ದೇಹದ ಅಂಗಾಂಗ ದಾನವನ್ನು ಕೂಡ ಮಹಾದಾನ ಎಂದು ಪರಿಗಣಿಸಲಾಗುತ್ತದೆ. ಒಂದು ಅಂಗವನ್ನು ದಾನ ಮಾಡಿ ಅದೆಷ್ಟೊ ಮಂದಿ ಎಷ್ಟೋ ಜನರ ಜೀವ ಉಳಿಸಿದ ಉದಾಹರಣೆ ನಮ್ಮ ಮುಂದಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ತಂಡವೊಂದು ಅಂಗಾಂಗಕ್ಕಾಗಿ ಬೇಡಿಕೆಯಿಟ್ಟು ಬಳಿಕ ಯಾಮಾರಿಸುತ್ತಿದ್ದ ಘಟನೆಯೊಂದು ಬೆಳಕಿಗೆ ಬಂದಿದೆ. ಈ ತಂಡವು ಕೊಲ್ಕತ್ತಾದ ಸ್ಥಳೀಯ ಪತ್ರಿಕೆಗಳಲ್ಲಿ ಜೀವ ಉಳಿಸಲು ಕಿಡ್ನಿ ಅವಶ್ಯಕತೆಯಿದೆ ಜಾಹೀರಾತು ನೀಡುತ್ತಿದ್ದರು. ಈ ಜಾಹೀರಾತಿನಲ್ಲಿ ಅಂಗ ದಾನ ಮಾಡಿದವರಿಗೆ ಹಣವನ್ನೂ ಕೂಡ ನೀಡುತ್ತೇವೆ ಎಂದು ಆಸೆ ಹುಟ್ಟಿಸುತ್ತಿದ್ದರು. ಅದರಂತೆ ಜಾಹೀರಾತಿನಲ್ಲಿ ನೋಡಿದ ನಂಬರ್ಗೆ ಕರೆ ಮಾಡಿದರೆ, ನಮ್ಮ ಕುಟುಂಬದವರೊಬ್ಬರಿಗೆ ಕಿಡ್ನಿ ವೈಫಲ್ಯವಾಗಿದ್ದು, ಅವರಿಗೆ ಒಂದು ಕಿಡ್ನಿ ಅವಶ್ಯಕತೆಯಿದೆ. ನೀವು ದಾನ ಮಾಡಿದರೆ 3 ಲಕ್ಷ ರೂ ನೀಡುತ್ತೇವೆ ಎಂದು ತಿಳಿಸುತ್ತಿದ್ದರು.
ಇಂತಹ ಜಾಹೀರಾತು ನೋಡಿದ ಅರೂಪ್ ಡೇ ಎಂಬ ವ್ಯಕ್ತಿಯು ಕರೆ ಮಾಡಿದ್ದಾರೆ. ಅತ್ತ ಕಡೆಯಿಂದ ತಮ್ಮ ಕಷ್ಟ ಕಾರ್ಪಣ್ಯಗಳನ್ನು ಹೇಳಿ ಮೂತ್ರಪಿಂಡ ದಾನ ಮಾಡುವಂತೆ ಕೇಳಿಕೊಂಡಿದ್ದಾರೆ. ಇದನ್ನು ನಂಬಿ ಹಣದ ಅವಶ್ಯಕತೆಯಿದ್ದ ಅರೂಪ್ ತಮ್ಮ ಕಿಡ್ನಿಯನ್ನು ದಾನ ಮಾಡಿದ್ದಾರೆ. ಅದರ ಪ್ರತಿಫಲವಾಗಿ 3 ಲಕ್ಷ ನೀಡುವುದಾಗಿ ತಿಳಿಸಿದ ತಂಡ ಆ ಬಳಿಕ ವಂಚಿಸಿದ್ದಾರೆ. ಇತ್ತ ಕಿಡ್ನಿ ಕಳೆದುಕೊಂಡ ನತದೃಷ್ಟ ಜಾಹೀರಾತಿನಲ್ಲಿದ್ದ ನಂಬರ್ಗೆ ಕರೆ ಮಾಡಿದ್ರೆ ಫೋನ್ ಸ್ವಿಚ್ ಆಫ್.
ಕಿಡ್ನಿ ಮತ್ತು ಹಣವನ್ನು ಕಳೆದುಕೊಂಡ ಅರೂಪ್ ಈ ಬಗ್ಗೆ ಕೊಲ್ಕತ್ತಾದ ಲಾಲ್ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೇ ವೇಳೆ ಇತ್ತೀಚೆಗೆ ಉತ್ತರಾಖಂಡ್ನಲ್ಲೂ ಇಂತಹದ್ದೇ ಪ್ರಕರಣಗಳು ನಡೆದಿರುವುದು ಬೆಳಕಿಗೆ ಬಂದಿದೆ. ಈ ತಂಡದಲ್ಲಿ ಮಹಿಳೆಯೊಬ್ಬಳಿದ್ದು, ಆಕೆಯೇ ಕಿಡ್ನಿ ಕಳುವಿನ ಸೂತ್ರಧಾರಿ ಎನ್ನಲಾಗಿದೆ. ಅಲ್ಲದೆ ಈ ತಂಡವು ಕೋಲ್ಕತಾ ಮತ್ತು ಉತ್ತರಾಖಂಡಕ್ಕೆ ಆಗಾಗ್ಗೆ ಪ್ರಯಾಣಿಸುತ್ತಿದ್ದು, ಬಡವರನ್ನೇ ಟಾರ್ಗೆಟ್ ಮಾಡಿ ವಂಚಿಸಿ ಕಿಡ್ನಿ ಕಳ್ಳಸಾಗಣೆ ವ್ಯವಹಾರ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಹಲವು ರಾಜ್ಯಗಳಲ್ಲಿ ಕಿಡ್ನಿ ಕಳ್ಳಸಾಗಣೆಯ ದೊಡ್ಡ ಜಾಲವೇ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಕೊಲ್ಕತ್ತಾದಲ್ಲಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವಂಚಕರ ತಂಡವು ಬೇರೊಂದು ರಾಜ್ಯಕ್ಕೆ ಪ್ರಯಾಣಿಸಿರುವ ಸಾಧ್ಯತೆಯಿದೆ. ಅಲ್ಲದೆ ಹಣಕ್ಕಾಗಿ ಕಿಡ್ನಿಯನ್ನು ಮಾರಾಟ ಮಾಡುವುದು ಕೂಡ ಕಾನೂನುಬಾಹಿರವಾಗಿರುವುದರಿಂದ ಹೀಗೆ ವಂಚನೆಗೆ ಒಳಗಾದ ಅನೇಕರು ದೂರು ನೀಡಿರುವ ಸಾಧ್ಯತೆ ಕಡಿಮೆ. ಹೀಗಾಗಿ ಈ ವಂಚಕ ಜಾಲದಲ್ಲಿ ಬಿದ್ದು ಅನೇಕರು ಕಿಡ್ನಿ ಕಳೆದುಕೊಂಡಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ದುರಾಸೆಯೋ ಅಥವಾ ಮಾನವೀಯತೆಯೋ ಕಿಡ್ನಿ ದಾನ ಮಾಡಲು ಹೋಗಿ ಇದೀಗ ಅರೂಪ್ ಹಣದ ಜೊತೆಗೆ ಮೂತ್ರಪಿಂಡವನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇದನ್ನೂ ಓದಿ: India vs England 2nd Test: ಅಂದು ದಾದಾ, ಇಂದು ಕೊಹ್ಲಿ: ಲಾರ್ಡ್ಸ್ ಬಾಲ್ಕನಿಯಲ್ಲಿ ಕ್ಯಾಪ್ಟನ್ ಡ್ಯಾನ್ಸ್
ಇದನ್ನೂ ಓದಿ: Health Tips: ಹಲವು ಅನಾರೋಗ್ಯ ಸಮಸ್ಯೆಗಳಿಗೆ ಪಪ್ಪಾಯಿ ಎಲೆಗಳೇ ಔಷಧಿ
ಇದನ್ನೂ ಓದಿ: ಇವರ ಬ್ಯಾಟಿಂಗ್ ಮುಂದೆ, ಗೇಲ್-ಎಬಿಡಿ-ಸೆಹ್ವಾಗ್ ಏನೂ ಅಲ್ಲ: ವಿಶ್ವದ ಅತೀ ವೇಗದ ಶತಕದ ಸರದಾರ
ಇದನ್ನೂ ಓದಿ: Kl Rahul: ಪೂಜಾರ, ರಹಾನೆ ಕಳಪೆ ಫಾರ್ಮ್ ಬಗ್ಗೆ ಕೆಎಲ್ ರಾಹುಲ್ ಹೇಳಿದ್ದೇನು?