ಸಿಡಿ ವಿಚಾರವಾಗಿ ಸ್ವಯಂಪ್ರೇರಿತ ದೂರು ದಾಖಲು ಸಾಧ್ಯತೆ; ತಪ್ಪಿತಸ್ಥರಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ
ರಾಜಕಾರಣಿಯ ವಿರುದ್ಧ ಸಿಡಿ ಷಡ್ಯಂತ್ರ ನಡೆಯುತ್ತಿರುವ ಅನುಮಾನ ದಟ್ಟವಾಗುತ್ತಿದ್ದು, ಇದೇ ಅಂಶದ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ದೂರು ದಾಖಲಾದರೆ ಈ ಕೃತ್ಯದಲ್ಲಿ ಪಾಲ್ಗೊಂಡವರಿಗೆ ಸಂಕಷ್ಟ ನಿಶ್ಚಿತ ಎಂಬ ಮಾತುಗಳೂ ಕೇಳಿಬರುತ್ತಿವೆ.
ಬೆಂಗಳೂರು: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಎಸ್ಐಟಿ ತಂಡದ ಹಿರಿಯ ಅಧಿಕಾರಿಗಳು ನಿನ್ನೆ ನಡೆಸಿದ ಸಭೆಯಲ್ಲಿ ಪ್ರಕರಣದ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿ ಎಫ್ಐಆರ್ ಹಾಕುವ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಈ ವಿಚಾರವನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಲು ತೀರ್ಮಾನಿಸಿದ್ದು, ಎಫ್ಐಆರ್ ದಾಖಲಿಸದಿದ್ದರೆ ಸಮಗ್ರ ತನಿಖೆ ಸಾಧ್ಯವಿಲ್ಲ ಹೀಗಾಗಿ ತನಿಖೆಗೆ ಸಹಕಾರಿಯಾಗಲು ಈ ಮಾರ್ಗವನ್ನು ಅನುಸರಿಸಬೇಕೆಂದು ಅಭಿಪ್ರಾಯಪಟ್ಟಿದ್ದಾಗಿ ತಿಳಿದುಬಂದಿದೆ. ರಾಜಕಾರಣಿಯ ವಿರುದ್ಧ ಸಿಡಿ ಷಡ್ಯಂತ್ರ ನಡೆಯುತ್ತಿರುವ ಅನುಮಾನ ದಟ್ಟವಾಗುತ್ತಿದ್ದು ಇದೇ ಅಂಶದ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ದೂರು ದಾಖಲಾದರೆ ಈ ಕೃತ್ಯದಲ್ಲಿ ಪಾಲ್ಗೊಂಡವರಿಗೆ ಸಂಕಷ್ಟ ನಿಶ್ಚಿತ ಎಂಬ ಮಾತುಗಳೂ ಕೇಳಿಬರುತ್ತಿವೆ.
ಸಿಡಿ ಪ್ರಕರಣ ಕ್ಷಣಕ್ಷಣಕ್ಕೂ ತಿರುವು ಪಡೆದುಕೊಳ್ಳುತ್ತಿದ್ದು, ಪ್ರಕರಣದ ಆರೋಪಿಗಳ ಜೊತೆ ನಿರಂತರ ಸಂಪರ್ಕ ಹೊಂದಿರುವವ ವಿಚಾರಣೆ ಮಾಡಲಾಗುತ್ತಿದೆ. ಸದ್ಯ ಈಗಾಗಲೇ ವಿಚಾರಣೆ ಎದುರಿಸಿದ್ದ ಓರ್ವನ ಸಂಪರ್ಕದಲ್ಲಿರುವ ಪುಣೆಯ ಪಬ್ ಮಾಲೀಕನನ್ನ ಎಸ್ಐಟಿ ವಿಚಾರಣೆಗೆ ಒಳಪಡಿಸಿದೆ. ಬೀದರ್‌ನ ಭಾಲ್ಕಿಯಲ್ಲಿ ಈ ಸಂಬಂಧ ವಿಚಾರಣೆ ಮುಂದುವರೆದಿದೆ ಎಂದು ಮೂಲಗಳು ತಿಳಿಸಿವೆ. ಇನ್ನೊಂದೆಡೆ, ದೇವನಹಳ್ಳಿ ಬಳಿಯ ವಿಜಯಪುರದಲ್ಲಿ ಹ್ಯಾಕರ್ ಸಹೋದರನನ್ನು ವಶಕ್ಕೆ ಪಡೆದ SIT ಅಧಿಕಾರಿಗಳು, ಆತನಿಂದಲೂ ಮಾಹಿತಿ ಪಡೆಯುತ್ತಿದ್ದಾರೆ.
ಬ್ಯಾಂಕ್ ವಹಿವಾಟು, ಮೊಬೈಲ್ ಕರೆ ಸೇರಿದಂತೆ ಇಂಚಿಂಚೂ ವಿಚಾರಣೆ ಸಿಡಿ ಜಾಲದಲ್ಲಿ ಈಗಾಗಲೇ SIT ಐವರ ಮಾಹಿತಿ ಸಂಗ್ರಹಿಸಿ ತ್ವರಿತಗತಿಯಲ್ಲಿ ವಿಚಾರಣೆ ಮುಂದುವರೆಸಿದೆ. ಆ ವ್ಯಕ್ತಿಗಳು ಒಂದು ವರ್ಷದಿಂದ ನಡೆಸಿರುವ ಬ್ಯಾಂಕ್ ವಹಿವಾಟು, ಮೊಬೈಲ್ ಕರೆಗಳ ಬಗ್ಗೆಯೂ ನಿಗಾ ವಹಿಸಿರುವ ಎಸ್ಐಟಿ, ಇಂಚಿಂಚೂ ಮಾಹಿತಿ ಜಾಲಾಡುತ್ತಿದೆ. ಇತ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ಇಬ್ಬರು ಪ್ರಮುಖ ಆರೋಪಿಗಳಿಗಾಗಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಶೋಧ ಕಾರ್ಯ ಭರದಿಂದ ಸಾಗಿದೆ. ರಾಜ್ಯದಲ್ಲಿ ಬೆಂಗಳೂರು ನಗರ, ನಾಗರಬಾವಿ, ಶಂಕರಮಠ, ನವರಂಗ್, ಬೀದರ್, ವಿಜಯಪುರ, ತುಮಕೂರಿನಲ್ಲಿ ಎಸ್‌ಐಟಿಯಿಂದ ಹುಡುಕಾಟ ನಡೆಯುತ್ತಿದ್ದು ಆದಷ್ಟು ಬೇಗ ಅವರನ್ನು ಪತ್ತೆ ಹಚ್ಚುವ ವಿಶ್ವಾಸದಲ್ಲಿ ಎಸ್ಐಟಿ ಅಧಿಕಾರಿಗಳಿದ್ದಾರೆ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ: ಓರ್ವನನ್ನು ವಶಕ್ಕೆ ಪಡೆದ ಎಸ್ಐಟಿ
ನಾವು ಗಾಳಿಯಲ್ಲಿ ಗುಂಡು ಹೊಡಿಯಲ್ಲ, ಪಕ್ಕಾ ಸಾಕ್ಷ್ಯ ಇಟ್ಟುಕೊಂಡು ದೂರು ನೀಡ್ತೀವಿ: ಬಾಲಚಂದ್ರ ಜಾರಕಿಹೊಳಿ