ಅಪಾಯದಲ್ಲಿ ಹೂಡಿ ಮೇಲ್ಸೇತುವೆ: ಫ್ಲೈಓವರ್ನಲ್ಲಿ ಘನ ವಾಹನ ಸಂಚಾರ ನಿರ್ಬಂಧ ಸಾಧ್ಯತೆ
ಬೆಂಗಳೂರಿನ ಪೀಣ್ಯ ಫ್ಲೈಓವರ್ನಲ್ಲಿ ಅಂತೂ ಇಂತೂ ದುರಸ್ತಿ ಕಾಮಗಾರಿಯ ನಂತರ ಘನ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆದರೆ ಇದೀಗ ಬೆಂಗಳೂರಿನ ಮತ್ತೊಂದು ಮೇಲ್ಸೇತುವೆ ಅಪಾಯದಲ್ಲಿದೆ. ಹೂಡಿ ರೈಲ್ವೇ ಫ್ಲೈಓವರ್ನಲ್ಲಿ ಭಾರಿ ವಾಹನ ಸಂಚಾರ ನಿಷೇಧಿಸುವ ಸಾಧ್ಯತೆ ಇದೆ.
ಬೆಂಗಳೂರು, ಸೆಪ್ಟೆಂಬರ್ 30: ಬೆಂಗಳೂರಿನ ಹೂಡಿಯಲ್ಲಿ ರೈಲ್ವೇ ಹಳಿಗೆ ಅಡ್ಡಲಾಗಿ ನಿರ್ಮಿಸಿರುವ ದಶಕದಷ್ಟು ಹಳೆಯದಾದ ಮೇಲ್ಸೇತುವೆಯನ್ನು ತುರ್ತಾಗಿ ದುರಸ್ತಿ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಫ್ಲೈಓವರ್ನ ನಾಲ್ಕು ಬೇರಿಂಗ್‌ಗಳು ವಿಫಲವಾಗಿದ್ದು, ವಾಹನ ಬಳಕೆದಾರರಿಗೆ ಅಪಾಯ ತಂದೊಡ್ಡಿದೆ ಎಂದು ವರದಿಯಾಗಿದೆ.
ಮೇಲ್ಸೇತುವೆಯನ್ನು ತಕ್ಷಣ ದುರಸ್ತಿ ಮಾಡುವಂತೆ ನೈಋತ್ಯ ರೈಲ್ವೆಗೆ (ಎಸ್‌ಡಬ್ಲ್ಯೂಆರ್) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮನವಿ ಮಾಡಿದೆ. ಅದರಂತೆ, ಇಂದು (ಸೋಮವಾರ) ಫ್ಲೈಓವರ್ನ ತಪಾಸಣೆ ನಡೆಯಲಿದೆ. ಬಳಿಕ ಘನ ವಾಹನಗಳನ್ನು ನಿಷೇಧಿಸುವ ಬಗ್ಗೆ ಸಂಚಾರ ಪೊಲೀಸರು ನಿರ್ಧರಿಸುವ ಸಾಧ್ಯತೆಯಿದೆ.
ಐಟಿಪಿಎಲ್ ರಸ್ತೆಯನ್ನು ಅಯ್ಯಪ್ಪನಗರ ಮತ್ತು ವಸತಿ ಕಾಲೋನಿಗಳಿಗೆ ಸಂಪರ್ಕಿಸುವ ಮೇಲ್ಸೇತುವೆಯ ಬೇರಿಂಗ್‌ಗಳ ವೈಫಲ್ಯಗಳ ಬಗ್ಗೆ ಸ್ಥಳೀಯ ನಿವಾಸಿಗಳು ಗಮನ ಸೆಳೆದಿದ್ದರು. ಅದರಂತೆ ಬಿಬಿಎಂಪಿ ಎಂಜಿನಿಯರ್‌ಗಳು ಮತ್ತು ರೈಲ್ವೆ ಅಧಿಕಾರಿಗಳು ಮೇಲ್ಸೇತುವೆಯನ್ನು ಪರಿಶೀಲಿಸಿ ತಾತ್ಕಾಲಿಕ ಪರಿಹಾರವನ್ನು ಒದಗಿಸಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಹೇಳಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಸಮಸ್ಯೆ ಗಂಭೀರವಾಗಿದೆ ಎಂದು ಮಹದೇವಪುರ ಟಾಸ್ಪ್ಫೋರ್ಸ್ ಸದಸ್ಯ ಕ್ಲೆಮೆಂಟ್ ಜಯಕುಮಾರ್ ತಿಳಿಸಿರುವುದಾಗಿಯೂ ವರದಿ ಉಲ್ಲೇಖಿಸಿದೆ. ನಾಲ್ಕು ಬೇರಿಂಗ್‌ಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ಘನ ವಾಹನಗಳ ಸಂಚಾರ ಸ್ಥಗಿತಕ್ಕೆ ಶಿಫಾರಸು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಸಿಗರೇಟ್, ಬೀಡಿ ತುಂಡುಗಳಿಗೆ ಪ್ರತ್ಯೇಕ ಡಸ್ಟ್ ಬಿನ್ ಅಳವಡಿಕೆಗೆ ಮುಂದಾದ ಬಿಬಿಎಂಪಿ
ರೈಲ್ವೆ ಮೇಲ್ಸೇತುವೆಯನ್ನು 2014 ರಲ್ಲಿ ನೈಋತ್ಯ ರೈಲ್ವೆ ನಿರ್ಮಿಸಿತ್ತು. ದುರಸ್ತಿ ಕಾರ್ಯಕ್ಕೆ ಭಾಗಶಃ ಧನಸಹಾಯ ನೀಡುವುದಾಗಿ ನೈಋತ್ಯ ರೈಲ್ವೆ ಭರವಸೆ ನೀಡಿದೆ ಎಂದು ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ ಉದಯ್ ಚೌಗುಲೆ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ