ಕಾರವಾರ: ಗೋವುಗಳನ್ನ ಸಾಗಿಸಿ ತಲೆಮರೆಸಿಕೊಂಡಿದ್ದ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ. ವಾಹನ ಚಾಲಕ ಸೇರಿ 7 ಜನರನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಹೊನ್ನಾವರ, ಮಂಕಿ ಠಾಣೆಯ ಪೊಲೀಸರಿಂದ ಗೋ ಕಳ್ಳರ ಬಂಧನವಾಗಿದೆ. ಗೋ ಸಾಗಾಟಕ್ಕೆ ಬಳಸಿದ್ದ ಎರಡು ವಾಹನಗಳನ್ನು ಸೀಜ್ ಮಾಡಲಾಗಿದೆ. ಆಗಸ್ಟ್ 3 ಮತ್ತು 22 ರಂದು ಅಕ್ರಮವಾಗಿ ಗೋವುಗಳನ್ನ ಸಾಗಿಸಿದ್ದರು. ಗುಣವಂತೆ, ಮಾವಿನಕಟ್ಟಾದಲ್ಲಿ ಗೋವುಗಳನ್ನ ಕದ್ದಿದ್ದರು. ಗೋವುಗಳನ್ನ ಕದ್ದು ಅಕ್ರಮವಾಗಿ ಸಾಗಿಸಿದ್ದ ಖದೀಮರನ್ನು ಬಂಧಿಸಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರಿಂದ ಕ್ಷಿಪ್ರಗತಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಮೀನಿನ ಲಾರಿ ಡಿಕ್ಕಿ
ಬಸ್ ಹಾಗೂ ಮೀನಿನ ಲಾರಿ ಡಿಕ್ಕಿಯಾಗಿ ಚಾಲಕರಿಬ್ಬರಿಗೆ ಗಾಯವಾದ ಘಟನೆ ಅಂಕೋಲಾ ರಾಷ್ಟ್ರೀಯ ಹೆದ್ದಾರಿ 66ರ ಬಾಳೆಗುಳಿ ಬಳಿ ನಡೆದಿದೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಾಳೆಗುಳಿ ಎಂಬಲ್ಲಿ ಅಪಘಾತ ಸಂಭವಿಸಿದೆ. ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನ: ಅಕ್ರಮ ಮದ್ಯ ಮಾರಾಟ ತಡೆಗೆ ಫೀಲ್ಡ್ಗೆ ಇಳಿದಿ ಎಸ್ಪಿ
ನಾನ್ವೆಜ್ ಹೋಟೆಲ್ಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ತಡೆಗೆ ಸ್ವತಃ ಹಾಸನ ಎಸ್ಪಿ ಶ್ರೀನಿವಾಸಗೌಡ ಫೀಲ್ಡ್ಗಿಳಿದ ಘಟನೆ ಇಂದು (ಆಗಸ್ಟ್ 25) ನಡೆದಿದೆ. ಒಂದೇ ರಸ್ತೆಯಲ್ಲಿ 20ಕ್ಕೂ ಹೆಚ್ಚು ಬಾರ್ಗಳಿರುವ ಕಡೆ ಗಲಾಟೆ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ, ಬೇಲೂರು ರಿಂಗ್ ರಸ್ತೆಯ ಹೋಟೆಲ್ಗಳ ಮೇಲೆ ಎಸ್ಪಿ ದಾಳಿ ನಡೆಸಿದ್ದಾರೆ. ಬಾರ್ ಬಳಿ ನಾನ್ವೆಜ್ ಹೋಟೆಲ್ ತೆರೆದು ಮದ್ಯ ಸೇವನೆ ಮಾಡುತ್ತಿದ್ದರು. ಹೋಟೆಲ್ಗಳಲ್ಲಿ ಮದ್ಯ ಸೇವಿಸಿ ಗಲಾಟೆ ಮಾಡ್ತಿದ್ದ ಬಗ್ಗೆ ದೂರು ಕೇಳಿಬಂದಿತ್ತು. ಸಾರ್ವಜನಿಕ ವಲಯದಿಂದ ವ್ಯಾಪಕ ದೂರು ಹಿನ್ನೆಲೆಯಲ್ಲಿ ಎಸ್ಪಿ ದಾಳಿ ನಡೆಸಿದ್ದಾರೆ. ಹೋಟೆಲ್ಗಳಲ್ಲಿ ಮದ್ಯ ಸೇವಿಸುತ್ತಿದ್ದವರ ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ. ಹೋಟೆಲ್ ಮಾಲೀಕರಿಗೆ ಎಚ್ಚರಿಕೆ ನೀಡಿ ಬಾಗಿಲು ಮುಚ್ಚಿಸಿದ್ದಾರೆ.
ಕೋಲಾರ: ಅಕ್ರಮ ಪಡಿತರ ದಾಸ್ತಾನು
ರೈಸ್ ಮಿಲ್ನಲ್ಲಿ ಅಕ್ರಮವಾಗಿ ಪಡಿತರ ದಾಸ್ತಾನು ಆರೋಪದಡಿ ರೈಸ್ ಮಿಲ್ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ ನಡೆಸಿದ್ದಾರೆ. ಕೋಲಾರ ನಗರದ ಕಾರಂಜಿಕಟ್ಟೆಯ 11ನೇ ಕ್ರಾಸ್ನಲ್ಲಿರುವ ಬಾಲಾಜಿ ರೈಸ್ ಮಿಲ್ ಮೇಲೆ ದಾಳಿ ಮಾಡಲಾಗಿದೆ. ಆಂಧ್ರ, ತಮಿಳುನಾಡಿನಿಂದ ಪಡಿತರ ಬರುತ್ತಿದ್ದ ಬಗ್ಗೆ ಮಾಹಿತಿ ಕೇಳಿಬಂದು ಸ್ಥಳಕ್ಕೆ ಕೋಲಾರ ಜಿಲ್ಲಾಧಿಕಾರಿ ಆರ್. ಸೆಲ್ವಮಣಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಅಪರಿಚಿತ ವಾಹನ ಡಿಕ್ಕಿ; ಯುವಕ ಸಾವು
ಅಪರಿಚಿತ ವಾಹನ ಡಿಕ್ಕಿಯಾಗಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕಪ್ಪಲಮಡಗು ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ. ಅಪಘಾತದಿಂದಾಗಿ ತಾವರೆಕೆರೆ ಗ್ರಾಮದ ಚನ್ನಕೇಶವ (25) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುಳಬಾಗಿಲು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾಯಚೂರು: ಡಿಹೆಚ್ಒ ಡಾ.ಕೆ. ರಾಮಕೃಷ್ಣ ಅಮಾನತು
ಕರ್ತವ್ಯಲೋಪ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲಾ ಆರೋಗ್ಯಾಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಅಮಾನತುಗೊಳಿಸಿ ಆರೋಗ್ಯ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಡಿಹೆಚ್ಒ ರಾಮಕೃಷ್ಣ ವಿರುದ್ಧ ವ್ಯಾಪಕ ದೂರು ಬಂದಿದ್ದವು. ಸಾರ್ವಜನಿಕರ ದೂರು ಆಧರಿಸಿ ಆಯುಕ್ತರಿಂದ ಅಮಾನತು ಮಾಡಲಾಗಿದೆ.
ಇದನ್ನೂ ಓದಿ: ಕೋಳಿ ಫಾರಂಗೆ ಅಕ್ರಮ ವಿದ್ಯುತ್ ಸಂಪರ್ಕ; 1 ವರ್ಷ ಜೈಲು, 2.94 ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್
Published On - 11:06 pm, Wed, 25 August 21