ಬೆಂಗಳೂರು ಗ್ರಾಮಾಂತರ, ಮಾ.13: ಪೊಲೀಸ್ ಠಾಣೆಯ ಸಮೀಪವೇ ವಕೀಲನಿಗೆ ಚಾಕು ಇರಿದ ಅಮಾನುಷ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಠಾಣೆ(Anekal Police Station) ಬಳಿ ನಡೆದಿದೆ. ವಕೀಲ ಮಂಜುನಾಥ್ ಎಂಬುವವರ ಬೆನ್ನು, ಕೈಗೆ ಮೂರು ಬಾರಿ ಚಾಕುವಿನಿಂದ ಇರಿಯಲಾಗಿದೆ. ನೆರವಿಗೆ ಧಾವಿಸಿದ ಆಟೋ ಡ್ರೈವರ್ ಮೇಲೂ ಹಲ್ಲೆಗೆ ಯತ್ನಿಸಿದ್ದಾನೆ. ಕೂಡಲೇ ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ವಕೀಲ ಮಂಜುನಾಥ್ಗೆ ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇನ್ನು ಈ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಈ ಕುರಿತು ಪೊಲೀಸ್ ತನಿಖೆ ಬಳಿಕ ನಿಜಾಂಶ ತಿಳಿದುಬರಬೇಕಿದೆ.
ರಾಮನಗರ: ಬೆಂಗಳೂರು ದಕ್ಷಿಣ ತಾಲೂಕಿನ ಅಗರ ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ನಡೆದಿದೆ. ಪೃಥ್ವಿ ರಾಜ್(17) ಹಾಗೂ ನವೀನ್(17) ಮೃತ ದುರ್ದೈವಿಗಳು. ಇವರನ್ನು ಕೆಂಗೇರಿ ಸಮೀಪದ ದೊಡ್ಡಬೆಲೆ ನಿವಾಸಿಗಳು ಎಂದು ಗುರುತಿಸಲಾಗಿದ್ದು, ಕಾಲೇಜಿನಿಂದ ಕೆರೆಗೆ ಈಜಲು ತೆರಳಿದ್ದರು. ಈ ವೇಳೆ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಮೃತದೇಹವನ್ನ ಹೊರಕ್ಕೆ ತೆಗೆದಿದ್ದಾರೆ. ಈ ಕುರಿತು ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಶಿವಮೊಗ್ಗ: ಹಿಂದೂ ಯುವಕನಿಗೆ ಚಾಕು ಇರಿತ; ಬುದ್ದಿವಾದ ಹೇಳಿದಕ್ಕೆ ಕೊಲೆಗೆ ಯತ್ನ
ರಾಯಚೂರು: ಲಾರಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಮೆಣಸಿನಕಾಯಿ ಭಸ್ಮವಾದ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ದೇವರಗುಡ್ಡ ಗ್ರಾಮದ ಸಮೀಪ ನಡೆದಿದೆ. ಲಾರಿಯಲ್ಲಿದ್ದ ಅಪಾರ ಪ್ರಮಾಣದ ಮೆಣಸಿನಕಾಯಿ ಬೆಂಕಿಗಾಹುತಿಯಾಗಿದೆ. ಮಾರ್ಕೆಟ್ಗೆ ಮೆಣಸಿನಕಾಯಿ ಸಾಗಿಸುವಾಗ ಹೈವೋಲ್ಟೇಜ್ ತಂತಿ ತಗುಲಿ ಈ ಅವಘಡ ಸಂಭವಿಸಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಬೆಂಕಿ ನಂದಿಸಿದ್ದಾರೆ. ಇನ್ನು ತಾನು ಕಷ್ಟಪಟ್ಟು ಬೆಳೆದ ಮೆಣಸಿನಕಾಯಿ ಸುಟ್ಟುಹೋಗಿದ್ದಕ್ಕೆ ರೈತ ಕಂಗಾಲಾಗಿದ್ದಾನೆ. ಈ ಕುರಿತು ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು: ಜಿಲ್ಲೆಯ ತಿಪಟೂರು ತಾಲ್ಲೂಕಿನ ಡಿ.ಎಲ್ ಪಾಳ್ಯದಲ್ಲಿ ತೆಂಗು, ಬಾಳೆ ತೋಟಕ್ಕೆ ಬೆಂಕಿ ಬಿದ್ದಿದೆ. ಇದರಿಂದ 60 ತೆಂಗಿನ ಗಿಡ, ಒಂದು ಎಕರೆ ಬಾಳೆಗಿಡ ಭಸ್ಮವಾಗಿದೆ. ಮಂಜುನಾಥ್ ಎಂಬುವರಿಗೆ ಸೇರಿದ ತೋಟ ಇದಾಗಿದ್ದು, ಕಿಡಿಗೇಡಿಗಳು ಬೆಂಕಿ ಇಟ್ಟಿರುವ ಶಂಕೆ ವ್ಯಕ್ತವಾಗಿದೆ. ತೋಟಕ್ಕೆ ಬೆಂಕಿ ಬಿದ್ದಿದ್ದು ಹೇಗೆ ಎಂದು ಇನ್ನೂ ತಿಳಿದು ಬಂದಿಲ್ಲ. ತೋಟದ ಮಾಲೀಕರಿಗೆ ವಿಚಾರ ತಿಳಿಯವ ವೇಳೆಗೆ ತೋಟ ಸಂಪೂರ್ಣ ಭಸ್ಮವಾಗಿದೆ. ಈ ಘಟನೆ ತಿಪಟೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:59 pm, Wed, 13 March 24