ರಾಮನಗರ, ಜು.23: ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ, ಹತ್ಯೆಗೈದ ಘಟನೆ ರಾಮನಗರ (Ramanagara) ಜಿಲ್ಲೆಯ ಮಾಗಡಿ ಪಟ್ಟಣದಲ್ಲಿ ನಡೆದಿದೆ. ಜು. 20ನೇ ತಾರೀಖಿನಂದು ಸಂಜೆ ಬಾಲಕಿಯ ಪೋಷಕರು ಎಲ್ಲೆಡೆ ತಮ್ಮ ಮಗಳನ್ನು ಹುಡುಕುತ್ತಿದ್ದರು. ಮನೆ ಅಕ್ಕ-ಪಕ್ಕ, ಅವಳು ಹೋಗುತ್ತಿದ್ದ ಜಾಗ, ಆಟವಾಡುತ್ತಿದ್ದ ಸ್ಥಳಗಳಲ್ಲಿ ಎಷ್ಟೇ ಹುಡುಕಿದರೂ ತಮ್ಮ ಮಗಳು ಪತ್ತೆ ಆಗಲಿಲ್ಲ. ಕೂಡಲೇ ಮಾಗಡಿ ಪೊಲೀಸ್ ಠಾಣೆಗೆ ಹೋಗಿ ತಮ್ಮ ಮಗಳು ನಾಪತ್ತೆ ಆಗಿರುವ ಕುರಿತು ಪ್ರಕರಣ ದಾಖಲು ಮಾಡಿದ್ದಾರೆ.
ಮೂವರು ಮಕ್ಕಳ ಪೈಕಿ 4 ವರ್ಷದ ಬಾಲಕಿ ಯಾವತ್ತೂ ತನ್ನ ತಂದೆ-ತಾಯಿ ಬಿಟ್ಟು ಒಂದು ದಿನ ಇದ್ದವಳಲ್ಲ. ಅಂತಹದರಲ್ಲೂ ಇಡೀ ರಾತ್ರಿ ತಮ್ಮ ಮಗಳು ಎಲ್ಲಿ ಹೋದಳೋ ಎಂಬ ಆತಂಕದಲ್ಲಿ ರಾತ್ರಿ ಕಳೆದ ಪೋಷಕರಿಗೆ ಬೆಳಗಾಗುವುದರೊಳಗೆ ತಮ್ಮ ಮಗಳು ಕಳೆದು ಹೋಗಿಲ್ಲ, ಬದಲಿಗೆ ಕಿಡ್ನ್ಯಾಪ್ ಆಗಿದ್ದಾಳೆ ಎಂಬ ವಿಚಾರ ಬಯಲಿಗೆ ಬಂದಿತ್ತು.
ಇದನ್ನೂ ಓದಿ:ಕಾಲೇಜು ವಿದ್ಯಾರ್ಥಿನಿಯ ಅಪಹರಿಸಿ ಕೂಡಿ ಹಾಕಿ 12 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ
ಹೌದು, 20 ನೇ ತಾರೀಖು ಸಂಜೆ 5 ಗಂಟೆಯಿಂದ ನಾಪತ್ತೆಯಾಗಿದ್ದ ತಮ್ಮ ಮಗಳನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂಬ ವಿಚಾರ ಪೊಲೀಸರು ಪೋಷಕರಿಗೆ ತಿಳಿಸುತ್ತಿದ್ದಂತೆ ತಂದೆ-ತಾಯಿಗೆ ಕಂಗಾಲಾಗಿದ್ದರು. ಆಗಾಗ ತಮ್ಮ ಮನೆಗೆ ಬಂದು ಹೋಗುತ್ತಿದ್ದ ಬೆಂಗಳೂರಿನ ಆ ಸಂಬಂಧಿ ಇರ್ಫಾನ್, ಆವತ್ತು ಕೂಡ ತಮ್ಮ ಮನೆಗೆ ಬಂದಿದ್ದ. ಮನೆಯಲ್ಲಿದ್ದ ಮಕ್ಕಳನ್ನು ಅಂಗಡಿಗೆ ಕರೆದುಕೊಂಡು ಹೋಗಿ, ಚಾಕಲೇಟ್ ಕೊಡಿಸಿದ್ದ. ಬಳಿಕ ವಾಪಾಸ್ ತೆರಳಿದ್ದ ಆರೋಪಿ 4 ವರ್ಷದ ಬಾಲಕಿಯನ್ನೂ ತನ್ನ ದ್ವಿಚಕ್ರವಾಹನದಲ್ಲಿ ಕರೆದುಕೊಂಡು ಹೋಗಿದ್ದ.
ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.ಇದನ್ನು ಗಮನಿಸಿದ ಮಾಗಡಿ ಟೌನ್ ಪೊಲೀಸರು, ಆರೋಪಿಗೆ ಕರೆ ಮಾಡಿ ವಿಚಾರಿಸಿದಾಗ, ನಾನು ಮಗುವನ್ನು ಅಲ್ಲೆ ಬಿಟ್ಟುಬಂದಿರೋದಾಗಿ ಹೇಳಿದ್ದ. ಬಳಿಕ ತನ್ನ ಮೊಬೈಲ್ ಸ್ವಿಚ್ ಅಫ್ ಮಾಡಿಕೊಂಡಿದ್ದ. ಮಗುವಿನ ಜೊತೆ ಹೀನ ಕೃತ್ಯವೆಸಗಿ ಕೊಲೆ ಮಾಡಿ ಮತ್ತೆ ಎಂದಿನಂತೆ ಬೆಂಗಳೂರಿನ ಮಾರುಕಟ್ಟೆಗೆ ತೆರಳಿದ್ದ ಆರೋಪಿ, ಏನೂ ಆಗಿಲ್ಲವೆಂಬಂತೆ ತನ್ನ ಕೊತಂಬರಿ ವ್ಯಾಪಾರದಲ್ಲಿ ತೊಡಗಿದ್ದ.
ಇದನ್ನೂ ಓದಿ:ಬೆಳಗಾವಿಯಲ್ಲಿ ಬುದ್ಧಿಮಾಂದ್ಯೆ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ; ಆರೋಪಿ ಅರೆಸ್ಟ್
ಆರೋಪಿಯ ಸುಳಿವು ಸಿಕ್ಕ ಕಾರಣ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ಮಾಡಿದ್ದಾರೆ. ಮೊದಲಿಗೆ ಬಾಲಕಿ ತನ್ನ ವಾಹನದ ಜೊತೆ ಬರುವಾಗ ಅಪಘಾತವಾಗಿದೆ ಎಂದು ನಾಟಕ ಮಾಡಿದ ಆರೋಪಿ, ನಂತರ ಪೊಲೀಸರ ಸ್ಟೈಲ್ನಲ್ಲಿ ಕೇಳಿದಾಗ, ನಡೆದ ಕೃತ್ಯವನ್ನು ಬಾಯಿಬಿಟ್ಟಿದ್ದಾನೆ.
ಬಾಲಕಿ ಮೇಲೆ ಆದಂತಹ ವಿಚಾರ ಇಡೀ ಜಿಲ್ಲೆಗೆ ಹಬ್ಬುತ್ತಿದ್ದಂತೆ ಮಾಗಡಿಯಲ್ಲಿ ಸಾವಿರಾರು ಮುಸ್ಲಿಂ ಮಹಿಳೆಯರು ಆರೋಪಿಗೆ ಗಲ್ಲು ಶಿಕ್ಷೆ ಆಗಬೇಕು ಎಂದು ಪ್ರತಿಭಟನೆ ಮಾಡಿದರು. ಮುಸ್ಲಿಂ ಮಹಿಳೆಯರಿಗೆ ಸಾಥ್ ನೀಡಿದ ಹಿಂದೂ ಯುವಕರು ಕೂಡ, ಬಾಲಕಿ ಮೇಲೆ ನಡೆದ ಕ್ರೌರ್ಯ ವಿರುದ್ಧ ಆರೋಪಿಗೆ ಕೂಡಲೇ ಪೊಲೀಸರು ಎನ್ಕೌಂಟರ್ ಮಾಡಬೇಕು ಎಂದು ತಹಶೀಲ್ದಾರ್ ಕಚೇರಿ ಬಳಿ ಪ್ರತಿಭಟನೆ ಮಾಡಿದರು. ಸಧ್ಯ ಪ್ರಕರಣ ದಾಖಲಿಸಿಕೊಂಡಿರುವ ಮಾಗಡಿ ಪೊಲೀಸರು ಆರೋಪಿಯನ್ನ ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ. ಜೊತೆಗೆ ಇಡೀ ತಾಲೂಕಿನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೂಡ ಮಾಡಲಾಗಿದೆ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ