ದೆವಾಸ್: ವಿವಾಹಿತೆಯಾಗಿರುವ ಮಹಿಳೆಯೊಬ್ಬರು ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಬಂಧವಿರಿಸಿಕೊಂಡಿದ್ದಾರೆ ಎಂದು ಆರೋಪಿಸಿ 32ರ ಹರೆಯದ ಬುಡಕಟ್ಟು ಮಹಿಳೆ ಮೇಲೆ ಹಲ್ಲೆ ನಡೆಸಿ ಸಾರ್ವಜನಿವಾಗಿ ಮೆರವಣಿಗೆ ಮಾಡಲಾಗಿದೆ. ಮಹಿಳೆಯ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral) ಆಗಿದೆ. ಈ ಪ್ರಕರಣದಲ್ಲಿ ಮಧ್ಯ ಪ್ರದೇಶ (Madhya Pradesh) ಪೊಲೀಸರು 12 ಮಂದಿಯನ್ನು ಬಂಧಿಸಿದ್ದಾರೆ. ವಿಡಿಯೊದಲ್ಲಿ ಮಹಿಳೆ ವೇಳೆ ಹಲವಾರು ಪುರುಷರು ಹಲ್ಲೆ ನಡೆಸಿ ಆನಂತರ ಆಕೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ನಡೆಸಿದ್ದಾರೆ. ಆಕೆಯ ಪತಿ ಆಕೆಯ ಕೂದಲು ಹಿಡಿದೆಳೆಯುತ್ತಿರುವುದು,ಆಕೆಯ ಮೇಲೆ ಒದೆಯುತ್ತಿರುವುದು ವಿಡಿಯೊದಲ್ಲಿದೆ. ಹಿರಿಯ ಮಹಿಳೆ ಮತ್ತು ಮತ್ತೊಬ್ಬ ಹಿರಿಯ ವ್ಯಕ್ತಿ ಮಹಿಳೆಯನ್ನು ರಕ್ಷಿಸಲು ಹೆಣಗಾಡುತ್ತಿದ್ದರೆ ಇನ್ನುಳಿದವರು ಆಕೆಯ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಕ್ಯಾಮೆರಾದಲ್ಲಿ ಸೆರೆ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಇಲ್ಲಿನ ದೇವಾಸ್ ಜಿಲ್ಲೆಯ ಬೊರ್ಪದವ್ ಗ್ರಾಮದಲ್ಲಿ ಬುಡಕಟ್ಟುಜನಾಂಗದ ಮಹಿಳೆಯ ಮೇಲೆ ಭಾನುವಾರ ಈ ದೌರ್ಜನ್ಯ ನಡೆದಿದೆ. ಆಕೆಯ ಬಟ್ಟೆಯನ್ನು ಹರಿದು ಬೆಲ್ಟ್ನಿಂದ ಆಕೆಯ ಮೇಲೆ ಹಲವರು ಹಲ್ಲೆ ನಡೆಸಿದ್ದಾರೆ.
26ರ ಹರೆಯದ ವ್ಯಕ್ತಿಯೊಂದಿಗೆ ಮೂರು ಮಕ್ಕಳ ತಾಯಿಯಾಗಿರುವ ಆಕೆ ಸಂಬಂಧ ಹೊಂದಿದ್ದಕ್ಕೆ ಗ್ರಾಮದ ಜನರು ಥಳಿಸಿದ್ದಾರೆ. ಮಹಿಳೆ ಮೇಲೆ ಹಲ್ಲೆ ನಡೆಯುತ್ತಿರುವಾಗ ಆಕೆಯ ಇಬ್ಬರು ಹೆಣ್ಮಕ್ಕಳು ಮತ್ತು ಮಗ ಅಲ್ಲೇ ಇದ್ದರು.
ಮಹಿಳೆ ನಾಪತ್ತೆಯಾಗಿದ್ದಾಳೆ ಎಂದು ಆಕೆಯ ಪತಿ ದೂರು ನೀಡಿದ್ದ. ನಂತಚರ ಆಕೆ ಅದೇ ಗ್ರಾಮದಲ್ಲಿರುವ ಆಕೆ ಪ್ರಿಯಕರನ ಮನೆಯಲ್ಲಿ ಪತ್ತೆಯಾಗಿದ್ದಳು. ಮಹಿಳೆಯ ಬೆನ್ನ ಮೇಲೆ ಆಕೆಯ ಪತಿಯನ್ನು ಕೂರಿಸಿ ಮೆರವಣಿಗೆ ನಡೆಸಿದ್ದು, ಆಕೆ ಅಳುತ್ತಾ ಹೆಜ್ಜೆ ಇಡುತ್ತಿದ್ದರು ಅಲ್ಲಿನ ಜನರು ಕೇಕೆ ಹಾಕಿ ನಗುತ್ತಿರುವುದು ವಿಡಿಯೊದಲ್ಲಿದೆ. ಗ್ರಾಮಸ್ಥರು ಇಡೀ ಕೃತ್ಯವನ್ನು ಚಿತ್ರೀಕರಿಸಿದ್ದಾರೆ.
ಸ್ಥಳೀಯ ಪೊಲೀಸ್ ಸಿಬ್ಬಂದಿ ಶ್ರವಣ್ ಕುಮಾರ್ ಡಯಲ್-100 ತುರ್ತು ಸ್ಪಂದನ ಸೇವೆಯಲ್ಲಿ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿ ಇಬ್ಬರನ್ನು ರಕ್ಷಿಸಿ ಪೊಲೀಸ್ ವಾಹನದಲ್ಲಿ ಸುರಕ್ಷಿತವಾಗಿ ಕರೆದೊಯ್ದರು.
“ಮಹಿಳೆಯೊಂದಿಗೆ ಹಲ್ಲೆಗೊಳಗಾದ ವ್ಯಕ್ತಿಯ ದೂರಿನ ಮೇರೆಗೆ 12 ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮಹಿಳೆಯ ಪತಿ ಸೇರಿದಂತೆ ಎಲ್ಲಾ 12 ಆರೋಪಿಗಳನ್ನು ಬಂಧಿಸಲಾಗಿದೆ” ಎಂದು ದೇವಾಸ್ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವದಯಾಳ್ ಸಿಂಗ್ ಹೇಳಿದ್ದಾರೆ.