ಗದಗ: ಮೊಹರಂ (Moharam) ಹಬ್ಬ ಆಚರಣೆ ವೇಳೆ ಯುವಕರಿಬ್ಬರಿಗೆ ಚಾಕು ಇರಿದ ಘಟನೆ ಗದಗ (Gadag) ತಾಲ್ಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ನಡೆದಿದೆ. ದಾದಾಪೀರ್ ಹೊಸಮನಿ 23, ಮುಸ್ತಾಕ್ ಹೊಸಮನಿ 24 ಎಂಬುವರಿಗೆ ಚಾಕೂ ಇರಿಯಲಾಗಿದೆ. ಓರ್ವನ ಸ್ಥಿತಿ ಗಂಭೀರವಾಗಿದ್ದು, ಇನ್ನೊಬ್ಬರಿಗೆ ಗಾಯವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೋಹರಂ ಹಬ್ಬ ಆಚರಣೆ ವೇಳೆ ಕಾಲು ತುಳಿದಿದ್ದಕ್ಕೆ ಗುಂಪಿನಿಂದ ಚಾಕೂ ಇರಿಯಲಾಗಿದೆ ಎಂದು ಆರೋಪಿಸಲಾಗಿದೆ. RSS ಕಾರ್ಯಕರ್ತ ಸೋಮು ಗುಡಿ ಎಂಬಾತ ಸೇರಿ ಹಲವರಿಂದ ಚಾಕೂ ಇರಿಯಲಾಗಿದೆ ಎಂದು ಆರೋಪಿಸಲಾಗಿದೆ.
ಎಸ್ಪಿ ದೇವರಾಜು, ಡಿವೈಎಸ್ಪಿ ಶಿವಾನಂದ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳು ದಾದಾಪೀರ್ನನ್ನು ವೈದ್ಯರು ಶಸ್ತ್ರಚಿಕಿತ್ಸೆಗೆ ಕರೆದ್ಯೊಯ್ದಿದ್ದಾರೆ. ಪ್ರಕರಣ ಸಂಬಂಧ ಸೋಮು, ಯಲ್ಲಪ್ಪ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಮಲ್ಲಸಮುದ್ರ ಗ್ರಾಮದಲ್ಲಿ ಗದಗ ಎಸ್ಪಿ ಶಿವಪ್ರಕಾಶ್ ಹೇಳಿದ್ದಾರೆ.
ಓರ್ವನ ಸ್ಥಿತಿ ಗಂಭೀರವಾಗಿದ್ದು, ಆತನ ಉಳಿಸಿಕೊಳ್ಳಲು ಪ್ರಯತ್ನ ವೈದ್ಯರು ನಡೆಸಿದ್ದಾರೆ. ಮಲ್ಲಸಮುದ್ರ ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಟೈಟ್ ಸೆಕ್ಯೂರಿಟಿ ಮಾಡಲಾಗಿದೆ. ಎರಡು ಡಿಆರ್ ತುಕಡಿ ಹಾಗೂ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ರಿಯಲ್ ಎಸ್ಟೇಟ್ ಉದ್ಯಮಿ ಕೊಲೆಗೆ ರೋಚಕ ಟ್ವಿಸ್ಟ್
ಮೈಸೂರು: ಮನೆಗೆ ನುಗ್ಗಿ ರಿಯಲ್ ಎಸ್ಟೇಟ್ ಹಾಗೂ ಅಗರಬತ್ತಿ ವ್ಯಾಪಾರಿಯ ಹತ್ಯೆ ನಡೆಸಿದ ಪ್ರಕರಣ ಇದೀಗ ತಿರುವು ಪಡೆದುಕೊಂಡಿದ್ದು, ಹೆಚ್ಚಿನ ವಿಚಾರಣೆ ವೇಳೆ ಮಗನೇ ತಂದೆಯನ್ನು ಕೊಲೆ ಮಾಡಿರುವುದು ತಿಳಿದುಬಂದಿದೆ. ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಕೊಲೆಯಾದ ಸಂಪತ್ ಕುಮಾರ್, ಪತ್ನಿ ಗಾಯತ್ರಿ ಮತ್ತು 16 ವರ್ಷದ ಮಗನಿಗೆ ನಿತ್ಯವೂ ಕಿರುಕುಳ ನೀಡುತ್ತಿದ್ದನು. ಮನೆ ಗಬ್ಬೆದ್ದು ನಾರುತ್ತಿದ್ದರೂ ಮನೆಯನ್ನು ಸ್ವಚ್ಛಗೊಳಿಸಲೂ ಬಿಡದೆ ಟಾರ್ಚರ್ ನೀಡುತ್ತಿದ್ದ ತಂದೆಯನ್ನು ರಾಡ್ನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವುದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ.
ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಸಂಪತ್ ಕುಮಾರ್ ಸದಾ ಮನೆಯಲ್ಲೇ ಇರುತ್ತಿದ್ದನು. ಇಷ್ಟಕ್ಕೂ ಸುಮ್ಮನಾಗದ ಸಂಪತ್ ನಿತ್ಯವೂ ಪತ್ನಿ, ಮಗನನ್ನು ಹೊಡೆಯುವುದು, ಬಡಿಯುವುದು, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದನು. ಮನೆ ಗಬ್ಬೆದ್ದು ನಾರುತ್ತಿದ್ದರು ಸ್ವಚ್ಛಗೊಳಿಸಲು ಬಿಡುತ್ತಿರಲಿಲ್ಲ, ಶಿಕ್ಷಕಿಯಾಗಿರುವ ಪತ್ನಿಯನ್ನು ಸರಿಯಾಗಿ ಕೆಲಸಕ್ಕೆ ಹೋಗಲೂ ಬಿಡುತ್ತಿರಲಿಲ್ಲ, ಮಗನಿಗೆ ಓದಲೂ ಬಿಡುತ್ತಿರಲಿಲ್ಲ. ಇದೇ ಕಾರಣಕ್ಕೆ ರೊಚ್ಚಿಗೆದ್ದ ಮಗ, ತಾಯಿ ಕೆಲಸಕ್ಕೆ ಹೋಗಿದ್ದ ವೇಳೆ ತಂದೆಯನ್ನು ರಾಡ್ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಬಳಿಕ ದುಷ್ಕರ್ಮಿಯೊಬ್ಬ ಮನೆಗೆ ನುಗ್ಗಿ ಕೊಂದಿರುವುದಾಗಿ ಕಥೆ ಕಟ್ಟಿದ್ದನು. ಮಗನನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಈ ಎಲ್ಲಾ ಸತ್ಯ ಸಂಗತಿಗಳು ಹೊರಬಿದ್ದಿದೆ.
ಇಎಂಐ ಹಣ ಕಲೆಕ್ಟ್ ಮಾಡಿ ಬ್ಯಾಂಕ್‌ಗೆ ಪಾವತಿಸದ ಆರೋಪ; ಬ್ಯಾಂಕ್ ಸಿಬ್ಬಂದಿ ವಿರುದ್ಧ ದೂರು ದಾಖಲು
ಬೆಂಗಳೂರು: ಇಎಂಐ ಹಣ ಕಲೆಕ್ಟ್ ಮಾಡಿ ಬ್ಯಾಂಕ್‌ಗೆ ಪಾವತಿಸದ ಆರೋಪದ ಹಿನ್ನೆಲೆ ಹಲಸೂರಿನ ಕೋಟಕ್ ಮಹೀಂದ್ರಾ ಬ್ಯಾಂಕ್ ಶಾಖೆಯ ಸಿಬ್ಬಂದಿ ಗುರುಮೂರ್ತಿ ವಿರುದ್ಧ ಬ್ಯಾಂಕ್ನ ಡೆಪ್ಯುಟಿ ಮ್ಯಾನೇಜರ್ ರವಿಕುಮಾರ್ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕನಕಪುರ ಮೂಲದ ಗುರುಮೂರ್ತಿ ಹಲಸೂರಿನ ಕೋಟಕ್ ಮಹೀಂದ್ರಾ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದನು. ಈತನು 2019 ರಿಂದ ಬ್ಯಾಂಕ್ ನಲ್ಲಿ ಗ್ರಾಹಕರಿಂದ EMI ಕಲೆಕ್ಟ್ ಮಾಡುವ ಕೆಲಸ ಮಾಡುತ್ತಿದ್ದನು. ಆದರೆ ಗುರುಮೂರ್ತಿ 26 ಮಂದಿ ಗ್ರಾಹಕರಿಂದ ಸಂಗ್ರಹಿಸಿದ್ದ 10 ಲಕ್ಷಕ್ಕೂ ಹೆಚ್ಚು EMI ಹಣವನ್ನು ಬ್ಯಾಂಕ್‌ಗೆ ಪಾವತಿಸರಿಲ್ಲ.
ಈ ಸಂಬಂಧ ಹಲವು ಗ್ರಾಹಕರು ಕೋಟಕ್ ಮಹೀಂದ್ರಾ ಬ್ಯಾಂಕ್ ಮ್ಯಾನೇಜರ್ ಗೆ ದೂರು ನೀಡಿದ್ದರು. ಸದ್ಯ ಬ್ಯಾಂಕ್ ಸಿಬ್ಬಂದಿ ಗುರುಮೂರ್ತಿ ಪೋನ್ ಕಾಲ್ ರಿಸೀವ್ ಮಾಡದೇ ಹಣದ ಜೊತೆ ಪರಾರಿಯಾಗಿದ್ದಾನೆ. ಡೆಪ್ಯುಟಿ ಮ್ಯಾನೇಜರ್ ರವಿಕುಮಾರ್ ದೂರಿನನ್ವಯ ಹಲಸೂರು ಪೊಲೀಸ್ ಠಾಣೆಯಲ್ಲಿ ಆರೋಪಿ ಗುರುಮೂರ್ತಿ ವಿರುದ್ಧ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:17 pm, Tue, 9 August 22