ಕಲಬುರಗಿ, ಸೆಪ್ಟೆಂಬರ್ 30: ಸರಸಕ್ಕೆ ನಿರಾಕರಿಸಿದ್ದಕ್ಕೆ ಪತ್ನಿಯನ್ನು ಪತಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಸೇಡಂ (Sedam) ತಾಲೂಕಿನ ಬಟಗೇರಾ(ಬಿ) ಗ್ರಾಮದಲ್ಲಿ ನಡೆದಿದೆ. ನಾಗಮ್ಮ (42) ಕೊಲೆಯಾದ ಮಹಿಳೆ. ಶೇಖಪ್ಪ ಕೊಲೆ ಮಾಡಿದ ಆರೋಪಿ.
ನಾಗಮ್ಮಳ ಪತಿ ಶೇಖಪ್ಪ ಬೇರೆಯವರ ಜಮೀನಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಸಂಸಾರ ನಡೆಸುತ್ತಿದ್ದನು. ಆದರೆ, ಪ್ರತಿನಿತ್ಯ ಕಂಠಪೂರ್ತಿ ಕುಡಿದು ಬಂದು ಪತ್ನಿ ಹಾಗೂ ಮಕ್ಕಳಿಗೆ ಕಿರುಕುಳ ಕೊಡುತ್ತಿದ್ದನು. ಆರೋಪಿ ಶೇಖಪ್ಪಗೆ ಇಬ್ಬರು ಪತ್ನಿಯರಿದ್ದು, ಪತಿಯ ಕಿರುಕುಳ ತಾಳಲಾರದೆ ಎರಡನೇ ಪತ್ನಿ ತವರು ಸೇರಿದ್ದಳು. ಇತ್ತ ನಾಗಮ್ಮಳ ನಡುವಳಿಕೆ ಬಗ್ಗೆ ಶೇಖಪ್ಪ ಅನುಮಾನ ಹೊಂದಿದ್ದನು. ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಶೇಖಪ್ಪ ಆರೋಪ ಮಾಡುತ್ತಿದ್ದನಂತೆ.
ಇದರಿಂದ ಬೇಸತ್ತಿದ್ದ ನಾಗಮ್ಮ ಕೆಲದಿನಗಳ ಹಿಂದಷ್ಟೆ ಊರಾಚೆ ಮನೆ ಮಾಡಿ ಮಕ್ಕಳ ಜೊತೆ ವಾಸವಾಗಿದ್ದಳು. ಶನಿವಾರ (ಸೆ.28) ರಂದು ಸಂಬಂಧಿಕರು ಸಂಧಾನ ಮಾಡಿ, ನಾಗಮ್ಮಳನ್ನು ಪತಿ ಶೇಖಪ್ಪನ ಮನೆಗೆ ಕರೆದುಕೊಂಡು ಬಂದಿದ್ದಾರೆ.
ಇದನ್ನೂ ಓದಿ: ಮಹಾಲಕ್ಷ್ಮಿ ಭೀಕರ ಹತ್ಯೆ: ಕೊಲೆ ನಂತರ ಹಂತಕನಿಗೆ ಕಾಡಿತ್ತಾ ಪಾಪ ಪ್ರಜ್ಞೆ?
ಅದೇ ದಿನ ರಾತ್ರಿ ಕಂಠಪೂರ್ತಿ ಕುಡಿದ ಬಂದ ಶೇಖಪ್ಪ, ಪತ್ನಿ ನಾಗಮ್ಮಳಿಗೆ ಸರಸಕ್ಕೆ ಕರೆದಿದ್ದಾನೆ. ಆದರೆ ಪತ್ನಿ ನಾಗಮ್ಮ ನಿರಾಕರಿಸಿದ್ದಕ್ಕೆ ಸಿಟ್ಟಿಗೆದ್ದ ಶೇಖಪ್ಪ, ನಿನ್ನನ್ನು ಕೊಚ್ಚಿ ಹಾಕುತ್ತೇನೆ ಅಂತ ಧಮ್ಕಿ ಹಾಕಿದ್ದಾನೆ. ಏನ್ ಮಾಡ್ತಿಯಾ ಮಾಡು ಅಂತ ನಾಗಮ್ಮ ಹೇಳುತ್ತಿದ್ದಂತೆ, ಹಗ್ಗದಿಂದ ನಾಗಮ್ಮಳನ್ನು ಉಸಿರುಗಟ್ಟಿಸಿ, ಬಳಿಕ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ನಂತರ ಸೇಡಂ ಪೊಲೀಸ್ ಠಾಣೆಗೆ ಹೋಗಿ ನಾನು ಪತ್ನಿಯನ್ನು ಕೊಲೆ ಮಾಡಿದ್ದೇನೆ ಅಂತ ಶರಣಾಗಿದ್ದಾನೆ.
ಘಟನಾ ಸ್ಥಳಕ್ಕೆ ಸೇಡಂ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶರಣಾಗಿರುವ ಶೇಖಪ್ಪನನ್ನು ವಿಚಾರಣೆ ನಡೆಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ