ಬೆಂಗಳೂರು, ಜ.16: KSRTC ಬಸ್ ಡಿಕ್ಕಿಯಾಗಿ ಫುಡ್ ಡೆಲಿವರಿ ಬಾಯ್ ಸ್ಥಳದಲ್ಲೇ ಮೃತಪಟ್ಟ (Death) ಘಟನೆ ತಡರಾತ್ರಿ 1 ಗಂಟೆ ಸುಮಾರಿಗೆ ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣ ಬಳಿ ನಡೆದಿದೆ (Accident). ಅಪಘಾತದಲ್ಲಿ ಫುಡ್ ಡೆಲಿವರಿ ಬಾಯ್ ಬಸವರಾಜ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಹಿಂಬದಿಯಿಂದ ವೇಗವಾಗಿ ಬಂದ ಬಸ್ ಡಿಕ್ಕಿಯಾಗಿ ಘಟನೆ ನಡೆದಿದೆ. ಬ್ಯಾಟರಾಯನಪುರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.
ರಾತ್ರಿ ಡ್ಯೂಟಿಯಲ್ಲಿದ್ದ ಫುಡ್ ಡೆಲಿವರಿ ಬಾಯ್ ಬಸವರಾಜು, ಮೈಸೂರು ರಸ್ತೆ ಕಡೆಗೆ ಡೆಲಿವರಿಗೆಂದು ತೆರಳುತಿದ್ದರು. ಇದೇ ವೇಳೆ ಸ್ಯಾಟಲೈಟ್ ಬಸ್ ನಿಲ್ದಾಣದ ಮುಂಭಾಗ ಯಮದಂತೆ ಅತಿವೇಗದ ಚಾಲನೆಯಲ್ಲಿದ್ದ KSRTC ಬಸ್ ಮುಂದೆ ಚಲಿಸುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಬಸವರಾಜು ತಲೆ ಬಸ್ ಮುಂಭಾಗದ ಎಡಚಕ್ರಕ್ಕೆ ಸಿಲುಕಿದೆ. ಬಳಿಕ ಬಸ್ ತಲೆಯ ಮೇಲೆ ಹರಿದಿದ್ದು ಬಸವರಾಜು ಸ್ಥಳದಲ್ಲೇ ಪ್ರಾಣಬಿಟ್ಟಿದ್ದರೆ. ಇನ್ನು ಬಸ್ ದೇಹವನ್ನು ಸುಮಾರು 20 ಮೀಟರ್ ನಷ್ಟು ದೂರಕ್ಕೆ ಎಳೆದೊಯ್ದಿತ್ತು ಎಂದು ತಿಳಿದು ಬಂದಿದೆ.
ಸದ್ಯ ಸ್ಥಳಕ್ಕೆ ಬ್ಯಾಟರಾಯನಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಳಿಕ ಸಂಚಾರಿ ಪೊಲೀಸರು ಬಸ್ ಚಾಲಕನ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ: ಒಂಬತ್ತು ವರ್ಷಗಳಲ್ಲಿ ಬಡತನ ರೇಖೆಯಿಂದ ಹೊರ ಬಂದ 24.8 ಕೋಟಿ ಜನರು: NITI ವರದಿ
ಬೆಂಗಳೂರು ಉತ್ತರ ತಾಲೂಕಿನ ಅಡಕಮಾರನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಡಿವೈಡರ್ಗೆ ಬೈಕ್ ಡಿಕ್ಕಿಯಾಗಿ ತಂದೆ-ಮಗು ಮೃತಪಟ್ಟ ಘಟನೆ ನಡೆದಿದೆ. ಅಮಿತ್(32) ಹಾಗೂ 5 ವರ್ಷದ ಅನ್ವಿತಾ ಮೃತ ದುರ್ದೈವಿಗಳು. ಘಟನೆಯಲ್ಲಿ ಪತ್ನಿ ಕುಸುಮಾಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ನೆಲಮಂಗಲ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಮತ್ತೊಂದೆಡೆ ಬೆಂಗಳೂರಿನಲ್ಲಿ ತಡರಾತ್ರಿ ಐಷಾರಾಮಿ ಕಾರೊಂದು ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಕೂದಲೆಳೆ ಅಂತರದಲಿ ಚಾಲಕ ಬಚಾವ್ ಆಗಿದ್ದಾನೆ. ಬೆಂಗಳೂರಿನ ಡೇರಿ ಸರ್ಕಲ್ನಲ್ಲಿ ತಡರಾತ್ರಿ ನಿಯಂತ್ರಣ ತಪ್ಪಿ ಡಿವೈಡರ್ ಗೆ ಆಡಿ ಕಾರು ಡಿಕ್ಕಿಯಾಗಿದೆ. ಡಿಕ್ಕಿ ರಬಸಕ್ಕೆ ಕಾರು ಪಲ್ಟಿ ಹೊಡೆದು ನಜ್ಜುಗುಜ್ಜಾಗಿದೆ. ಆಡಿ ಕಾರಿನಲ್ಲಿದ್ದ ಚಾಲಕ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಆಡುಗೋಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪಘಾತಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:30 am, Tue, 16 January 24