು ಎಂಬ ಅಂಶ ಆರೋಪಿಗಳು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.
ಇದನ್ನೂ ಓದಿ: ಮದ್ಯದ ಚಟ ಬಿಡಿಸುತ್ತೇವೆಂದು ಪುನರ್ವಸತಿ ಕೇಂದ್ರದಲ್ಲಿ ವ್ಯಕ್ತಿಯ ಕೊಲೆ; ಪೋಷಕರ ಆರೋಪ
ಪ್ಲಾನ್ನಂತೆ ಆರೋಪಿಗಳು ಆಗಸ್ಟ್ 9 ರಂದು ಉದ್ಯಮಿ ಕೃಷ್ಣೇಗೌಡ ಅವರನ್ನು ಕೊಲೆ ಮಾಡಿ ಆರು ರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದರು. ಸದ್ಯ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಯೋಗಾನಂದ ಸೇರಿ ಮೂರು ಮಂದಿಯ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.
ಇನ್ನು ಸುಪಾರಿ ನೀಡಿದ್ದ ಯೋಗಾನಂದ್ ಕೊಲೆ ಮಾಡಲು ಕಿಲ್ಲರ್ಗಳಿಗೆ 2,000 ರೂ. ಅಡ್ವಾನ್ಸ್ ನೀಡಿ ಕೊಲೆಯ ನಂತರ ಬಾಕಿ ಹಣವನ್ನು ನೀಡುವುದಾಗಿ ನಂಬಿಸಿ ವಂಚಿಸಿದ್ದನಂತೆ. ಕೊಲೆಯ ನಂತರ ಕಾರಿನ ಬಾಡಿಗೆ ಸಹ ನೀಡದೆ ಮೊಸ ಮಾಡಿದ್ದಾನೆ ಎನ್ನಲಾಗಿದೆ. ಈ ವಿಚಾರವನ್ನು ವಿಚಾರಣೆ ವೇಳೆ ಆರೋಪಿಗಳು ಬಾಯಿ ಬಿಟ್ಟಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:06 pm, Sat, 26 August 23