ಬೆಂಗಳೂರು: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೊಮ್ಯಾಟೋ ಡೆಲಿವರಿ ಬಾಯ್ ಮತ್ತು ಯುವತಿ ಹಿತೇಶಾ ಚಂದ್ರಾಣಿ ನಡುವಿನ ಆರೋಪ, ಪ್ರತ್ಯಾರೋಪ ಮುಂದುವರೆದಿದ್ದು, ಆಕೆ ನನ್ನ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿ, ನೂಕಲು ಬಂದಾಗ ಆಕೆಯದ್ದೇ ಉಂಗುರ ತಾಗಿ ಮೂಗು ಗಾಯವಾಗಿದೆ ಎಂಬ ಕಾಮರಾಜ್ ಹೇಳಿಕೆಯನ್ನು ಹಿತೇಶಾ ನಿರಾಕರಿಸಿದ್ದಾರೆ. ಜೊಮ್ಯಾಟೋ ವಿಚಾರದಲ್ಲಿ ಅವರಿಂದ ಸಮರ್ಪಕ ಸೇವೆಯನ್ನು ಬಯಸುವುದು ಗ್ರಾಹಕಳಾಗಿ ನನ್ನ ಹಕ್ಕು. ನಾನು ಹಣ ಕೊಡುತ್ತೀನಿ ಎಂದ ಮೇಲೆ ಅವರು ಅದನ್ನು ಸರಿಯಾಗಿ ನಿರ್ವಹಿಸಲೇಬೇಕು. ನಾನು ಆರ್ಡರ್ ಮಾಡಿದ್ದ ಊಟ ನಿಗದಿತ ಸಮಯದಲ್ಲಿ ಕೈ ಸೇರದಿದ್ದಾಗ ಅದನ್ನು ಕ್ಯಾನ್ಸಲ್ ಮಾಡಿ ಅಥವಾ ಉಚಿತವಾಗಿ ತಲುಪಿಸಿ ಎಂದು ಗ್ರಾಹಕ ಸೇವಾ ಸಿಬ್ಬಂದಿಗೆ ತಿಳಿಸಿದ್ದೆ. ಹೀಗಾಗಿ ಕಾಮರಾಜ್ ಆರ್ಡರ್ ತಲುಪಿಸಲು ಬಂದಾಗ ಜೊಮ್ಯಾಟೋ ಕಡೆಯಿಂದ ನನ್ನ ಕೋರಿಕೆ ಬಗ್ಗೆ ಏನಾದರೂ ಮಾಹಿತಿ ಬಂದಿದೆಯಾ ಎಂದು ಸಹಜವಾಗಿ ಕೇಳಿದೆ. ಆ ಸಂದರ್ಭದಲ್ಲಿ ಆತ ನನ್ನ ಬಳಿ ತುಂಬಾ ಒರಟಾಗಿ ನಡೆದುಕೊಂಡರು ಎಂದು ಆರೋಪಿಸಿದ್ದಾರೆ.
ಉಚಿತವಾಗಿ ಸೇವೆ ಒದಗಿಸುವ ಬಗ್ಗೆ ಅಥವಾ ಆರ್ಡರ್ ಕ್ಯಾನ್ಸಲ್ ಮಾಡಿರುವ ಬಗ್ಗೆ ಜೊಮ್ಯಾಟೋದವರು ಏನಾದರೂ ತಿಳಿಸಿದ್ದಾರಾ? ಎಂದು ಕೇಳಿದ್ದಕ್ಕೆ, ಮೇಡಂ ನನ್ನ ಸಮಯ ಹಾಳುಮಾಡಬೇಡಿ, ನನಗೆ ಅದರ ಬಗ್ಗೆ ಏನೂ ಗೊತ್ತಿಲ್ಲ ಎಂದು ತೀರಾ ಒರಟು ಒರಟಾಗಿ ಉತ್ತರ ನೀಡಿದರು. ಅವರು ಮಾತನಾಡಿದ ರೀತಿ ಬೆದರಿಕೆ ಹಾಕುವಂತೆ ಇದ್ದ ಕಾರಣ ನಾನು ಬಾಗಿಲು ಹಾಕಿಕೊಳ್ಳಲು ಮುಂದಾದೆ. ಆಗ, ಏನ್ ಮಾಡ್ತಾ ಇದ್ದೀರಿ ಎಂದು ಕೂಗಿದ ಆತ, ಬಾಗಿಲನ್ನು ಜೋರಾಗಿ ತಳ್ಳಿ ಒಳ ಬಂದು ಊಟವನ್ನು ಕಸಿದುಕೊಂಡು ಹೋಗಿದ್ದಾಗಿ ಆರೋಪಿಸಿದ್ದಾರೆ.
ನೀವು ಹೀಗೆ ಮಾಡುವಂತಿಲ್ಲ ಎಂದು ನಾನು ಪದೇ ಪದೇ ಕೂಗಿಕೊಂಡೆ. ಆದರೆ, ಆತ ನನ್ನ ಮುಖಕ್ಕೆ ಬಲವಾಗಿ ಗುದ್ದಿದಾಗ ಅಲ್ಲಿ ಏನಾಗುತ್ತಿದೆ ಎನ್ನುವುದೇ ತಿಳಿಯಲಿಲ್ಲ. ಇದೆಲ್ಲಾ ಒಂದೆರೆಡು ನಿಮಿಷದೊಳಗೆ ಆಗಿ ಹೋಗಿವೆ. ನನಗೆ ಗುದ್ದಿದ ನಂತರ ಆತ ಲಿಫ್ಟ್ ಕಡೆಗೆ ಓಡಿದ್ದು ಗಮನಿಸಿ ನಾನು ತಕ್ಷಣ ಹಿಂಬಾಲಿಸಿದೆ. ಆ ಕ್ಷಣದಲ್ಲಿ ನನಗೆ ಮೂಗಿನಿಂದ ರಕ್ತ ಇಳಿಯುತ್ತಿದೆ ಎನ್ನುವುದೂ ಗೊತ್ತಾಗಿರಲಿಲ್ಲ. ನಾನು ಹೋಗಿ ಅವರನ್ನು ತಡೆದೆ, ಲಿಫ್ಟ್ ಇನ್ನೂ ಬಾಗಿಲು ಹಾಕಿಕೊಂಡಿರಲಿಲ್ಲವಾದ್ದರಿಂದ ಆತ ಮತ್ತೊಮ್ಮೆ ನನಗೆ ಗುದ್ದಿ ನನ್ನನ್ನು ತಳ್ಳಿ ಮೆಟ್ಟಿಲಿಳಿದು ಓಡಿಹೋದರು. ಆದರೆ, ಅಲ್ಲಿ ಸಿಸಿಟಿವಿ ಇರಲಿಲ್ಲವಾದ್ದರಿಂದ ಯಾವುದೇ ಘಟನೆಗಳ ಚಿತ್ರೀಕರಣವಾಗಿಲ್ಲ. ನಾನು ಹಾಕಿಕೊಂಡಿರುವ ಉಂಗುರ ಅತಿ ತೆಳುವಾಗಿದ್ದು, ಅದರಿಂದ ಇಷ್ಟು ದೊಡ್ಡ ಗಾಯವಾಗುವುದೂ ಸಾಧ್ಯವಿಲ್ಲ ಎಂದು ಹಿತೇಶಾ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿ ನಂತರ ಜಾಮೀನು ಪಡೆದುಕೊಂಡಿರುವ ಡೆಲಿವರಿ ಬಾಯ್ ಕಾಮರಾಜ್, ನಾನು ಆಕೆಗೆ ಬೈದಿಲ್ಲ. ಆಕೆಯೇ ಅವಾಚ್ಯ ಶಬ್ದಗಳಿಂದ ನಿಂದಿಸಿ ನನಗೆ ಚಪ್ಪಲಿಯಿಂದ ಹೊಡೆದಿರುವುದು. ನಾನು ಊಟದ ಪೊಟ್ಟಣವನ್ನು ಕಸಿದುಕೊಂಡಿರುವುದು ನಿಜ. ಆದರೆ, ಆಕೆ ಹೊಡೆಯಲಾರಂಭಿಸಿದಾಗ ಭಯಗೊಂಡು ನನ್ನನ್ನು ರಕ್ಷಿಸಿಕೊಳ್ಳಲು ಕೈ ಅಡ್ಡ ಮಾಡಿದೆ ಮತ್ತು ಆಕೆಯ ಕೈಗೆ ಹೊಡೆದು ತಳ್ಳಿದೆ. ಅದರ ಹೊರತಾಗಿ ನಾನು ಮುಖಕ್ಕೆ ಗುದ್ದಿಲ್ಲ. ಆಕೆಯ ಕೈಯಲ್ಲಿದ್ದ ಉಂಗುರವೇ ಮುಖದ ಮೇಲಿನ ಗಾಯಕ್ಕೆ ಕಾರಣ ಎಂದು ಹೇಳುತ್ತಾ ಈ ಕೆಲಸ ನನ್ನ ಪೂರ್ಣಕಾಲಿಕ ವೃತ್ತಿ ಎಂದು ಭಾವುಕರಾಗಿದ್ದಾರೆ.
ಸದ್ಯ ಜೊಮ್ಯಾಟೋ ಕಂಪೆನಿ ಎರಡೂ ಕಡೆಯವರ ಅಭಿಪ್ರಾಯಗಳನ್ನು ಆಲಿಸುತ್ತಿದ್ದು, ತನಿಖೆಗೆ ಸಹಕರಿಸಿ ಸತ್ಯಾಂಶ ಪತ್ತೆ ಹಚ್ಚುವುದಾಗಿ ಹೇಳಿದೆ. ಇನ್ನು ಡೆಲಿವರಿ ಬಾಯ್ ಕಾಮರಾಜ್ನ ಕಾನೂನು ಪ್ರಕ್ರಿಯೆಗೆ ತಗುಲುವ ವೆಚ್ಚವನ್ನು ಭರಿಸುವುದಾಗಿ ಹೇಳಿರುವ ಸಂಸ್ಥೆ, ಆತನ ಇದುವರೆಗಿನ ಕೆಲಸದ ಬಗ್ಗೆ ಉತ್ತಮ ಪ್ರತಿಕ್ರಿಯೆ ಇರುವ ಕಾರಣ ತಾತ್ಕಾಲಿಕವಾಗಿ ಸೇವೆಯಿಂದ ವಜಾಗೊಳಿಸಿದ್ದರೂ ಸಂಬಳ ನೀಡುತ್ತಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:
ಆಕೆಯ ಉಂಗುರವೇ ಮೂಗಿಗೆ ತಾಗಿ ಗಾಯವಾಗಿದೆ; ನಾನೀಗ ಬಂಧನದಿಂದ ಪಾರಾಗಲು 25 ಸಾವಿರ ರೂ ಖರ್ಚು ಮಾಡಬೇಕು
ನಿಗದಿತ ಸಮಯಕ್ಕೆ ಬಾರದ ಊಟ; ಪ್ರಶ್ನಿಸಿದ್ದಕ್ಕೆ ಯುವತಿಯ ಮೂಗು ಮುರಿದ ಜೊಮ್ಯಾಟೋ ಡೆಲಿವರಿ ಬಾಯ್