ಅನುಮಾನಂ ಪೆದ್ದ ರೋಗಂ ಅಂತಾರೆ. ಆತನಿಗೆ ಇದ್ದಿದ್ದು ಅದೇ. ಮದುವೆಯಾಗಿ ಐವರು ಮಕ್ಕಳಿದ್ದರೂ ಆತನಿಗೆ ಪತ್ನಿಯ ಮೇಲೆ ಸದಾ ಅನುಮಾನ. ಪತ್ನಿಯ ಶೀಲ ಶಂಕಿಸುತ್ತಿದ್ದ ಆತ ಹೇಯ ಕೃತ್ಯ ಎಸಗಿ, ತಾನು ಕೂಡ ದುಡುಕಿ ತಪ್ಪು ನಿರ್ಧಾರ ಕೈಗೊಂಡಿದ್ದನು. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಜಿಗೇನಹಳ್ಳಿ ಗ್ರಾಮದ ಒಂದು ಪುಟ್ಟ ಕುಟುಂಬ ವಾಸವಗಿತ್ತು. ಕುಟುಂಬ ಒಡೆಯ ಕುಮಾರಸ್ವಾಮಿ (38) 12 ವರ್ಷಗಳ ಹಿಂದೆ ರೇಖಾ ಎಂಬುವಳನ್ನು ಮದುವೆಯಾಗಿದ್ದಾನೆ. ಇವರ ಸುಖ ಸಂಸಾರಕ್ಕೆ ಸಾಕ್ಷಿ ಎಂಬಂತ್ತೆ ಐವರು ಮಕ್ಕಳಿದ್ದಾರೆ. ಸುಖವಾಗಿಯೇ ಇದ್ದ ಕುಟುಂಬಕ್ಕೆ ಜವರಾಯನಂತೆ ಬಂದಿದ್ದು, ಅನುಮಾನವೆಂಬ ಪೆಡಂ ಭೂತ.
ಹೌದು ಕುಮಾರಸ್ವಾಮಿಯ ತೆಲೆಯಲ್ಲಿ ಅನುಮಾನದ ಪಿಶಾಚಿ ಹೊಕ್ಕು, ಪತ್ನಿಯ ಶೀಲದ ಮೇಲೆ ಸದಾ ಅನುಮಾನ ಪಡುತ್ತಿದ್ದನು. ರೇಖಾಳ ಶೀಲ ಶಂಕಿಸಿ, ಕುಮಾರಸ್ವಾಮಿ ಪತ್ನಿಯೊಂದಿಗೆ ಸದಾ ಜಗಳವಾಡುತ್ತಿದ್ದನು. ಈ ವಿಚಾರವಾಗಿ ಇತ್ತೀಚಿಗೆ ಕೆಲ ದಿನಗಳ ಹಿಂದೆ ಪೊಲೀಸ ಠಾಣೆಯಲ್ಲಿ ರಾಜಿ ಪಂಚಾಯತಿ ಸಹ ನಡೆದಿತ್ತು. ಇದಾದ ನಂತರ ಹಲವು ದಿನಗಳಿಂದ ಮಾನಸಿಕವಾಗಿ ನೊಂದಿದ್ದನಂತೆ.
ಗುರುವಾರ (ಅ.27) ರೇಖಾ ಕೂಲಿ ಕಾರ್ಮಿಕರ ಜೊತೆ ಜಮೀನಿಗೆ ತೆರಳಿದ್ದಾಳೆ. ರೇಖಾ ಸಂಜೆ ಮನೆಗೆ ಬರುವುದ ತಡವಾಗುತ್ತಿದ್ದಂತೆ, ಕುಮಾರಸ್ವಾಮಿ ಜಮೀನಿಗೆ ತೆರಳಿದ್ದಾನೆ. ಅಲ್ಲಿ ಪತ್ನಿಯೊಂದಿಗೆ ಜಗಳಕ್ಕೀಳಿದ ಕುಮಾರಸ್ವಾಮಿ ರೇಖಾಳನ್ನು ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಕುಮಾರಸ್ವಾಮಿ ಪತ್ನಿಯ ಹೊಟ್ಟೆ ಬಗೆದು ಸಿಗಿದು ಹಾಕಿದ್ದು, ರೇಖಾಳ ಪ್ರಾಣಪಕ್ಷಿ ಜಮೀನಿನಲ್ಲೇ ಹಾರಿ ಹೋಗಿದೆ. ನಂತರ ಕುಮಾರಸ್ವಾಮಿ ಮನೆಗೆ ಪೋನ್ ಮಾಡಿದ್ದೇನೆ ಎಂದು ತಿಳಿಸಿದ್ದಾನೆ. ನಂತರ ಕುಮಾರಸ್ವಾಮಿ ಪತ್ನಿಯನ್ನು ಹತ್ಯೆ ಮಾಡಿದ ಕೂದಳತೆ ದೂರದಲ್ಲಿ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆಯ ವಿಚಾರ ತಿಳಿಯುತ್ತಿದ್ದಂತೆ ಚೋರನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಇನ್ನೂ ಸೊಸೆ ಹಾಗೂ ಮಗನ ಸಾವಿನ ಸುದ್ದಿ ತಿಳಿದು ಮನೆಯಲ್ಲಿ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ತಂದೆ ತಾಯಿಯನ್ನು ಕಳೆದುಕೊಂಡಿರುವ ಐವರು ಮುದ್ದಾದ ಮಕ್ಕಳು ಇದೀಗ ಅಕ್ಷರಶಃ ತಬ್ಬಲಿಯಾಗಿ ಕಣ್ಣೀರಿಡುತ್ತಿವೆ. ಒಂದು ಸಣ್ಣ ಅನುಮಾನ ಇಡೀ ಕುಟುಂಬವನ್ನೇ ಸರ್ವನಾಶ ಮಾಡಿತು. ಇದಕ್ಕೆ ಅಲ್ವೇ ಅನುಮಾನಂ ಪೆದ್ದ ರೋಗಂ ಅನ್ನೋದು.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ವರದಿ- ವೀರೇಶ ದಾನಿ ಟಿವಿ 9 ಬಳ್ಳಾರಿ
Published On - 11:07 pm, Fri, 28 October 22