ಕೊಪ್ಪಳ, ಫೆಬ್ರವರಿ 12: ಗಂಗಾವತಿ (Gangavathi) ಬಸ್ ನಿಲ್ದಾಣ ಬಳಿಯ ಪಾರ್ಕ್ವೊಂದಕ್ಕೆ 21 ವರ್ಷದ ಮಹಿಳೆಯನ್ನು (Woman) ಎಳೆದೊಯ್ದು ಅತ್ಯಾಚಾರವೆಸಗಲಾಗಿದೆ. ಅತ್ಯಾಚಾರವೆಸಗಿದ ಆರೋಪಿ ಲಿಂಗರಾಜ್‌ಗಾಗಿ ಪೊಲೀಸರು (Police) ಬಲೆ ಬೀಸಿದ್ದಾರೆ. ಇನ್ನು ಕೃತ್ಯಕ್ಕೆ ಸಹಕಾರ ನೀಡಿದ ಐವರನ್ನು ಗಂಗಾವತಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೌಲಾಹುಸೇನ್, ಶಿವಕುಮಾರ್, ಪ್ರಶಾಂತ್, ಮಹೇಶ್, ಮಾದೇಶ್ ಬಂಧಿತ ಆರೋಪಿಗಳು.
ಸಂತ್ರಸ್ತೆ ಬೆಂಗಳೂರಿನ ಗೊರಗುಂಟೆಪಾಳ್ಯದವರಾಗಿದ್ದು, ಆಕೆಯ ಪತಿ ಗಂಗಾವತಿಯವರು. ಸಂತ್ರಸ್ತೆ ಮತ್ತು ಆಕೆಯ ಪತಿ ಪ್ರೇಮ ವಿವಾಹವಾಗಿದ್ದಾರೆ. ಗಂಡನನ್ನು ಭೇಟಿಯಾಗಲು ಸಂತ್ರಸ್ತೆ ಗಂಗಾವತಿಗೆ ಬಂದಿದ್ದಳು. ಫೆಬ್ರವರಿ 9 ರಂದು ರಾತ್ರಿ 9:30 ರ ಸುಮಾರಿಗೆ ಸಂತ್ರಸ್ತೆ ಮತ್ತು ಆಕೆಯ ಪತಿ ಗಂಗಾವತಿ ಬಸ್ ನಿಲ್ದಾಣದಲ್ಲಿ ಕೌಟುಂಬಿಕ ವಿಚಾರವಾಗಿ ಜಗಳವಾಡುತ್ತಿದ್ದರು.
ಇದನ್ನು ಗಮನಿಸಿದ ಆರು ಮಂದಿಯ ಗ್ಯಾಂಗ್ ದಂಪತಿ ಮೇಲೆ ಕಣ್ಣಿಟ್ಟಿದೆ. ಜಗಳ ತೀವ್ರವಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ ತಂಡ ಸಂತ್ರಸ್ತೆಯ ಪತಿಗೆ ಥಳಿಸಿದೆ. ಅಲ್ಲದೆ ಮಹಿಳೆಗೆ ಸಹಾಯ ಮಾಡಿದಂತೆ ವರ್ತಿಸಿದ್ದಾರೆ. ಸಂತ್ರಸ್ತೆಯ ಗಂಡನನ್ನು ಸಾರ್ವಜನಿಕರ ಕಣ್ಣಿಗೆ ಬೀಳದಂತೆ ಕರೆದೊಯ್ದಿದ್ದಾರೆ. ದುಷ್ಕರ್ಮಿಗಳು ನಂತರ ಮಹಿಳೆಯ ಮೇಲೆ ಹಲ್ಲೆ ನಡೆಸಿ ಬಸ್ ನಿಲ್ದಾಣದ ಬಳಿಯ ಉದ್ಯಾನವನಕ್ಕೆ ಎಳೆದೊಯ್ದಿದ್ದಾರೆ.
ಇದನ್ನೂ ಓದಿ: ನೆಲಮಂಗಲ: ಯುವತಿ ಮೇಲೆ ಅತ್ಯಾಚಾರ, ಆರೋಪಿ ಅರೆಸ್ಟ್
ಆರು ಆರೋಪಿಗಳಲ್ಲಿ ಒಬ್ಬನಾದ ಲಿಂಗರಾಜ್ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಉಳಿದ ಐವರು ಆರೋಪಿಗಳು ಕೃತ್ಯಕ್ಕೆ ಸಹಕಾರ ನೀಡಿದ್ದಾರೆ. ಘಟನೆಯ ನಂತರ ಆರೋಪಿಗಳು ಸಂತ್ರಸ್ತೆಯನ್ನು ಪಾರ್ಕ್‌ನಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಸಂತ್ರಸ್ತೆ ಗಂಗಾವತಿ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಲಿಂಗರಾಜ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸಂತ್ರಸ್ತೆಯನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ನಡೆಸಲಾಯಿತು.
ಬಂಧಿತರನ್ನು ಮೌಲಾ ಹುಸೇನ್, ಶಿವಕುಮಾರ್, ಪ್ರಶಾಂತ್, ಮಹೇಶ್ ಮತ್ತು ಮಾದೇಶ್ ಎಂದು ಗುರುತಿಸಲಾಗಿದೆ. ಪೊಲೀಸರು ಲಿಂಗರಾಜ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ