ಮಾಟ-ಮಂತ್ರ ಮಾಡುತ್ತಿದ್ದ ಪೂಜಾರಿಯ ಬರ್ಬರ ಹತ್ಯೆ: ಅಮಾವಾಸ್ಯೆಯಂದೇ ಕೃತ್ಯವೆಸಗಿದ ದುಷ್ಕರ್ಮಿಗಳು

ಕೋಲಾರದ ಮಾಲೂರು ತಾಲೂಕಿನ ಹುಲ್ಕೂರಿನ ಕಾಳಿ ದೇವಾಲಯದ ಪೂಜಾರಿ ಬರ್ಬರವಾಗಿ ಹತ್ಯೆಯಾಗಿದ್ದಾರೆ. ಪುಷ್ಯ ಅಮಾವಾಸ್ಯೆ ಪೂಜೆ ಮುಗಿಸಿ ಬರುವಾಗ ದುಷ್ಕರ್ಮಿಗಳು ಲಾಂಗಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ. ಮಾಟ-ಮಂತ್ರ, ದೆವ್ವ ಬಿಡಿಸುವ ಕೆಲಸ ಮಾಡುತ್ತಿದ್ದ ಪೂಜಾರಿಯ ಹತ್ಯೆಗೆ ವೈಯಕ್ತಿಕ, ಆರ್ಥಿಕ ಅಥವಾ ಸ್ಮಶಾನ ಒತ್ತುವರಿ ವಿವಾದ ಕಾರಣವಿರಬಹುದೆಂದು ಮಾಲೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಾಟ-ಮಂತ್ರ ಮಾಡುತ್ತಿದ್ದ ಪೂಜಾರಿಯ ಬರ್ಬರ ಹತ್ಯೆ: ಅಮಾವಾಸ್ಯೆಯಂದೇ ಕೃತ್ಯವೆಸಗಿದ ದುಷ್ಕರ್ಮಿಗಳು
ಆಂಜಿ ಅಲಿಯಾಸ್​ ಆಂಜಿನಪ್ಪ
Edited By:

Updated on: Jan 19, 2026 | 6:39 PM

ಕೋಲಾರ, ಜನವರಿ 19: ಅವರು ಊರಿನಲ್ಲಿ ಕಾಳಿ ದೇವಿಯ ದೇವಾಲಯ ನಿರ್ಮಾಣ ಮಾಡಿಕೊಂಡು ಆರಾಧನೆ ಮಾಡಿಕೊಂಡಿದ್ದರು. ದೇವಾಲಯಕ್ಕೆ ಬರುವ ಜನರಿಗೆ ದೆವ್ವ, ಗಾಳಿ ಬಿಡಿಸುವ ಕೆಲಸವೂ ಮಾಡುತ್ತಿದ್ದರು. ಹೀಗೆ ಮಾಟ-ಮಂತ್ರ ಮಾಡಿಕೊಂಡಿದ್ದ ಪೂಜಾರಿ (priest) ನಿನ್ನೆ ಪುಷ್ಯ ಅಮಾವಾಸ್ಯೆ ಹಿನ್ನೆಲೆ ಪೂಜೆ ಮುಗಿಸಿಕೊಂಡು ಬರುವಾಗ ದುಷ್ಕರ್ಮಿಗಳು ಅಡ್ಡಗಟ್ಟಿ ಬರ್ಬರವಾಗಿ ಹತ್ಯೆ (murder) ಮಾಡಿದ್ದಾರೆ. ಜಿಲ್ಲೆಯ ಮಾಲೂರು ತಾಲೂಕಿನ ಹರಳೇರಿ ಬಳಿ ಘಟನೆ ನಡೆದಿದೆ. ಆಂಜಿ ಅಲಿಯಾಸ್​ ಆಂಜಿನಪ್ಪ(45) ಕೊಲೆಯಾದ ಪೂಜಾರಿ. ಘಟಣಾ ಸ್ಥಳಕ್ಕೆ ಮಾಲೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ನಡೆದದ್ದೇನು?

ನಿನ್ನೆ ಮಾಲೂರು ಪಟ್ಟಣದಲ್ಲಿ ಹಿಂದೂ ಸಮಾಜೋತ್ಸವ ಸಮಿತಿ ವತಿಯಿಂದ ಮಾಲೂರು ಪಟ್ಟಣದ ಹೋಂಡಾ ಸ್ಟೇಡಿಯಂನಲ್ಲಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಹೀಗಾಗಿ ಮಾಲೂರು ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸಾವಿರಾರು ಜನರು ಹಿಂದೂ ಸಮಾಜೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಪೊಲೀಸರ ಗಮನವೆಲ್ಲಾ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಮೇಲಿತ್ತು. ಹೀಗಿರುವಾಗಲೇ ಇನ್ನೇನು ಕಾರ್ಯಕ್ರಮ ಅಂತಿಮ ಹಂತ ತಲುಪುವುದರಲ್ಲಿತ್ತು, ಅಷ್ಟರಲ್ಲಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂಬ ಮಾಹಿತಿಯೊಂದು ಮಾಲೂರು ಪೊಲೀಸರಿಗೆ ಬಂದಿದೆ.

ಇದನ್ನೂ ಓದಿ: ಮೈಸೂರಿನ ಉದಯಗಿರಿಯಲ್ಲಿ ಮತ್ತೆ ಝಳಪಿಸಿದ ಲಾಂಗ್​, ಮಚ್ಚುಗಳು: ಭಯಾನಕ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆ

ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರಿಗೆ ಅಲ್ಲಿ ಬೈಕ್​​ನಲ್ಲಿ ಬರ್ತಿದ್ದ ಹುಲ್ಕೂರು ಗ್ರಾಮದ ಕಾಳಿ ದೇವಾಲಯದ ಪೂಜಾರಿ ಮಾಲೂರು ಪಟ್ಟಣ ನಿವಾಸಿ ಆಂಜಿ ಅಲಿಯಾಸ್​​​ ಆಂಜಿನಪ್ಪರನ್ನ ದುಷ್ಕರ್ಮಿಗಳು ಅಡ್ಡಗಟ್ಟಿ ಮುಖಕ್ಕೆ ಖಾರದಪುಡಿ ಎರಚಿ ಲಾಂಗಿನಿಂದ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿರುವುದು ಕಂಡುಬಂದಿತ್ತು.

ಆಂಜಿನಪ್ಪ ದೇವಾಲಯದ ಪೂಜಾರಿ ಜೊತೆಗೆ ಮಾಲೂರಿನಲ್ಲಿ ಬೂಸಾ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಬಂದಿದ್ದ ಶ್ವಾನದಳ, ಸೋಕೋ ಟೀಂ ಸೇರಿದಂತೆ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಈ ವೇಳೆ ನಿನ್ನೆ ಪುಷ್ಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಹುಲ್ಕೂರು ಬಳಿಯ ದೇವಾಲಯದಲ್ಲಿ ಪೂಜೆ ಮುಗಿಸಿಕೊಂಡು ವಾಪಸ್ಸಾಗುವ ವೇಳೆ ಹೀಗೆ ಬರ್ಬರವಾಗಿ ಹತ್ಯೆಯಾಗಿರುವುದು ತಿಳಿಸಿದೆ.

ಎರಡನೇ ಮದುವೆ

ಇನ್ನು ಆಂಜಿನಪ್ಪ ಅವರಿಗೆ ಕಳೆದ ಮೂವತ್ತು ವರ್ಷಗಳ ಹಿಂದೆ ಚಿಂತಾಮಣಿ ಮೂಲದ ವಿಜಿಯಮ್ಮ ಎಂಬುವವರೊಂದಿಗೆ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದು, ಮದುವೆಯಾಗಿದೆ. ಇತ್ತೀಚೆಗೆ ಅಂದರೆ ಕಳೆದ ಐದು ವರ್ಷಗಳ ಹಿಂದೆ ಬೆಂಗಳೂರು ವೈಟ್​ ಫೀಲ್ಡ್​ ನಿವಾಸಿ ಸಂಗೀತ ಎಂಬುವವರನ್ನು ಎರಡನೇ ಮದುವೆ ಮಾಡಿಕೊಂಡಿದ್ದರು.

ಆಂಜಿನಪ್ಪ ಕಳೆದ 5 ವರ್ಷಗಳ ಹಿಂದೆ ತಮ್ಮೂರು ಹುಲ್ಕೂರಿನಲ್ಲಿ ಕಾಳಿ ದೇವಾಲಯ ನಿರ್ಮಾಣ ಮಾಡಿಕೊಂಡು ಬರುವ ಭಕ್ತರಿಗೆ ಪೂಜೆ ಮಾಡಿಕೊಂಡು, ಬ್ಲಾಕ್ ಮ್ಯಾಜಿಕ್​, ಮಾಟ-ಮಂತ್ರ ಮಾಡಿಕೊಂಡು ಒಂದಷ್ಟು ಹಣ ಸಂಪಾದನೆ ಮಾಡಿಕೊಂಡಿದ್ದರು. ಜೊತೆಗೆ ಸ್ಥಳೀಯವಾಗಿ ಒಂದಷ್ಟು ಜನರಿಗೆ ಸಹಾಯ ಮಾಡಿಕೊಂಡಿದ್ದ ಆಂಜಿನಪ್ಪ ಮೇಲೆ ಗ್ರಾಮದ ಜನರಿಗೆ ಹಾಗೂ ಅಲ್ಲಿಗೆ ಬರುತ್ತಿದ್ದ ಭಕ್ತರಿಗೂ ಒಳ್ಳೆಯ ಅಭಿಪ್ರಾಯವಿತ್ತು. ಈ ದೇವಾಲಯಕ್ಕೆ ರಾಜ್ಯದ ನಾನಾ ಭಾಗಗಳಿಂದ ಜನರು ಹಲವು ಸಮಸ್ಯೆಗಳನ್ನು ಹಿಡಿದುಕೊಂಡು ಬರುತ್ತಿದ್ದರು. ಕೆಲವರಿಗೆ ದೆವ್ವ ಹಿಡಿದಿದ್ದರೆ, ನನಗೆ ಯಾರೋ ಕೆಡಕು ಮಾಡಿದ್ದಾರೆ ಎಂದೆಲ್ಲಾ ಹೇಳಿಕೊಂಡು ಬರುತ್ತಿದ್ದರು. ಅಂತವರಿಗೆ ಆಂಜಿನಪ್ಪ ಪರಿಹಾರ ನೀಡುತ್ತಿದ್ದರು.

ಇದನ್ನೂ ಓದಿ: ಕೊಲೆ ಮಾಡಿದ್ದೂ ಅವನೇ, ಪೊಲೀಸರಿಗೆ ಹೇಳಿದ್ದೂ ಅವನೇ! ಆ ರಾತ್ರಿ ತೋಟದ ಮನೆಯಲ್ಲಿ ನಡೆದಿದ್ದೇನು ಗೊತ್ತಾ?

ಹೀಗೆ ಸಾಕಷ್ಟು ಜನರಿಗೆ ಇವರಿಂದ ಅನುಕೂಲವೂ ಆಗಿದೆ, ಅನಾನುಕೂಲವೂ ಆಗಿರಬಹುದು. ಜೊತೆಗೆ ಗ್ರಾಮದಲ್ಲಿ ದೇವಾಲಯದ ನಿರ್ಮಾಣದ ವೇಳೆ ಗ್ರಾಮದ ಸ್ಮಶಾನ ಒತ್ತುವರಿ ಮಾಡಿಕೊಂಡಿದ್ದಾರೆ ಅನ್ನೋ ವಿಚಾರವಾಗಿ ಗ್ರಾಮದ ಕೆಲವರೊಂದಿಗೆ ಮನಸ್ತಾಪವಾಗಿತ್ತು ಎನ್ನಲಾಗುತ್ತಿದೆ. ಸದ್ಯ ದುಷ್ಕರ್ಮಿಗಳು ಪೂಜಾರಿಯನ್ನು ನಿನ್ನೆ ಬರ್ಬರವಾಗಿ ಕೊಲೆ ಮಾಡಿದ್ದು, ಹತ್ಯೆಗೆ ಕಾರಣ ಏನು ಅನ್ನೋದು ತಿಳಿಯಬೇಕಿದೆ. ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಮಾಲೂರು ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿಗಳಿಗಾಗಿ ಬಲೆಬೀಸಿದ್ದಾರೆ.

ಒಟ್ಟಾರೆ ಪೂಜೆ ಪುನಸ್ಕಾರ, ಆರಾಧನೆ, ಮಾಟ, ಮಂತ್ರ ಮಾಡಿಕೊಂಡಿದ್ದ ವ್ಯಕ್ತಿಯನ್ನು ಏಕಾಏಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸದ್ಯ ಕೊಲೆಗೆ ಕುಟುಂಬದಲ್ಲಿ ಏನಾದ್ರು ಸಮಸ್ಯೆ ಇತ್ತಾ, ಹಣಕಾಸಿನ ವ್ಯವಹಾರ, ಸ್ಮಶಾನದ ವಿಚಾರವೇ ಸಾವಿಗೆ ಕಾರಣವಾಯ್ತಾ? ಹೀಗೆ ಹತ್ತು ಹಲವು ಆಯಾಮಗಳಲ್ಲಿ ಮಾಲೂರು ಪೊಲೀಸರು ತನಿಖೆ ನಡೆಸುತ್ತಿದ್ದು, ತನಿಖೆಯಿಂದಲೇ ಕೊಲೆಗೆ ನಿಖರ ಕಾರಣ ತಿಳಿದು ಬರಲಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.