ಕಬ್ಬಿನ ಗದ್ದೆಗೆ ತೆರಳಿದ್ದ ರೈತನ ಮೇಲೆ ಚಿರತೆ ದಾಳಿ: ಪ್ರಾಣಾಪಾಯದಿಂದ ರೈತ ಪಾರು

| Updated By: ಗಂಗಾಧರ​ ಬ. ಸಾಬೋಜಿ

Updated on: May 30, 2022 | 9:17 AM

ಈ ವಿಚಾರವಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದರೂ ನಿರ್ಲಕ್ಷ್ಯ ತೋರಿದ್ದಾರೆ. ಬೋನ್ ಇರಿಸಿ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. 

ಕಬ್ಬಿನ ಗದ್ದೆಗೆ ತೆರಳಿದ್ದ ರೈತನ ಮೇಲೆ ಚಿರತೆ ದಾಳಿ: ಪ್ರಾಣಾಪಾಯದಿಂದ ರೈತ ಪಾರು
ಚಿರತೆ ದಾಳಿಗೊಳಗಾದ ರೈತ ಜಗದೀಶ್.
Follow us on

ಮಂಡ್ಯ: ಕಬ್ಬಿನ ಗದ್ದೆಗೆ ತೆರಳಿದ್ದ ರೈತರ ಮೇಲೆ ಚಿರತೆ ದಾಳಿ ಮಾಡಿರುವಂತಹ ಘಟನೆ ಜಿಲ್ಲೆ ಮದ್ದೂರು ತಾಲೂಕಿನ ಹೆಚ್.ಹೊಸೂರು ಗ್ರಾಮದಲ್ಲಿ ನಡೆದಿದೆ. ಬೈಕ್​ನಲ್ಲಿ ತೆರಳುವ ವೇಳೆ ಹಿಂದಿನಿಂದ ಬಂದು ಚಿರತೆ ದಾಳಿ ಮಾಡಿದ್ದು, 15 ನಿಮಿಷ ಚಿರತೆ ಜತೆ ಹೋರಾಡಿ ರೈತ ಜಗದೀಶ್ ಪ್ರಾಣ ಉಳಿಸಿಕೊಂಡಿದ್ದಾನೆ. ರೈತ ಜಗದೀಶ್​ಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ 3 ದಿನಗಳಿಂದ ಹೊಸಳ್ಳಿ, ಕೆಂಬೂತನಗೆರೆಯಲ್ಲಿ ಚಿರತೆ ದಾಳಿ ಮಾಡುತ್ತಿದ್ದು, 2 ಮೇಕೆ ಹೊತ್ತೊಯ್ದಿದೆ. ಈ ವಿಚಾರವಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದರೂ ನಿರ್ಲಕ್ಷ್ಯ ತೋರಿದ್ದಾರೆ. ಬೋನ್ ಇರಿಸಿ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮುಂಗೈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಯುವತಿ ಸಾವು ಪ್ರಕರಣ: ಇಂದು ಯುವತಿ ಮರಣೋತ್ತರ ಪರೀಕ್ಷೆ

ಬೆಂಗಳೂರು: ಮುಂಗೈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಯುವತಿ ಸಾವು ಪ್ರಕರಣ ಹಿನ್ನೆಲೆ ಇಂದು ಯುವತಿ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಸದ್ಯ ಘಟನೆ ಸಂಬಂಧ ಹೆಚ್​ಎಎಲ್​ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲು ಮಾಡಲಾಗಿದೆ. ನಿನ್ನೆ ಜೀವಿಕಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ತೇಜಸ್ವಿನಿ ಒಳಾಗಾಗಿದ್ದರು. ಮರಣೋತ್ತರ ಪರೀಕ್ಷೆಯ ವರದಿ ಬಳಿಕವಷ್ಟೆ ಪೊಲೀಸರು ಕ್ರಮಕೈಗೊಳ್ಳಲಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಯ ಮೇಲೆ ತನಿಖಾಧಿಕಾರಿ ಸರ್ಕಾರಿ ಆಸ್ಪತ್ರೆ ವೈದ್ಯರಿಂದ ಅನಿಸಿಕೆ ಪಡೆದುಕೊಳ್ಳಲ್ಲಿದ್ದಾರೆ. ಈ ವೈದ್ಯರ ನಿರ್ಲಕ್ಷ್ಯ ಕಂಡು ಬಂದರೆ ಆಸ್ಪತ್ರೆ ಹಾಗೂ ವೈದ್ಯರ ವಿರುದ್ದ ಕ್ರಮಕ್ಕೆ ಮುಂದಾಗಲಿದ್ದು, ಹೀಗಂತ ಸುಪ್ರೀಂ‌ಕೋರ್ಟ್ ಗೈಡ್ ಲೈನ್ಸ್ ನೀಡಿದೆ. ಸದ್ಯ ಮರಣೋತ್ತರ ಪರೀಕ್ಷೆಗೆ ಯುವತಿ ಮೃತ ದೇಹ ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ: ಬಸವಕಲ್ಯಾಣದಲ್ಲಿ ಮೂಲ ಅನುಭವ ಮಂಟಪಕ್ಕಾಗಿ ಜೂನ್ 12ರಂದು ಪ್ರತಿಭಟನೆ; ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗಶ್ರೀ

ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ನಡುವೆ ಮಾರಾಮಾರಿ

ಕೊಪ್ಪಳ: ಹಸು ಕಟ್ಟುವ ಜಾಗದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿದ್ದು, ಹೊಡೆದಾಟ, ಕಲ್ಲು ತೂರಾಟದಿಂದ ಐವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವಂತಹ ಘಟನೆ ಜಿಲ್ಲೆ ಗಂಗಾವತಿ ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ನಡೆದಿದೆ. ಪೊಲೀಸರ ಬಂಧನ ಭೀತಿಯಿಂದ ಹಲ್ಲೆಕೋರರು ಗ್ರಾಮ ತೊರೆದಿದ್ದಾರೆ. ಗಂಗಾವತಿ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬೈಕ್​ಗೆ ಲಾರಿ ಡಿಕ್ಕಿ: ಬೈಕ್​ ಸವಾರು ಸಾವು

ಬೆಂಗಳೂರು: ಬೈಕ್​ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾದಂತಹ ದುರ್ಘಟನೆ ಕೆಂಗೇರಿ ಬಳಿಯ ನೈಸ್ ರೋಡ್​ನಲ್ಲಿ ಸಂಭವಿಸಿದೆ. ರಾಮನಗರ ಮೂಲದ ಶಿವರಾಜ್ (40) ಸಾವನ್ನಪ್ಪಿದ ಬೈಕ್ ಸವಾರ. ವೃತ್ತಿಯಲ್ಲಿ ಅಡುಗೆ ಭಟ್ಟರಾಗಿ ಕೆಲಸ ಮಾಡುತ್ತಿದ್ದರು. ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಕುಡಿದ ಮತ್ತಿನಲ್ಲಿ ಬೈಕ್​ಗೆ ಬೆಂಕಿ ಹಚ್ಚಿದ ಯುವಕ

ವಿಜಯಪುರ: ಕುಡಿದ ಮತ್ತಿನಲ್ಲಿ ಬೈಕ್​ಗೆ ಯುವಕ ಬೆಂಕಿ ಹಚ್ಚಿರುವಂತಹ ಘಟನೆ ಜಿಲ್ಲೆಯ ತಿಕೋಟಾ ತಾಲೂಕಿನ ದಂದರಗಿ ಗ್ರಾಮದ ಬಳಿ ನಡೆದಿದೆ. ಮಲಕಾರಿಸಿದ್ದ ಕರಾಂಡೆ ಎಂಬ ಯುವಕನಿಂದ ಕೃತ್ಯ ಎಸಗಲಾಗಿದೆ. ಮಧ್ಯ‌ ಸೇವಿಸಿದ ಮತ್ತಿನಲ್ಲಿ ತನ್ನದೇ ಬೈಕ್​ಗೆ ಬೆಂಕಿ ಹಚ್ಚಿದ್ದಾನೆಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಬೈಕ್​ಗೆ ಬೆಂಕಿ ಹಚ್ಚಿ ಮಲಕಾರಿಸಿದ್ದ ಕಾರಂಡೆ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಮೂಲತಃ ಚಡಚಣ ತಾಲೂಕಿನ ಇಂಚಗೇರಿ ಗ್ರಾಮದ ಮಲಕಾರಿಸಿದ್ದ, ಮನೆಯಲ್ಲಿ ಜಗಳವಾಡಿದ ಸಿಟ್ಟಲ್ಲಿ ಬೈಕ್​ಗೆ ಬೆಂಕಿ ಹಚ್ಚಿರೋ ಮಾಹಿತಿ ಇದೆ. ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.