ಮಂಗಳೂರು: ಜೇನುಕೃಷಿ ಕಲಿಸುವ ನೆಪದಲ್ಲಿ ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ; ಆರೋಪಿ ಅಂದರ್
ಮಂಗಳೂರಿನ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ಬೆಳಗಾವಿ ಮೂಲದ ಅಪ್ರಾಪ್ತ ಬಾಲಕಿಯ ಮೇಲೆ ಜೇನುಕೃಷಿ ತರಬೇತಿ ಹೆಸರಿನಲ್ಲಿ 17 ದಿನಗಳ ಕಾಲ ನಿರಂತರ ಅತ್ಯಾಚಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ವಿರುದ್ಧ ಪೋಕ್ಸೋ ಮತ್ತು ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಅರೆಸ್ಟ್ ಮಾಡಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ಮಂಗಳೂರು,ಡಿಸೆಂಬರ್ 21: ಜೇನುಕೃಷಿ ಕಲಿಸುವ ನೆಪದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ನಡೆಸಿದ ಘಟನೆ ಮಂಗಳೂರಿನ (Mangaluru) ಉಪ್ಪಿನಂಗಡಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಳಗಾವಿ ಮೂಲದ ಅಪ್ರಾಪ್ತೆಯನ್ನು ಮನೆಯಲ್ಲಿ ಇರಿಸಿಕೊಂಡಿದ್ದ ಆರೋಪಿ, 17 ದಿನಗಳ ಕಾಲ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಆರೋಪಿಯ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಅರೆಸ್ಟ್ ಮಾಡಲಾಗಿದೆ.
ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು
ಬೆಳಗಾವಿ ಮೂಲದ ಅಪ್ರಾಪ್ತ ಬಾಲಕಿಯನ್ನು ಜೇನುಕೃಷಿ ತರಬೇತಿ ನೀಡುವುದಾಗಿ ಹೇಳಿ ಆರೋಪಿ ಅಬ್ದುಲ್ ಗಫೂರ್ ತನ್ನ ಮನೆಯಲ್ಲಿ ಇರಿಸಿಕೊಂಡಿದ್ದ. ಪೋಷಕರು ಮಗಳನ್ನು ಸುಮಾರು ಎರಡು ತಿಂಗಳ ಹಿಂದೆ ಆರೋಪಿಯ ಮನೆಗೆ ಬಿಟ್ಟು ಹೋಗಿದ್ದು, ಈ ಅವಧಿಯಲ್ಲಿ ಡಿಸೆಂಬರ್ 2ರಿಂದ 19ರವರೆಗೆ ಬಾಲಕಿಯ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆಯ ಮಾಹಿತಿ ತಿಳಿದ ಪೊಲೀಸರು, ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಪೋಕ್ಸೋ ಕಾಯ್ದೆಯ ವಿವಿಧ ಕಲಂಗಳ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.
ಇದನ್ನೂ ಓದಿ ಧರ್ಮಸ್ಥಳ ಬುರುಡೆ ಪ್ರಕರಣ: ಜೈಲಿನಿಂದ ಹೊರಬರುತ್ತಲೇ ಹೋರಾಟಗಾರರ ವಿರುದ್ಧವೇ ತಿರುಗಿ ಬಿದ್ದ ಚಿನ್ನಯ್ಯ!
ಹಾನಗಲ್ ಗ್ಯಾಂಗ್ ರೇಪ್ ಆರೋಪಿಗಳ ಗಡಿಪಾರು
2024ರ ಜನವರಿಯಲ್ಲಿ ಹಾವೇರಿಯ ಹಾನಗಲ್ ಪಟ್ಟಣದ ವ್ಯಾಪ್ತಿಯಲ್ಲಿ ನಡೆದ ಗ್ಯಾಂಗ್‌ರೇಪ್ ಪ್ರಕರಣವು ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಹಾನಗಲ್ ಗ್ಯಾಂಗ್‌ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದ್ದು, ಪ್ರಕರಣದ ಏಳು ಆರೋಪಿಗಳನ್ನು ಹಾವೇರಿ ಜಿಲ್ಲೆಯ ವ್ಯಾಪ್ತಿಯಿಂದ ಗಡಿಪಾರು ಮಾಡಲಾಗಿದೆ. ಸವಣೂರು ಉಪವಿಭಾಗಾಧಿಕಾರಿ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು, ಆರೋಪಿಗಳಾದ ಅಪ್ತಾಬ್ ಚಂದನಕಟ್ಟಿ, ಶೋಯಿಬ್ ಮುಲ್ಲಾ, ಮದರ್ ಸಾಬ್ ಮಂಡಕ್ಕಿ, ಮೊಹ್ಮದ್ ಸಾದಿಕ್ ಅಗಸಿಮನಿ, ರಿಯಾಜ್ ಸಾವಿಕೇರಿ, ಸಮಿವುಲ್ಲಾ ಲಾಲನವರ ಹಾಗೂ ತೌಸಿಪ್ ಅಹ್ಮದ್ ಚೌಟಿರನ್ನು ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡುವಂತೆ ಸೂಚಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



