ತನ್ನ ಬದಲು ಬೇರೆಯೊಬ್ಬನನ್ನು ಪರೀಕ್ಷೆ ಬರೆಯಲು ಕಳಸಿದ ‘ಮನೋಹರ್ ಭಾಯಿ ಎಮ್ಬಿಬಿಎಸ್’ ಪೊಲೀಸರಿಗೆ ಸಿಕ್ಕಿಬಿದ್ದ!
ಕೇಂದ್ರದ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್ಬಿಇ) ಹೆಸರಿನ ಸ್ತಾಯತ್ತ ಸಂಸ್ಥೆ ನಡೆಸುವ ವಿದೇಶಿ ವೈದ್ಯಕೀಯ ಪದವೀಧರರ ಪರೀಕ್ಷೆಗೆ (ಎಫ್ಎಮ್ಜಿಇ) ಮನೋಹರ್ ಸಿಂಗ್ ತನ್ನ ಹೆಸರು ನೋಂದಾಯಿಸಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.
ನವದೆಹಲಿ: ತಜಿಕಿಸ್ತಾನಲ್ಲಿ ಎಮ್ಬಿಬಿಎಸ್ ಪದವಿ ಪಡೆದು ಭಾರತದಲ್ಲಿ ವೈದ್ಯಕೀಯ ವೃತ್ತಿ ಪ್ರಾರಂಭಿಸಲು ಅವಶ್ಯವಾಗಿರುವ ಪರೀಕ್ಷೆಯೊಂದನ್ನು ಬರೆಯಲು ತನ್ನ ಬದಲಿಗೆ ಬೇರೊಬ್ಬ ವ್ಯಕ್ತಿಯನ್ನು ಪರೀಕ್ಷಾ ಕೇಂದ್ರಕ್ಕೆ ಕಳಿಸಿದ 35 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಬಂಧಿತ ವ್ಯಕ್ತಿಯನ್ನು ಮನೋಹರ್ ಸಿಂಗ್ ಎಂದು ಗುರುತಿಸಲಾಗಿದೆ ಮತ್ತು ಈತ ಮನೋಹರ್ ರಾಜಸ್ತಾನ ಪಾಲಿ ಜಿಲ್ಲೆಯ ನಿವಾಸಿಯಾಗಿದ್ದಾನೆ.
ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್ಬಿಇ) ಹೆಸರಿನ ಸ್ತಾಯತ್ತ ಸಂಸ್ಥೆ ನಡೆಸುವ ವಿದೇಶಿ ವೈದ್ಯಕೀಯ ಪದವೀಧರರ ಪರೀಕ್ಷೆಗೆ (ಎಫ್ಎಮ್ಜಿಇ) ಮನೋಹರ್ ಸಿಂಗ್ ತನ್ನ ಹೆಸರು ನೋಂದಾಯಿಸಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.
ವಿದೇಶಗಳಲ್ಲಿ ಪ್ರಾಥಮಿಕ ವೈದ್ಯಕೀಯ ವಿಜ್ಞಾನದಲ್ಲಿ ಪದವಿ ಪಡೆಯುವ ಭಾರತೀಯ ಇಲ್ಲವೇ ಭಾರತೀಯ ಮೂಲದ ವಿದೇಶೀ ವಿದ್ಯಾರ್ಥಿಗಳಿಗೆ ಈ ಪರೀಕ್ಷೆಯಲ್ಲಿ ಪಾಸಾದರೆ ಮಾತ್ರ ಭಾರತದಲ್ಲಿ ವೃತ್ತಿ ಆರಂಭಿಸಲು ಪರವಾನಗಿ ದೊರೆಯುತ್ತದೆ.
ಎಫ್ಎಮ್ಜಿಇ ಡಿಸೆಂಬರ್ 4, 2020ರಂದು ನಡೆಸಿದ ಸ್ಕ್ರೀನಿಂಗ್ ಟೆಸ್ಟ್ಗೆ ಹಾಜರಾದ ಮನೋಹರ್ ಸಿಂಗ್ಗೆ ಮಥರಾ ರಸ್ತೆಯಲ್ಲಿರುವ ಪರೀಕ್ಷಾ ಕೇಂದ್ರವನ್ನು ನಿಗದಿಗೊಳಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ಹೇಳಿವೆ.
ಮನೋಹರ್ ತನ್ನ ಅರ್ಜಿಗೆ ಲಗತ್ತಿಸಿದ ಫೋಟೋ ಮತ್ತು ಪರೀಕ್ಷಾ ದಿನದಂದು ತೆಗೆದ ಫೋಟೋಗಳಲ್ಲಿ ಸಾಮ್ಯತೆ ಕಾಣದೆ ಹೋಗಿದ್ದರಿಂದ ಅವನ ಫಲಿತಾಂಶವನ್ನು ತಡೆಹಿಡಿಯಲಾಗಿತ್ತು. ಮುಖದ ಗುರುತನ್ನು ಪರೀಶೀಲಿಸಲು ಮನೋಹರ್ನನ್ನು ಫೆಬ್ರುವರಿ 3 ರಂದು ಮಂಡಳಿ ಎದುರು ಹಾಜರಾಗುವಂತೆ ತಿಳಿಸಲಾಗಿತ್ತು, ಆದರೆ ಆರೋಪಿಯು ಅಂದು ಹಾಜರಾಗಲಿಲ್ಲ.
‘ಬುಧವಾರದಂದು ಮನೋಹರ್ ಸಿಂಗ್ ಮುಖದ ಗುರುತು ಪರಶೀಲನೆಗೆ ಎನ್ಬಿಇ ಕಚೇರಿಯಲ್ಲಿ ಹಾಜರಾಗಿದ್ದ. ಅಧಿಕಾರಿಗಳ ಗುಪೊಂದು ಅವನ ಅರ್ಜಿ ಮೇಲಿನ ಫೋಟೋ ಮತ್ತು ಅವನ ಮುಖಕ್ಕೆ ತಾಳೆ ಮಾಡಿ ನೋಡಿದಾಗ ಎರಡರಲ್ಲಿ ಸಾಮ್ಯತೆ ಕಂಡಿಲ್ಲ,’ ಎಂದು ದೆಹಲಿ ಆಗ್ನೇಯ ವಿಭಾಗದ ಡಿಸಿಪಿ ಅರ್ ಪಿ ಮೀನಾ ಹೇಳಿದರು.
ಅದಾದ ಮೇಲೆ ಅವನಿಗೆ ಪರೀಕ್ಷೆಯಲ್ಲಿ ಕೇಳಲಾದ ಒಂದು ಪ್ರಶ್ನೆಗೆ ಉತ್ತರಿಸುವಂತೆ ಹೇಳಲಾಯಿತು. ಆದರೆ ಅವನಿಂದ ಸರಿಯುತ್ತರ ಬರಲಿಲ್ಲ. ಅವನ ಮೇಲೆ ಅನುಮಾನ ಹೆಚ್ಚಾಗಿ ಪೊಲೀಸ್ ಸ್ಟೇಷನ್ಗೆ ಕರೆದೊಯ್ಯಲಾಯಿತು ಎಂದು ಡಿಸಿಪಿ ಹೇಳಿದರು.
ನಂತರ ಮನೋಹರ್ ಸಿಂಗ್ನನ್ನು ಬಂಧಿಸಿ ಅವನ ಪ್ರವೇಶ ಕಾರ್ಡ್, ಎಮ್ಬಿಬಿಎಸ್ ಪದವಿ ಪ್ರಮಾಣ ಪತ್ರ ಮತ್ತು ಅರ್ಜಿಯನ್ನು ವಶಕ್ಕೆ ಪಡೆಯಲಾಯಿತು ಎಂದು ಮೀನಾ ಹೇಳಿದರು.
ಪೊಲೀಸ್ ವಿಚಾರಣೆಯಲ್ಲಿ ಆರೋಪಿಯು ತಾನು ತಜಿಕಿಸ್ತಾನನಲ್ಲಿ ಎಮ್ಬಿಬಿಎಸ್ ಪದವಿ ಪಡೆದಿರುವುದಾಗಿ ಹೇಳಿದ್ದು ಕಳೆದ 6 ವರ್ಷಗಳಿಂದ ಎಫ್ಎಮ್ಜಿಇ ಪರೀಕ್ಷೆ ಪಾಸು ಮಾಡಲು ಪ್ರಯತ್ನಿಸುತ್ತಿದ್ದನಂತೆ, ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲೇ ಅವನು ಒಬ್ಬ ಡಾಕ್ಟರ್ನನ್ನು ಭೇಟಿಯಾದಾಗ ಅವನು ಪರೀಕ್ಷೆ ತಾನು ಬರೆದು ಪಾಸು ಮಾಡುವುದಾಗಿ ಹೇಳಿದ್ದಾನೆ. ಈ ಕೆಲಸಕ್ಕಾಗಿ ಅವನು ಮನೋಹರ್ನಿಂದ ರೂ. 4 ಲಕ್ಷ ‘ಫೀಸು’ ಪಡೆದಿದ್ದಾನೆ. ಸದರಿ ಡಾಕ್ಟರ್ ಡಿಸೆಂಬರ್ 20ರಂದು ಮನೋಹರ್ ಬದಲು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಪರೀಕ್ಷೆ ಬರೆದಿದ್ದಾನೆ ಎಂದು ಮೀನಾ ಹೇಳಿದರು.
ಇದನ್ನೂ ಓದಿ: ದಾವೂದ್ ಇಬ್ರಾಹಿಂಗೆ ವಯಸ್ಸಾಯ್ತು; ಪಾತಕಲೋಕ ಆಳುವ ‘ಡಿ’ ಕಂಪನಿಗೆ ಉತ್ತರಾಧಿಕಾರಿ ಬೇಕಂತೆ..