ಇಡಿ ಹೆಸರಲ್ಲಿ ವಂಚಿಸುತ್ತಿದ್ದ ವ್ಯಕ್ತಿ ಬಂಧನ: ಕಾರ್ಯಾಚರಣೆ ನಡೆಸಿದ ಸಿಇಎನ್ ತಂಡಕ್ಕೆ ಬೆಳಗಾವಿ ನಗರ ಪೊಲೀಸ್ ಆಯುಕ್ತರಿಂದ ಮೆಚ್ಚುಗೆ
ವಿಮಾ ಅವಧಿ ಮುಗಿದ ಪಾಲಿಸಿದಾರರ ಹಣವನ್ನು ಮೋಸದಿಂದ ತನ್ನ ಹಾಗೂ ಇತರರ ಖಾತೆಗೆ ಮಧುಕರ ವರ್ಗಾಯಿಸಿಕೊಂಡಿದ್ದ. ಸದ್ಯ ಪ್ರಕರಣದ ತನಿಖೆ ಕೈಗೊಂಡ ಸಿಇಎನ್ ಠಾಣೆ ಸಿಪಿಐ ಬಿ.ಆರ್.ಗಡ್ಡೇಕರ್ ನೇತೃತ್ವದ ತಂಡ ಆರೋಪಿ ಮಧುಕರ್ ಸಪಳೆಯನ್ನು ಬಂಧಿಸಿದ್ದಾರೆ.
ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿಯೇ ಕುಳಿತುಕೊಂಡು ವಂಚಕನೋರ್ವ ರಾಷ್ಟ್ರೀಯ ಬ್ಯಾಂಕ್‌ಗಳ ಮ್ಯಾನೇಜರ್ ಮತ್ತು ಗ್ರಾಹಕರನ್ನು ವಂಚಿಸಿದ್ದ ಘಟನೆ ಬೆಳಕಿಗೆ ಬಂದಿದೆ. ವಿಮೆ ಕಂಪನಿಯಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿದ್ದ ಈ ವ್ಯಕ್ತಿ ಇಡಿ ಹೆಸರಲ್ಲಿ ನೋಟೀಸ್ ಕಳುಹಿಸಿ ವಂಚಿಸುತ್ತಿದ್ದು, ಸದ್ಯ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಖಾಸಗಿ ಇನ್ಶೂರೆನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿಯನ್ನು ಬೆಳಗಾವಿಯ ಶಾಸ್ತ್ರಿ ನಗರದ ನಿವಾಸಿ ಮಧುಕರ ಸಪಳೆ ಎಂದು ಗುರುತಿಸಲಾಗಿದೆ. ಅಡ್ಡ ದಾರಿಯಲ್ಲಿ ದುಡ್ಡು ಮಾಡಬೇಕೆಂಬ ಉದ್ದೇಶ ಹೊಂದಿದ್ದ ಈತ ಲಾಕ್‌ಡೌನ್ ವೇಳೆ ಬೆಳಗಾವಿಯ 7 ಬ್ಯಾಂಕ್‌ಗಳಿಗೆ ಜಾರಿ ನಿರ್ದೇಶನಾಲಯ ಹೆಸರಲ್ಲಿ ನೋಟಿಸ್ ನೀಡಿ ತನಗಾಗದವರ ಅಕೌಂಟ್ ಫ್ರೀಜ್ ಮಾಡಿಸುತ್ತಿದ್ದ. ಇಷ್ಟೇ ಅಲ್ಲದೇ ತನ್ನ ಸಂಬಂಧಿಗಳು ಹಾಗೂ ಪರಿಚಯಸ್ಥರ ಬಳಿ ಸಾಲ ಮಾಡಿದ್ದ ಮಧುಕರ ಸಪಳೆ ಸಾಲ ಕೊಟ್ಟವರು ಹಣ ವಾಪಸ್ ಕೇಳಲು ಆರಂಭಿಸಿದರೆ, ಸಾಲ ಕೊಟ್ಟವರ ಖಾತೆಗಳಿರುವ ಬ್ಯಾಂಕ್‌ಗಳಿಗೆ ಇಡಿ ಹೆಸರಿನಲ್ಲಿ ಫೇಕ್ ನೋಟಿಸ್ ನೀಡುತ್ತಿದ್ದ.
ಹೀಗೆ ಬೆಳಗಾವಿಯ ನಗರದ ಯೂನಿಯನ್ ಬ್ಯಾಂಕ್‌ಗೆ ಮೂರು ನೋಟಿಸ್, ಐಡಿಬಿಐ, ಎಸ್‌ಬಿಐ ಬ್ಯಾಂಕ್‌ಗೆ ತಲಾ ಒಂದು ನೋಟಿಸ್, ಖಾನಾಪುರದ ಬ್ಯಾಂಕ್ ಆಫ್ ಮಹಾರಾಷ್ಟ್ರ, ಸಂಕೇಶ್ವರದ ಒಂದು ಬ್ಯಾಂಕ್‌ಗೆ ಫೇಕ್ ಇಡಿ ನೋಟಿಸ್ ನೀಡಿ ತನಗಾಗದ ಗ್ರಾಹಕರ ಬ್ಯಾಂಕ್ ಖಾತೆ ಫ್ರೀಜ್ ಮಾಡಿಸಿದ್ದ. ಈ ಬಗ್ಗೆ ಬೆಳಗಾವಿಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಈ ಪ್ರಕರಣ ತನಿಖೆಯಲ್ಲಿದ್ದಾಗಲೇ ಮತ್ತೊಂದು ದೂರು ಬಂದಿತ್ತು. ಪಿಎನ್ಬಿ ಮೆಟ್‌ಲೈಫ್ ಇನ್ಶೂರೆನ್ಸ್ ಕಂಪನಿಯ ವಿಮಾದಾರರಿಗೆ ₹26 ಲಕ್ಷಕ್ಕೂ ಹೆಚ್ಚು ಹಣ ವಂಚಿಸಿದ್ದಾನೆ ಎಂಬ ದೂರು ಸಹ ಬಂದಿತ್ತು. ವಿಮಾ ಅವಧಿ ಮುಗಿದ ಪಾಲಿಸಿದಾರರ ಹಣವನ್ನು ಮೋಸದಿಂದ ತನ್ನ ಹಾಗೂ ಇತರರ ಖಾತೆಗೆ ಮಧುಕರ ವರ್ಗಾಯಿಸಿಕೊಂಡಿದ್ದ. ಸದ್ಯ ಪ್ರಕರಣದ ತನಿಖೆ ಕೈಗೊಂಡ ಸಿಇಎನ್ ಠಾಣೆ ಸಿಪಿಐ ಬಿ.ಆರ್.ಗಡ್ಡೇಕರ್ ನೇತೃತ್ವದ ತಂಡ ಆರೋಪಿ ಮಧುಕರ್ ಸಪಳೆಯನ್ನು ಬಂಧಿಸಿದ್ದಾರೆ.
ಇನ್ನು ಬೆಳಗಾವಿಯ ವಿವಿಧ ಬ್ಯಾಂಕ್ ಮ್ಯಾನೇಜರ್ಗಳು ಇಡಿ ನೋಟಿಸ್ ಬಂದ ಕೂಡಲೇ ಅದನ್ನು ನಂಬಿ ತಕ್ಷಣವೇ ಆಯಾ ಗ್ರಾಹಕರ ಅಕೌಂಟ್ ಸೀಜ್ ಮಾಡಿದ್ದರು. ಇದರಲ್ಲಿ ಬ್ಯಾಂಕ್ ಮ್ಯಾನೇಜರ್‌ರೊಬ್ಬರು ದೆಹಲಿಯ ಇಡಿ ಕಚೇರಿಗೆ ನಿಮ್ಮಿಂದ ಹೀಗೆ ನೋಟಿಸ್ ಬಂದಿದೆ ಎಂದು ಪತ್ರದ ಮೂಲಕ ಗಮನಕ್ಕೆ ತಂದಿದ್ದರು. ಆಗ ದೆಹಲಿ ಇಡಿ ಅಧಿಕಾರಿಗಳು ನಾವು ಯಾವುದೇ ನೋಟಿಸ್ ನೀಡಿಲ್ಲ ಎಂದು ಸ್ಪಷ್ಟಪಡಿಸುತ್ತಾರೆ. ಆ ಬಳಿಕ ತಕ್ಷಣವೇ ಆ ಬ್ಯಾಂಕ್ ಮ್ಯಾನೇಜರ್ ಬೆಳಗಾವಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ.
ಇನ್ಸ್ಪೆಕ್ಟರ್ ಬಿ.ಆರ್.ಗಡ್ಡೇಕರ ನೇತೃತ್ವದ ತಂಡ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡಾಗ ಮಧುಕರ ಸಪಳೆ ಬಣ್ಣ ಬಯಲಾಗಿದೆ. ತನಿಖೆ ವೇಳೆ ಜಿಲ್ಲಾ ಸತ್ರ ನ್ಯಾಯಾಧೀಶರಿಗೆ ಮತ್ತು ನಾಲ್ವರು ವಕೀಲರಿಗೆ ನಕಲಿ ಲೀಗಲ್ ನೋಟಿಸ್ ನೀಡಿರುವುದೂ ಸಹ ಬೆಳಕಿಗೆ ಬಂದಿದೆ. ಬಂಧಿತನಿಂದ ಪೊಲೀಸರು ಒಂದು ಇನ್ನೋವಾ ಕಾರು, ಒಂದು ಸ್ವಿಫ್ಟ್ ಕಾರು, ರಬ್ಬರ್ ಸ್ಟ್ಯಾಂಪ್ ಮಷಿನ್ , ಪ್ರಿಂಟರ್, ಒಂದು ಲ್ಯಾಪ್‌ಟಾಪ್ ವಶಕ್ಕೆ ಪಡೆದುಕೊಂಡಿದ್ದಾರೆ.
ಒಟ್ಟಿನಲ್ಲಿ ಹೈಪ್ರೊಫೈಲ್ ವಂಚಕನನ್ನ ಬಂಧಿಸಿದ ಸಿಇಎನ್ ಪೊಲೀಸ್ ತಂಡಕ್ಕೆ ಬೆಳಗಾವಿ ನಗರ ಪೊಲೀಸ್ ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಿಪಿಐ ಬಿ.ಆರ್.ಗಡ್ಡೇಕರ್ ನೇತೃತ್ವದ ತಂಡಕ್ಕೆ ಇಲಾಖೆಯಿಂದ ರಿವಾರ್ಡ್ ಕೂಡ ಘೋಷಿಸುವುದಾಗಿ ಹೇಳಿದ್ದಾರೆ. ಇನ್ನಾದರೂ ಪಾಲಿಸಿದಾರರು ಎಚ್ಚೆತ್ತುಕೊಂಡು ತಾವು ತುಂಬುವ ಪಾಲಿಸಿ ಹಣ ತಮ್ಮ ಖಾತೆಗೆ ಸೇರುತ್ತಿದೆಯೋ ಅಥವಾ ಇಲ್ಲವೋ ಎಂಬುದನ್ನು ಗಮನಿಸಬೇಕಿದೆ.
ಇದನ್ನೂ ಓದಿ:ಜಿಎಸ್ಟಿ ವಂಚನೆಯ ₹ 20,124 ಕೋಟಿ ಕೇಂದ್ರ ಸರ್ಕಾರದಿಂದ ಪತ್ತೆ: ನಿರ್ಮಲಾ ಸೀತಾರಾಮನ್