AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ಆಸ್ಪತ್ರೆಯಲ್ಲಿನ ಸ್ಕ್ಯಾನಿಂಗ್ ಮಷಿನ್ ಕದ್ದೊಯ್ದು ಮನೆಯಲ್ಲಿಟ್ಟ ಸಿಬ್ಬಂದಿ: ಭ್ರೂಣ ಲಿಂಗ ಪತ್ತೆ ಶಂಕೆ!

ಹಾಸನದ ಬೇಲೂರು ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಸ್ಕ್ಯಾನಿಂಗ್ ಯಂತ್ರ ಕಳವು ನಡೆದಿರುವುದು ಬಯಲಾಗಿದೆ. ತನಿಖೆ ವೇಳೆ ಆಕ್ಸಿಜನ್ ಸಿಲಿಂಡರ್‌ಗಳು ಮತ್ತು ಐಸಿಯು ಮಾನಿಟರ್‌ಗಳು ಸಹ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಕದ್ದ ಯಂತ್ರವನ್ನು ಭ್ರೂಣ ಲಿಂಗ ಪತ್ತೆಗೆ ಬಳಸಿದ ಶಂಕೆ ವ್ಯಕ್ತವಾಗಿದ್ದು, ಇಬ್ಬರು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಪಿಸಿಪಿಎನ್‌ಡಿಟಿ ಕಾಯ್ದೆಯಡಿ ತನಿಖೆ ನಡೆಸಲಾಗಿದೆ.

ಸರ್ಕಾರಿ ಆಸ್ಪತ್ರೆಯಲ್ಲಿನ ಸ್ಕ್ಯಾನಿಂಗ್ ಮಷಿನ್ ಕದ್ದೊಯ್ದು ಮನೆಯಲ್ಲಿಟ್ಟ ಸಿಬ್ಬಂದಿ: ಭ್ರೂಣ ಲಿಂಗ ಪತ್ತೆ ಶಂಕೆ!
ಬಗೆದಷ್ಟೂ ಬಯಲಾಗ್ತಿದೆ ಬೇಲೂರು ಸರ್ಕಾರಿ ಆಸ್ಪತ್ರೆ ಕರ್ಮಕಾಂಡ
ಮಂಜುನಾಥ ಕೆಬಿ
| Edited By: |

Updated on:Dec 21, 2025 | 11:44 AM

Share

ಹಾಸನ, ಡಿಸೆಂಬರ್ 21:  ಹಾಸನದ (Hassan) ಬೇಲೂರಿನ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿರುವ ಗಂಭೀರ ಅಕ್ರಮಗಳು ಒಂದೊಂದಾಗಿ ಬಯಲಾಗುತ್ತಿದ್ದು, ಆರೋಗ್ಯ ಇಲಾಖೆಗೆ ಭಾರೀ ಮುಜುಗರ ಉಂಟಾಗಿದೆ. ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿದ್ದ ಲಕ್ಷಾಂತರ ರೂ. ಮೌಲ್ಯದ ಸ್ಕ್ಯಾನಿಂಗ್ ಯಂತ್ರ, ಆಕ್ಸಿಜನ್ ಸಿಲಿಂಡರ್‌ಗಳು, ಐಸಿಯು ಮಾನಿಟರ್‌ಗಳು ಸೇರಿದಂತೆ ಹಲವು ಮಹತ್ವದ ವೈದ್ಯಕೀಯ ಉಪಕರಣಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ಕದ್ದೊಯ್ದ ಯಂತ್ರದಲ್ಲಿ ಭ್ರೂಣ ಲಿಂಗ ಪತ್ತೆ ಮಾಡಲಾಗುತ್ತಿತ್ತಾ ಎಂಬ ಶಂಕೆ ವ್ಯಕ್ತವಾಗಿದೆ.

ಯಂತ್ರ ಕಳವಿನ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ವರ್ಷಗಳ ಹಿಂದೆ ಆಸ್ಪತ್ರೆಗೆ ಒದಗಿಸಲಾಗಿದ್ದ ಸ್ಕ್ಯಾನಿಂಗ್ ಯಂತ್ರವು ತಜ್ಞರ ಕೊರತೆಯಿಂದ ಬಳಕೆಯಿಲ್ಲದೇ ಇದ್ದು, ಇತ್ತೀಚೆಗೆ ಹೊರಗುತ್ತಿಗೆ ಆಧಾರದಲ್ಲಿ ರೇಡಿಯಾಲಜಿಸ್ಟ್ ನೇಮಕವಾದ ನಂತರ ಯಂತ್ರ ಪರಿಶೀಲನೆಗೆ ಮುಂದಾದಾಗ ಯಂತ್ರವೇ ಆಸ್ಪತ್ರೆಯಲ್ಲಿ ಇಲ್ಲದಿರುವುದು ತಿಳಿದುಬಂದಿದೆ. ಸ್ಕ್ಯಾನಿಂಗ್ ಮಷಿನ್ ಕದ್ದೊಯ್ದು ಭ್ರೂಣ ಲಿಂಗ ಪತ್ತೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸಿಸಿ ಕ್ಯಾಮೆರಾ ಪರಿಶೀಲನೆ ವೇಳೆ ಡಿ ಗ್ರೂಪ್ ನೌಕರ ಪ್ರದೀಪ್ ಹಾಗೂ ಖಾಸಗಿ ಆಂಬುಲೆನ್ಸ್ ಚಾಲಕ ಸೂಫಿಯಾನ್ ಸೇರಿ ಯಂತ್ರವನ್ನು ತೆಗೆದುಕೊಂಡಿರುವ ದೃಶ್ಯಗಳು ಕಂಡುಬಂದಿದೆ.ಇಬ್ಬರ ವಿರುದ್ದ ಕೇಸ್ ದಾಖಲಿಸಲಾಗಿದೆ. ವಿಚಾರಣೆಯಲ್ಲಿ ಯಂತ್ರವನ್ನು ಕದ್ದು ಮನೆಯಲ್ಲಿಟ್ಟಿದ್ದಾಗಿ ಸಿಬ್ಬಂದಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು

ಇನ್ನೊಂದೆಡೆ ಭ್ರೂಣ ಲಿಂಗ ಪತ್ತೆಗೆ ಬಳಕೆ ಮಾಡಿರುವ ಹಿನ್ನೆಲೆಯಲ್ಲಿ ಪಿಸಿ ಪಿಎನ್ ಡಿಟಿ ಕಾಯಿದೆಯ ಅಡಿಯಲ್ಲಿ ರಚನೆಯಾಗಿರುವ ತಜ್ಞರ ಟೀಂ ಕೂಡ ಯಂತ್ರವನ್ನ ಪರಿಶೀಲನೆಗೆ ಒಳಪಡಿಸಿದೆ. ಈ ಬಗ್ಗೆ ಪ್ರತಿಕ್ರಿಸಿದ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಅನಿಲ್, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳೋದಾಗಿ ಹೇಳಿದ್ದಾರೆ

ಪ್ರಕರಣದ ಗಂಭೀರತೆ ಹಿನ್ನೆಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅನಿಲ್ ಸೂಚನೆಯ ಮೇರೆಗೆ ಪೊಲೀಸ್ ದೂರು ದಾಖಲಾಗಿದ್ದು, ಇಬ್ಬರು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.  ಅಧಿಕಾರಿಗಳ ಶಾಮೀಲಾತಿ ಶಂಕಿಸಿ ವಿವಿಧ ಸಂಘಟನೆಗಳು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿ ಸಮಗ್ರ ತನಿಖೆಗೆ ಆಗ್ರಹಿಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:33 am, Sun, 21 December 25