ಬೆಂಗಳೂರು: ಪ್ರೇಮ ವೈಫಲ್ಯಕ್ಕೆ ಬೇಸತ್ತ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿವಾಳ ಠಾಣಾ ವ್ಯಾಪ್ತಿಯ ಮಾರುತಿ ನಗರದಲ್ಲಿ ನಡೆದಿದೆ. ಮಣಿಕಂಠ ಆತ್ಮಹತ್ಯೆಗೆ ಶರಣಾದ ಯುವಕ. ಜುಲೈ 23ರಂದು ಮಣಿಕಂಠ ಆಡಿಯೋ ನೋಟ್ ಮಾಡಿಟ್ಟು ನೇಣಿಗೆ ಶರಣಾಗಿದ್ದಾನೆ. ಮಣಿಕಂಠ 6 ತಿಂಗಳಿನಿಂದ ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದನು. ಇತ್ತೀಚೆಗೆ ವೈಮನಸ್ಸು ಮೂಡಿ ಇಬ್ಬರು ದೂರವಾಗಿದ್ದರು. ಮಣಿಕಂಠ ಅಂದಿನಿಂದಲೂ ಖಿನ್ನತೆಯಿಂದಿಂದ ಬಳಲುತ್ತಿದ್ದನು.
ನಿನ್ನೆ (ಜುಲೈ 23) ರಂದು ಮಧ್ಯಾಹ್ನ ಮಲಗುವುದಾಗಿ ರೂಮಿಗೆ ಹೋಗಿ ನೇಣಿಗೆ ಶರಣಾಗಿದ್ದಾನೆ. ಮಡಿವಾಳ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
ಮತ್ತೆ ಆರಂಭವಾಯ್ತು ಮೊಬೈಲ್ ಸ್ನ್ಯಾಚರ್ಸ್ ಕಾಟ
ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಮೊಬೈಲ್ ಸ್ನ್ಯಾಚರ್ಸ್ ಕಾಟ ಆರಂಭವಾಗಿದೆ. ಜೋಶುವಾ ಸುಂದರ್ ಎಂಬುವವರು ಮೊಬೈಲ್ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದರು. ಈ ವೇಳೆ ಇಬ್ಬರು ಕಿಡಿಗೇಡಿಗಳು ಬೈಕ್ನಲ್ಲಿ ಬಂದು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಷುಲ್ಲಕ ವಿಚಾರಕ್ಕೆ ಚಿಕ್ಕಮ್ಮನ ಮಗನಿಗೆ ಚೂರಿ ಇರಿದು ಕೊಲೆ
ದಾವಣಗೆರೆ: ಗಾಂಜಾ ಸಲ್ಯೂಶನ್ ನಶೆಯಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ದಾವಣಗೆರೆಯ ಡಾಂಘೇ ಪಾರ್ಕ್ ಬಳಿ ನಡೆದಿದೆ. ಸೌಖತ್ ಅಲಿ ಮೃತ ದುರ್ದೈವಿ. ಜಮೀರ್ ಪಾಷ ಕೊಲೆ ಮಾಡಿದ ಆರೋಪಿಯಾಗಿದ್ದು, ಕ್ಷುಲ್ಲಕ ವಿಚಾರಕ್ಕೆ ಕಿರಿಕ್ ತೆಗೆದು ಸ್ವಂತ ಚಿಕ್ಕಮ್ಮನ ಮಗನಿಗೆ ಚೂರಿ ಇರಿದು ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಕೆ.ಟಿ.ಜೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎಸ್‌ಟಿಪಿ ಹೊಂಡಕ್ಕೆ ಆಕಸ್ಮಿಕವಾಗಿ ಬಿದ್ದು ವಿದ್ಯಾರ್ಥಿ ಸಾವು
ಬೆಂಗಳೂರು: ಆಕಸ್ಮಿಕವಾಗಿ ಎಸ್‌ಟಿಪಿ ಹೊಂಡಕ್ಕೆ ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಆನೇಕಲ್‌ನಲ್ಲಿರುವ ಸೂರ್ಯಸಿಟಿ 2ನೇ ಹಂತದ ದ್ವಾರಕಾನಾಥ್ ಲೇಔಟ್‌ನಲ್ಲಿ ನಡೆದಿದೆ. ವರುಣ್ ಕುಮಾರ್(18) ಸಾವನ್ನಪ್ಪಿದ್ದು, ಮತ್ತೊಬ್ಬ ವಿದ್ಯಾರ್ಥಿ ಪಾರಾಗಿದ್ದಾನೆ.
ವರುಣ್ ಕುಮಾರ್ ಆನೇಕಲ್‌ನ ಅಕ್ಷರ ಫೌಂಡೇಷನ್‌ನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದನು. ವಿದ್ಯಾರ್ಥಿ ಈಜುಕೊಳ ಎಂದು ಭಾವಿಸಿ ಪ್ಲಾಂಟ್‌ಗೆ ಇಳಿದಿದ್ದನು. ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 8:24 pm, Sun, 24 July 22