ಹುಬ್ಬಳ್ಳಿ: ಕೊರೊನಾ ಲಾಕ್ಡೌನ್ ಇದ್ರೂ ಪೊಲೀಸ್ ವಾಹನ ದುರ್ಬಳಕೆ ಮಾಡಿಕೊಂಡ ಆರೋಪದ ಮೇರೆಗೆ ಪಿಎಸ್‌ಐ ಅಮಾನತಾಗಿದ್ದಾರೆ. ಹುಬ್ಬಳ್ಳಿಯ ಪೊಲೀಸ್ ಅರಣ್ಯ ಘಟಕದ ಪಿಎಸ್‌ಐ ಶಿವಾನಂದ ಅರೆನಾಡ್ ಅಮಾನತಾದವರು.
ಏ.17ರಂದು ಅರಣ್ಯ ಘಟಕಕ್ಕೆ ಸೇರಿದ KA-25 G-303 ವಾಹನವನ್ನ ತಮ್ಮ ಪರಿಚಯಸ್ಥರ ಬಳಕೆಗೆ ನೀಡಿದ್ದರು. ಹುಬ್ಬಳ್ಳಿಯ ಗೌಸ್ ಹಣಗಿ, ಅಬ್ದುಲ್ ರಜಾಕ್, ಮುತ್ತಪ್ಪ ಪಾಟೀಲ್ ಎಂಬುವವರು ಉತ್ತರ ಕನ್ನಡ ಜಿಲ್ಲೆಗೆ ತೆಗೆದುಕೊಂಡು ಹೋಗಿದ್ದರು. ಆಗ ಅವರೆಲ್ಲರೂ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ಹಿತ್ತಲಮಕ್ಕಿ ಚೆಕ್ ಪೋಸ್ಟ್ನಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಗುತ್ತಿಗೆದಾರರೊಬ್ಬರಿಗೆ ಸೇರಿದ ಜೆಸಿಬಿಯನ್ನ ತೆಗೆದುಕೊಂಡು ಬರಲು ಜೀಪ್ ಒಯ್ದಿದ್ದಾಗಿ ಒಪ್ಪಿಕೊಂಡಿದ್ದರು.
ಇಬ್ಬರು ಜೆಸಿಬಿ ಚಾಲಕರನ್ನ ಬಿಟ್ಟು ಬರಲು ಇನ್ನಿಬ್ಬರು ಜೀಪ್‌ನಲ್ಲಿ ಹೋಗಿದ್ದರು. ಇಲಾಖೆ ವಾಹನ ದುರುಪಯೋಗ ಪಡಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಪರೋಕ್ಷವಾಗಿ ಪಿಎಸ್‌ಐ ಶಿವಾನಂದ ಭಾಗಿಯಾಗಿದ್ದರು. ಆರೋಪ ಸಾಬೀತಾಗಿದ ಹಿನ್ನೆಲೆಯಲ್ಲಿ ಅಮಾನತುಗೊಳಿಸಿ ಧಾರವಾಡ ಪೊಲೀಸ್ ಅಧೀಕ್ಷಕಿ ವರ್ತಿಕಾ ಕಟಿಯಾರ್ ಆದೇಶಿಸಿದ್ದಾರೆ.