68ನೇ ವಯಸ್ಸಿನಲ್ಲಿ 2ನೇ ಮದ್ವೆಯಾದ ವ್ಯಕ್ತಿಗೆ ಮಕ್ಕಳ ಕಾಟ, ಮಚ್ಚು ಹಿಡಿದ ಅಪ್ಪ: ಏನಿದು ವೃದ್ಧ ದಂಪತಿಯ ಸಂಘರ್ಷ?
68 ವರ್ಷದ ವರ, 58 ವರ್ಷದ ವಧು. ಇಳಿ ವಯಸ್ಸಿನಲ್ಲಿ ಇವರು ದಂಪತಿ ಆಗಿದ್ದು, ಬಾಳಿನ ಸಂಧ್ಯಾಕಾಲದಲ್ಲಿ ಹೊಸ ಜೀವನ ಆರಂಭಿಸಿದ್ದಾರೆ. ಆದ್ರೆ, ಇವರ ಬದುಕಿಗೆ ಮಕ್ಕಳೇ ಮುಳುವಾಗಿದ್ದಾರೆ. ಹೀಗಾಗಿ ಅಪ್ಪ ಕೈನಲ್ಲಿ ಮಚ್ಚು ಹಿಡಿದಿದ್ದಾರೆ. ಅಲ್ಲದೇ ಕೈಲಿ ಮಚ್ಚು ಹಿಡಿದು ಪೊಲೀಸ್ ಠಾಣೆಗೆ ಬಂದಿರುವ ವೃದ್ಧ, ಏನ್ಮಾಡಿದ್ನೋ ಅಂತ ಕಂಗಾಲಾಗಿದ್ದರು. ಆದ್ರೆ, ಮಚ್ಚು ಹಿಡಿದು ಬಂದಿರುವುದು ಏನೋ ಮಾಡಿಲ್ಲ ಅಲ್ಲ ಬದಲಿಗೆ ಜೀವ ರಕ್ಷಣೆಗಾಗಿ.

ಹಾಸನ, (ಡಿಸೆಂಬರ್ 21): ಆತನಿಗೆ 68, ಆಕೆಗೆ 58 ವರ್ಷ. ಬದುಕಿನ ಸಂಧ್ಯಾಕಾಲದಲ್ಲಿ ಅವರು ಒಂದಾಗಿದ್ದಾರೆ. ಒಂಟಿಯಾಗಿದ್ದ ಇಬ್ಬರು ಹೊಸಜೀವನ ಆರಂಭಿಸಿದ್ದಾರೆ. ಹೌದು..ಹಾಸನ (Hassan) ಜಿಲ್ಲೆ ಹೊಳೆನರಸೀಪುರ ತಾಲೂಕಿನ ಗಾಳಿಪುರದ 68 ವರ್ಷದ ರಾಜಣ್ಣ ಅವರು ಕಿತ್ತಾನೆಗಡಿಯ 58 ವರ್ಷದ ಗೀತಾಳನ್ನ ಎರಡನೇ ಮದುವೆಯಾಗಿದ್ದಾರೆ (Second Marriage). ಆದ್ರೆ, ವೃದ್ಧ ನವವಿವಾಹಿತರಿಗೆ ಮಕ್ಕಳೇ ಕಂಟಕವಾಗಿದ್ದು, ಇಳಿವಯಸ್ಸಿಯನಲ್ಲಿ ಎರಡನೇ ಮದುವೆ ಮಾಡಿಕೊಂಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ದಂಪತಿ ಇದೀಗ ರಕ್ಷಣೆಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಮಗನ ಕಾಟಕ್ಕೆ ಮಚ್ಚು ಹಿಡಿದ ಅಪ್ಪ!
ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಗಾಳಿಪುರದ ರಾಜಣ್ಣನಿಗೆ 40 ವರ್ಷಗಳ ಹಿಂದೆಯೇ ಮದುವೆಯಾಗಿದ್ದು. ಎರಡು ಹೆಣ್ಣ ಮಕ್ಕಳು ಹಾಗು ಓರ್ವ ಮಗ ಇದ್ದ ರಾಜಣ್ಣ ಚನ್ನಾಗಿ ದುಡಿಮೆ ಮಾಡಿದ್ದ ಕೂಲಿ ಮಾಡಿ ಮನೆ ಕಟ್ಟಿ, ಮನೆ ಸಮೀಪವೇ ಒಂದು ಫ್ಲೋರ್ ಮಿಲ್ ಮಾಡಿ ನೆಮ್ಮದಿಯಾಗಿದ್ದರು. ಆದ್ರೆ, 2 ವರ್ಷಗಳ ಹಿಂದೆ ಪತ್ನಿ ತೀರಿಕೊಂಡಿದ್ದರಿಂದ ರಾಜಣ್ಣ ಒಂಟಿಯಾಗಿದ್ದರು. ಬಳಿಕ ಸ್ನೇಹಿತರ ಸಲಹೆ ಮೇರೆಗೆ, ಹಾಸನದ ಕಿತ್ತಾನೆಗಡಿಯ 58 ವರ್ಷದ ಗೀತಾಳನ್ನ ಮದ್ವೆ ಆಗಿದ್ದಾರೆ. ಪತಿಯಿಂದ ದೂರಾಗಿದ್ದ ಗೀತಾ, ರಾಜಣ್ಣ ಅವರ ಜತೆ ಇದೇ 17ರಂದು ವಿವಾಹವಾಗಿದ್ದಾರೆ. ಆದ್ರೆ, ಈಗ ರಾಜಣ್ಣನ 2ನೇ ಮದ್ವೆಗೆ ಪುತ್ರ ಕೆರಳಿದ್ದು, ಕಾಟ ಕೊಡ್ತಿದ್ದಾನಂತೆ. ಇದರಿಂದ ಮಗ ನನ್ನ ಮೇಲೆ ಹಲ್ಲೆ ಮಾಡ್ತಿದ್ದಾನೆಂದು ಮಚ್ಚು ಹಿಡಿದು ಹೊಳೆನರಸೀಪುರ ಠಾಣೆಗೆ ಬಂದ ರಾಜಣ್ಣ ರಕ್ಷಣೆ ಕೋರಿದ್ದಾರೆ.
ಇದನ್ನೂ ನೋಡಿ: ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಮಕ್ಕಳಿಗೆ ಆಸ್ತಿ ಪಲಾಗುವ ಭಯ
ಹೊಳೆನರಸೀಪುರದ ಹೌಸಿಂಗ್ಬೋರ್ಡ್ನಲ್ಲಿ ಫ್ಲೋರ್ ಮಿಲ್ ನಡೆಸ್ತಿರುವ ರಾಜಣ್ಣ, ಎರಡ್ಮೂರು ಮನೆ ಕಟ್ಟಿ ಬಾಡಿಗೆಗೂ ಬಿಟ್ಟಿದ್ದಾರೆ. ಪತ್ನಿ ಅಗಲಿದ ಬಳಿಕ ಮಕ್ಕಳು ರಾಜಣ್ಣನ ಬಗ್ಗೆ ತಲೆಕೆಡಿಸಿಕೊಳ್ತಿಲ್ವಂತೆ. ಹೀಗಾಗಿ ರಾಜಣ್ಣ ಗೀತಾರನ್ನ ಮದ್ವೆ ಆಗಿದ್ದಾರೆ. ಆದ್ರೆ ಅಪ್ಪನ 2ನೇ ಮದ್ವೆಯಿಂದ ಆಸ್ತಿ ಪಾಲಾಗುತ್ತೆಂದು ಮಕ್ಕಳು ಕಾಟ ಕೊಡ್ತಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ಪೊಲೀಸರು ತಮಗೆ ರಕ್ಷಣೆ ಕೊಡುತ್ತಿಲ್ಲ ಎಂದು ವೃದ್ಧ ದಂಪತಿ ಅಳಲು ತೋಡಿಕೊಂಡಿದ್ದಾರೆ.
ರಾಜಣ್ಣನ ಆರೋಪವೇನು?
ಈಗ ಎರಡು ವರ್ಷಗಳ ಹಿಂದೆ ಪತ್ನಿ ಮೃತಪಟ್ಟ ಬಳಿಕ ಹೆಣ್ನು ಮಕ್ಕಳಾಗಲಿ, ಗಂಡು ಮಗನಾಗಲಿ ತನ್ನನ್ನ ನೋಡಿಕೊಳ್ತಿಲ್ಲ. ಕೊನೆಗಾಲದಲ್ಲಿ ನನಗೆ ಯಾರು ಆಗುತ್ತಾರೆ ಎಂದು ಗೀತಾಳನ್ನು ಕೈ ಹಿಡಿದಿದ್ದೇನೆ. ಹಾಸನ ತಾಲ್ಲೂಕಿನ ಗೀತಾ ಅವರು ಈಗಾಗಲೇ ಮದುವೆಯಾಗಿದ್ದು, ತನ್ನಿಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ್ದಾರೆ. ಆದ್ರೆ, ಗಂಡನಿಂದ ದೂರವಾಗಿ ಕೂಲಿ ಮಾಡಿ ಜೀವನ ಮಾಡುತ್ತಿದ್ದವಳಿಗೆ ಒಂದು ಬಾಳು ಸಿಗಲಿ ಎಂದು ಹೊಳೆನರಸೀಪುರ ತಾಳ್ಲೂಕಿನ ಮಾವಿನಕೆರೆಯ ರಂಗನಾಥಸ್ವಾಮಿ ಬೆಟ್ಟದಲ್ಲಿ ಸತಿಪತಿಗಳಾಗಿದ್ದೇವೆ. ಆದ್ರೆ, ನೆಮ್ಮದಿ ಜೀವನ ಮಾಡಲು ಮಕ್ಕಳು ಬಿಡುತ್ತಿಲ್ಲ.
ನನ್ನ ಆಸ್ತಿ ಈ ಮಹಿಳೆ ಪಾಲಾಗುತ್ತೆ ಎಂದು ಮಕ್ಕಳು ತೊಂದರೆ ಕೊಡುತ್ತಿದ್ದಾರೆ. ಅಲ್ಲದೇ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇತ್ತ ಮಕ್ಕಳು ತಂದೆಯೇ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪ್ರತಿದೂರು ನೀಡಿದ್ದಾರೆ. ಸದ್ಯ ಎರಡೂ ಕಡೆಯ ದೂರು ಸ್ವೀಕರಿಸಿರುವ ಪೊಲೀಸರು ವಿಚಾರಣೆ ನಡಸಿದ್ದಾರೆ/ ಆದ್ರೆ ಈ ನಡುವೆ ತಮ್ಮ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ. ಪೊಲೀಸರು ತಮಗೆ ರಕ್ಷಣೆ ಕೊಡುತ್ತಿಲ್ಲ ಎಂದು ವೃದ್ಧ ದಂಪತಿ ವೀಡಿಯೋ ಮಾಡಿ ತಮಗೆ ರಕ್ಷಣೆ ನೀಡಿ ಎಂದು ಮೊರೆಯಿಟ್ಟಿದ್ದಾರೆ.
ಮಕ್ಕಳು, ಮೊಮ್ಮಕ್ಕಳು ಎಷ್ಟೇ ಇರಲಿ, ಪ್ರೀತಿ ತೋರದಿದ್ರೆ ಸಂಬಂಧಕ್ಕೆ ಅರ್ಥವೇ ಇರಲ್ಲ. ಇದನ್ನ ಅರ್ಥ ಮಾಡಿಕೊಂಡು ಮಕ್ಕಳು ನಡೆಯಬೇಕಿದೆ. ವೃದ್ಧ ದಂಪತಿಯ ಹೊಸ ಜೀವನಕ್ಕೂ ಪೊಲೀಸರು ರಕ್ಷಣೆ ನೀಡಬೇಕಿದೆ.



