ಬೆಂಗಳೂರಿನಲ್ಲಿ 2022ರಲ್ಲಿ 4,785, 2023ರಲ್ಲಿ 5,580 ಬೈಕ್ ಕಳ್ಳತನ; ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಪೊಲೀಸ್ ಕಮಿಷನರ್
ಟೂ ವ್ಹೀಲರ್ ಕಳ್ಳರಿಗೆ ಬೆಂಗಳೂರು ಹಾಟ್ ಸ್ಪಾಟ್ ಆಕ್ತಿದ್ದೀಯಾ? ಇಂತದ್ದೊಂದು ಅನುಮಾನ ಕಾಡ್ತಿದೆ. ಏಕೆಂದರೆ ಸಿಲಿಕಾನ್ ಸಿಟಿಯಲ್ಲಿ ಪ್ರತಿನಿತ್ಯ 14 ರಿಂದ 16 ಬೈಕ್‌ಗಳು ಕಳುವಾಗುತ್ತಿವೆ. ಬೆಂಗಳೂರು ಪೊಲೀಸರನ್ನು ಈ ಐನಾತಿ ಬೈಕ್ ಕಳವು ಗ್ಯಾಂಗ್ ಬಿಟ್ಟು ಬಿಡದಂತೆ ಕಾಡ್ತಿವೆ. ನಗರದಲ್ಲಿ ಬೈಕ್ಗಳ ಅಂಕಿ-ಅಂಶಗಳೇನು? ಯಾವ ರೀತಿ ಕಳ್ಳತನ ನಡೆಯುತ್ತಿದೆ ಎಂಬೆಲ್ಲಾ ವಿಚಾರಗಳ ಮಾಹಿತಿ ಇಲ್ಲಿದೆ.
ಬೆಂಗಳೂರು, ಸೆ.30: ನಗರದಲ್ಲಿ ಬರೋಬ್ಬರಿ 80 ಲಕ್ಷ ಬೈಕ್ಗಳಿವೆ. ಸದ್ಯ ನಗರದಲ್ಲಿ ನಡೆಯುತ್ತಿರುವ ಬೈಕ್ ಕಳ್ಳತನಗಳು (Bike Theft) ಆತಂಕಕ್ಕೆ ಕಾರಣವಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ (B Dayanand) ಹೇಳಿದ್ದಾರೆ. “ನಾವು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ವಾಹನ ಕಳ್ಳರ ಮೊದಲ ಆಯ್ಕೆ ದ್ವಿಚಕ್ರ ವಾಹನಗಳು. ಕಳುವಾದ ವಾಹನಗಳಲ್ಲಿ ಮೋಟಾರು ಸೈಕಲ್‌ಗಳು ಮೊದಲು ಬರುತ್ತವೆ ಎಂದು ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ತಿಳಿಸಿದ್ದಾರೆ.
ಇನ್ನು ಈ ಕಳ್ಳತನಕ್ಕೆ ಪ್ರಾಥಮಿಕ ಕಾರಣವೆಂದರೆ ಬೈಕ್‌ನ ಹ್ಯಾಂಡ್ ಲಾಕ್ ಅನ್ನು ಮುರಿಯುವುದು ಸುಲಭ. ಹಾಗೂ ದ್ವಿಚಕ್ರ ವಾಹನಗಳನ್ನು ಎಲ್ಲೆಂದರಲ್ಲಿ ಬಿಟ್ಟಿರುತ್ತಾರೆ. ಅಲ್ಲಿಂದ ಕಳ್ಳತನ ಮಾಡುವುದು ಕಳ್ಳರಿಗೆ ಸುಲಭ. ದ್ವಿಚಕ್ರ ವಾಹನ ಕಳ್ಳತನಗಳು ಸಾಮಾನ್ಯವಾಗಿ ವಸತಿ ಪ್ರದೇಶಗಳಲ್ಲಿ ಸಂಭವಿಸುತ್ತವೆ. ಏಕೆಂದರೆ ಈ ಸ್ಥಳಗಳು ಕಡಿಮೆ ಸಿಸಿಟಿವಿ ಕಣ್ಗಾವಲು ಹೊಂದಿರುತ್ತವೆ. ವಸತಿ ಪ್ರದೇಶಗಳ ಜೊತೆಗೆ, ಶಾಪಿಂಗ್ ಮಾಲ್‌ಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳ ಸುತ್ತಮುತ್ತಲಿನ ಸ್ಥಳಗಳಿಂದ ದ್ವಿಚಕ್ರ ವಾಹನಗಳನ್ನು ಹೆಚ್ಚಾಗಿ ಕಳ್ಳತನ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಕಳೆದ ಎರಡೂವರೆ ವರ್ಷಗಳಲ್ಲಿ 13,000ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಕಳ್ಳತನವಾಗಿವೆ ಎಂದು ಪೊಲೀಸ್ ಮೂಲಗಳ ಮಾಹಿತಿ ಇರುವುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ತಿಳಿಸಿದ್ದು ನಗರದಲ್ಲಿ ಪ್ರತಿದಿನ ಸರಾಸರಿ 14-16 ದ್ವಿಚಕ್ರ ವಾಹನಗಳು ಕಳ್ಳತನವಾಗುತ್ತಿವೆ ಎಂದರು.
ಮಳೆ ಬರುವುದನ್ನೇ ಕಾದು ಹೊಂಚು ಹಾಕಿ ಬೈಕ್ ಕಳವು ಮಾಡೋ ಗ್ಯಾಂಗ್
ಕಳೆದ ಮೇ ತಿಂಗಳಿನಲ್ಲಿ ಗಿರಿನಗರ ಪೊಲೀಸರು ಐನಾತಿ ಬೈಕ್ ಕಳವು ಗ್ಯಾಂಗ್ ಅನ್ನು ಲಾಕ್ ಮಾಡಿದ್ರು. ಮಳೆ ಬರುವ ವೇಳೆ ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ನವೀನ್, ತರುಣ್ ಬಂಧಿತ ಆರೋಪಿಗಳು. ಇವರು ರಾತ್ರಿ ವೇಳೆ ಬೈಕ್ ಕಳ್ಳತನ ಮಾಡುತ್ತಿದ್ದರು. ರಾತ್ರಿ ವೇಳೆ ಮನೆ ಹೊರಗೆ ನಿಲ್ಲಿಸುತ್ತಿದ್ದ ಬೈಕ್ ಗಳನ್ನೇ ಟಾರ್ಗೆಟ್ ಮಾಡಿ ಮಳೆ ಬರುವ ವೇಳೆ ಕಳ್ಳತನಕ್ಕೆ ಪ್ಲಾನ್ ಮಾಡುತ್ತಿದ್ದರು.
ಮಳೆ ಬರುವ ವೇಳೆ ಜನ ಯಾರು ಹೊರಗಡೆ ಬರಲ್ಲ ಎಂದು ಹೊಂಚು ಹಾಕಿ ಬೈಕ್ ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡುತ್ತಿದ್ದರು. ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ತನಿಖೆ ಕೈಗೊಂಡು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 7 ಲಕ್ಷ ಮೌಲ್ಯದ 11 ಬೈಕ್‌ಗಳನ್ನು ವಶಕ್ಕೆ ಪಡೆದು ಬೈಕ್ ಕಳೆದುಕೊಂಡವರಿಗೆ ಮರಳಿಸಲಾಗಿದೆ.
ಇದನ್ನೂ ಓದಿ: ಕಾರವಾರ ಕಡಲ ತೀರದಲ್ಲಿ ಹಾರಾಡುವ ಗಾಳಿಪಟಗಳ ಫೋಟೋ ನೋಡಿ
ನಗರದ ಪೀಣ್ಯ ಸಮೀಪ ರೀಲ್ಸ್ ಸ್ಟಾರ್ ಡಿಜೆ ದೀಪು ಹೆಸರಲ್ಲಿ ಆರೋಪಿ ಪ್ರದೀಪ್ ಕಳ್ಳಾಟ
ಓಎಲ್ ಎಕ್ಸ್ ಪ್ರದೀಪ್ ಅಂತಲೇ ಫೇಮಸ್ ಆಗಿರೋ ಆರೋಪಿ ಪ್ರದೀಪ್ ಮೇಲೆ ಬರೋಬ್ಬರಿ 8 ಬೈಕ್ ಕಳವು ಪ್ರಕರಣಗಳಿವೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ 8 ಬೈಕ್ ಕಳವು ಪ್ರಕರಣಗಳು ದಾಖಲಾಗಿತ್ತು. ಓಎಲ್ ಎಕ್ಸ್ ಗ್ರಾಹಕರನ್ನ ಟಾರ್ಗೇಟ್ ಮಾಡುತ್ತಿದ್ದ ಆರೋಪಿ ಪ್ರದೀಪ್ ಓಎಲ್ ಎಕ್ಸ್ ನಲ್ಲಿ ಬೈಕ್ ಮಾರಾಟಕ್ಕಿದೆ ಎಂದು ಹಾಕಲಾದ ಜಾಹಿರಾತುಗಳನ್ನು ನೋಡಿ ಟೆಸ್ಟ್ ಡ್ರೈವ್ ನೆಪದಲ್ಲಿ ಬೈಕ್ ಪಡೆದು ಎಸ್ಕೇಪ್ ಆಗುತ್ತಿದ್ದ. ಸದ್ಯ ಈ ರೀತಿ ಬೈಕ್ ಕದ್ದು ಪೀಣ್ಯ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಹೀಗೆ ಹತ್ತಾರು ಪ್ರಕರಣಗಳು ಪ್ರತಿದಿನ ದಾಖಲಾಗುತ್ತಿವೆ. ನಗರದಲ್ಲಿ ದಿನನಿತ್ಯ 14 ರಿಂದ 16 ಬೈಕ್‌ಗಳು ಕಳವಾಗುತ್ತಿವೆ. ಸದ್ಯ ಈ ಬಗ್ಗೆ ಹೊಸ ಜಾಗೃತಿ ಕ್ರಮಗಳ ಬಗ್ಗೆ ಪ್ರಕಟಣೆ ಹೊರಡಿಸಿರು ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ನಿಮ್ಮ ಬೈಕ್ ಅನ್ನು ಹೇಗೆ ರಕ್ಷಿಸುವುದು
- ಸಿಸಿಟಿವಿ ಕಣ್ಗಾವಲು ಇರುವ ಸ್ಥಳಗಳಲ್ಲಿ ಬೈಕ್‌ಗಳನ್ನು ನಿಲ್ಲಿಸಿ
- ಬೈಕ್‌ಗಳನ್ನು ಕಾಂಪೌಂಡ್ ಒಳಗೆ ನಿಲ್ಲಿಸಿ ಮತ್ತು ಗೇಟ್ ಲಾಕ್ ಮಾಡಿ
- ಬೈಕ್‌ಗಳು ಲಾಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ.
- ಸ್ಕೂಟರ್‌ಗಳಲ್ಲಿ ಕೀಗಳನ್ನು ಮರೆಯಬೇಡಿ
- ದ್ವಿಚಕ್ರ ವಾಹನಗಳಲ್ಲಿ ಜಿಪಿಎಸ್-ಟ್ರ್ಯಾಕಿಂಗ್ ವ್ಯವಸ್ಥೆಗಳನ್ನು ಸ್ಥಾಪಿಸಿ
- ವ್ಹೀಲ್ ಲಾಕಿಂಗ್ ಸಿಸ್ಟಮ್ ಅಳವಡಿಕೆ
- ಗಟ್ಟಿಮುಟ್ಟಾದ ಹ್ಯಾಂಡ್ ಲಾಕ್ ಗಳನ್ನು ಅಳವಡಿಸುವುದು
- ಕಳ್ಳತನಕ್ಕೆ ಪ್ರಯತ್ನಿಸಿದಾಗ ಸೈರನ್ ಅಥವಾ ಮೊಬೈಲ್ ಗೆ ಮಾಹಿತಿ ಬರುವಂತೆ ಮಾಡುವುದು
- ಸುಧಾರಿತ ಕಳ್ಳತನ ವಿರೋಧಿ ಸಾಧನಗಳನ್ನು ಬಳಸಿ
- ಆಟೋಮೊಬೈಲ್ ವಿತರಕರಿಂದ ಖರೀದಿಸುವ ಸಮಯದಲ್ಲಿ ಭದ್ರತಾ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಿ
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ