ಬೆಂಗಳೂರು: ಸಿಗರೇಟ್, ಬೀಡಿ ತುಂಡುಗಳಿಗೆ ಪ್ರತ್ಯೇಕ ಡಸ್ಟ್ ಬಿನ್ ಅಳವಡಿಕೆಗೆ ಮುಂದಾದ ಬಿಬಿಎಂಪಿ
ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಸಿಗರೇಟ್, ಬೀಡಿ ತುಂಡುಗಳನ್ನು ಧೂಮಪಾನಿಗಳು ಎಸೆಯುತ್ತಿರುವುದರಿಂದ ಪರಿಸರಕ್ಕೆ ಹಾನಿಯಾಗುತ್ತಿರುವುದನ್ನು ಗಮನಿಸಿರುವ ಬಿಬಿಎಂಪಿ ಇದೀಗ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಸಿಗರೇಟ್, ಬೀಡಿ ತುಂಡುಗಳನ್ನು ಎಲ್ಲೆಂದರಲ್ಲಿ ಎಸೆಯುವವರಿಗೆ ಹೊಸ ನಿಯಮ ಶೀಘ್ರದಲ್ಲೇ ಜಾರಿಗೆ ಬರುವ ಸಾಧ್ಯತೆ ಇದೆ. ಏನದು? ವಿವರಗಳಿಗೆ ಮುಂದೆ ಓದಿ.
ಬೆಂಗಳೂರು, ಸೆಪ್ಟೆಂಬರ್ 30: ಸಿಗರೇಟ್ ಮತ್ತು ಬೀಡಿ ತುಂಡುಗಳ ವೈಜ್ಞಾನಿಕ ವಿಲೇವಾರಿಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು 2022ರ ನವೆಂಬರ್‌ನಲ್ಲೇ ಮಾರ್ಗಸೂಚಿ ರೂಪಿಸಿ ಬಿಡುಗಡೆ ಮಾಡಿತ್ತು. ಆದರೆ, ಬೆಂಗಳೂರು ನಗರದಲ್ಲಿ ಮಾರ್ಗಸೂಚಿ ಇದುವರೆಗೆ ಜಾರಿಯಾಗಿಲ್ಲ. ಹೀಗಾಗಿ ಇದೀಗ ಬಿಬಿಎಂಪಿ ಮಹತ್ವದ ಕ್ರಮಕ್ಕೆ ಮುಂದಾಗಿದೆ. ನಗರದಾದ್ಯಂತ ಸಿಗರೇಟ್ ಹಾಗೂ ಬೀಡಿ ತುಂಡುಗಳನ್ನು ಬಿಸಾಡುವುದಕ್ಕೆಂದೇ ಪ್ರತ್ಯೇಕ ಬುಟ್ಟಿಗಳನ್ನು (ಬಿನ್ಗಳನ್ನು) ಅಳವಡಿಸಲು ಮುಂದಾಗಿದೆ.
ಬೆಂಗಳೂರಿನಲ್ಲಿ ಪ್ರತಿದಿನ ಸಾವಿರಾರು ಸಿಗರೇಟ್ ತುಂಡುಗಳನ್ನು ವಿಲೇವಾರಿ ಮಾಡಲಾಗುತ್ತದೆ. ಅವುಗಳು ಹಾನಿಕಾರಕ ರಾಸಾಯನಿಕಗಳನ್ನು ಹೊಂದಿದ್ದು ಅದು ಚರಂಡಿಗಳು, ಅಂತರ್ಜಲ, ಮಣ್ಣು ಮತ್ತು ಪರಿಸರವನ್ನು ಕಲುಷಿತಗೊಳಿಸುತ್ತವೆ. ಹೀಗಾಗಿ ನಗರದಲ್ಲಿ ಸಿಗರೇಟ್ ತುಂಡುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಅಗತ್ಯವಿದೆ. ಸಿಗರೇಟ್ ತುಂಡುಗಳಿಂದಾಗುವ ಅನಾಹುತಗಳನ್ನು ತಡೆಯಲು ಬಿಬಿಎಂಪಿಯು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗಸೂಚಿಯಂತೆ ತುಂಡುಗಳ ಸಂಗ್ರಹಕ್ಕೆ ಯೋಜನೆ ರೂಪಿಸಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.
ಪ್ರಮುಖ ಪ್ರದೇಶಗಳಲ್ಲಿ ಪ್ರತ್ಯೇಕ ಬಿನ್!
ಯೋಜನೆಯ ಭಾಗವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಪ್ರಮುಖ ಸಿಗರೇಟ್ ತಯಾರಕ ‘ಐಟಿಸಿ’ ಸಹಯೋಗದೊಂದಿಗೆ ಸಿಗರೇಟ್ ತುಂಡುಗಳ ಸಂಗ್ರಹಕ್ಕಾಗಿ ನಗರದ ಹಾಟ್ ಸ್ಪಾಟ್‌ಗಳಲ್ಲಿ ಪ್ರತ್ಯೇಕ ಡಸ್ಟ್‌ಬಿನ್‌ಗಳನ್ನು ಇರಿಸಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ನಂತರ ಸಿಗರೇಟ್ ಹಾಗೂ ಬೀಡಿಯ ತುಂಡುಗಳನ್ನು ತ್ಯಾಜ್ಯದಿಂದ ಇಂಧನ ಉತ್ಪಾದನೆ ಅಥವಾ ಸಹ-ಸಂಸ್ಕರಣೆಯಂತಹ ವಿಧಾನಗಳ ಮೂಲಕ ಮರುಬಳಕೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸಿಗರೇಟ್ ಹಾಗೂ ಬೀಡಿಯ ತುಂಡುಗಳನ್ನು ಮರುಬಳಕೆ ಮಾಡುವ ಜವಾಬ್ದಾರಿ ತಯಾರಕರ ಮೇಲಿದೆ. ಇದಕ್ಕೆ ತಯಾರಕ ಕಂಪನಿಗಳು ಈ ಹಿಂದಿನ ಸಭೆಯಲ್ಲಿ ಸಮ್ಮತಿ ಸೂಚಿಸಿವೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ವೈಜ್ಞಾನಿಕ ವಿಲೇವಾರಿಗೆ ಸಿಗರೇಟ್ ಉತ್ಪಾದಕರೇ ಹೊಣೆ
ಸಿಗರೇಟ್ ತುಂಡುಗಳ ವೈಜ್ಞಾನಿಕ ಸಂಗ್ರಹಣೆ ವಿಳಂಬವಾಗಿರುವುದು ನಿಜ ಎಂದು ಬಿಬಿಎಂಪಿ ಒಪ್ಪಿಕೊಂಡಿದೆ. ಇದಕ್ಕೆ ಸಿಗರೇಟ್ ತಯಾರಕರನ್ನು ದೂಷಿಸಿದೆ. ಬೆಂಗಳೂರಿನ ಎರಡು ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ತುಂಡುಗಳ ವಿಲೇವಾರಿಗಾಗಿ ಮೈಕ್ರೋ ಯೋಜನೆ ಕೈಗೊಳ್ಳುವಂತೆ ಐಟಿಸಿಗೆ ಪತ್ರವನ್ನೂ ಬಿಬಿಎಂಪಿ ಬರೆದಿದೆ.
ಇದನ್ನೂ ಓದಿ: ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಲಾಲ್ ಬಾಗ್ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಂತಾದ ಬ್ಯಾಂಡ್ ಸ್ಟ್ಯಾಂಡ್
ಈ ಹಿಂದಿನ ಸಭೆಯಲ್ಲಿ ಸಮ್ಮತಿಸಿದಂತೆ ಸಿಗರೇಟ್ ತುಂಡುಗಳ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಯೋಜನೆ ಆರಂಭಿಸಲು ಐಟಿಸಿ ವಿಫಲವಾದಲ್ಲಿ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗುವುದು ಎಂದು ಪತ್ರದಲ್ಲಿ ಬಿಬಿಎಂಪಿ ಎಚ್ಚರಿಕೆಯನ್ನೂ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ