ಕಲಬುರಗಿ: ಯುವಕನೋರ್ವನನ್ನು ದುಷ್ಕರ್ಮಿಗಳು ಕಾರ್ನಲ್ಲಿ ಕಿಡ್ನ್ಯಾಪ್ ಮಾಡಿ ಕೊಲೆ (Murder Case) ಮಾಡಿದ್ದ ಆರೋಪಿಗಳನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ವಿಚಿತ್ರವೆಂದರೆ, ಕೊಲೆಯಾದ ವ್ಯಕ್ತಿಗೂ, ಕೊಲೆ ಮಾಡಿದ ಹಂತಕರಿಗೆ ಯಾವುದೇ ದ್ವೇಷವೇ ಇರಲಿಲ್ಲ. ಹಾಗಾದರೆ ಕೊಲೆ ಯಾಕಾಯಿತು ಎಂಬ ಪ್ರಶ್ನೆಗೆ ಉತ್ತರವೆಂದರೆ, ಇಬ್ಬರ ಜಗಳದಲ್ಲಿ ಮೂಗು ತೂರಿಸಲು ಹೋಗಿರುವುದು. ಹೌದು, ಸಂಬಂಧಿ ಯುವಕನೋರ್ವ ಪ್ರೀತಿಸಿ ಮದುವೆಯಾಗಿದ್ದ. ಯುವತಿ ಮನೆಯವರು ಬಂದಾಗ ಈ ಯುವಕ ತುಸು ಜೋರು ಧ್ವನಿಯಲ್ಲಿ ಮಾತಾಡಿದ್ದ. ಇದೇ ಕಾರಣಕ್ಕೆ ಆರೋಪಿಗಳು ಕೊಲೆ ಮಾಡಿದ್ದಾರೆ.
ಕಲಬುರಗಿ ನಗರದ ತಾರಪೈಲ್ ನಿವಾಸಿಯಾಗಿದ್ದ ವಿಕ್ರಮ್ ಲಿಂಗೇರಿ (26) ಎಂಬಾತನನ್ನು ಜುಲೈ 25 ರಂದು ಅಫಜಲಪುರ ತಾಲೂಕಿನ ಚೌಡಾಪುರ ಬಳಿ ರಸ್ತೆ ಪಕ್ಕದಲ್ಲಿ ಕೊಲೆ ಮಾಡಲಾಗಿತ್ತು. ಜೂನ್ 26 ರಂದು ರಸ್ತೆ ಪಕ್ಕದಲ್ಲಿ ಶವ ನೋಡಿದ್ದ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದ ಗಾಣಗಾಪುರ ಠಾಣೆಯ ಪೊಲೀಸರಿಗೆ, ಆರಂಭದಲ್ಲಿ ಕೊಲೆಯಾಗಿದ್ದ ಯಾರು ಅನ್ನೋದು ಗೊತ್ತಾಗಿರಲಿಲ್ಲ. ಪ್ರಾಥಮಿಕ ತನಿಖೆ ವೇಳೆ ಕೊಲೆಯಾಗಿದ್ದ ಯುವಕ ಕಲಬುರಗಿ ನಗರದ ವಿಕ್ರಮ್ ಎಂಬುದು ಪೊಲೀಸರಿಗೆ ತಿಳಿದುಬಂದಿದೆ.
ಕಲಬುರಗಿ ನಗರದಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವಿಕ್ರಮ್ಗೆ ಮದುವೆಯಾಗಿರಲಿಲ್ಲ. ವಿಕ್ರಮ್ಗೆ ಮದುವೆ ಮಾಡಲು ತಾಯಿ ಹುಡುಗಿ ಹುಡಕುತ್ತಿದ್ದಳು. ಆದರೆ ಜೂನ್ 25 ರಂದು ಮುಂಜಾನೆ ಮನೆಯಿಂದ ವಿಕ್ರಮ್ ಹೋಗಿದ್ದನಂತೆ. ನಂತರ ತಾಯಿ ಅನೇಕ ಬಾರಿ ಕರೆ ಮಾಡಿದ್ದಾಳೆ, ಆದರೆ ಪೋನ್ ಸ್ವಿಚ್ ಆಪ್ ಆಗಿತ್ತು. ಮಾರನೇ ದಿನ ಮುಂಜಾನೆ ಕೂಡಾ ಪೋನ್ ಮಾಡಿದ್ದಾಳೆ. ಆದರೆ ಪೋನ್ ಮತ್ತೆ ಸ್ವಿಚ್ ಆಪ್ ಅಂತ ಬಂದಿದೆ. ಎಲ್ಲಿಯಾದರು ಹೋಗಿರಬಹುದು ಅಂತ ತಾಯಿ ಸುಮ್ಮನಾಗಿದ್ದಳಂತೆ. ಆದರೆ ವಿಕ್ರಮ್ ಕೊಲೆಯಾದ ವಿಚಾರ ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಹದಗೆಟ್ಟಿದ್ಯಾ ಕಾನೂನು ಸುವ್ಯವಸ್ಥೆ; ಒಂದೇ ದಿನದಲ್ಲಿ ನಡೆಯಿತು ಬರೊಬ್ಬರಿ 5 ಹತ್ಯೆ
ವಿಕ್ರಮ್ ಕೊಲೆಗೆ ಸಂಬಂಧಿಸಿದಂತೆ ಕಲಬುರಗಿ ನಗರದ ಹಣಮಂತ ನಗರದ ನಿವಾಸಿಗಳಾಗಿರುವ ನಿತೀಶ್ ರಾಠೋಡ್, ಪವನ್ ಪವಾರ್, ಸಂತೋಷ್ ಕುಮಾರ್ ಪೂಜಾರಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಹಾಗಂತ ಕೊಲೆಗಾರರಿಗೆ ಕೊಲೆಯಾದ ವಿಕ್ರಮ್ ನಡುವೆ ಯಾವುದೇ ದ್ವೇಷವೇ ಇರಲಿಲ್ಲ. ಹಣಕಾಸಿನ ವ್ಯವಹಾರ ಕೂಡಾ ಇರಲಿಲ್ಲ. ಆದರೆ ಕೊಲೆಗೆ ಕಾರಣವಾಗಿದ್ದು ವಿಕ್ರಮ್ ಚಿಕ್ಕಪ್ಪನ ಮಗನ ಪ್ರೀತಿ. ಕೊಲೆಯಾಗಿರುವ ವಿಕ್ರಮ್ನ ಚಿಕ್ಕಪ್ಪನ ಮಗ, ಹಣಮಂತನಗರದ ಅಂತರ್ಜಾತಿ ಯುವತಿಯನ್ನು ಪ್ರೀತಿಸುತ್ತಿದ್ದನಂತೆ. ಕೆಲ ದಿನಗಳ ಹಿಂದೆ ಯುವತಿ ಮತ್ತು ಯುವಕ ಇಬ್ಬರು ಓಡಿ ಹೋಗಿ ಮದುವೆಯಾಗಿದ್ದಾರೆ.
ಅತ್ತ ಪ್ರೀತಿಸಿದವರು ಮದುವೆಯಾಗಿ ಅರಾಮಾಗಿದ್ದಾರೆ. ಆದರೆ ಯುವತಿ ಸಂಬಂಧಿಗಳಾಗಿದ್ದ ನಿತೀಶ್, ಪವನ್ ಮತ್ತಿತರರು ವಿಕ್ರಮ್ನ ಚಿಕ್ಕಪ್ಪನ ಮನೆಗೆ ಬಂದು ನಮ್ಮ ಯುವತಿ ಎಲ್ಲಿ ಅಂತ ಕೇಳಿದ್ದರಂತೆ. ಆಗ ವಿಕ್ರಮ್ ಸುಮ್ಮನೇ ಇರದೆ, ಏರು ಧ್ವನಿಯಲ್ಲಿ ಮಾತನಾಡಿದ್ದನಂತೆ. ವಿಕ್ರಮ್ನದ್ದೆ ಸೊಕ್ಕು ಹೆಚ್ಚಾಗಿದೆ, ಈತನಿಗೆ ಒಂದು ಗತಿ ಕಾಣಿಸಬೇಕು ಅಂತ ಯುವತಿ ಸಂಬಂಧಿಗಳು, ಜೂನ್ 25 ರಂದು ಕಾರ್ನಲ್ಲಿ ಕರೆದುಕೊಂಡು ಹೋಗಿ, ಮಾರಕಾಸ್ತ್ರದಿಂದ ಇರಿದು, ನಂತರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಶವವನ್ನು ರಸ್ತೆ ಪಕ್ಕದಲ್ಲಿ ಎಸೆದು ಪರಾರಿಯಾಗಿದ್ದರು.
ಸದ್ಯ ವಿಕ್ರಮ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಣಗಾಪುರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ. ಪ್ರೀತಿಸಿದವರು ಓಡಿ ಹೋಗಿ ಸಂಸಾರ ನಡೆಸುತ್ತಿದ್ದರೆ, ಇತ್ತ ಮದುವೆಯಾಗಿ ತಾಯಿಗೆ ಆಧಾರವಾಗಬೇಕಿದ್ದ ವಿಕ್ರಮ್ ಕೊಲೆಯಾಗಿ ಬಾರದ ಲೋಕಕ್ಕೆ ಹೋಗಿದ್ದು ಮಾತ್ರ ದುರ್ದೈವದ ಸಂಗತಿ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ