ಮೂರು ದಶಕಗಳ ಬಳಿಕ ಮನೆಗೆ ಮರಳಿದ ಚಿತ್ರದುರ್ಗದ ವ್ಯಕ್ತಿ
ಹೊನ್ನೆಕೆರೆ ಗ್ರಾಮಕ್ಕೆ ತಿಪ್ಪೇಸ್ವಾಮಿ ಸಂಬಂಧಿ ಮೂರ್ತಿ ಎಂಬುವರು ತೆರಳಿದ್ದಾಗ ರಾಜಣ್ಣ ಎಂಬುವರ ಬಳಿ ಕುಲುಮೆ ಕೆಲಸ ಮಾಡಿಕೊಂಡಿದ್ದ ತಿಪ್ಪೇಸ್ವಾಮಿಯ (55) ಗುರುತು ಹಿಡಿದಿದ್ದಾರೆ. ಬಳಿಕ ತಿಪ್ಪೇಸ್ವಾಮಿ ಸಹೋದರರಾದ ರಾಮಾಂಜನೇಯ, ರಾಜಣ್ಣ ಮತ್ತು ಸಂಬಂಧಿಕರು ತೆರಳಿ ತಿಪ್ಪೇಸ್ವಾಮಿಯನ್ನು ಮರಳಿ ಮನೆಗೆ ಕರೆತಂದಿದ್ದಾರೆ.
ಚಿತ್ರದುರ್ಗ: ಹಲವು ಜನರು ನಾನಾ ಕಾರಣಗಳಿಂದ ಮನೆ ಬಿಟ್ಟು ಹೋಗುತ್ತಾರೆ. ಹೋದವರಲ್ಲಿ ಕೆಲವರು ವಾಪಸ್ಸು ಬರುತ್ತಾರೆ. ಇನ್ನು ಕೆಲವರನ್ನು ಎಷ್ಟೇ ಹುಡುಕಿದರು ಅವರ ಸುಳಿವು ಸಿಗುವುದಿಲ್ಲ. ಹುಡುಕಿ ಬೇಸತ್ತು ಹಣೆ ಬರಹ ಎಂದು ಸುಮ್ಮನಾಗುತ್ತಾರೆ. ಕಳೆದು ಹೋದ ನೋವಲ್ಲೇ ಜೀವನ ಪೂರ್ತಿ ಮನೆ ಮಂದಿಯೆಲ್ಲಾ ಕೊರಗುತ್ತಾರೆ. ಅದರಂತೆ ಕೋಟೆನಾಡಿ ಗ್ರಾಮದಲ್ಲೂ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದರು. ನಾಪತ್ತೆಯಾಗಿ ಸುಮಾರು ಮೂವತ್ತು ವರ್ಷಗಳ ಬಳಿಕ ಇದೀಗ ಪತ್ತೆಯಾಗಿದ್ದಾರೆ. ನಾಪತ್ತೆಯಾಗಿದ್ದ ವ್ಯಕ್ತಿಯನ್ನು ನೋಡಿ ಇಡೀ ಊರೇ ಆಶ್ಚರ್ಯಕ್ಕೊಳಗಾಗಿದೆ.
ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗಜ್ಜುಗಾನಹಳ್ಳಿ ಗ್ರಾಮದ ತಿಪ್ಪೇಸ್ವಾಮಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಆದರೆ ಎಲ್ಲವನ್ನು ಗುರುತಿಸಿ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಹೊಂದಿದ್ದರು. ಹೀಗಾಗಿ ಗ್ರಾಮದಲ್ಲೇ ಕುಲುಮೆ ಕೆಲಸ ಮಾಡಿಕೊಂಡಿದ್ದರು. ಆದರೆ ಸುಮಾರು 25 ವರ್ಷದವರಿದ್ದಾಗ ಅದೇನಾಯ್ತೋ ಗೊತ್ತಿಲ್ಲ. ಏಕಾಏಕಿ ತಿಪ್ಪೇಸ್ವಾಮಿ ಗ್ರಾಮದಿಂದ ನಾಪತ್ತೆ ಆಗಿದ್ದರಂತೆ. ಬಳಿಕ ಕುಟುಂಬಸ್ಥರು ಎಲ್ಲೆಡೆ ಹುಡುಕಾಡಿದರೂ ಪತ್ತೆ ಆಗಿರಲಿಲ್ಲ.
ಹೊಸದುರ್ಗ ತಾಲೂಕಿನ ಹೊನ್ನೆಕೆರೆ ಗ್ರಾಮಕ್ಕೆ ತಿಪ್ಪೇಸ್ವಾಮಿ ಸಂಬಂಧಿ ಮೂರ್ತಿ ಎಂಬುವರು ತೆರಳಿದ್ದಾಗ ರಾಜಣ್ಣ ಎಂಬುವರ ಬಳಿ ಕುಲುಮೆ ಕೆಲಸ ಮಾಡಿಕೊಂಡಿದ್ದ ತಿಪ್ಪೇಸ್ವಾಮಿಯ (55) ಗುರುತು ಹಿಡಿದಿದ್ದಾರೆ. ಬಳಿಕ ತಿಪ್ಪೇಸ್ವಾಮಿ ಸಹೋದರರಾದ ರಾಮಾಂಜನೇಯ, ರಾಜಣ್ಣ ಮತ್ತು ಸಂಬಂಧಿಕರು ತೆರಳಿ ತಿಪ್ಪೇಸ್ವಾಮಿಯನ್ನು ಮರಳಿ ಮನೆಗೆ ಕರೆತಂದಿದ್ದಾರೆ. ತಿಪ್ಪೇಸ್ವಾಮಿ ಮರಳಿ ಮನೆ ಸೇರಿದ ಖುಷಿಯಲ್ಲಿದ್ದರೆ, ಸಹೋದರರು ತಿಪ್ಪೇಸ್ವಾಮಿ ಮನೆಗೆ ಮರಳಿದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಹೊನ್ನೆಕೆರೆ ಗ್ರಾಮದಲ್ಲಿ ಮೂರು ದಶಕಗಳ ಕಾಲ ಕುಲುಮೆ ಕೆಲಸ ಮಾಡಿಕೊಂಡಿದ್ದ ತಿಪ್ಪೇಸ್ವಾಮಿಯನ್ನು ಆರಂಭದಲ್ಲಿ ಕಳಿಸಲು ರಾಜಣ್ಣ ಒಪ್ಪಲಿಲ್ಲ. ಬಳಿಕ ಮೂಲ ದಾಖಲೆಗಳನ್ನೆಲ್ಲ ತೋರಿಸಿ ತಹಶೀಲ್ದಾರ್, ಪೊಲೀಸರಿಗೆ ಮಾಹಿತಿ ನೀಡಿದೆವು. ಬಳಿಕ ಅಧಿಕಾರಿಗಳ ಸಮ್ಮುಖದಲ್ಲೇ ತಿಪ್ಪೇಸ್ವಾಮಿಯನ್ನು ಕರೆದುಕೊಂಡು ಬಂದಿದ್ದೇವೆ ಎಂದು ತಿಪ್ಪೇಸ್ವಾಮಿ ಸಹೋದರರು ಹೇಳಿದರು.
ಒಂದೇ ಜಿಲ್ಲೆಯಲ್ಲೇ ವಾಸವಾಗಿದ್ದರೂ ತಿಪ್ಪೇಸ್ವಾಮಿ ಮೂರು ದಶಕ ಕಾಲ ಮನೆ ಸೇರಿರಲಿಲ್ಲ. ಸದ್ಯ ತಿಪ್ಪೇಸ್ವಾಮಿಗೆ ಮರಳಿ ಮನೆ ಸೇರುವ ಭಾಗ್ಯ ಒದಗಿ ಬಂದಿದೆ. ಸಹೋದರರೂ ಪ್ರೀತಿಯಿಂದಲೇ ತಿಪ್ಪೇಸ್ವಾಮಿಯನ್ನು ಮನೆ ಸೇರಿಸಿಕೊಂಡಿದ್ದು, ಜನರ ಗಮನಸೆಳೆದಿದೆ.
ಇದನ್ನೂ ಓದಿ
ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ: ಪ್ರಾಮಾಣಿಕ ಅಭಿವ್ಯಕ್ತಿಯೇ ಸೃಜನಶೀಲತೆ: ಸ್ವಾಮಿ ಪೊನ್ನಾಚಿ