ಚಾಮರಾಜನಗರ, ಜೂ.07: ಕೇವಲ 2 ಸಾವಿರ ಸಾಲದ ವಿಚಾರಕ್ಕೆ ಗೆಳೆಯನನ್ನೇ ಹೊಡೆದು ಕೊಂದು ಅಪಘಾತದ ಕಥೆ ಕಟ್ಟಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ(Gundlupete)ಯಲ್ಲಿ ತಡ ರಾತ್ರಿ ನಡೆದಿದೆ. ಮಾದಪ್ಪ ಎಂಬಾತನಿಗೆ ಆರೋಪಿಗಳಾದ ರಮೇಶ್ ಹಾಗೂ ಮಲ್ಲ ಎಂಬುವವರು ಕಪಾಳಕ್ಕೆ ಹೊಡೆದು ಕೊಂದಿದ್ದಾರೆ. ಮೃತ ಮಾದಪ್ಪ ಗುಂಡ್ಲುಪೇಟೆಯಲ್ಲಿ ಟೀ ಕ್ಯಾಂಟೀನ್ ನಡೆಸುತ್ತಿದ್ದ. ಕಳೆದೊಂದು ವಾರದ ಹಿಂದೆ ಮಲ್ಲ ಎಂಬುವವನ ಬಳಿ 2 ಸಾವಿರ ಸಾಲ ಪಡೆದಿದ್ದ. ನಿನ್ನೆ(ಜೂ.06) ರಾತ್ರಿ ಮನೆಯಲ್ಲಿದ್ದ ಮಾದಪ್ಪನನ್ನ ಕುಡಿಯಲು ಕರೆದುಕೊಂಡು ಹೋಗಿ ಹತ್ಯೆ ಮಾಡಿದ್ದಾರೆ.
ಇನ್ನು ಮೊದಲೆ ಕಂಠಪೂರ್ತಿ ಮದ್ಯ ಸೇವನೆ ಮಾಡಿದ್ದ ಇವರ ನಡುವೆ ರಮೇಶ ಹಾಗೂ ಮಲ್ಲ ಎರಡು ಸಾವಿರ ಹಣದ ವಿಚಾರ ಪ್ರಸ್ಥಾಪ ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಗಲಾಟೆಯಾಗಿದ್ದು, ಕೋಪದಲ್ಲಿ ಮಾದಪ್ಪನ ಕೆನ್ನೆಗೆ ರಮೇಶ್ ಜೋರಾಗಿ ಹೊಡೆದಿದ್ದಾನೆ. ಈ ವೇಳೆ ಒಂದೇ ಏಟಿಗೆ ಮಾದಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಳಿಕ ಆರೋಪಿಗಳಿಬ್ಬರೂ ಅಪಘಾತದ ಕಥೆ ಕಟ್ಟಿದ್ದಾರೆ.
ಇದನ್ನೂ ಓದಿ:ಊಟ ಮಾಡಿ ಮಲಗಿದ್ದ ವ್ಯಕ್ತಿಯ ಭೀಕರ ಕೊಲೆ ಪ್ರಕರಣ; ಒಡೆದ ಬಳೆ ಚೂರಿನಿಂದ ಆರೋಪಿ ಬಂಧನ
ಯಾವಾಗ ಮೃತದೇಹವನ್ನು ಆಸ್ಪತ್ರೆಗೆ ಕೊಂಡೊಯ್ದರೂ ಆವಾಗ ಸತ್ಯಾಂಶ ಬೆಳಕಿಗೆ ಬಂದಿದೆ. ಈ ಕುರಿತು ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈಗಾಗಲೇ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಚಾಮರಾಜನಗರದ ಚಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹಣದ ವಿಚಾರಕ್ಕೆ ಜೊತೆಗಿದ್ದ ಗೆಳೆಯರೇ ಕೊಲೆ ಮಾಡಿರುವುದು ನಿಜಕ್ಕೂ ದುರಂತವೇ ಸರಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ