ಕಲಬುರಗಿ: ಪ್ರೀತಿ ವಿಚಾರಕ್ಕೆ ಹುಡುಗಿ ಮನೆಯವರಿಂದ ಹಲ್ಲೆ; ಚಿಕಿತ್ಸೆ ಫಲಿಸಿದೇ ಯುವಕ ಸಾವು
ಆತ ಎರಡನೇ ವರ್ಷದ ನರ್ಸಿಂಗ್ ವ್ಯಾಸಾಂಗ ಮಾಡುತ್ತಿದ್ದ. ಇದರ ಜೊತೆಗೆ ಪ್ರೀತಿ ಎಂಬ ಮಾಯಾಜಾಲಕ್ಕೆ ಸಿಲುಕಿ ಬಾರದ ಲೋಕಕ್ಕೆ ಹೋಗಿದ್ದಾನೆ. ಬರ್ತಡೇ ಪಾರ್ಟಿಗೆಂದು ಮನೆಗೆ ಕರೆಯಿಸಿಕೊಂಡು ಹತ್ಯೆ ಮಾಡಿರುವ ಆರೋಪ ಕಲಬುರಗಿ ನಗರದಲ್ಲಿ ಕೇಳಿಬಂದಿದ್ದು, ಇತ್ತ ಇರುವ ಒಬ್ಬ ಮಗನನ್ನ ಕಳೆದುಕೊಂಡು ಹೆತ್ತವರ ಆಕ್ರಂದನ ಮುಗಿಲುಮುಟ್ಟಿದೆ.
ಕಲಬುರಗಿ, ಮಾ.05: ನಗರದ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್ ಎರಡನೇ ಸೆಮಿಸ್ಟರ್ ವ್ಯಾಸಾಂಗ ಮಾಡುತ್ತಿದ್ದ ಅಭೀಷಕ್(18)ಇತ್ತೀಚಿಗಷ್ಟೇ ಪರೀಕ್ಷೆ ಕೂಡ ಬರೆದಿದ್ದನು. ಇದರ ಮಧ್ಯೆ ಅಪ್ರಾಪ್ತ ಬಾಲಕಿಯೊಂದಿಗೆ ಪ್ರೀತಿ(Love)ಯ ಬಲೆಯಲ್ಲಿ ಬಿದ್ದಿದ್ದ ಅಭಿಷೇಕ್, ಆಕೆಯೊಂದಿಗ ಪ್ರೀತಿ ಮಾಡುತ್ತಿದ್ದನಂತೆ. ಹೀಗಾಗೇ ಮೊನ್ನೆ ರಾತ್ರಿ ಆಕೆಯೇ ಪೋನ್ ಮಾಡಿ ಮನೆಗೆ ಕರೆಯಿಸಿಕೊಂಡಿದ್ದಳಂತೆ. ಹಾಗೇ ಹೋದ ಅಭಿಷೇಕ್, ಆಕೆಯ ಕುಟುಂಬಸ್ಥರ ಕೈಗೆ ಸಿಕ್ಕಿಬಿದ್ದಿದ್ದ. ಎಲ್ಲರೂ ಆತನನ್ನ ಮನಬಂದಂತೆ ಥಳಿಸಿದ್ದರು. ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಅಭೀಷಕ್ನನ್ನ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಇನ್ನು ಕೊಲೆಯಾದ ಅಭಿಷೇಕ್ ಮತ್ತು ಹುಡುಗಿಯ ಮಧ್ಯದ ಪ್ರೀತಿ ವಿಷಯ ಅದ್ಯಾವಾಗ ಆಕೆಯ ಕುಟುಂಬಸ್ಥರಿಗೆ ತಿಳಿಯಿತೋ ಅಂದಿನಿಂದ ಅಭಿಷೇಕ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದರು. ಇತ್ತ ಅಭಿಷೇಕ್ ಮತ್ತು ಅಪ್ರಾಪ್ತೆ, ಪ್ರೀತಿಯೆಂಬ ಮಾಯಾ ಜಾಲಕ್ಕೆ ಸಿಲುಕಿ ಕ್ಷಣಕ್ಷಣಕ್ಕೂ ವಾಟ್ಸಪ್ ಮೇಸೆಜ್ ಮಾಡುತ್ತಿದ್ದರು. ಅದರಂತೆ ಅಪ್ರಾಪ್ತೆ ಪೋಷಕರು ಆಕೆಯಿಂದಲೇ ಅಭಿಷೇಕನಿಗೆ ಕಾಲ್ ಮಾಡಿಸಿ ಮನೆಗೆ ಬರ್ತಡೇ ಪಾರ್ಟಿ ಇದೆ ಬಾ ಎಂದು ಕರೆಯಿಸಿಕೊಂಡಿದ್ದಾರೆ. ಈ ವೇಳೆ ಮನೆಯವರು ಅಭಿಷೇಕನಿಗೆ ಮನೆಯಲ್ಲಿ ಕೂಡಿಹಾಕಿ ರಾಡ್‌ನಿಂದ ಎರಡು ಗಂಟೆಗಳ ಕಾಲ ಥಳಿಸಿದ್ದಾರೆ. ಆಕೆ ಸಹ ಬಿಡಿಸಿಕೊಳ್ಳಲು ಬಂದಾಗ ಕೆರ್ ಮಾಡದೇ ಮನಬಂದಂತೆ ಹೊಡೆದಿದ್ದರು.
ಇದನ್ನೂ ಓದಿ:ಬೆಂಗಳೂರಿನಲ್ಲೊಂದು ಅಮಾನುಷ ಕೃತ್ಯ, ಹೆತ್ತ ತಾಯಿಯಿಂದಲೇ ಮಗುವಿನ ಮೇಲೆ ಹಲ್ಲೆ
ಗಂಭೀರ ಸ್ಥಿತಿಯಲ್ಲಿದ್ದ ಅಭಿಷೇಕನನ್ನ ತಕ್ಷಣ ನಿರ್ಜನ ಪ್ರದೇಶದಲ್ಲಿ ಬಿಸಾಕಿ ಕೈ ತೊಳೆದುಕೊಂಡಿದ್ದಾರೆ. ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ (ಪ್ರೇರಣಾ) ಸೇರಿದಂತೆ ಐದು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇನ್ನು ಕೊಲೆ ಮಾಡಿದ ಕೊಲೆಗಡುಕರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಅಭಿಷೇಕನ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಅದೆನೇ ಇರಲಿ ತಾನಾಯಿತು ತನ್ನ ಓದು ಆಯಿತು ಎಂದು ಸುಮ್ಮನೆ ಇರುತ್ತಿದ್ದರೇ, ಬಾಳಿ ಬದುಕಬೇಕಿದ್ದ ಯುವಕ ಅಭಿಷೇಕ್, ಇಂದು ಬೀದಿ ಹೆಣವಾಗುತ್ತಿರಲಿಲ್ಲ. ಒಟ್ಟಿನಲ್ಲಿ ಪ್ರೀತಿ ವಿಚಾರಕ್ಕೋ ಅಥಾವ ಇನ್ಯಾವ ಕಾರಣಕ್ಕೆ ಕೊಲೆಯಾಗಿದೆ ಎನ್ನುವುದು ತನಿಖೆ ನಂತರವಷ್ಟೇ ತಿಳಿಯಲಿದೆ.
ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:14 pm, Tue, 5 March 24