ಹೊಸ ವರ್ಷಾಚರಣೆಗೆ ತಾಯಿ, ತಂಗಿಯರನ್ನು ಹೋಟೆಲ್​ಗೆ ಕರೆದುಕೊಂಡು ಹೋಗಿ ಕೊಂದ ಯುವಕ

|

Updated on: Jan 01, 2025 | 5:16 PM

ಲಕ್ನೋದಲ್ಲಿ ಹೊಸ ವರ್ಷದ ರಾತ್ರಿಯೇ ಆಘಾತಕಾರಿ ಘಟನೆಯೊಂದು ನಡೆದಿದೆ. ಹೊಸ ವರ್ಷವನ್ನು ಆಚರಿಸಲು ತನ್ನ ತಾಯಿ ಹಾಗೂ ನಾಲ್ವರು ತಂಗಿಯರನ್ನು ಹೋಟೆಲ್​ಗೆ ಕರೆದುಕೊಂಡು ಹೋಗಿದ್ದ ಯುವಕ ಅಲ್ಲಿ ಅವರೆಲ್ಲರನ್ನೂ ಕೊಲೆ ಮಾಡಿದ್ದಾನೆ. ನಂತರ ತಾನೇ ಪೊಲೀಸರಿಗೆ ಫೋನ್ ಮಾಡಿ ಈ ರೀತಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಅಷ್ಟಕ್ಕೂ ಆತ ಕೊಲೆ ಮಾಡಿದ್ದೇಕೆ? ಅವನ ಪ್ಲಾನ್ ಏನು? ಎಂಬಿತ್ಯಾದಿ ವಿಷಯಗಳ ಬಗ್ಗೆ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಹೊಸ ವರ್ಷಾಚರಣೆಗೆ ತಾಯಿ, ತಂಗಿಯರನ್ನು ಹೋಟೆಲ್​ಗೆ ಕರೆದುಕೊಂಡು ಹೋಗಿ ಕೊಂದ ಯುವಕ
Lucknow Murder
Follow us on

ಲಕ್ನೋ: ಹೊಸ ವರ್ಷ ಎಲ್ಲರ ಜೀವನದಲ್ಲೂ ಸಂತಸ ಉಂಟುಮಾಡಬೇಕು. ಆದರೆ, ಆಗ್ರಾ ಮೂಲದ ಮನೆಯಲ್ಲಿ ಇಂದು ಸೂತಕ ಆವರಿಸಿದೆ. ನಿನ್ನೆ ರಾತ್ರಿ ಹೊಸ ವರ್ಷಾಚರಣೆಗೆ ತನ್ನ ತಾಯಿ ಮತ್ತು ನಾಲ್ವರು ತಂಗಿಯರನ್ನು ಹೋಟೆಲ್​ಗೆ ಯುವಕನೊಬ್ಬ ಕರೆದುಕೊಂಡು ಹೋಗಿದ್ದ. ಅವರೆಲ್ಲರೂ ಫ್ಯಾಮಿಲಿ ಒಟ್ಟಿಗೇ ಹೊಸ ವರ್ಷವನ್ನು ಆಚರಿಸಿ ಸಂಭ್ರಮಿಸುವ ಖುಷಿಯಲ್ಲಿದ್ದರು. ಆದರೆ, ಯಾರೂ ಊಹಿಸದ ರೀತಿ ಆ ಯುವಕ ತನ್ನ ಮನೆಯವರನ್ನೆಲ್ಲ ಹೋಟೆಲ್ ರೂಂನಲ್ಲೇ ಕೊಲೆ ಮಾಡಿದ್ದಾನೆ.

ಪೋಲೀಸರ ಪ್ರಕಾರ, 24 ವರ್ಷದ ಅರ್ಷದ್ ಆಗ್ರಾ ಮೂಲದವನಾಗಿದ್ದು, ಕೌಟುಂಬಿಕ ಕಲಹದ ಕಾರಣದಿಂದ ಈ ರೀತಿ ತಾಯಿ, ತಂಗಿಯರನ್ನು ಕೊಲೆ ಮಾಡಿರುವುದಾಗಿ ಪ್ರಾಥಮಿಕ ವಿಚಾರಣೆಯ ವೇಳೆ ತಿಳಿದುಬಂದಿದೆ. ಮೃತರನ್ನು ಅರ್ಷದ್‌ನ ತಾಯಿ ಅಸ್ಮಾ, ತಂಗಿಯರಾದ ಅಲಿಯಾ (9), ಅಲ್ಶಿಯಾ (19), ಅಕ್ಸಾ (16) ಮತ್ತು ರಹಮೀನ್ (18) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಅತ್ಯಾಚಾರ ವಿರೋಧಿಸಿದ್ದಕ್ಕೆ 8ರ ಬಾಲೆಯನ್ನು ಕೊಲೆ ಮಾಡಿದ್ದ ಆರೋಪಿಗೆ ಗುಂಡೇಟು

ಲಕ್ನೋದ ನಾಕಾ ಪ್ರದೇಶದ ಹೋಟೆಲ್ ಶರಣಜಿತ್‌ನಲ್ಲಿ ಈ ಘಟನೆ ನಡೆದಿದೆ. ಅರ್ಷದ್ ತನ್ನ ಕುಟುಂಬದವರಿಗೆ ರಾತ್ರಿ ಊಟ ಮತ್ತು ತಂಪು ಪಾನೀಯದಲ್ಲಿ ಮದ್ಯವನ್ನು ಬೆರೆಸಿದ್ದ. ಅದಾಗಿ ಕೆಲವು ಗಂಟೆಗಳ ನಂತರ ಅಮಲಿನಲ್ಲಿದ್ದ ಅವರನ್ನು ಆತ ಕೊಂದಿದ್ದಾನೆ. ಕೆಲವರನ್ನು ಕತ್ತು ಹಿಸುಕಿ ಕೊಂದಿದ್ದರೆ ಇನ್ನು ಕೆಲವರ ಕುತ್ತಿಗೆಯನ್ನು ಚಾಕುವಿನಿಂದ ಸೀಳಿ ಕೊಲೆ ಮಾಡಿದ್ದಾನೆ.

ಕೊಲೆ ಮಾಡಿದ ಬಳಿಕ ಅರ್ಷದ್ ವಿಡಿಯೋವೊಂದನ್ನು ರೆಕಾರ್ಡ್ ಮಾಡಿದ್ದು, ಅದರಲ್ಲಿ ತಾನು ಮಾಡಿದ ಕೃತ್ಯದ ಬಗ್ಗೆ ಹೇಳಿಕೊಂಡಿದ್ದಾನೆ. ಆಗ್ರಾದಲ್ಲಿನ ತಮ್ಮ ಆಸ್ತಿಯನ್ನು ನೆರೆಹೊರೆಯವರು ಕಬಳಿಸಲು ನೋಡುತ್ತಿದ್ದಾರೆ. ಹೈದರಾಬಾದ್‌ನಲ್ಲಿರುವ ತನ್ನ ಸಹೋದರಿಯರನ್ನು ಮಾರಾಟ ಮಾಡಲು ಯೋಜಿಸಿದ್ದಾರೆ. ಆದರೆ, ನನ್ನ ಮನೆಯವರು ಈ ಎಲ್ಲ ಅವಮಾನ, ಕಷ್ಟ ಎದುರಿಸುವುದು ನನಗೆ ಇಷ್ಟವಿರಲಿಲ್ಲ. ಹೀಗಾಗಿ, ಈ ಎಲ್ಲ ಸಮಸ್ಯೆಗಳಿಂದ ಮುಕ್ತರಾಗಲು ತಾನೇ ತನ್ನ ಮನೆಯವರನ್ನು ಕೊಲೆ ಮಾಡಿದ್ದೇನೆ ಎಂದು ಆತ ಹೇಳಿದ್ದಾನೆ.

ಇದನ್ನೂ ಓದಿ: ಪಾರ್ಸೆಲ್​ನಲ್ಲಿ ಶವ ಬಂದ ಪ್ರಕರಣ, ಕೊಲೆಗೆ ಕಾರಣ ಬಹಿರಂಗ, ಆರೋಪಿಯ ಬಂಧನ

ಆಗ್ರಾ ಮೂಲದ ಕುಟುಂಬ ಡಿಸೆಂಬರ್ 30ರಿಂದ ಹೋಟೆಲ್‌ನಲ್ಲಿ ಉಳಿದುಕೊಂಡಿತ್ತು ಮತ್ತು ಹೊಸ ವರ್ಷವನ್ನು ಆಚರಿಸಲು ಉತ್ತರ ಪ್ರದೇಶ ರಾಜಧಾನಿ ಲಕ್ನೋಗೆ ಭೇಟಿ ನೀಡಿದ್ದರು ಎಂದು ವರದಿಯಾಗಿದೆ. ಈಗಾಗಲೇ ಆಗ್ರಾದ ನಿವಾಸಿ ಅರ್ಷದ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಹೋಟೆಲ್ ಶರಣ್ ಜೀತ್‌ನ ಕೋಣೆಯಲ್ಲಿ 5 ಜನರ ಶವಗಳು ಪತ್ತೆಯಾಗಿವೆ. ಬಂಧನಕ್ಕೊಳಗಾಗಿರುವ ಅರ್ಷದ್ ಕೊಲೆಗೆ ಬಳಸಿದ್ದ ಚಾಕು ಮತ್ತು ಸ್ಕಾರ್ಫ್ ಅನ್ನು ಪೊಲೀಸರಿಗೆ ನೀಡಿದ್ದಾನೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ