ಹುಬ್ಬಳ್ಳಿಯಲ್ಲಿ ಯುವಕನ ಕೊಲೆ: ಮೂವರು ಆರೋಪಿಗಳ ಕಾಲಿಗೆ ಗುಂಡೇಟು

ಹುಬ್ಬಳ್ಳಿಯಲ್ಲಿ ಆಕಾಶ್ ಕೊಲೆ ಪ್ರಕರಣದ ಮೂವರು ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆತ್ಮರಕ್ಷಣೆಗಾಗಿ ಎಂದು ಪೊಲೀಸರು ಹೇಳಿದ್ದಾರೆ. ಘಟನೆಯಲ್ಲಿ ಇಬ್ಬರು ಇನ್ಸ್​ಪೆಕ್ಟರ್ ಗಳು ಮತ್ತು ಇತರ ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಕೊಲೆ ಹಿಂದೆ ಹಳೆಯ ದ್ವೇಷ ಇರಬಹುದು ಎಂದು ಶಂಕಿಸಲಾಗಿದೆ. ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ.

ಹುಬ್ಬಳ್ಳಿಯಲ್ಲಿ ಯುವಕನ ಕೊಲೆ: ಮೂವರು ಆರೋಪಿಗಳ ಕಾಲಿಗೆ ಗುಂಡೇಟು
ಕೊಲೆಯಾದ ಆಕಾಶ್​
Edited By:

Updated on: Jan 28, 2025 | 10:58 AM

ಹುಬ್ಬಳ್ಳಿ, ಜನವರಿ 28: ಆಕಾಶ್​ ವಾಲ್ಮೀಕಿ (24) ಕೊಲೆ ಪ್ರಕರಣದ ಮೂವರು ಆರೋಪಿಗಳ ಕಾಲಿಗೆ ಪೊಲೀಸರು (Police) ಫೈರಿಂಗ್ ಮಾಡಿದ್ದಾರೆ. ಆತ್ಮರಕ್ಷಣೆಗೆ ವಿದ್ಯಾನಗರ (Vidhyanagar) ಪೊಲೀಸ್ ಠಾಣೆ ಇನ್ಸ್​ಪೆಕ್ಟರ್​ ಶ್ರೀಮಂತ ಹುಣಸಿಕಟ್ಟಿ ಮತ್ತು ಕಮರಿಪೇಟೆ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್​ ಸುನೀಲ್​ ಅವರು ​ಆರೋಪಿಗಳಾದ ಅಭಿಷೇಕ್, ವಿನೋದ್, ಯಲ್ಲಪ್ಪ ಕಾಲಿಗೆ ಗುಂಡು ಹೊಡೆದಿದ್ದಾರೆ.

ತಡರಾತ್ರಿ ಹುಬ್ಬಳ್ಳಿಯ ಉಣಕಲ್ ಕೆರೆ ಬಳಿ ಆಕಾಶ್ ಕೊಲೆಯಾಗಿತ್ತು. ಈ ಕೊಲೆಯಲ್ಲಿ ಭಾಗಿಯಾಗಿರುವ ಮೂವರನ್ನು ಬಂಧಿಸಲು ತೆರಳಿದ್ದಾಗ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾದರು. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು 9 ಸುತ್ತು ಗುಂಡು ಹಾರಿಸಿದರು. 4 ಸುತ್ತು ಗಾಳಿಯಲ್ಲಿ , 5 ಸುತ್ತು ಗುಂಡುಗಳನ್ನು ಆರೋಪಿಗಳ ಕಾಲಿಗೆ ಹೊಡೆದರು. ಬಳಿಕ, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಪತ್ನಿ ಕಿರುಕುಳ ತಾಳಲಾರದೆ ಡೆತ್​ನೋಟ್ ಬರೆದಿಟ್ಟು ಪತಿ ಆತ್ಮಹತ್ಯೆ

ಘಟನೆಯಲ್ಲಿ ಇನ್ಸ್​ಪೆಕ್ಟರ್​ಗಳಾದ ಶ್ರೀಮಂತ ಹುಣಸಿಕಟ್ಟಿ, ಸುನೀಲ್ ಮತ್ತು ಪೇದೆಗಳಾದ ಮುತ್ತು ಲಮಾಣಿ, ಶರಣಗೌಡ ಲಮಾಣಿ ಎಂಬುವರಿಗೆ ಗಾಯವಾಗಿದೆ. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಹವಾ ಸೃಷ್ಟಿಸಲು ಹೋಗಿ ಕೆಡವಿದರು ಹೆಣ

ಆಕಾಶ್ ಕೊಲೆ ಹಿಂದೆ ಹಳೇ ದ್ವೇಷ, ಹವಾ ಸೃಷ್ಟಿ ಮಾಡುವ ಉದ್ದೇಶವಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಉಣಕಲ್ ಕೆರೆ ಬಳಿ ಇರುವ ಗೋಲ್ಡನ್ ಹೈಟ್ಸ್ ಬಾರ್​ ಪಾರ್ಕಿಂಗ್ ಜಾಗದಲ್ಲಿ ಆಕಾಶ್​ನನ್ನು ಆರೋಪಿಗಳು ಕೊಲೆ ಮಾಡಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹಳೇ ದ್ವೇಷ ಹಿನ್ನೆಲೆಯಲ್ಲಿ ಕೊಲೆ ಶಂಕೆ: ಶಶಿಕುಮಾರ್​

ಪ್ರಕರಣ ಸಂಬಂಧ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಮಾತನಾಡಿ, ಆಕಾಶ್​ನನ್ನು ಕೊಲೆ ಮಾಡಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಐದಕ್ಕೂ ಹೆಚ್ಚು ಜನರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಅವರ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದೇವೆ. ಕಳೆದ ವರ್ಷ ಶಿವರಾತ್ರಿ ದಿನ ಗಲಾಟೆಯಾಗಿತ್ತು. ಈ ವಿಷಯ ಇಟ್ಟುಕೊಂಡು, ಹವಾ ಸೃಷ್ಡಿ ಮಾಡಲು ಕೊಲೆ ಮಾಡಿದ್ದಾರೆ. ಬಹಳ ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂದು ತಿಳಿಸಿದರು.

ಘಟನೆಯಲ್ಲಿ ಗಾಯಗೊಂಡವರನ್ನು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಿಮ್ಸ್ ಆಸ್ಪತ್ರೆಗೆ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಭೇಟಿ ನೀಡಿ, ಗಾಯಾಳ ಆರೋಗ್ಯ ವಿಚಾರಿಸಿದರು. ನಂತರ ಗುಂಡೇಟು ತಿಂದ ಆರೋಪಿಗಳ ಆರೋಗ್ಯ ವಿಚಾರಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:53 am, Tue, 28 January 25