ತಿರುವನಂತಪುರಂ: ತಾನು ಪ್ರೀತಿಸಿದ ಯುವತಿ ತನಗೆ ಕೈಕೊಟ್ಟು ಆಕೆಯ ಹೆತ್ತವರ ಜೊತೆ ಹೋಗಲು ಒಪ್ಪಿದ್ದರಿಂದ ಮನನೊಂದ 31 ವರ್ಷದ ವ್ಯಕ್ತಿಯೊಬ್ಬರು ಸೋಮವಾರ ಕೇರಳದ ಹೈಕೋರ್ಟ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರಿಬ್ಬರ ಪ್ರೇಮ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಈ ವೇಳೆ ಆ ಯುವತಿ ‘ತಾನು ತನ್ನ ಹೆತ್ತವರನ್ನು ಬಿಟ್ಟು ಬದುಕಲಾರೆ, ತಾನು ಯಾರನ್ನೂ ಪ್ರೀತಿ ಮಾಡಿಲ್ಲ, ಆತ ತನ್ನ ಅಣ್ಣನ ಸಮಾನ’ ಎಂದು ಹೇಳಿದ್ದಳು. ಇದರಿಂದ ಬೇಸರಗೊಂಡ ಆ ವ್ಯಕ್ತಿ ಕೋರ್ಟ್ನಲ್ಲೇ ತನ್ನ ಕೈ ನರವನ್ನು ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಕೇರಳದ ತ್ರಿಶೂರ್ ಜಿಲ್ಲೆಯ ವಿಷ್ಣು ಎಂಬ ವ್ಯಕ್ತಿ ನ್ಯಾಯಮೂರ್ತಿ ಅನು ಶಿವರಾಮನ್ ಅವರ ಕೊಠಡಿಯ ಮುಂದೆ ಕೈ ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
31 ವರ್ಷದ ವಿಷ್ಣು ಮತ್ತು 23 ವರ್ಷದ ಯುವತಿ ಸುಮಾರು 1 ತಿಂಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದರು. ತಮ್ಮ ಮಗಳನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿ ಯುವತಿಯ ತಂದೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಗೆ ಸಂಬಂಧಿಸಿದಂತೆ ಅವರಿಬ್ಬರೂ ಸೋಮವಾರ ಹೈಕೋರ್ಟ್‌ಗೆ ಹಾಜರಾಗಿದ್ದರು.
ಇದನ್ನೂ ಓದಿ: ರಾಜಸ್ಥಾನ: ಪ್ರೇಯಸಿಯ ಗಂಡನನ್ನು ಹತ್ಯೆ ಮಾಡಿ ಮೃತದೇಹವನ್ನು 6 ತುಂಡುಗಳಾಗಿ ಕತ್ತರಿಸಿ ಹೂತಿಟ್ಟ ವ್ಯಕ್ತಿ ಬಂಧನ
ಈ ವೇಳೆ ಆ ಯುವತಿ ನಾನು ನನ್ನ ಕುಟುಂಬದೊಂದಿಗೆ ಹೋಗಲು ಬಯಸುತ್ತೇನೆ ಎಂದು ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ಸಿ. ಜಯಚಂದ್ರನ್ ಅವರ ವಿಭಾಗೀಯ ಪೀಠಕ್ಕೆ ತಿಳಿಸಿದ್ದಳು. ನಾನು ವಿಷ್ಣುವಿನ ಜೊತೆ ಮದುವೆಯಾಗಲು ಸಾಧ್ಯವಿಲ್ಲ ಎಂದು ಕೂಡ ಹೇಳಿದ್ದಳು. ಒಂದು ವೇಳೆ ತನ್ನನ್ನು ಬಿಟ್ಟು ಹೋದರೆ ಕೊಲ್ಲುವುದಾಗಿ ವಿಷ್ಣು ಬೆದರಿಕೆ ಹಾಕಿದ್ದ. ಹೀಗಾಗಿ, ಇಷ್ಟು ದಿನ ಆತನೊಂದಿಗೆ ವಾಸವಾಗಿದ್ದೆ. ಆತ ನನ್ನ ಅಣ್ಣನಿದ್ದಂತೆ. ಆತನನ್ನು ಎಂದಿಗೂ ನಾನು ಪ್ರೀತಿ ಮಾಡಿಲ್ಲ ಎಂದು ಹೇಳಿದ್ದಳು.
ಇದನ್ನೂ ಓದಿ: Murder: ಪ್ರೇಯಸಿಯ ಕತ್ತು ಕೊಯ್ದು ಕೊಂದು, ಅಂಬಾಲಿ ಘಾಟ್ನಲ್ಲಿ ಎಸೆದ ಪ್ರೇಮಿ
ಆ ಯುವತಿ ನ್ಯಾಯಾಲಯಕ್ಕೆ ಸಲ್ಲಿಸಿದ ಹೇಳಿಕೆಯ ಪ್ರಕಾರ, ವಿಷ್ಣು ಈಗಾಗಲೇ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದು, ಪತ್ನಿಯೊಂದಿಗಿನ ಸಂಬಂಧ ತೊರೆದು ಆ ಯುವತಿಯನ್ನು ಮದುವೆಯಾಗಲು ನಿರ್ಧರಿಸಿದ್ದ. ಈ ವಿಚಾರಣೆಯ ನಂತರ ಆ ಯುವತಿ ತನ್ನ ಕುಟುಂಬದೊಂದಿಗೆ ಹೊರಟು ಹೋದಾಗ ಬೇಸರಗೊಂಡ ವಿಷ್ಣು ಜೇಬಿನಿಂದ ಚಾಕುವನ್ನು ತೆಗೆದುಕೊಂಡು ತನ್ನ ಕೈಯ ನರವನ್ನು ಕತ್ತರಿಸಿಕೊಂಡಿದ್ದಾನೆ. ರಕ್ತಸ್ರಾವದಿಂದ ನಿತ್ರಾಣಗೊಂಡಿದ್ದ ಆತನನ್ನು ಪೊಲೀಸರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.