ಹೊತ್ತಿ ಉರಿದ ಕೊಟ್ಟಿಗೆ; ನೋಡನೋಡುತ್ತಲೇ ಸಜೀವ ದಹನವಾದ ಆಕಳು, ಕಲಬುರಗಿಯಲ್ಲಿ ಮನಕಲಕುವ ಘಟನೆ
ಕೊಟ್ಟಿಗೆ ಧಗಧಗಿಸುತ್ತಿದ್ದ ವೇಳೆಯಲ್ಲೂ ಜೀವವನ್ನು ಉಳಿಸಿಕೊಳ್ಳಲು ಆಕಳು ಹೊರಗೆ ಓಡಿ ಬಂದ ದೃಶ್ಯ ಎಂತಹ ಕಲ್ಲು ಹೃದಯವನ್ನೂ ಕರಗಿಸುವಂತಿದೆ. ಮೈಯೆಲ್ಲಾ ಸುಟ್ಟು ಹೋದ ಕಾರಣ ಹೊರಗೆ ಓಡಿ ಬಂದ ಆಕಳು ಆಯಾಸದಿಂದ ನೆಲಕ್ಕುರುಳಿದೆ.
ಕಲಬುರಗಿ: ಜಿಲ್ಲೆಯ ಶಹಬಾದ್ ತಾಲೂಕಿನ ಮರತೂರ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದ ಆಕಸ್ಮಿಕ ಅಗ್ನಿ ಅನಾಹುತದಲ್ಲಿ ಆಕಳೊಂದು ಸಜೀವ ದಹನವಾಗಿದೆ. ಜೊತೆಯಲ್ಲಿದ್ದ ಎತ್ತು ಗಾಯಗೊಂಡಿದ್ದು, ಕರು ಬೆಂಕಿಯ ಕೆನ್ನಾಲಿಗೆಯಿಂದ ಪಾರಾಗಿದೆ. ಬೆಂಕಿ ವೇಗವಾಗಿ ವ್ಯಾಪಿಸಿದ ಕಾರಣ ಕೊಟ್ಟಿಗೆ ಸುಟ್ಟು ಭಸ್ಮವಾಗಿದೆ. ಹೊಲದಲ್ಲಿದ್ದ ಕೊಟ್ಟಿಗೆಗೆ ಏಕಾಏಕಿ ಬೆಂಕಿ ತಗುಲಿದ್ದು, ನೋಡು ನೋಡುತ್ತಲೇ ಕೊಟ್ಟಿಗೆಗೆ ವ್ಯಾಪಿಸಿದ ಬೆಂಕಿಯ ಕೆನ್ನಾಲಿಗೆ ಹಸುವನ್ನು ಬಲಿ ಪಡೆದಿದೆ. ಘಟನೆಯ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮನಕಲಕುವಂತಿದೆ.
ಕೊಟ್ಟಿಗೆ ಧಗಧಗಿಸುತ್ತಿದ್ದ ವೇಳೆಯಲ್ಲೂ ಜೀವವನ್ನು ಉಳಿಸಿಕೊಳ್ಳಲು ಆಕಳು ಹೊರಗೆ ಓಡಿ ಬಂದ ದೃಶ್ಯ ಎಂತಹ ಕಲ್ಲು ಹೃದಯವನ್ನೂ ಕರಗಿಸುವಂತಿದೆ. ಮೈಯೆಲ್ಲಾ ಸುಟ್ಟು ಹೋದ ಕಾರಣ ಹೊರಗೆ ಓಡಿ ಬಂದ ಆಕಳು ಆಯಾಸದಿಂದ ನೆಲಕ್ಕುರುಳಿದೆ. ಅಲ್ಲದೇ. ತೀವ್ರವಾಗಿ ಬೆಂಕಿಯಲ್ಲಿ ಬೆಂದ ಕಾರಣ ಆಕಳಿನ ಮೂಗು ಬಾಯಿಯಿಂದ ಹೊಗೆ ಹೊರಹೊಮ್ಮಲಾರಂಭಿಸಿದ್ದು ಅದರ ಮೂಕ ರೋದನೆ ತೀವ್ರ ಬೇಸರ ತರಿಸುತ್ತದೆ.
ದಯಾನಂದ ಶೇರಿಕಾರ ಎನ್ನುವವರಿಗೆ ಸೇರಿದ ಕೊಟ್ಟಿಗೆ ಇದಾಗಿದ್ದು, ಜಾನುವಾರುಗಳನ್ನು ಎಂದಿನಂತೆ ಕೊಟ್ಟಿಗೆಯಲ್ಲಿ ಬಿಟ್ಟಿದ್ದಾಗ ಅಗ್ನಿ ಅವಘಡ ಸಂಭವಿಸಿದೆ. ಹತ್ತಿ ಕಟ್ಟಿಗೆಗೆ ಬೆಂಕಿ ಹೊತ್ತಿಕೊಂಡು ಪಕ್ಕದ ಕೊಟ್ಟಿಗೆಗೂ ಜ್ವಾಲೆ ಆವರಿಸಿದ ಕಾರಣ ಅನಾಹುತ ಘಟಿಸಿದೆ ಎನ್ನಲಾಗಿದೆ. ಘಟನೆ ಸಂಬಂಧ ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅಚ್ಚರಿಗೆ ಕಾರಣವಾದ ಕಲಬುರಗಿ ಜೋಳ ಬೆಳೆ: ಜೋಳದ ಬೀಜಕ್ಕೆ ಬಂತು ಬಲು ಡಿಮ್ಯಾಂಡ್
ಹಸುಗಳ ಹಾಲು ಕರೆಯುವ ಸ್ಪರ್ಧೆ: ನಾ ಮುಂದು ತಾ ಮುಂದು ಎಂದು ಬಂದ ಪಶುಪಾಲಕರು
Published On - 11:08 am, Sat, 13 March 21