Kannada News Crime Karnataka News in Kannada: In Kolar Attempted murder by his wife and family who were married in love
ಪ್ರೀತಿಸಿ ಮದುವೆಯಾಗಿದ್ದ ಹೆಂಡತಿ, ಕುಟುಂಬದಿಂದಲೇ ಕೊಲೆಗೆ ಯತ್ನ; ಪೊಲೀಸರ ಸಮಯ ಪ್ರಜ್ಞೆಯಿಂದ ಉಳಿತು ಜೀವ
ಆವತ್ತು ಮಧ್ಯರಾತ್ರಿ ಗಸ್ತಿನಲ್ಲಿದ್ದ ಪೊಲೀಸರಿಗೆ ಕಾಂತಾರಾ ಸಿನಿಮಾದ ಅಗೋಚರ ದೈವದ ರೀತಿಯಲ್ಲೊಬ್ಬ ರಸ್ತೆಯಲ್ಲಿ ಕಾಣಿಸಿಕೊಂಡಿದ್ದ. ತಕ್ಷಣ ಗಾಬರಿಯಾದ ಪೊಲೀಸರು ವಾಪಸ್ಸು ಬಂದು ಏನದು ಎಂದು ನೋಡಿದಾಗಲೇ ಅಲ್ಲೊಂದು ಮಾರಣಾಂತಿಕ ಹಲ್ಲೊಗೊಳಗಾಗಿದ್ದ ವ್ಯಕ್ತಿಯೊಬ್ಬ ಸಾವು ಬದುಕಿನ ನಡುವೆ ಜೀವ ರಕ್ಷಣೆಗಾಗಿ ಹಾತೊರೆಯುತ್ತಿದ್ದ. ತಕ್ಷಣ ಪೊಲೀಸರ ಸಮಯ ಪ್ರಜ್ಞೆ ಹಾಗೂ ಮಾನವೀಯತೆ ಅಲ್ಲೊಬ್ಬ ವ್ಯಕ್ತಿಗೆ ಮರುಜೀವ ನೀಡಿತ್ತು.
ಕೋಲಾರ, ಮೇ.28: ಮೇ.26ರ ಮಧ್ಯರಾತ್ರಿ ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ರಾತ್ರಿ ಗಸ್ತಿನಲ್ಲಿದ್ದ ಕೋಲಾರ(Kolar) ಗ್ರಾಮಾಂತರ ಠಾಣಾ ಪಿಎಸ್ಐ ಭಾರತಿ ಅವರು ಚುಂಚದೇನಹಳ್ಳಿಗ್ರಾಮದ ಬಳಿ ಬಂದಾಗ ಅವರ ವಾಹನಕ್ಕೆ ಯಾರೋ ಒಬ್ಬ ವ್ಯಕ್ತಿ ಅಡ್ಡಬಂತಾಗಿದೆ. ತಕ್ಷಣ ಗಾಬರಿಯಾದ ಪಿಎಸ್ಐ(PSI) ಭಾರತಿ ಹಾಗೂ ಅವರ ವಾಹನ ಚಾಲಕ ಇಬ್ಬರೂ ವಾಹನವನ್ನು ವಾಪಸ್ ತಿರುಗಿಸಿಕೊಂಡು ನೋಡಲು ಬಂದಾಗ ಅಲ್ಲೊಬ್ಬ ವ್ಯಕ್ತಿ ಮಾರಣಾಂತಿಕ ಹಲ್ಲೆಗೊಳಗಾಗಿ ಸಾವು-ಬದುಕಿನ ನಡುವೆ ನರಳಾಡುತ್ತಿರುವುದು ಕಂಡು ಬಂದಿತ್ತು. ತಕ್ಷಣವೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಗಾಯಾಳುವನ್ನು ಕೋಲಾರದ ಆರ್.ಎಲ್.ಜಾಲಪ್ಪಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ.
ಪ್ರೀತಿಸಿ ಮದುವೆಯಾಗಿದ್ದ ಹೆಂಡತಿ ಹಾಗೂ ಆಕೆಯ ಕುಟುಂಬದಿಂದಲೇ ಕೊಲೆಗೆ ಯತ್ನ
ಈ ವೇಳೆ ಕೋಲಾರ ಗ್ರಾಮಾಂತರ ರಾಣೆ ಇನ್ಸ್ಪೆಕ್ಟರ್ ಕಾಂತರಾಜು ಹಾಗೂ ಕೋಲಾರ ನಗರಠಾಣೆ ಇನ್ಸ್ಪೆಕ್ಟರ್ ಸದಾನಂದ ಅವರು ಇವರ ನೆರವಿಗೆ ಬಂದಿದ್ದು, ಗಾಯಾಳುವಿಗೆ ಸೂಕ್ತ ಚಿಕಿತ್ಸೆ ಕೊಡಿಸಿದ ನಂತರ ಆತನನ್ನು ವಿಚಾರಣೆ ಮಾಡಿದಾಗ ಗಾಯಾಳು ಕೋಲಾರ ತಾಲ್ಲೂಕು ಮಲ್ಲಸಂದ್ರ ನಾಗೇಶ್ ಎನ್ನುವುದು ತಿಳಿದು ಬಂದಿದ್ದು, ಘಟನೆ ವಿವರ ಕೇಳಿದಾಗ ಪ್ರೀತಿಸಿ ಮದುವೆಯಾಗಿದ್ದ ಆತನ ಹೆಂಡತಿ ಮತ್ತು ಆತನ ಕುಟುಂಬಸ್ಥರಿಂದಲೇ ಅಲ್ಲೊಂದು ಕೊಲೆ ಯತ್ನ ನಡೆದಿರುವ ವಿಷಯ ಬಯಲಾಗಿದೆ.
ಇನ್ನು ಕೊಲೆ ಯತ್ನಕ್ಕೆ ಕಾರಣ ನೋಡುವುದಾದರೆ, ‘ಮಲ್ಲಸಂದ್ರ ಗ್ರಾಮದ ನಾಗೇಶ್, ವಾನರಾಶಿ ಗ್ರಾಮದ ಅಶ್ವಿನಿ ಎಂಬಾಕೆಯನ್ನು ಪ್ರೀತಿಸಿ ಕಳೆದ ಏಳು ವರ್ಷಗಳ ಹಿಂದೆ ಮದುವೆಯಾಗಿದ್ದ. ಆರಂಭದಲ್ಲಿ ಚೆನ್ನಾಗಿಯೇ ಇದ್ದ ಸಂಸಾರ, ಸಮಯ ಕಳೆಯುತ್ತಾ ಹಾಳಾಗಿ ಹೋಗಿತ್ತು. ಇಬ್ಬರಿಗೂ ಒಂದು ಹೆಣ್ಣು ಮಗು ಇತ್ತು. ಆದರೆ, ಪ್ರೀತಿಸಿ ಮದುವೆಯಾದ ಅಶ್ವಿನಿಗೆ ನಾಗೇಶನೊಂದಿಗೆ ಬದುಕೋದು ಕಷ್ಟವಾಗಿತ್ತು. ಹಾಗಾಗಿ ಅವಳು ತನ್ನ ತಾಯಿ ಮನೆಗೆ ಹೋಗಿ, ಜೀವನ ನಿರ್ವಹಣೆಗೆ ನರಸಾಪುರದ ವಿಸ್ಟ್ರಾನ್ ಕಂಪನಿಗೆ ಕೆಲಸಕ್ಕೆ ಹೋಗುತ್ತಿದ್ದಳು. ಇದಕ್ಕೆ ಆಕೆಯ ಪತಿ ನಾಗೇಶ ಕೆಲಸಕ್ಕೆ ಹೋಗಬೇಡ ಎಂದು ವಿರೋಧಿಸಿದ್ದ. ಈ ವೇಳೆ ಗಲಾಟೆಯಾಗಿ, ಪತ್ನಿ ಅಶ್ವಿನಿಯೇ ದೂರು ನಿಡಿದ್ದಳು.
ಅದಾದ ನಂತರ ನಾಗೇಶ, ಅವರ ಮನೆಗೆ ಹೋಗಿ ಬರುತ್ತಿದ್ದ. ಆದರೆ, ಆತನನ್ನು ಕಂಡರೆ ಹೆಂಡತಿ ಅಶ್ವಿನಿ ಹಾಗೂ ಅವರ ತಾಯಿ ಮಹೇಶ್ವರಮ್ಮ, ಸೋದರಮಾವ ನಾರಾಯಣಸ್ವಾಮಿ ಅವರಿಗೆ ಕೋಪವಿತ್ತು. ನಾಗೇಶ್ ಸತ್ತರೆ ಅಶ್ವಿನಿಗೆ ಬೇರೊಂದು ಮದುವೆ ಮಾಡಬಹುದು ಎಂದು ಪ್ಲಾನ್ ಮಾಡಿದ ಅಶ್ವಿನಿ ಹಾಗೂ ಅವರ ಕುಟುಂಬ, ನಾಗೇಶನನ್ನು ಮುಗಿಸಲು ಪ್ಲಾನ್ ಮಾಡಿ ಅಂದು ಮೇ-26 ರಂದು ನಾಗೇಶ್ ಪರಿಚಯಸ್ಥ ರಮೇಶ್ ಎಂಬುವರಿಗೆ ಆತನನ್ನು ಮುಗಿಸಲು ತಿಳಿಸಿದ್ದರು. ಈ ಹಿನ್ನೆಲೆ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ನಾಗೇಶನನ್ನು ಕರೆದುಕೊಂಡು ಹೋಗಿ ಚೆನ್ನಾಗಿ ಕುಡಿಸಿ ನಂತರ ರಾಷ್ಟ್ರೀಯ ಹೆದ್ದಾರಿ-75ರ ಚುಂಚದೇನಹಳ್ಳಿ ಬಳಿ ಚಾಕುವಿನಿಂದ ಕುತ್ತಿಗೆ ಹಾಗೂ ಹೊಟ್ಟೆ ಬೆನ್ನಿಗೆ ಇರಿಯಲಾಗಿದೆ.
ಬಳಿಕ ಅವನು ಸತ್ತು ಹೋಗಿದ್ದಾನೆ ಎಂದು ತಿಳಿದು ಹೊರಟು ಹೋಗಿದ್ದಾರೆ. ಆದರೆ, ರಕ್ತದ ಮಡುವಿನಲ್ಲಿದ್ದ ನಾಗೇಶ್, ಪೊಲೀಸರ ಕೈಗೆ ಸಿಕ್ಕಿದ ಪರಿಣಾಮ ಜೀವ ರಕ್ಷಣೆ ಹಾಗೂ ಕಾನೂನಿನ ರಕ್ಷಣೆ ಎರಡೂ ಸಿಕ್ಕಿದೆ. ಸದ್ಯ ಆರೋಪಿಗಳೆಲ್ಲ ತಲೆಮರೆಸಿಕೊಂಡಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಒಟ್ಟಾರೆ ಪೊಲೀಸರ ಸಮಯ ಪ್ರಜ್ಞೆಯಿಂದ ವ್ಯಕ್ತಿಯೊಬ್ಬನ ಜೀವ ಉಳಿದಿದೆ. ಅಲ್ಲದೆ ಆತನಿಗೆ ಕಾನೂನಿನ ರಕ್ಷಣೆಯೂ ಸಿಕ್ಕಿದೆ. ಸದ್ಯ ಇಂಥಹ ಸಮಯಪ್ರಜ್ಞೆ ಮೆರೆದ ಪಿಎಸ್ಐ ಭಾರತಿ ಅವರ ಕಾರ್ಯಕ್ಕೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು, ಕೊಲೆ ಮಾಡಿ ಆರಾಮಾಗಿ ಇರಬೇಕು ಎಂದುಕೊಂಡವರಿಗೆ ಪೊಲೀಸರೆ ಇಲ್ಲಿ ಸಿಂಹಸ್ವಪ್ನವಾಗಿದ್ದಾರೆ.