ಕೊಡಗು, (ನವೆಂಬರ್ 13): ತಾಯಿಯ ಕಣ್ಣೀರು ಅಂತಿತಹದಲ್ಲ. ಇವರ ಕಣ್ಣೀರಿನ ನೋವು ಯಾರಿಗೂ ಅರ್ಥವಾಗಲು ಸಾಧ್ಯವೂ ಇಲ್ಲ. ನಿರಂತರ 18 ವರ್ಷಗಳಿಂದ ಈ ತಾಯಿ ಹೃದಯ ತನ್ನ ಮುದ್ದಿನ ಮಗಳಿಗಾಗಿ ಹರಿಸಿದ ಕಣ್ಣೀರಿಗೆ ಕೊನೆಯೇ ಇಲ್ಲ.. ಆದ್ರೂ 18 ವರ್ಷಗಳ ಬಳಿಕ ಪುತ್ರಿಯ ದೇಹ ಅಸ್ತಿಪಂಜರದ ರೂಪದಲ್ಲಿ ಇವರಿಗೆ ಸಿಕ್ಕಿದೆ. ಹೌದು… ಕಾಣೆಯಾಗಿದ್ದ ಮಗಳು ಪತ್ತೆಯಾಗಿದ್ದಾಳೆ. ಆದ್ರೆ, ಆಕೆ ಜೀವಂತವಾಗಿ ಅಲ್ಲ. ಅಸ್ತಿಪಂಜರವಾಗಿ. ಹೌದು…2006ರಲ್ಲಿ ಕಾಣೆಯಾಗಿದ್ದ ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಅಯ್ಯಂಗೇರಿ ಗ್ರಾಮದ ಬಾಲಕಿ ಹತ್ಯೆಯಾಗಿದ್ದಾಳೆ ಎನ್ನುವುದು ತಿಳಿದುಬಂದಿದ್ದು, ಬರೋಬ್ಬರಿ 18 ವರ್ಷಗಳ ನಂತರ ಗೋವಾದ ಡ್ಯಾಂ ಒಂದರ ಬಳಿ ಹೂತಿಟ್ಟಿರುವುದು ಪತ್ತೆಯಾಗಿದೆ.
ಅದು 2006ನೇ ಇಸವಿ. ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಅಯ್ಯಂಗೇರಿ ಗ್ರಾಮದ ಬಡ ಕುಟುಂಬ ಇವರದ್ದು ಮೊಯ್ದು ಅವರಿಗೆ ಇಬ್ಬರು ಹೆಣ್ಣು ಇಬ್ಬರು ಗಂಡು ಮಕ್ಕಳು. ಮೊದಲ ಮಗಳು ಸಫಿಯಾಳನ್ನ ಕೇರಳದ ಕಾಸರಗೋಡಿನ ಹಂಸ ಎಂಬುವರ ಮನಯಲ್ಲಿ ಮನೆ ಕೆಲಸ ಮಾಡಿಕೊಂಡು ವಿದ್ಯಾಭ್ಯಾಸ ಮಾಡುತ್ತಿರುತ್ತಾಳೆ. ಆದ್ರೆ ಆಕೆ ಒಂದಿನ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಳು. ಈ ಬಗ್ಗೆ ಮೂರು ತಿಂಗಳು ಕಳೆದರೂ ಹಂಸನ ಕುಟುಂಬ ಏನೂ ಮಾಹಿತಿ ನೀಡುವುದಿಲ್ಲ ಕೊನೆಗೆ ಅಯ್ಯಂಗೇರಿ ಗ್ರಾಮಸ್ಥರು ಹಾಗೂ ಕಾಸರಗೋಡಿನ ಕೆವು ಸಾಮಾಜಿಕ ಸಂಘಟನೆಗಳು ಸೇರಿ ಅಲ್ಲಿ 86 ದಿನಗಳ ನಿರಂತರ ಪ್ರತಿಭಟನೆ ಮಾಡಿದ ಫಲವಾಗಿ ಕಾಸರಗೋಡು ಪೊಲೀಸರು ಹಂಸನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ಸಫಿಯಾಳನ್ನು ಕೊಲೆ ಮಾಡಿ ಗೋವಾದ ಡ್ಯಾಂ ಒಂದರ ಬಳಿ ಹೂತಿಟ್ಟಿರುವುದು ಬಾಯ್ಬಿಟ್ಟಿದ್ದಾನೆ.
ಕೊನೆಗೆ ಸ್ಥಳಕ್ಕೆ ತೆರಳಿನೋಡಿದಾಗ 20 ಅಡಿ ಆಳದ ಗುಂಡಿಯಲ್ಲಿ ಸಫಿಯಾಳ ಅಸ್ತಿಪಂಜರ ಪತ್ತೆಯಾಗಿದೆ. ಈ ಪ್ರಕರಣದ ವಿಚಾರಣೆ ನಡೆದು ಆರೋಪಿ ಹಂಸ, ಆತನ ಪತ್ನಿ ಹಾಗೂ ಸಹೋದರನಿಗೆ ಶಿಕ್ಷೆಯಾಗಿದೆ. ಆದ್ರೆ, ಇದನ್ನು ಪ್ರಶ್ನಿಸಿ ಹಂಸ ಹೈಕೋರ್ಟ್ ಮೆಟ್ಟಿಲೇರಿದ್ದಾನೆ. ಅಲ್ಲಿಯೂ ಬಹಳ ವರ್ಷಗಳ ಕಾಲ ಕೇಸ್ ನಡೆದು 2019ರಲ್ಲಿ ಅಲ್ಲಿಯೂ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗಿದೆ. ಆದರೂ ಸಫಿಯಾಳ ಅಸ್ತಿಪಂಜರ ಪೋಷಕರಿಗೆ ಸಿಗೋದಿಲ್ಲ. ಕೊನೆಗೆ ಇದೀಗ ಮೊಯ್ದು ಕುಟುಂಬ ಕಾಸರಗೋಡಿಗೆ ತೆರಳಿ ವಕೀಲರ ಮೂಲಕ ನ್ಯಾಯಾಲಯಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಸಫಿಯಾಳ ಅಸ್ತಿಪಂಜರ
ಕುಟುಂಬಕ್ಕೆ ಹಸ್ತಾಂತರವಾಗಿದೆ. ಇದನ್ನಅಯ್ಯಂಗೇರಿ ಗ್ರಾಮಕ್ಕೆ ತಂದು ನಿನ್ನೆ(ನವೆಂಬರ್ 12) ಇಸ್ಲಾಂ ವಿಧಿ ವಿಧಾನದ ಪ್ರಕಾರ ಅಂತ್ಯ ಸಂಸ್ಕಾರ ಮಾಡಲಾಗಿದೆ.
ತಮ್ಮ ಮಗುವಿಗೆ ಅನ್ಯಾಯ ಮಾಡಿದ ಕಟುಕರಿಗೆ ನ್ಯಾಯಾಲಯ ಸರಿಯಾದ ಶಿಕ್ಷೆಯನ್ನೇ ವಿಧಿಸಿದೆ ಎಂದು ಪೋಷಕರು ಸಮಾಧಾನ ವ್ಯಕ್ತಪಡಿಸಿದ್ದಾರೆ. ಆದ್ರೆ ತಾಯಿ ಮಾತ್ರ ಇನ್ನು ಸಫಿಯಾಳ ನೆನಪಿನಿಂದ ಹೊರ ಬಂದಿಲ್ಲ. ಏನೂ ಅರಿಯದ ತಮ್ಮ ಮಗಳನ್ನ ಯಾಕೆ ಅವರು ಕೊಂದರು, ಅವಳು ಮಾಡಿದ ಅನ್ಯಾಯವಾದ್ರೂ ಏನು ಎಂದು ಕಣ್ಣೀರಿಡುತ್ತಿದ್ದಾರೆ. 18 ವರ್ಷಗಳ ಬಳಿಕ ಮಗಳನ್ನ ತಾನು ಅಸ್ತಿಪಂಜರದ ರೂಪದಲ್ಲಿ ನೋಡವುಂತಾಯಿತಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ.
ಯಾವುದೇ ಧರ್ಮವಾಗಲಿ. ಸಾವನ್ನಪ್ಪಿದ ವ್ಯಕ್ತಿಯ ದೇಹವನ್ನ ಶಾಸ್ತ್ರಬದ್ಧವಾಗಿ ಅಂತ್ಯಸಂಸ್ಕಾರ ಮಾಡಿದ್ರೆ ಮಾತ್ರ ಮುಕ್ತಿ ಸಿಗುತ್ತದೆ ಅನ್ನೋ ನಂಬಿಕೆ ಇದೆ. ಇಲ್ಲಿ ಸಫಿಯಾಳ ಪೋಷಕರಿಗೆ ತಮ್ಮ ಮಗಳ ದೇಹದ ಅಂತ್ಯ ಸಂಸ್ಕಾರ ಮಾಡಲಾಗದೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ.
ಒಟ್ಟಾರೆ. ಅತ್ತ ಮುಗ್ದ ಬಾಲಕಿಯ ಬಾಳನ್ನ ಮುಗಿಸಿದ ದುರುಳರಿಗೆ ಶಿಕ್ಷೆಯಾದ್ರೆ, ಇತ್ತ ಬಾಲಕಿಯ ಮೃತದೇಹಕ್ಕೂ ಮುಕ್ತಿನೀಡಲಾಗಿದೆ.
ಗೋಪಾಲ್ ಸೋಮಯ್ಯ ಟಿವಿ9 ಕೊಡಗು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:48 pm, Wed, 13 November 24