Chikkaballpura: ಹೆದ್ದಾರಿಯಲ್ಲಿ ವಾಹನ ನಿಲ್ಲಿಸುವುದಕ್ಕೂ ಮುನ್ನ ಈ ಸ್ಟೋರಿ ನೋಡಿ!
ಚಾಕುವನ್ನು ಶಂಕರ್ ದತ್ತ ಹಾಗೂ ಆತನ ಸಹೋದರ ಮುರಳಿಯ ಕತ್ತಿಗೆ ಇಟ್ಟು ಅವರ ಬಳಿ ಇದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಸರಗಳು, ನಗದು ಹಣ, ಮೊಬೈಲ್ ಕಸಿದು ಎಸ್ಕೇಪ್ ಆಗಿದ್ದಾರೆ.
ದೂರದ ಊರುಗಳಿಗೆ ಕಾರುಗಳಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ಈ ವರದಿಯನ್ನು ನೋಡಲೇಬೇಕು! ಅದರಲ್ಲೂ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ಇವರ ಮುಖವನ್ನೊಮ್ಮೆ ನೋಡಬೇಕು… ಇಲ್ಲವಾದ್ರೆ ಇವರು ನಿಮ್ಮ ಬಳಿಯೂ ಬಂದು ಮಾಡಬಾರದ ಕೆಲಸ ಮಾಡ್ತಾರೆ. ಅಷ್ಟಕ್ಕೂ ಅವರು ಯಾರು? ಅವರಿಂದ ಅಪಾಯವಾದ್ರು ಏನ್ ಅಂತೀರಾ ಈ ವರದಿ ನೋಡಿ!
ಈ ಭಾವಚಿತ್ರದಲ್ಲಿ ಕಾಣ್ತಿರುವ ಇವರ ಮುಸಡಿಯನ್ನೊಮ್ಮೆ ನೋಡಿಕೊಂಡು ಬೀಡಿ… ಇಲ್ಲವಾದ್ರೆ ನಿಮ್ಮ ಮೇಲೂ… ಇವರು ಅಟ್ಯಾಕ್ ಮಾಡಬಹುದು. ಮೇಲಿನ ಚಿತ್ರದಲ್ಲಿರುವ ಇವನ ಹೆಸರು ಗಂಗಾಧರ್. ಇನ್ನೂ ಈಗತಾನೆ 31 ವರ್ಷ ವಯಸ್ಸು. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಬಳಿ ಕಾರ್ನಾಳ ಗ್ರಾಮ.
ಮತ್ತೊಬ್ಬನ ಹೆಸರು ರತೀಶಕುಮಾರ್ ಅಲಿಯಾಸ್ ಸ್ಟೀಫನ್. ಇನ್ನೂ ಈಗತಾನೆ 27 ವರ್ಷ ವಯಸ್ಸು. ಬೆಂಗಳೂರಿನ ಎಚ್.ಎಸ್.ಆರ್. ಲೇ ಔಟ್ ನಿವಾಸಿ, ಖಾಸಗಿ ಕಂಪನಿಯಲ್ಲಿ ಕೆಲಸ. ಚಿತ್ರದಲ್ಲಿರುವ ಮತ್ತೋರ್ವನ ಹೆಸರು ಅರುಣ್ ಕುಮಾರ್. 29 ವರ್ಷ ವಯಸ್ಸು, ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಹೆಬ್ಬಣಿ ಗ್ರಾಮದ ವಾಸಿ. ಆಟೋ ಡ್ರೈವರ್ ಕೆಲಸ. ಆದ್ರೆ ಇವರು ಮೂವರೂ ಅಸಲಿಗೆ ಮಾಡ್ತಿದ್ದ ಕೆಲಸ ಕೇಳಿದ್ರೆ ಕೆಲ ಹೊತ್ತು ಶಾಕ್ ಆಗ್ತೀರಾ..! ಇವರ ಘನಂದಾರಿ ಕೆಲಸ ಏನ್ ಅಂತ ಸ್ವತಃ ಚಿಕ್ಕಬಳ್ಳಾಪುರ (Chikkaballapur Police) ಎಸ್ಪಿ ಡಿ.ಎಲ್. ನಾಗೇಶ ಹೇಳಿದ್ದಾರೆ (Crime News).
ಡಿಸೆಂಬರ್ 13ರಂದು ಹೈದರಾಬಾದ್ ನಿವಾಸಿ ಶಂಕರ್ ದತ್ತ ಹಾಗೂ ಆತನ ಅಣ್ಣ ಮುರಳಿ ಶರ್ಮ, ಹೈದರಾಬಾದ್ ನಿಂದ ಬೆಂಗಳೂರಿಗೆ ಪ್ರಯಾಣ ಮಾಡ್ತಿದ್ರು. ಡ್ರೈವಿಂಗ್ ಮಾಡಿ ಸುಸ್ತು ಆಯಾಸ ನಿದ್ದೆ ಅಂತ ಶಂಕರ್, ತಮ್ಮ ಕಾರನ್ನು ಚಿಕ್ಕಬಳ್ಳಾಪುರ ತಾಲೂಕಿನ ಚದಲಪುರ ಕ್ರಾಸ್ ಬಳಿ ಕೀರ್ತಿ ಹೈಟೆಕ್ ಡಾಬ ಎದುರು ಹಾಕಿ ನಿದ್ದೆ ಹೊಗ್ತಿದ್ದಾರೆ. ಆಗ ಮತ್ತೊಂದು ಕಾರಿನಲ್ಲಿ ಶಂಕರ್ ಕಾರಿನ ಬಳಿ ಬಂದ ಗಂಗಾಧರ್, ರತೀಶಕುಮಾರ್ ಹಾಗೂ ಅಲಿಯಾಸ್ ಸ್ಟೀಫನ್ ಅರುಣ್ ಕುಮಾರ್, ತಾವು ಪೊಲೀಸ್ ಮಾಹಿತಿದಾರರು ಅಂತ ಹೇಳಿ ಕಾರಿನ ಗ್ಲಾಸ್ ನ್ನು ತೆಗೆಸಿದ್ದಾರೆ.
ನಂತರ ಚಾಕುವನ್ನು ಶಂಕರ್ ದತ್ತ ಹಾಗೂ ಆತನ ಸಹೋದರ ಮುರಳಿಯ ಕತ್ತಿಗೆ ಇಟ್ಟು ಅವರ ಬಳಿ ಇದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಸರಗಳು, ನಗದು ಹಣ, ಮೊಬೈಲ್ ಕಸಿದು ಎಸ್ಕೇಪ್ ಆಗಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿದ್ದ ನಂದಿಗಿರಿಧಾಮ ಠಾಣೆ ಪೊಲೀಸರು ಮೂವರೂ ಆರೋಪಿಗಳನ್ನು ಬಂಧಿಸಿ, ಕದ್ದ ಹಣ, ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಕಾರ್ ಅನ್ನು ಜಪ್ತಿ ಮಾಡಿದ್ದಾರೆ.
ಇನ್ನು ಆರೋಪಿ ಗಂಗಾಧರ್, ಬೆಂಗಳೂರಿನಲ್ಲಿ ಅಸಲಿ ಪೊಲೀಸ್ ಮಾಹಿತಿದಾರನಾಗಿದ್ದು , 20ಕ್ಕೂ ಹೆಚ್ಚು ಅಧಿಕೃತ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. ಪೊಲೀಸ್ ಮಾಹಿತಿದಾರನ ವೇಷದಲ್ಲಿ ಹೆದ್ದಾರಿಯಲ್ಲಿ ಸಂಚರಿಸುವ ಅಮಾಯಕ ಪ್ರಯಾಣಿಕರ ಮೇಲೆ ದಾಳಿ ನಡೆಸಿ ಹಣ ಚಿನ್ನಾಭರಣ ಕಸಿದು ರಾಬರಿ ಕೆಲಸ ಮಾಡ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಇದ್ರಿಂದ ಹೆದ್ದಾರಿ ವಾಹನ ಸವಾರರು ರಸ್ತೆ ಬದಿ ವಾಹನ ನಿಲ್ಲಿಸುವಾಗ ಹುಷಾರು ಆಗಿರುವಂತೆ ಚಿಕ್ಕಬಳ್ಳಾಪುರ ಎಸ್ಪಿ ನಾಗೇಶ ಮನವಿ ಮಾಡಿದ್ದಾರೆ.
ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ