ಮಾಜಿ ಸಿಎಂ ಧರಂಸಿಂಗ್ ಸಂಬಂಧಿ ಕೊಲೆ ಕೇಸ್: ಮಲತಾಯಿಯ ಮಸಲತ್ತು? ಎ1 ಆರೋಪಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ
ಮಾಜಿ ಸಿಎಂ ದಿವಂಗತ ಧರಂಸಿಂಗ್ ಸಂಬಂಧಿ ಸಿದ್ಧಾರ್ಥ್ ದೇವೇಂದ್ರ ಸಿಂಗ್ ಭೀಕರವಾಗಿ ಕೊಲೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಸಾವಿನ ರಹಸ್ಯ ಬಯಲಾಗಿದೆ. Karnataka Former CM Dharam Singh relative murder case
ಬೆಂಗಳೂರು: ಮಾಜಿ ಸಿಎಂ ದಿವಂಗತ ಧರಂಸಿಂಗ್ ಸಂಬಂಧಿ ಸಿದ್ಧಾರ್ಥ್ ದೇವೇಂದ್ರ ಸಿಂಗ್ ಭೀಕರವಾಗಿ ಕೊಲೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಸಾವಿನ ರಹಸ್ಯ ಬಯಲಾಗಿದೆ. ಕಿಡ್ನ್ಯಾಪ್ & ಮರ್ಡರ್ ಸ್ಟೋರಿಯ ಇಂಚಿಂಚು ಮಾಹಿತಿ ಬಹಿರಂಗವಾಗಿದೆ. ಸಿದ್ಧಾರ್ಥ್ನ ಹತ್ಯೆಗೈದ ಆರೋಪಿಗಳೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೊಲೆ ಮಾಡಿದ ಆರೋಪಿಗಳ ಪೈಕಿ ಪ್ರಕರಣದ ಎ-1 ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮತ್ತೋರ್ವ ಆರೋಪಿ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾನೆ. ಈ ಪ್ರಕರಣದ ಡಿಟೇಲ್ಸ್ ಇಲ್ಲಿದೆ:
ಒಬ್ಬ ಆರೋಪಿ ಬದುಕಿದ! ತಿರುಪತಿ ಮೂಲದ ಶ್ಯಾಮ್ ಮತ್ತು ವಿನೋದ್ ಕುಮಾರ್ ಎಂಬ ಇಬ್ಬರು ಮಾಜಿ ಸಿಎಂ ದಿ. ಧರಂಸಿಂಗ್ ಸಂಬಂಧಿಯನ್ನ ಹತ್ಯೆಗೈದಿದ್ದರು. ಆದರೆ ಪೊಲೀಸರು ವಶಕ್ಕೆ ಪಡೆಯುವ ಮೊದಲೇ ಎ-1 ಆರೋಪಿ ಶ್ಯಾಮ್ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮತ್ತೋರ್ವ ಆರೋಪಿ ವಿನೋದ್ ರೈಲ್ವೆ ಹಳಿ ಮೇಲೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದ ಆದರೆ ಅದೃಷ್ಟ ಕೈ ಹಿಡಿದ ಕಾರಣ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಬೆಂಗಳೂರಿನ ಅಮೃತಹಳ್ಳಿ ಠಾಣೆ ಪೊಲೀಸರು ವಿನೋದ್ ಕುಮಾರ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮಲತಾಯಿಯ ಮಸಲತ್ತು? ಮಲತಾಯಿ ಮಸಲತ್ತಿನಿಂದಲೇ ಸಿದ್ಧಾರ್ಥ್ ಹತ್ಯೆಯಾದ್ನಾ? ಎಂಬ ಅನುಮಾನವೊಂದು ಶುರುವಾಗಿದೆ. ಅಮೃತಹಳ್ಳಿ ಪೊಲೀಸರ ತನಿಖೆಯ ವೇಳೆ ಇಂತಹದೊಂದು ಮಹತ್ವದ ಮಾಹಿತಿ ಸಿಕ್ಕಿದ್ದು ಇದೇ ಮಾಹಿತಿ ಆಧರಿಸಿ ಖಾಕಿ ಪಡೆ ತನಿಖೆ ನಡೆಸುತ್ತಿದೆ.
ದೇವೇಂದ್ರ ಸಿಂಗ್ ಮೊದಲ ಪತ್ನಿಯ ಮಗನೇ ಈ ಸಿದ್ಧಾರ್ಥ್. ಈತ ಅಮೆರಿಕದಿಂದ ಬೆಂಗಳೂರಿಗೆ ಬಂದು ವಾಸವಾಗಿದ್ದ. ಆದರೆ ಆಸ್ತಿ ಆಸೆಗೆ ಸಿದ್ಧಾರ್ಥ್ನ ಮಲತಾಯಿಯಿಂದ ಹತ್ಯೆ ಮಾಡಿಸಲಾಗಿದೆ ಎಂಬ ಅನುಮಾನ ಹುಟ್ಟಿಕೊಂಡಿದೆ. ಆರೋಪಿ ವಿನೋದ್ ಜೊತೆ ಸಿದ್ಧಾರ್ಥ್ನ ಮಲತಾಯಿಗೆ ಲಿಂಕ್ ಇದೆ ಎಂದು ತಿಳಿದು ಬಂದಿದೆ. ಸದ್ಯ ಆಸ್ತಿ ಆಸೆಗಾಗಿ ಹತ್ಯೆ ನಡೆಸಿರುವ ಶಂಕೆ ವ್ಯಕ್ತವಾಗಿದ್ದು ಈ ಬಗ್ಗೆ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
6 ದಿನಗಳ ಬಳಿಕ ಮಿಸ್ಸಿಂಗ್ ಕಂಪ್ಲೆಂಟ್ ಸಿದ್ಧಾರ್ಥ್ ನಾಪತ್ತೆಯಾಗಿ 6 ದಿನಗಳ ಬಳಿಕ ಮಿಸ್ಸಿಂಗ್ ಕಂಪ್ಲೆಂಟ್ ನೀಡಲಾಗಿತ್ತು. ಅಮೆರಿಕದ ಸ್ನೇಹಿತರ ಭೇಟಿಗಾಗಿ ತೆರಳುತ್ತಿರುವುದಾಗಿ ತಂದೆ ದೇವೇಂದ್ರ ಸಿಂಗ್ಗೆ ಜನವರಿ 19ರಂದು ಮೃತ ಸಿದ್ದಾರ್ಥ ಮೆಸೇಜ್ ಮಾಡಿದ್ದ. ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿತ್ತು.
ಸಿದ್ಧಾರ್ಥ್ನ ತಾಯಿ ಪದೇ ಪದೆ ಸಿದ್ದಾರ್ಥನ ಮೊಬೈಲ್ಗೆ ಕರೆ ಮಾಡಿದ್ರು ಮಗ ಫೋನ್ ತೆಗೆಯದ ಹಿನ್ನೆಲೆಯಲ್ಲಿ ಪತಿಗೆ ವಿಷಯ ತಿಳಿಸಿದ್ರು. ಇದಾದ ಬಳಿಕ ಆಸ್ತಿಗಾಗಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಇದೇ ಅನುಮಾನದಿಂದ ಕುಟುಂಬಸ್ಥರು ನಾಪತ್ತೆ ಪ್ರಕರಣ ದಾಖಲಿಸಿದ್ರು.
ತನಿಖೆಯಲ್ಲಿ ಸಿದ್ಧಾರ್ಥ್ ದೇವೇಂದ್ರ ಸಿಂಗ್ ಹತ್ಯೆಯಾಗಿದ್ದು ರಿವೀಲ್ ಆಗಿದೆ. ಇದೇ ಕಾರಣಕ್ಕೆ ಬೆಂಗಳೂರಿನ ಅಮೃತಹಳ್ಳಿ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದಾರೆ. ಮುಂದೆ ಈ ಪ್ರಕರಣ ಯಾವ ರೀತಿಯ ತಿರುವು ಪಡೆದುಕೊಳ್ಳಲಿದೆ ಎಂಬುವುದನ್ನು ಕಾದು ನೋಡಬೇಕಿದೆ.