ದಾವೂದ್​ ಇಬ್ರಾಹಿಂಗೆ ವಯಸ್ಸಾಯ್ತು; ಪಾತಕಲೋಕ ಆಳುವ ‘ಡಿ’ ಕಂಪನಿಗೆ ಉತ್ತರಾಧಿಕಾರಿ ಬೇಕಂತೆ..

ದಾವೂದ್ ಹೆಸರಿನಲ್ಲಿ ತೆರೆಯ ಹಿಂದಿನಿಂದ ಪಾತಕ ಚಟುವಟಿಕೆಗಳನ್ನು ನಿಯಂತ್ರಿಸುವ ಐಎಸ್​ಐಗೆ ತನ್ನ ಕೈಗೊಂಬೆಯೇ ಉತ್ತರಾಧಿಕಾರಿ ಆಗಬೇಕೆಂಬ ಕಾತರ. ಭಾರತ ಸರ್ಕಾರಕ್ಕೆ ಇದು ‘ಡಿ’ ಕಂಪನಿಯನ್ನು ಛಿದ್ರಗೊಳಿಸಲು ಸುಸಮಯವೆಂಬ ಲೆಕ್ಕಾಚಾರ. ದಾವೂದ್ ಕಟ್ಟಿದ ಪಾತಕಲೋಕಕ್ಕೆ ಇದು ಕೊನೆಗಾಲವೇ?

ದಾವೂದ್​ ಇಬ್ರಾಹಿಂಗೆ ವಯಸ್ಸಾಯ್ತು; ಪಾತಕಲೋಕ ಆಳುವ ‘ಡಿ’ ಕಂಪನಿಗೆ ಉತ್ತರಾಧಿಕಾರಿ ಬೇಕಂತೆ..
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕಸ್ಕರ್
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on: Mar 10, 2021 | 6:03 PM

ಮುಂಬೈ ಅಥವಾ ಆಗಿನ ಬಾಂಬೆಯ ಅಪರಾಧ ತನಿಖೆ (ಸಿಐಡಿ) ಇಲಾಖೆಯಲ್ಲಿ ಮುಖ್ಯಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದ ಇಬ್ರಾಹಿಂ ಕಸ್ಕರ್​ಗೆ ತನ್ನ ಮಗ ಮುಂದೆ ಬೆಳೆದು ವಿಶ್ವದ ಅತಿ ದೊಡ್ಡ ಕ್ರಿಮಿನಲ್​ಗಳಲ್ಲಿ ಒಬ್ಬನಾಗುತ್ತಾನೆ, ತಾನು ಹುಟ್ಟಿ ಬೆಳೆದ ಮತ್ತು ಶತಮಾನಗಳಿಂದ ಲಕ್ಷಾಂತರ ಜನರಿಗೆ ತುತ್ತಿನಚೀಲ ತುಂಬಿಸಿಕೊಳ್ಳಲು, ಕಣ್ತುಂಬ ನಿದ್ರೆ ಮಾಡಲು ಆಶ್ರಯ ನೀಡಿರುವ ಮುಂಬೈನಲ್ಲಿ ಸಾಮೂಹಿಕ ನರಹತ್ಯೆ ನಡೆಸುತ್ತಾನೆ, ಎಗ್ಗಿಲ್ಲದೆ ಡ್ರಗ್ಸ್ ದಂಧೆ ನಡೆಸುವ-ಚಿನ್ನಬೆಳ್ಳಿ ಕಳ್ಳಸಾಗಣೆ ಮಾಡುವ ಅವನನ್ನು ಬೇಟೆಯಾಡಲು ಅಮೆರಿಕ ಸೇರಿದಂತೆ ಹಲವಾರು ರಾಷ್ಟ್ರಗಳು ಶ್ರಮಿಸುತ್ತವೆ, ಭಾರತದ ಶ್ರೀಮಂತ ಕುಳಗಳಿಂದ, ರಾಜಕಾರಣಿಗಳಿಂದ ಕೋಟಿಗಟ್ಟಲೆ ಹಣ ಪೀಕುತ್ತಾನೆ ಮತ್ತು ತನ್ನೆಲ್ಲ ಅಕ್ರಮ ವ್ಯವಹಾರಗಳನ್ನು ವಿಶ್ವದೆಲ್ಲಡೆ ಹಬ್ಬಿಸಿ ತನ್ನ ವ್ಯವಹಾರಕ್ಕೆ ಅಡ್ಡಿಯುಂಟು ಮಾಡುವರನ್ನು ನಿದರ್ಯವಾಗಿ ಕೊಲ್ಲಿಸಿಬಿಡುತ್ತಾನೆ ಅಂತ ಗೊತ್ತಿದ್ದರೆ, ಅವನು ಹುಟ್ಟಿದಾಗಲೇ ಅವನ ಕತ್ತು ಹಿಸುಕಿ ಕೊಂದುಬಿಡುತ್ತಿದ್ದರೇನೋ..

ಆದರೆ ಅವರಿಗಾದರೂ ಅದು ಹೇಗೆ ಗೊತ್ತಾಗಬೇಕು? ಅದು ಗೊತ್ತಾಗುವ ಹೊತ್ತಿಗೆ ಬಹಳ ತಡವಾಗಿ ಬಿಟ್ಟಿತ್ತು. ಅವರ ಮಗ ಮಹಾ ಪಾತಕಿಯಾಕಿ ಬೆಳೆದುಬಿಟ್ಟಿದ್ದ. ಅವರ ಪತ್ನಿ ಒಬ್ಬ ಸಾಮನ್ಯ ಗೃಹಿಣಿಯಾಗಿದ್ದರಿಂದ ಮಕ್ಕಳು ಹೊರಗಡೆ ಏನು ಮಾಡುತ್ತಾರೆ ಅನ್ನೋದು ಗೊತ್ತಾಗುತ್ತಿರಲಿಲ್ಲ. ಒಂದು ಪಕ್ಷ ಗೊತ್ತಾದರೂ ಆಕೆ ಏನೂ ಮಾಡುವಂತಿರಲಿಲ್ಲ. ಪೊಲೀಸ್ ಇಲಾಖೆಯಲ್ಲಿದ್ದ ಗಂಡನಿಗೇ ಮಗ ಚಳ್ಳೇಹಣ್ಣು ತಿನ್ನಿಸುವಂತಿದ್ದರೆ, ಈ ಪಾಪದ ಹೆಣ್ಣುಮಗಳು ಏನು ತಾನೆ ಮಾಡಬಹುದಿತ್ತು?

ತನ್ನ ಪೋಷಕರಿಂದ ಅವರು ಬದುಕಿರುವವರೆಗೆ ಶಾಪ ಹಾಕಿಸಿಕೊಂಡ ಅವನು ಪಾತಕ ಲೋಕದ ದೊರೆಯಾಗಿ ಮೆರೆದಿದ್ದು ನಿಜ; ಆದರೆ, ನಮ್ಮಲ್ಲಿ ಹೇಳುತ್ತಾರಲ್ಲ, ಎಲ್ಲಾದಕ್ಕೂ ಒಂದು ಕೊನೆಯಿರುತ್ತೆ ಅಂತ. ಹಾಗೇಯೇ, ಅಪರಾಧ ಲೋಕದ ಈ ಚಕ್ರಾಧಿಪತಿಗೂ ಅಂತ್ಯ ಸಮೀಪಿಸಿದೆ. ವಯಸ್ಸಿನ ಕಾರಣ ಇರಬಹುದು ಅಥವಾ ಬೇರೆ ನಮಗೆ ಗೊತ್ತಿರದ ಮತ್ತೇನೋ ಕಾರಣ ಇರಬಹುದು, ತಾನು ಹೆಚ್ಚು ದಿನ ಬದುಕಲಾರೆ ಅಂತ ಅವನಿಗೆ ಖಾತ್ರಿಯಾಗಿದೆ. ತಾನು ಗತಿಸಿದ ಮೇಲೆ ತನ್ನ ಸಾಮ್ರಾಜ್ಯದ ಗತಿಯೇನು? ಅದನ್ನು ತನ್ನಂತೆ ನಿರ್ವಹಿಸುವ ತಾಕತ್ತು, ವಿವೇಕ, ಬುದ್ಧಿಮತ್ತೆ, ಎಲ್ಲಕ್ಕೂ ಮಿಗಿಲಾಗಿ ಅಪರಾಧಗಳನ್ನು ನಡೆಸಿಯೂ ಯಾವುದೇ ದೇಶದ ಪೊಲೀಸರಿಗೆ ಸಿಕ್ಕಿಹಾಕಿಕೊಳ್ಳದಂಥ ಚಾಣಾಕ್ಷತೆ ಇರುವವ ಇದ್ದಾನೆಯೇ ಎಂಬ ಬಗ್ಗೆ ಹುಡುಕಾಟ ಅವ್ಯಾಹತ ಸಾಗಿದೆ. ಚುಕ್ಕಾಣಿ ಹಿಡಿದವ ಸತ್ತ ನಂತರ ಆತನ ಸಾಮ್ರಾಜ್ಯದ ಉತ್ತರಾಧಿಕಾರಿ ಯಾರಾಗಬೇಕೆಂಬ ಪ್ರಶ್ನೆಯೇ ರಕ್ತಪಾತಗಳಿಗೆ, ಭಾತೃಹತ್ಯೆಗಳಿಗೆ ಕಾರಣವಾಗುತ್ತದೆ. ತಾನು ಬೆಳೆಸಿದ ಪಾತಕಲೋಕದಲ್ಲಿ ಇಂಥ ಪರಿಸ್ಥಿತಿ ಬರಬಾರದೆಂದು ಆ ಚಾಣಾಕ್ಷ ಇದೀಗ ಉತ್ತರಾಧಿಕಾರಿಗಾಗಿ ಹುಡುಕಾಟ ನಡೆಸುತ್ತಿದ್ದಾನೆ.

ಇದೇನಿದು, ಕಥಾನಾಯಕ ಯಾರು ಅಂತ್ಲೇ ಹೇಳದೇ-ಕಥೆ ಇಷ್ಟುದ್ದ ಮುಂದಕ್ಕೆ ಓಡ್ತಿದೆಯಲ್ಲಾ ಅಂತ ಅನ್ನಿಸಿತಾ. ಈ ಹೊತ್ತಿಗೆ ನೀವೂ ಊಹಿಸಿಸುತ್ತೀರಿ. ನಾವು ಮಾತನಾಡುತ್ತಿರುವ ವ್ಯಕ್ತಿಯ ಹೆಸರು ದಾವೂದ್ ಇಬ್ರಾಹಿಂ ಕಸ್ಕರ್​ ಎಂದು ನಿಮಗೂ ಈಗಾಗಲೇ ಹೊಳೆದಿರುತ್ತೆ ಅಲ್ವಾ?

Dawood Ibrahim FAMILY TREE

ದಾವೂದ್ ಇಬ್ರಾಹಿಂ​ ಕುಟುಂಬ

ವಿಶ್ವವ್ಯಾಪಿ ಹರಡಿದ ಭೂಗತ ಸಾಮ್ರಾಜ್ಯ 1993ರಲ್ಲಿ ಸರಣಿ ಬಾಂಬ್​ಗಳನ್ನು ಮುಂಬೈ ಮಹಾನಗರದಲ್ಲಿ ಸಿಡಿಸಿ ಪೊಲೀಸರೂ ಸೇರಿದಂತೆ ನೂರಾರು ಅಮಾಯಕರನ್ನು ಕೊಂದ ನಂತರ ಭಾರತದಿಂದಲೇ ಪಲಾಯನಗೈದು ಇದುವರೆಗೆ ಭಾರತೀಯ ಸರ್ಕಾರದ ಕಣ್ತಪ್ಪಿಸಿ ದೇಶದಿಂದ ದೇಶಕ್ಕೆ ಓಡುತ್ತಾ ಕೊನೆಗೆ ಪಾಕಿಸ್ತಾನದಲ್ಲಿ ರಾಜಾಶ್ರಯ ಪಡೆದಿರುವ ದಾವೂದ್ ಇಬ್ರಾಹಿಂ ಬಗ್ಗೆ ನಾವು ಚರ್ಚೆ ಮಾಡುತ್ತಿದ್ದೇವೆ. ಅವನು 1980ರಲ್ಲಿ ಸ್ಥಾಪಿಸಿದ ಡಿ ಕಂಪನಿ ಇಂದು ಭೂಗತಲೋಕದಲ್ಲಿ ವ್ಯವಸ್ಥಿತ ಕಾರ್ಯಾಚರಣೆಗಳನ್ನು ನಡೆಸುವ ಬೃಹತ್ ಕಾರ್ಪೊರೇಟ್ ಕಂಪನಿಯ ಮಟ್ಟಕ್ಕೆ ಬೆಳೆದುನಿಂತಿದೆ. ಅದರ ನೂರಾರು ಶಾಖೆಗಳು ವಿಶ್ವದಾದ್ಯಂತ ಹಬ್ಬಿವೆ. ಲಂಡನ್, ನ್ಯೂಯಾರ್ಕ್ ಸೇರಿದಂತೆ ವಿಶ್ವದ ಹಲವು ನಗರಗಳ ರಿಯಲ್​ ಎಸ್ಟೇಟ್​ ವ್ಯವಹಾರಗಳಲ್ಲಿ ಡಿ ಕಂಪನಿ ತೊಡಗಿಸಿಕೊಂಡಿದೆ ಎನ್ನುತ್ತಾರೆ. ಭಾರತದ ಮಟ್ಟಿಗೆ ಇದು ಆಂತರಿಕ ಭದ್ರತೆಗೆ ತಲೆಬೇನೆಯೂ ಆಗಿದೆ. ಬಾಂಬ್​ಗಳನ್ನು ಸ್ಪೋಟಿಸಲು ಉಗ್ರರಿಗೆ ನೆರವು ನೀಡುವ, ಖೋಟಾನೋಟುಗಳನ್ನು ಮುದ್ರಿಸುವ, ಚಲಾವಣೆಗೆ ತರುವ, ಚಿನ್ನ ಮತ್ತು ಬೆಳ್ಳಿ ಸ್ಮಗ್ಲಿಂಗ್ ಮಾಡುವ, ಡ್ರಗ್ಸ್ ದಂಧೆ ನಡೆಸುವ ಮತ್ತು ಮುಗ್ಧ ಜನರನ್ನು ಕೊಲ್ಲುವ ಸಂಸ್ಥೆಯಾಗಿದೆ.

ಕಳೆದ ಮೂರು ದಶಕಗಳಿಂದ ದಾವೂದ್ ಭಾರತದ ಮೋಸ್ಟ್ ವಾಂಟೆಟ್ ಅಪರಾಧಿಯಾಗಿದ್ದರೂ ಖೊಟ್ಟಿ ಹೆಸರುಗಳಲ್ಲಿ ಬೇರೆಬೇರೆ ದೇಶಗಳನ್ನು ಸುತ್ತುತ್ತಿದ್ದಾನೆ. ಅವನ ಸಂಸ್ಥೆ ಜಾಗತಿಕವಾಗಿ ಬೆಳೆದಿದ್ದು ಅದರ ಶಾಖೆಗಳು ಏಷ್ಯಾ, ಆಫ್ರಿಕಾ, ಯುರೋಪ್ ಮತ್ತು ಉತ್ತರ ಅಮೇರಿಕದಲ್ಲೂ ಕೆಲಸ ಮಾಡುತ್ತಿವೆ. ಇಂಥ ಸಂಸ್ಥೆಯನ್ನು ನಡೆಸುವವ ಕುಶಾಗ್ರಮತಿಯಾಗಿರುವ ಜೊತೆಗೆ ಎಂಟೆದೆಯುಳ್ಳವನಾಗಿರಬೇಕು. ಈ ಮಾತು ಹೇಳಲು ಕಾರಣವಿದೆ. ಡಿ ಕಂಪನಿಯ ಚುಕ್ಕಾಣಿ ಹಿಡಿದಿರುವ ದಾವೂದ್​ನನ್ನು ಹಿಡಿದುಕೊಟ್ಟವರಿಗೆ ₹ 185 ಕೋಟಿ ಬಹುಮಾನವನ್ನು ಅಮೆರಿಕ ಘೋಷಿಸಿದೆ. ವಿಶ್ವದ ದೊಡ್ಡಣ್ಣನೇ ಇಷ್ಟು ದೊಡ್ಡ ಮೊತ್ತ ಘೋಷಿಸಿದ್ದರೂ ದಾವೂದ್​ನನ್ನು ಬಂಧಿಸಲು ಆಗಿಲ್ಲ. ಇದಕ್ಕೆ ದಾವೂದ್​ನ ಬಲ-ಬುದ್ಧಿವಂತಿಕೆಯ ಜೊತೆಗೆ ಕಂಡವರ ಮನೆಗೆ ಬಿದ್ದ ಬೆಂಕಿಯಲ್ಲಿಯೇ ಅಡುಗೆ ಮಾಡಲು ಹಾತೊರೆಯುವ ಪಾಕಿಸ್ತಾನದ ಪ್ರವೃತ್ತಿಯೂ ಕಾರಣ.

ಇದನ್ನೂ ಓದಿ: ಕರಾಚಿಯಲ್ಲೇ ಇದ್ದಾನೆ ದಾವೂದ್ ಇಬ್ರಾಹಿಂ, ವಿಶ್ವಸಂಸ್ಥೆಗೆ 88 ಉಗ್ರರ ಅಡ್ರಸ್ ಕೊಟ್ಟು ಪಾಕಿಸ್ತಾನ್ ನಾಟಕ

Dawood-Mandakini

ಪ್ರೇಯಸಿ ಮಂದಾಕಿನಿಯೊಂದಿಗೆ ದಾವೂದ್ ಇಬ್ರಾಹಿಂ

65 ವರ್ಷ, ಹಲವು ಕಾಯಿಲೆಗಳು ಪಾತಕ ಲೋಕದ ಅಧಿಪತಿ ದಾವೂದ್ ಕಳೆದ ಡಿಸೆಂಬರ್​ನಲ್ಲಿ ತನ್ನ 65ನೇ ಹುಟ್ಟುಹಬ್ಬವನ್ನು ಮುಗುಮ್ಮಾಗಿ ಯುರೋಪಿನಲ್ಲಿ ಆಚರಿಸಿಕೊಂಡಿದ್ದಾನೆ. ಈ ಹುಟ್ಟುಹಬ್ಬ ಆಚರಣೆ ಎಂದಿನಂತೆ ಅದ್ದೂರಿಯಾಗಿರಲಿಲ್ಲ. ಅತಿಥಿಗಳ ಮಾತು ಹಾಗಿರಲಿ, ಅವನ ಕುಟುಂಬದ ಸದಸ್ಯರೂ ಅವನೊಂದಿಗಿರಲಿಲ್ಲ. ಮೂಲಗಳ ಪ್ರಕಾರ ದಾವೂದ್ ಈಗ ಓರ್ವ ರೋಗಗ್ರಸ್ಥ ಮುದುಕ. ಅಧಿಕ ರಕ್ತದೊತ್ತಡ ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾನೆ. ಒಂದು ಮೂಲದ ಪ್ರಕಾರ ಅವನಿಗೆ ಕೊವಿಡ್-19 ಸೋಂಕು ಸಹ ತಗುಲಿತ್ತು. ತನ್ನ ದಿನಗಳು ಮುಗಿಯುತ್ತಿವೆ ಎನ್ನುವುದು ಅವನಿಗೆ ಮನವರಿಕೆಯಾಗಿದೆ. ಅದಕ್ಕಾಗಿಯೇ ತಾನು ಬೆಳೆಸಿದ ಸಾಮ್ರಾಜ್ಯವಾಗಿರುವ ಡಿ ಕಂಪನಿಗೆ ಒಬ್ಬ ಯೋಗ್ಯ ಉತ್ತರಾಧಿಕಾರಿಯನ್ನು ದಾವೂದ್ ಹುಡುಕುತ್ತಿದ್ದಾನೆ.

ಆಗಲೇ ಹೇಳಿದಂತೆ ಅವನು ಎದ್ದುಬರುವ ಕುರ್ಚಿಯಲ್ಲಿ ಕುಳಿತು ವ್ಯವಹಾರವನ್ನು ನಿಭಾಯಿಸುವುದು ಸಾಮಾನ್ಯ ಮಾತಲ್ಲ. ಡಿ ಕಂಪನಿಯ ಅಧಿಕಾರ ಹಸ್ತಾಂತರ ನಾವು ಸಿನಿಮಾಗಳಲ್ಲಿ ನೋಡುವ ಹಾಗೆ ರಕ್ತಪಾತವನ್ನುಂಟು ಮಾಡಬಹುದು. ದಾವೂದ್​ನ ಸ್ಥಾನವನ್ನು ಕಬಳಿಸಲು ಹಲವಾರು ಮಂದಿ ಈಗಾಗಲೇ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಅಲ್ಲದೆ, ಪಾಕಿಸ್ತಾನದ ಗುಪ್ತಚರ ಸಂಸ್ಥೆ (ಐಎಸ್ಐ) ಈ ಬೆಳವಣಿಗೆಯ ಮೇಲೆ ನಿರಂತರವಾಗಿ ಕಣ್ಣಿಟ್ಟಿದೆ. ರಕ್ತಪಾತವನ್ನು ತಪ್ಪಿಸಲು ದಾವೂದ್ ತನ್ನ ಸಾಮ್ರಾಜ್ಯವನ್ನು ವಿಂಗಡಿಸಿ ತನಗೆ ಬೇಕಾದವರಿಗೆ ಹಂಚಿಕೊಡುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಅದೇನಿದ್ದರೂ ತಾನು ಬದುಕಿರುವಾಗಲೇ ಅಗಬೇಕೆನ್ನುವುದು ಅವನಿಗೆ ಚೆನ್ನಾಗಿ ಗೊತ್ತಿದೆ.

ಕಸ್ಕರ್​ ವಂಶದ ಕುಡಿಗಳು ಹಲವು ಈಗಾಗಲೇ ಮೊಮ್ಮಕ್ಕಳನ್ನು ಕಂಡಿರುವ ದಾವೂದ್​ ಡಿ ಕಂಪನಿಯ ವ್ಯವಹಾರಗಳಲ್ಲಿ ಮೊದಲಿನಂತೆ ಸಕ್ರಿಯನಾಗಿಲ್ಲ. ಕಸ್ಕರ್ ಖಾನ್​ದಾನ್​ನ ಎರಡನೇ ಸಂತತಿ ಈಗ ಸಾಕಷ್ಟು ಬೆಳೆದಿದೆ. ಅವನ ಕುಟುಂಬವನ್ನು ನೋಡುವುದಾದರೆ, ಪತ್ನಿ ಮಹಜಬೀನ್ ಶೇಖ್​ಗೆ ಈಗ 55 ರ ಪ್ರಾಯ. ದಾವೂದ್​ಗೆ ನಾಲ್ವರು ಮಕ್ಕಳು. ಒಂದು ಗಂಡು, ಮೂರು ಹೆಣ್ಣು. ಮಗನ ಹೆಸರು ಮೊಯೀನ್ ನವಾಜ್ (32). ಮಾಹ್ರುಖ್ (34), ಮೆಹರೀನ್ (33) ಮತ್ತು ಮಜಿಯಾ ಶೇಖ್ ಹೆಸರಿನ ಮೂವರು ಹೆಣ್ಣುಮಕ್ಕಳು. ಮೋಯಿನ್​ಗೆ ಮದುವೆಯಾಗಿದ್ದು ಅವನ ಹೆಂಡತಿಯ ಹೆಸರು ಸಾನಿಯಾ. ದಾವೂದ್ ಹಿರಿ ಮಗಳು ಪಾಕಿಸ್ತಾನದ ಖ್ಯಾತ ಮಾಜಿ ಆಟಗಾರ ಜಾವೆದ್ ಮಿಯಾಂದಾದ್ ಮಗ ಜುನೈದ್​ ಮಿಯಾಂದಾದ್​ನನ್ನು ವರಿಸಿದ್ದಾಳೆ. ಮೆಹರಿನ್ ಗಂಡನ ಹೆಸರು ಔರಂಗಜೇಬ್ ಮೆಹಮೂದ್. ಅವನ ಕೊನೆಯ ಮಗಳು ಮಾಜಿಯಾಗೆ ಇನ್ನೂ ಮದುವೆಯಾಗಿಲ್ಲ. ಅವನ ಮಕ್ಕಳೆಲ್ಲ ಪಾಕಿಸ್ತಾನದ ಕರಾಚಿಯಲ್ಲಿ ಕಾಯಂ ವಿಳಾಸ ಹೊಂದಿದ್ದು ಇಸ್ಲಾಮಾಬಾದ್, ದುಬೈ ಮತ್ತು ಲಂಡನ್ ಮೊದಲಾದ ಕಡೆಗಳಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಅಲ್ಲೆಲ್ಲಾ ಸಾಕಷ್ಟು ಆಸ್ತಿಯನ್ನೂ ಮಾಡಿಕೊಂಡಿದ್ದಾರೆ.

ದಾವೂದ್ ಒಡಹುಟ್ಟಿದವರು ಒಬ್ಬಿಬ್ಬರಲ್ಲ, 12 ಜನ! 7 ಸಹೋದರು ಮತ್ತು 5 ಸಹೋದರಿಯರು. ಅವರಲ್ಲಿ ಈಗ ಕೇವಲ 6 ಜನ ಮಾತ್ರ ಬದುಕಿದ್ದಾರೆ. ಅವನ ಸಹೋದರರಲ್ಲಿ ಒಬ್ಬನಾಗಿರುವ ಅನೀಸ್ ಕಸ್ಕರ್ ಕರಾಚಿಯಲ್ಲಿದ್ದರೆ, ಮುಸ್ತಕಿಮ್ ಕಸ್ಕರ್ ಹೆಸರಿನವನು ದುಬೈಯಲ್ಲಿದ್ದಾನೆ. 2017ರ ಸುಲಿಗೆ ಪ್ರಕರಣವೊಂದರಲ್ಲಿ ಪೊಲೀಸರಿಗೆ ಸೆರೆ ಸಿಕ್ಕ ಅವನ ಮತ್ತೊಬ್ಬ ಸಹೋದರ ಇಕ್ಬಾಲ್ ಕಸ್ಕರ್ ಥಾಣೆ ಜೈಲಿನಲ್ಲಿದ್ದಾನೆ. ಅವನ ಸಹೋದರಿಯರಲ್ಲಿ ಬದುಕುಳಿದಿರುವ ಜೈತುನ್ ದುಬೈಯಲ್ಲಿದ್ದ್ದರೆ, ಮುಮ್ತಾಜ್ ಮತ್ತು ಫರ್ಜಾನಾ ಕ್ರಮವಾಗಿ ಕರಾಚಿ ಮತ್ತು ಮುಂಬೈಯಲ್ಲಿದ್ದಾರೆ. ದಾವೂದ್ ದಶಕಗಳಿಂದ ಕಣ್ತಪ್ಪಿಸಿ ದೇಶದಿಂದ ದೇಶಕ್ಕೆ ಓಡಾಡಿಕೊಂಡಿದ್ದರೂ ತನ್ನ ಎಲ್ಲ ಸಂಬಂಧಿಕರೊಂದಿಗೆ ಸಂಪರ್ಕವಿಟ್ಟುಕೊಂಡಿದ್ದಾನೆ. ಅವರೆಲ್ಲರ ಯೋಗಕಕ್ಷೇಮ ವಿಚಾರಿಸಲು, ಹಬ್ಬಗಳ ಸಂದರ್ಭದಲ್ಲಿ ವಿಶ್ ಮಾಡಲು ತನ್ನ ಹೆಂಡತಿಯಿಂದ ಪೋನ್ ಮಾಡಿಸುತ್ತಾನೆ. ದಾವೂದ್​ನ ಮಕ್ಕಳು, ಅವನ ಸೋದರ-ಸೋದರಿಯರ ಮಕ್ಕಳನ್ನು ಆಗಾಗ ಭೇಟಿಯಾಗುತ್ತಿರುತ್ತಾರೆ.

ರಕ್ತ ಸಂಬಂಧಿಗಳ ಹೊರತಾಗಿ, ದಾವೂದ್ ತನ್ನ ಸಹವರ್ತಿಗಳಾಗಿರುವ ಚೋಟಾ ಶಕೀಲ್ ಮತ್ತು ಫಹೀಮ್ ಮಚ್ಮಚ್ರೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದಾನೆ. ಇವರಿಬ್ಬರು ಜಾಗತಿಕ ಮಟ್ಟದಲ್ಲಿ ಡಿ ಕಂಪನಿಯ ವ್ಯವಹಾರವನ್ನು ನೋಡಿಕೊಳ್ಳುತ್ತಾರೆ. ಮುಂಬೈನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಈಗ ಕಾರ್ಪೊರೇಟ್ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಡಿ ಕಂಪನಿಗೆ ಶಕೀಲ್ ಮತ್ತು ಫಹೀಮ್ ಭಾರತೀಯ ಮತ್ತು ಅಂತರರಾಷ್ಟ್ರೀಯ ಮುಖಗಳಾಗಿದ್ದಾರೆ.

ಪರಿಸ್ಥಿತಿ ಹೀಗಿರುವಾಗ, ದಾವೂದ್ ಯಾರನ್ನು ತನ್ನ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಬಹುದು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ಇದನ್ನೂ ಓದಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೂ ಕೊರೊನಾ ಅಟ್ಯಾಕ್

Dawood-Ibrahim

ಭೂಗತಲೋಕದ ಚಟುವಟಿಕೆಗಳನ್ನು ಕಾರ್ಪೊರೇಟ್ ಕಂಪನಿಯಂತೆ ನಿರ್ವಹಿಸುತ್ತಿರುವ ದಾವೂದ್​ ಇಬ್ರಾಹಿಂ

ಉತ್ತರಾಧಿಕಾರಿ ರೇಸ್​ನಲ್ಲಿ ಐವರು ದಾವೂದ್ ಇಬ್ರಾಹಿಂನ ಮಗ ಮೊಯೀನ್ ನವಾಜ್, ಅಳಿಯ ಜುನೈದ್ ಮತ್ತು ಅವನ ಬಲಗೈ ಬಂಟ ಚೋಟಾ ಶಕೀಲ್ ಉತ್ತರಾಧಿಕಾರಿ ರೇಸ್​ನ ಮುಂಚೂಣಿಯಲ್ಲಿದ್ದಾರೆ. ಮಗ ಮೊಯೀನ್​ಗೆ ಪಟ್ಟ ಬಿಟ್ಟುಕೊಡುವ ಮಹದಾಸೆ ದಾವೂದ್​ಗೆ ಇದೆ. ಆದರೆ ಅವನು ಬಹಳ ಮೃದು ಸ್ವಭಾವದವನೆಂದು ಡಿ ಕಂಪನಿ ಪರಿಗಣಿಸುತ್ತದೆ. ಕುರಾನ್ ಅನ್ನು ಬಾಯಿಪಾಠ ಮಾಡಿಕೊಂಡಿರುವ ಅವನದು ಧಾರ್ಮಿಕ ಸ್ವಭಾವ. ಹಫೀಜನಂತೆ ಜೀವನ ನಡೆಸುವ ಅವನಿಗೆ ಅಧ್ಯಾತ್ಮದ ಒಲವು ಹೆಚ್ಚು. ಧಾರ್ಮಿಕ ಆಚರಣೆಘಳಲ್ಲಿ ಹೆಚ್ಚು ಸಮಯವನ್ನು ವಿನಿಯೋಗಿಸುತ್ತಾನೆ.

ಡಿ ಕಂಪನಿಯಲ್ಲಿ ಮೊಯೀನ್ ನಂತರದ ಪ್ರಭಾವಿ ಜುನೈದ್ ಮಿಯಾಂದಾದ್​. ದಾವೂದ್​ನ ಅಳಿಯ ಜುನೈದ್ ವ್ಯವಹಾರ ವಿಷಯಗಳಲ್ಲಿ ಚುರುಕಾಗಿರುವುದರಿಂದ ಅವನೇ ಡಿ ಕಂಪನಿಯ ಉತ್ತರಾಧಿಕಾರಿ ಅಗಬಹುದೆಂದು ಕೆಲವರು ಭಾವಿಸುತ್ತಾರೆ. ಅದರೆ, ಅದು ಅಷ್ಟು ಸುಲಭವಾಗಿ ಇತ್ಯರ್ಥವಾಗುವ ವಿಚಾರವಲ್ಲ. ದಾವೂದ್ ಸಹೋದರರಾದ ಅನೀಸ್ ಮತ್ತು ಮುಸ್ತಾಕಿಮ್ ಸಹ ಗದ್ದುಗೆ ಮೇಲೆ ಕಣ್ಣಿಟ್ಟಿದ್ದಾರೆ. ಆಮದು-ರಫ್ತಿನ ವ್ಯವಹಾರ ನೋಡಿಕೊಳ್ಳುವ ಮುಸ್ತಕಿಮ್ ದುಬೈನಲ್ಲಿ ಡ್ರಗ್ ಜಾಲವನ್ನೂ ನಡೆಸುತ್ತಾನೆ. ಅನೀಸ್​ಗೆ ದಾವೂದ್ ಗುಟ್ಕಾ ಮತ್ತು ಪೇಪರ್ ಕಾರ್ಖಾನೆಗಳ ವಹಿವಾಟನ್ನು ವಹಿಸಿಕೊಟ್ಟಿದ್ದಾನೆ. ಭಾರತದ ಖೋಟಾ ನೋಟುಗಳನ್ನು ಮುದ್ರಿಸಿ, ವಿತರಿಸುವ ಕೆಲಸವನ್ನು ಅನೀಸ್ ಮಾಡುತ್ತಾನೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಅನೀಸ್ ಹೊಂದಿರುವ ಪೇಪರ್ ಮಿಲ್ ಒಂದರ ವಿರುದ್ಧ 2015ರಲ್ಲಿ ಅಮೆರಿಕಾದ ಖಜಾನೆ ಇಲಾಖೆಯು ಯುಎಸ್ ಫಾರಿನ್ ನಾರ್ಕೊಟಿಕ್ಸ್ ಕಿಂಗ್​ಪಿನ್ ಡೆಸ್ಟಿನೇಷನ್ ಕಾಯ್ದೆಯನ್ವಯ ಪ್ರಕರಣ ದಾಖಲಿಸಿತ್ತು.

ಉತ್ತರಾಧಿಕಾರಿ ಸ್ಪರ್ಧೆಯಲ್ಲಿ ಐವರು ಇರುವುದರಿಂದ ಕಂಪನಿಯು ಹಲವು ಹೋಳುಗಳಾಗಿ ಒಡೆದು ಹೋಗುವ ದಿನ ಇಲ್ಲವೇ ಮುಖ್ಯಸ್ಥನ ಹುದ್ದೆಗೆ ರಕ್ತಪಾತ ನಡೆಯುವ ದಿನ ಹತ್ತಿರವಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನು ಚೆನ್ನಾಗಿ ಗ್ರಹಿಸಿಕೊಂಡಿರುವ ದಾವೂದನ ಹತ್ತಿರದ ಬಂಟರು ತಮ್ಮ ಅಯ್ಕೆಯ ಅಭ್ಯರ್ಥಿಗಳ ಪರವಾಗಿ ಲಾಬಿ ಮಾಡುತ್ತಿದ್ದಾರೆ. ತಮ್ಮ ಸುಪರ್ದಿಗೆ ವಹಿಸಿರುವ ವ್ಯಾಪಾರ-ವಹಿವಾಟುಗಳೊಂದಿಗೆ ದಾವುದ್​ನಿಂದ ದೂರವಾಗುವ ಪ್ರಯತ್ನದಲ್ಲಿದ್ದಾರೆ.

ದಾವೂದ್​ ಸಾಮ್ರಾಜ್ಯವನ್ನು ಕೇವಲ ದಾವೂದ್ ಇಬ್ರಾಹಿಂ ಎಂಬ ಒಬ್ಬನೇ ವ್ಯಕ್ತಿ ನಿಯಂತ್ರಿಸುತ್ತಿದ್ದಾನೆ ಎಂದುಕೊಂಡರೆ ನಿಮ್ಮ ಊಹೆ ಖಂಡಿತ ತಪ್ಪು. ಡಿ ಕಂಪನಿಯ ಮುಖ್ಯಸ್ಥನ ಮುಖ ದಾವೂದ್​, ಆದರೆ ತೆರೆಯ ಹಿಂದೆ ಸೂತ್ರ ಹಿಡಿದು ಕುಣಿಸುವುದು ಪಾಕಿಸ್ತಾನದ ಐಎಸ್​ಐ. ಉತ್ತರಾಧಿಕಾರಿ ಆಯ್ಕೆ ವಿಚಾರವೂ ಅಷ್ಟೇ, ಐಎಸ್​ಐನ ಇಶಾರೆ ಇಲ್ಲದೆ ಯಾರ ಹೆಸರನ್ನೂ ದಾವೂದ್ ಅಂತಿಮಗೊಳಿಸಲು ಆಗುವುದಿಲ್ಲ. ಇಂಥ ಐಎಸ್​ಐಗೆ ದಾವೂದ್ ಪುತ್ರ ಮೊಯೀನ್ ಪರ ಒಲವು. ಮೊಯೀನ್ ತನ್ನ ಮಾಮೂಲು ಓದು ಬಿಟ್ಟು, ಧಾರ್ಮಿಕ ಅಧ್ಯಯನಕ್ಕೆ ಗಮನಕೊಟ್ಟು ಹಫೀಜ್ ಆಗಲು ಪ್ರಯತ್ನಿಸಿದ್ದನ್ನು ಐಎಸ್​ಐ ತನ್ನ ಲಾಭಕ್ಕೆ ಬಳಸಿಕೊಳ್ಳುವ ಹುನ್ನಾರ ಮಾಡುತ್ತಿದೆ. ವ್ಯವಹಾರದಲ್ಲಿ ದಾವೂದ್​ಗೆ ಇರುವ ಚಾಣಾಕ್ಷತೆಯನ್ನು ತನ್ನ ಲಾಭಕ್ಕೆ ಹಲವಾರು ಬಾರಿ ಬಳಸಿಕೊಂಡಿರುವ ಐಎಸ್​ಐಗೆ ಮತ್ತೊಬ್ಬ ದಾವೂದ್ ಇಬ್ರಾಹಿಂ ತನಗೆ ಸಿಗಲಾರ ಎಂಬ ಅರಿವೂ ಇದೆ. ಹೀಗಾಗಿಯೇ ತನ್ನ ಏಜೆಂಟರ ಮೂಲಕವೇ ಮೊಯೀನ್​ಗೆ ಧರ್ಮಬೋಧೆ ಮಾಡಿಸಿ, ಪಾಕಿಸ್ತಾನದೆಡೆಗೆ ನಿಷ್ಠೆ ಬೆಳೆಯುವಂತೆ ಏರ್ಪಾಟು ಮಾಡಿದೆ. ಡಿ ಕಂಪನಿಗೆ ಅವನನ್ನೇ ಮುಖ್ಯಸ್ಥನನ್ನಾಗಿಸುವ ಇರಾದೆ ಐಎಸ್​ಐಗೆ ಇದೆ.

ಐಎಸ್ಐ ಗಮನಕ್ಕೆ ಬಾರದಂತೆ ಪಾಕಿಸ್ತಾನದ ಹಿಡಿತದಿಂದ ದೂರವಾಗಲು ಹಾತೊರೆಯುತ್ತಿರುವ ದಾವೂದ್ ಮತ್ತು ಅವನ ಕೆಲ ಆಪ್ತರು 2000ನೇ ಇಸವಿಯ ಆರಂಭದಿಂದಲೇ ವಿಶ್ವದ ಬೇರೆಬೇರೆ ಭಾಗಗಳಲ್ಲಿ ದೊಡ್ಡಮಟ್ಟದ ಹಣ ಹೂಡುತ್ತಿದ್ದಾರೆ. ತನ್ನ ಸೊಸೆ ವಾಸವಾಗಿರುವ ಇಂಗ್ಲೆಂಡ್​ನಲ್ಲಿ ದಾವೂದ್ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹಣ ತೊಡಗಿಸುತ್ತಿದ್ದಾನೆ. ಉತ್ತರಾಧಿಕಾರಿ ಘೋಷಣೆಗೂ ಮೊದಲೇ ದಾವೂದ್ ಪಾಕಿಸ್ತಾನದಿಂದ ಒಕ್ಕಲೆದ್ದರೆ, ಐಎಸ್​ಐ ಹಿಡಿತದಿಂದ ಬಿಡಿಸಿಕೊಂಡರೆ ಪಾತಕಲೋಕ ಮತ್ತೊಂದು ಮಗ್ಗುಲಿಗೆ ಹೊರಳಿಕೊಳ್ಳುವುದು ನಿರೀಕ್ಷಿತ.

Dawood-Ibrahim

ಕ್ರಿಕೆಟ್​ ಬುಕಿಂಗ್ ಹಗರಣದಲ್ಲಿಯೂ ದಾವೂದ್ ಇಬ್ರಾಹಿಂನ ‘ಡಿ’ ಕಂಪನಿಯ ಪಾತ್ರವಿತ್ತು

ಅಳಿಯನಿಗೆ ಸಿಗಬಹುದಾ ವಾರಸುದಾರಿಕೆ? ಡಿ ಕಂಪನಿಯ ಉತ್ತರಾಧಿಕಾರಿ ಸ್ಥಾನಕ್ಕೆ ಸೂಕ್ತ ಎಂದು ಸ್ವತಃ ದಾವೂದ್ ಮತ್ತು ಐಎಸ್​ಐ ಭಾವಿಸಿರುವ ಮೊಯೀನ್​ಗೆ ಮುಖ್ಯ ಪ್ರತಿಸ್ಫರ್ಧಿಯೆಂದರೆ 38 ವರ್ಷ ವಯಸ್ಸಿನ ಕುಶಾಗ್ರ ಬ್ಯುಸಿನೆಸ್​ಮನ್ ಜುನೈದ್. ಖ್ಯಾತ ಕ್ರಿಕೆಟ್ ಆಟಗಾರ ಜಾವೆದ್ ಮಿಯಾಂದಾದ್​ರ ಮಗನಾಗಿರುವ ಜುನೈದ್ ಚೆನ್ನಾಗಿ ಓದಿಕೊಂಡಿದ್ದಾನೆ ಮತ್ತು ವ್ಯಾಪಾರದಲ್ಲಿ ಚತುರ. ಕೇವಲ ಇಷ್ಟೇ ಆಗಿದ್ದರೆ ಡಿ ಕಂಪನಿಗೆ ಅವನು ಸೂಕ್ತ ಎಂದು ಯಾರೂ ಭಾವಿಸುತ್ತಿರಲಿಲ್ಲ. ಈ ಗುಣಗಳ ಜೊತೆಗೆ ಜುನೈದ್​ಗೆ ತಣ್ಣನೆಯ ಕ್ರೌರ್ಯ ಮನೋಭಾವವೂ ಮೈಗೂಡಿದೆ. ಅಂದುಕೊಂಡಿದ್ದನ್ನು ನಿರ್ದಯವಾಗಿ ಸಾಧಿಸುವ ಛಲವಂತ ಜುನೈದ್ ಎಂದು ಡಿ ಕಂಪನಿ ಗುರುತಿಸಿದೆ.​ ದಾವೂದ್ ಕುಟುಂಬದೊಂದಿಗೆ ತನ್ನದು ವೈಯಕ್ತಿಕ ಸಂಬಂಧ ಮಾತ್ರ ಎಂದು ಅವನು ಹೇಳುತ್ತಾನೆ. ಆದರೆ ಇತ್ತೀಚಿಗೆ ಹಬ್ಬಿರುವ ಗಾಳಿಮಾತುಗಳ ಪ್ರಕಾರ ಪತ್ನಿಯೊಂದಿಗೆ ಅವನ ಸಂಬಂಧ ಹಳಸಿದೆ, ಆದರೂ ದಾವೂದ್​ನೊಂದಿಗಿನ ಬಾಂಧವ್ಯಕ್ಕೆ ಯಾವುದೇ ಧಕ್ಕೆಯಾಗಿಲ್ಲ.

ದಾವೂದ್ ಸಹೋದರರು ಸೇರಿದಂತೆ ಡಿ ಕಂಪನಿಯ ಹಿರಿಯ ಸದಸ್ಯರು ಜುನೈದ್​ನನ್ನು ಹೊರಗಿನವ ಎಂದು ಪರಿಗಣಿಸುತ್ತಾರೆ. ಡಿ ಕಂಪನಿಯ ಬೆನ್ನುಮೂಳೆ ಮರಿಯಬೇಕೆಂಬ ಭಾರತ ಸರ್ಕಾರದ ಉದ್ದೇಶ ಮತ್ತು ದಿನದಿಂದ ದಿನಕ್ಕೆ ಭಾರತದಲ್ಲಿ ಬದಲಾಗುತ್ತಿರುವ ರಾಜಕೀಯ ಸ್ಥಿತಿಗತಿಯ ಅರಿವು ಜುನೈದ್​ನ ಅಪ್ಪ ಜಾವೇದ್ ಮಿಯಾಂದಾದ್​ಗೆ ಸ್ಪಷ್ಟವಾಗಿ ತಿಳಿದಿದೆ. ಹೀಗಾಗಿಯೇ ದಾವೂದ್​ ನಂತರ ಡಿ ಕಂಪನಿಗೆ ತನ್ನ ಮಗ ಉತ್ತರಾಧಿಕಾರಿಯಾಗುವುದು  ಜಾವೇದ್​ಗೂ ಇಷ್ಟವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

Choto-Rajan-Dawood-Ibrahim

ಒಂದು ಕಾಲದ ಸಹಚರ, ನಂತರದ ಶತ್ರು ಛೋಟಾ ರಾಜನ್ ಮದುವೆಯಲ್ಲಿ ದಾವೂದ್ ಮತ್ತು ದಾವೂದ್ ಪತ್ನಿ ಮಹಜಬೀನ್ ಶೇಖ್

ಒಬ್ಬನ ನಿರ್ಧಾರವಲ್ಲ ಸಾಕಷ್ಟು ವಯಸ್ಸಾಗಿದ್ದರೂ, ಅನೀಸ್ ಮತ್ತು ಮುಸ್ತಾಕಿಮ್ ಪಟ್ಟಕ್ಕೆ ತಾವೇ ನಿಜವಾದ ವಾರಸುದಾರರೆಂದು ಭಾವಿಸುತ್ತಾರೆ. ದಾವೂದ್​ನ ಪ್ರತಿ ಏಳುಬೀಳುಗಳಲ್ಲಿ ಜತೆಗಿದ್ದ ಅವರಿಗೆ ಕುಟುಂಬದ ವ್ಯವಹಾರ ಹೊರಗಿನವರ ನಡುವೆ ಹಂಚಿಹೋಗುವುದು ಸುತಾರಾಂ ಇಷ್ಟವಿಲ್ಲ. ಆದರೆ ಒಂದು ಮೂಲದ ಪ್ರಕಾರ, ದಾವೂದ್​ಗೆ ತನ್ನ ಸಹೋದರರಿಗಿಂತ ಚೋಟಾ ಶಕೀಲ್ ಮೇಲೆ ಜಾಸ್ತಿ ವಿಶ್ವಾಸವಿದೆ. ಕರಾಚಿಯಲ್ಲಿ ದಾವೂದ್ ಮನೆಗೆ ಹತ್ತಿರದಲ್ಲಿರುವ ಭವ್ಯ ಬಂಗಲೆಯೊಂದರಲ್ಲಿ ವಾಸಿಸುವ ಶಕೀಲ್ ಐಎಸ್ಐನೊಂದಿಗೆ ಉತ್ತಮ ಬಾಂಧವ್ಯ ಇಟ್ಟಿಕೊಂಡಿದ್ದು ಭಾರತಕ್ಕೆ ಸಂಬಂಧಿಸಿದ ಕಾರ್ಯಾಚರನಣೆಗಳ ಕಡೆ ಜಾಸ್ತಿ ಗಮನ ಹರಿಸುತ್ತಾನೆ.

ದಶಕಗಳಿಂದ ದಾವೂದ್​ನ ಬಲಗೈ ಬಂಟನಾರುವ ಶಕೀಲ್​ ಬಗ್ಗೆ ಡಿ ಕಂಪನಿಯ ಹಲವು ಸದಸ್ಯರ ಒಲವು ಇದೆ. ದಾವೂದ್ ಸಹ ಅವನ ಪರ ಬ್ಯಾಟ್ ಮಾಡುತ್ತಿದ್ದಾನೆ. ಅಫ್ಗಾನಿಸ್ತಾನದಿಂದ ಅಮೆರಿಕ ಸೇನೆ ಸಂಪೂರ್ಣವಾಗಿ ವಾಪಸ್ಸಾಗವುದು ನಿಶ್ಚಿತವಾಗಿರುವುದರಿಂದ ಐಎಸ್ಐ ಪುನಃ ಅಲ್ಲಿ ಬಾಲ ಬಿಚ್ಚಲು ಶುರುಮಾಡಲಿದೆ. ಅಫ್ಗಾನಿಸ್ತಾನದಲ್ಲಿ ಭಾರತದ ಪ್ರಭಾವ ತಗ್ಗಿಸುವ ಯತ್ನಗಳಿಗೂ ಶಕೀಲ್ ಪೂರಕವಾಗಿ ಕೆಲಸ ಮಾಡಬಲ್ಲ ಎನ್ನುವುದು ಪಾಕಿಸ್ತಾನದ ಲೆಕ್ಕಾಚಾರ.

ಡಿ ಕಂಪನಿಯನ್ನು ಸದ್ಯಕ್ಕೆ ದಾವೂದ್ ಮುನ್ನಡೆಸುತ್ತಿದ್ದರೂ ಉತ್ತರಾಧಿಕಾರಿ ಆಯ್ಕೆಯಲ್ಲಿ ದಾವೂದ್ ಒಬ್ಬನ ನಿರ್ಧಾರ ಚಾಲ್ತಿಗೆ ಬರುವುದು ಕಷ್ಟ. ಕಂಪನಿಯ ವಿವಿಧ ಶಾಖೆಗಳ ಮುಖ್ಯಸ್ಥರು ಯಾರನ್ನು ಬೆಂಬಲಿಸಲಿದ್ದಾರೆ ಎನ್ನುವುದು ಸಹ ಇಲ್ಲಿ ಮುಖ್ಯವಾಗುತ್ತದೆ. ಈ ಮುಖ್ಯಸ್ಥರಲ್ಲಿ, 1993ರ ಬಾಂಬೆ ಸರಣಿ ಸ್ಫೋಟದಲ್ಲಿ ಭಾಗಿಯಾಗಿದ್ದ ಮತ್ತು ಈಗ ಕರಾಚಿಯಲ್ಲಿ ವಾಸವಾಗಿದ್ದುಕೊಂಡು ಮೊಜಾಂಬಿಕ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಡ್ರಗ್ ವ್ಯವಹಾರ ನಡೆಸುವ ಜಾವೆದ್ ದಾವೂದ್ ಪಟೇಲ್ ಅಲಿಯಾಸ್ ಜಾವೆದ್ ಚಿಕ್ನಾ, ಮಾರಿಷಸ್​ನಲ್ಲಿ ವಾಸವಾಗಿರುವ ಷಫಿ ಮೆಮನ್, ಶಕೀಲ್​ನ ಆಪ್ತ ಸಮೀರ್ ಹನೀಫ್, ತಾಂಜೇನಿಯಾದಲ್ಲಿ ಡಿ ಕಂಪನಿಯ ವ್ಯವಹಾರಗಳನ್ನು ನೋಡಿಕೊಳ್ಳುವ ಹಾಜಿ ಸಮದ್ ಮತ್ತು ಭಾರತೀಯ ಮೂಲದ ಕೀನ್ಯಾ ಪ್ರಜೆಯಾಗಿರುವ ಮತ್ತು ಅಲ್ಲೇ ವ್ಯವಹಾರಗಳನ್ನು ನೋಡಿಕೊಳ್ಳುವ ಮದತ್ ಸಾಬುರ್ಲಿ ಚತುರ್ ಸೇರಿದ್ದಾರೆ. ಉತ್ತರಾಧಿಕಾರಿ ಆಯ್ಕೆ ಸಂದರ್ಭ ಇವರೆಲ್ಲರೂ ಮಾತು ಮತ್ತು ಅಭಿಪ್ರಾಯ ಸಹ ಮುಖ್ಯವಾಗುತ್ತದೆ.

ಡಿ ಕಂಪನಿಯು ದುಬೈ ಮತ್ತು ಲಂಡನ್​ನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹಣ ಹೂಡಿದೆ. ದುಬೈ ವ್ಯವಹಾರಗಳನ್ನು ಯಾಸಿರ್ ಇಕ್ಬಾಲ್, ರಯೀಸ್ ಫರೂಕಿ, ಅನಿಲ್ ಕೊಠಾರಿ ಮತ್ತು ಫೈಸಲ್ ಜಫ್ರಾನಿ ನೋಡಿಕೊಳ್ಳುತ್ತಾರೆ. ಅನಿಸ್ ಲಂಬೂ ಎನ್ನವವನು ಯುಎಇಯಿಂದ ಹವಾಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಾನೆ. ಅಮೆರಿಕದಲ್ಲಿ ಬೆಟ್ಟಿಂಗ್ ದಂಧೆ ಮತ್ತು ಇತರ ವ್ಯವಹಾರಗಳನ್ನು ಜಾವೆದ್ ಛೋಟಾನಿ ಹೆಸರಿನ ವ್ಯಕ್ತಿ ನೋಡಿಕೊಳ್ಳುತ್ತಾನೆ. 2013ರಲ್ಲಿ ಇಂಡಿಯನ್ ಪ್ರಿಮೀಯರ್ ಲೀಗ್ ನಡೆಯುತ್ತಿದ್ದಾಗ ಜರುಗಿದ ಸ್ಪಾಟ್-ಫಿಕ್ಸಿಂಗ್ ಪ್ರಕರಣ ಬೆಳಕಿಗೆ ಬಂದಾಗ ಇವನು ಭಾರತದ ಬುಕ್ಕಿಗಳು ಮತ್ತು ದಾವೂದ್ ನಡುವೆ ಸಂಪರ್ಕ ಸೇತುವೆ ಆಗಿದ್ದ ಸಂಗತಿ ಗೊತ್ತಾಗಿತ್ತು.

ಇದನ್ನೂ ಓದಿ: 24 ವರ್ಷಗಳಿಂದ ತಲೆಮರೆಸಿಕೊಂಡಿದ್ದ.. ದಾವೂದ್ ಇಬ್ರಾಹಿಂ ಸಹಚರ ಕೊನೆಗೂ ಅಂದರ್

Dawood-Ibrahim

ದಾವೂದ್ ಬಂಧನಕ್ಕಿಂತ ಅವನ ಸಾಮ್ರಾಜ್ಯ ಛಿದ್ರಗೊಳಿಸುವುದೇ ಭಾರತ ಸರ್ಕಾರದ ಈಗಿನ ಆದ್ಯತೆ

ದಾವೂದ್​ಗೆ ಭಯೋತ್ಪಾದಕ ಪಟ್ಟ ಕಟ್ಟಿದ ಅಮೆರಿಕ ಡಿ ಕಂಪನಿಯ ಮತ್ತೊಬ್ಬ ತೂಕದ ವ್ಯಕ್ತಿಯೆಂದರೆ ಪಾಕಿಸ್ತಾನದಲ್ಲಿ ಖನಾನಿ ಎಮ್ಎಲ್ಒ ಹಣಕಾಸು ಲೇವಾದೇವಿ ಸಂಸ್ಥೆಯನ್ನು ನಡೆಸುವ ಅಲ್ತಾಫ್ ಖನಾನಿ. ನವೆಂಬರ್ 2015ರಲ್ಲಿ ಅಮೇರಿಕಾವು ಉಗ್ರ ಸಂಘಟನೆಗಳಾದ ಅಲ್-ಖೈದಾ, ಲಷ್ಕರ್-ಎ- ತೈಬಾ ಮತ್ತ ಜೈಷ್-ಎ ಮೊಹಮ್ಮದ್​ಗಳಿಗೆ ಹಣಕಾಸಿನ ನೆರವು ಒದಗಿಸಿದ ಹಿನ್ನೆಲೆಯಲ್ಲಿ ಖನಾನಿ ಎಮ್ಎಲ್ಒ ಸಂಸ್ಥೆಯನ್ನು ಜಾಗತಿಕ ಕ್ರಿಮಿನಲ್ ಸಂಸ್ಥೆ ಎಂದು ಘೋಷಿಸಲಾಗಿತ್ತು. ಈ ಸಂಸ್ಥೆಯು ಚೀನಾ ಮತ್ತು ಮೆಕ್ಸಿಕೊಗಳಲ್ಲಿರುವ ಡ್ರಗ್ ಜಾಲಗಳಿಗೂ ಹಣಕಾಸಿನ ನೆರವು ಒದಗಿಸುತ್ತದೆ. ಖನಾನಿ ಎಮ್ಎಲ್ಒ ಸಂಸ್ಥೆಯ ವ್ಯವಹಾರಗಳು 2018 ಆಗಸ್ಟ್​ನಲ್ಲಿ ದಾವೂದನ ಬಲಗೈ ಬಂಟರಲ್ಲಿ ಒಬ್ಬನಾಗಿರುವ ಜಬೀರ್ ಮೊತಿವಾಲಾನನ್ನು ಲಂಡನ್​ನಲ್ಲಿ ಬಂಧಿಸಿದಾಗ ಬೆಳಕಿಗೆ ಬಂದವು. ಅವನು ನಿಷಿದ್ಧ ಡ್ರಗ್​ಗಳನ್ನು ಅಮೆರಿಕಗೆ ರಫ್ತು ಮಾಡುವಾಗ ಸಿಕ್ಕಿಬಿದ್ದಿದ್ದ.

ಈ ಬಗೆಯ ಬಂಧನಗಳೇ ಡಿ ಕಂಪನಿ ವ್ಯವಹಾರದ ಅಸಲಿ ವ್ಯವಹಾರಗಳನ್ನು ಬಯಲಿಗೆ ತಂದಿದ್ದು. ದಾವೂದ್​ನ ಮೃತ ಸೋದರ ನೂರಾ ಕಸ್ಕರ್​ನ ಮಗ ಸೊಹೇಲ್ ಶೇಖ್ ಎನ್ನುವವನನ್ನು ಜೂನ್ 2014ರಲ್ಲಿ ಬಾರ್ಸಿಲೋನಾದಲ್ಲಿ ಅಮೆರಿಕದ ಡ್ರಗ್ ಎನ್​ಫೋರ್ಸ್​ಮೆಂಟ್ ಅಧಿಕಾರಿ ಸ್ಪೇನ್ ಪೊಲೀಸರ ನೆರವಿನಿಂದ ಬಂಧಿಸಿದ್ದರು. ಮಾದಕ ವಸ್ತುಗಳ ಅಮದು-ರಫ್ತು ವ್ಯವಹಾರ ಮಾಡುತ್ತಿದ್ದ ಶೇಖ್ ಪಾಕಿಸ್ತಾನದ ಪರವಾಗಿ ಉಗ್ರರಿಗೆ ನೆರವಾಗುತ್ತಿದ್ದ. ಡ್ರಗ್ ಕಾರ್ಟೆಲ್​ಗಳಿಗೆ ಆಯುಧಗಳನ್ನು ಪೂರೈಸುತ್ತಿದ್ದ. ರಷ್ಯಾ ಮತ್ತು ಕೊಲಂಬಿಯಾದ ಭೂಗತಲೋಕದ ನಂಟು ಹೊಂದಿದ್ದ ಶೇಖ್ ಅಲ್ಲಿಯೂ ಡಿ ಕಂಪನಿಯ ವ್ಯವಹಾರ ವಿಸ್ತರಿಸಿದ್ದ. ಅವನನ್ನು 2018ರಲ್ಲಿ ಸ್ಪೇನ್ ಅಮೆರಿಕದ ಹಸ್ತಾಂತರಿಸಿತ್ತು. ಅಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶೇಖ್​ನ ವಿಚಾರಣೆಗೆ ಭಾರತವೂ ಕಾಯುತ್ತಿದೆ. ಭಾರತವೂ ಅವನ ವಿಚಾರಣೆ ನಡೆಸಲು ಕಾಯುತ್ತಿದೆ. ಅಲ್-ಖೈದಾ ಮತ್ತು ತಾಲಿಬಾನ್​ಗೆ ಶಸ್ತ್ರಾಸ್ತ್ರ ಸರಬರಾಜು ಮಾಡುವ ದಾವೂದ್​ನನ್ನು ಅಮೆರಿಕ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದೆ. ಅವನ ಸಹವರ್ತಿಗಳಾಗಿರುವ ಶಕೀಲ್ ಮತ್ತು ಇಬ್ರಾಹಿಂ ಅವರನ್ನು ಫಾರಿನ್ ನಾರ್ಕೊಟಿಕ್ಸ್ ಕಿಂಗ್​ಪಿನ್​ಗಳೆಂದು ಘೋಷಿಸಿದೆ.

ಭಾರತದಲ್ಲಿ ಮತ್ತೆ ಸಕ್ರಿಯವಾಗ್ತಿದೆಯೇ ಡಿ ಕಂಪನಿ? ಅಮೆರಿಕ ಸೇನೆಯು ಅಫಘಾನಿಸ್ತಾನದಿಂದ ಹಿಂದೆ ಸರಿಯುತ್ತಿರುವುದು ಡಿ ಕಂಪನಿಯ ಮೂಲಕ ಭಾರತದ ಭದ್ರತೆಗೆ ತಲೆನೋವಾಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಅಫ್ಗಾನಿಸ್ತಾನ ಮತ್ತೆ ತಾಲೀಬಾನ್​ ತೆಕ್ಕೆಗೆ ಬಂದರೆ ಆ ಮೂಲಕ ಅಲ್ಲಿ ಐಎಸ್​ಐ ಅಧಿಕಾರ ಚಲಾವಣೆಗೆ ಬರುತ್ತದೆ. ಭಾರತ ವಿರೋಧಿ ಸಂಚುಗಳ ಕಾರಸ್ಥಾನವಾಗಿಯೂ ಅದು ಮಾರ್ಪಾಟಾಗುತ್ತದೆ.

ದಾವೂದ್ ಮತ್ತೊಮ್ಮೆ ಭಾರತದಲ್ಲಿ ದೊಡ್ಡಮಟ್ಟದ ಅನಾಹುತ ಮಾಡಬಹುದು ಎಂಬ ಆತಂಕವನ್ನು ಹಲವು ಆಂತರಿಕ ಭದ್ರತಾ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ. ದೆಹಲಿ, ಮುಂಬೈ, ಗುಜರಾತ್ ಮತ್ತು ಉತ್ತರ ಪ್ರದೇಶದ ಪೊಲೀಸರಿಗೆ ಡಿ ಕಂಪನಿಯು ಭಾರತದಲ್ಲಿ ತನ್ನ ಸಂಪರ್ಕಗಳನ್ನು ಪುನಃ ಸಕ್ರಿಯಗೊಳಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಭಾರತದಲ್ಲಿ ಎಷ್ಟು ಜನ ಡಿ ಕಂಪನಿಯ ಸಂಪರ್ಕದಲ್ಲಿದ್ದಾರೆ ಅಂತ ನಿಖರವಾಗಿ ಹೇಳಲಾಗದು. ದಾವೂದ್​ಗೆ ಭಾರತದಲ್ಲಿ ಬೆಂಬಲವಿದೆ ಮತ್ತು ಅಗತ್ಯ ಬಿದ್ದಾಗ ಅವನು ಲಷ್ಕರ್​ ಎ ತಯ್ಯಬಾ ಮತ್ತು ಇತರ ಪಾಕ್ ಬೆಂಬಲಿತ ಉಗ್ರಗಾಮಿ ಸಂಘಟನೆಗಳ ಸಹಾಯವನ್ನೂ ಪಡೆಯುತ್ತಾನೆ ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.

ಡಿ ಕಂಪನಿಯು ಅತ್ಯಂತ ಕುಶಲತೆಯಿಂದ, ಯಾವುದೇ ಸುಳಿವುಗಳನ್ನು ಬಿಡದೆ ತನ್ನ ಕಾರ್ಯಾಚರಣೆ ನಡೆಸುತ್ತದೆ. ಇದೇ ವರ್ಷ ಫೆಬ್ರುವರಿ 7 ರಂದು ಸಿಬಿಐ, ಹಿಂದೆ ದಾವೂದ್​ನ ನಿಕಟವರ್ತಿಯಾಗಿದ್ದ ಚೋಟಾ ರಾಜನ್ ವಿರುದ್ಧ ದಾಖಲಾಗಿದ್ದ ಕೊಲೆ ಯತ್ನದ ಪ್ರಕರಣವನ್ನು ಬರ್ಖಾಸ್ತುಗೊಳಿಸಿತು. 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ರಾಜನ್​ನನ್ನು 2015ರಲ್ಲಿ ಬಾಲಿ ಸರ್ಕಾರ ಭಾರತದ ವಶಕ್ಕೆ ಒಪ್ಪಿಸಿತ್ತು. ದಾವೂದ್​ನ ಅವಕೃಪೆಗೊಳಗಾಗಿದ್ದ ರಾಜನ್ 1998ರಲ್ಲಿ ಅವನನ್ನು ಕೊಲ್ಲುವ ಪ್ರಯತ್ನವನ್ನೂ ಮಾಡಿದ್ದ. ಜೀವ ಬೆದರಿಕೆ ಎದುರಿಸುತ್ತಿರುವ ರಾಜನ್ ಈಗ ತಿಹಾರ್ ಜೈಲಿನಲ್ಲಿದ್ದ್ದಾನೆ.

ಅಂದ ಹಾಗೆ, ದಾವೂದ್ ವೈರಿಗಳು ಮಾತ್ರ ಜೀವಭಯದ ಅತಂಕದಲ್ಲಿಲ್ಲ, ಅವನ ದುಷ್ಕರ್ಮಗಳನ್ನು ತನಿಖೆ ನಡೆಸಿದ ಅಧಿಕಾರಿಗಳು ಸಹ ಅಂಥದ್ದೇ ಆತಂಕದಲ್ಲಿದ್ದಾರೆ. 1993ರ ಬಾಂಬೆ ಸರಣಿ ಸ್ಫೋಟ ಪ್ರಕರಣವನ್ನು ತನಿಖೆ ನಡೆಸಿದವರಲ್ಲಿ ಒಬ್ಬರಾಗಿರುವ ಸುರೇಶ್ ವಾಲಿಶೆಟ್ಟಿ ಹೆಸರಿನ ಅಧಿಕಾರಿಯೊಬ್ಬರು, ದಾವೂದ್​ ತನ್ನ ಕಾರ್ಯಾಚರಣೆಗಳ ಉತ್ತುಂಗದಲ್ಲಿದ್ದಾಗ ಅವನ ಬಂಟರೊಂಗೆ ಸಂಪರ್ಕ ಸಾಧಿಸುವ ವಿಷಯದಲ್ಲಿ ಬಹಳ ಅಪಾಯಕಾರಿ ಪರಿಸ್ಥಿತಿ ಎದುರಿಸಬೇಕಾಗಿತ್ತು.

ಚಿನ್ನದ ಕಳ್ಳ ಸಾಗಣಿಕೆಗೆ ಡಿ ಕಂಪನಿಯು ಸಮುದ್ರಮಾರ್ಗ ಬಳಸುತ್ತದೆ ಎಂದು ವಾಲಿಶೆಟ್ಟಿ ಹೇಳುತ್ತಾರೆ. ಆದರೆ ಈಗ ದಾವೂದ್ ವಹಿವಾಟಿನ ಸ್ವರೂಪ ಬದಲಾಗಿದೆ. ಐಎಸ್ಐ ಅಧಿಕಾರಿಗಳ ನೆರವಿನಿಂದ ದಾವೂದ್, ಶಕೀಲ್ ಮತ್ತು ಜಾವೆದ್ ಚಿಕ್ನಾ, ನೇಪಾಳ ಮತ್ತು ಬಾಂಗ್ಲಾದೇಶ ಮೂಲಕ ಖೋಟಾ ನೋಟುಗಳನ್ನು ಭಾರತಕ್ಕೆ ಕಳಿಸುತ್ತಿದ್ದಾನೆ. ಮಾಲ್ಡೀವ್ಸ್, ಶ್ರೀಲಂಕಾ, ಮೊಜಾಂಬಿಕ್, ಕೀನ್ಯಾ, ಟಾಂಜೇನಿಯಾ ದಕ್ಷಿಣ ಆಫ್ರಿಕಾ ಮೊದಲಾದ ದೇಶಗಳಲ್ಲಿ ನಡೆಯುವ ಡ್ರಗ್ಸ್ ದಂಧೆಯಲ್ಲಿ ಡಿ ಕಂಪನಿ ಸಿಂಹಪಾಲು ಹೊಂದಿದೆ ಎನ್ನುತ್ತಾರೆ ವಾಲಿಶೆಟ್ಟಿ.

Dawood-Ibrahim

ಅಫ್ಗಾನ್​ನಿಂದ ಅಮೆರಿಕ ಸೇನೆ ಹಿಂದೆ ಸರಿಯುತ್ತಿರುವುದು ದಾವೂದ್​ ಇಬ್ರಾಹಿಂ ಚಟುವಟಿಕೆಗಳಿಗೆ ಪೂರಕ ವಾತಾವರಣ ನಿರ್ಮಿಸುವ ಆತಂಕ ಹುಟ್ಟುಹಾಕಿದೆ

ದಾವೂದ್​ ಬಂಧನಕ್ಕೆ ಭಾರತದ ನಿರಾಸಕ್ತಿ 2014ರಲ್ಲಿ ಬಿಜೆಪಿಯ ಮೋದಿ ಸರ್ಕಾರ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ಪಾಕಿಸ್ತಾನದಿಂದ ದಾವೂದ್​ನನ್ನು ಎಳೆದು ತರುವುದಾಗಿ ಘೋಷಿಸಿತ್ತು. ಆದರೆ, ಅಂದೂ-ಇಂದೂ ಪಾಕಿಸ್ತಾನದ್ದು ಒಂದೇ ರಾಗ. ‘ಪಾಕಿಸ್ತಾನದ ನೆಲದಲ್ಲಿ ದಾವೂದ್ ಇಬ್ರಾಹಿಂ ಇಲ್ಲ’ ಎಂದೇ ಪಾಕಿಸ್ತಾನ ವಾದಿಸುತ್ತಿದೆ. ‘ಭಾರತೀಯ ನೌಕಾದಳದ ಅಧಿಕಾರಿ ಕುಲಭೂಷಣ ಜಾಧವ್ ಅವರೊಂದಿಗೆ ಸಂಪರ್ಕ ಸಾಧಿಸಲು ಭಾರತ ಅಂತರರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋದಂತೆ ದಾವೂದ್ ವಿಷಯದಲ್ಲೂ ಅದರ ಮೊರೆ ಹೋಗಲು ಏನಡ್ಡಿ’ ಎಂದು ಪಾಕಿಸ್ತಾನ ಗುಪ್ತಚರ ಇಲಾಖೆ ಐಎಸ್​ಐನ ನಿವೃತ್ತ ನಿರ್ದೇಶಕ ಬಶೀರ್ ವಲಿ ಒಮ್ಮೆ ಪ್ರಶ್ನಿಸಿದ್ದರು.

ಮುಂಬೈ ಪೊಲೀಸ್ ಅಧಿಕಾರಿ ವಾಲಿಶೆಟ್ಟಿ ಅವರ ಪ್ರಕಾರ ದಾವೂದ್​ನನ್ನು ಭಾರತಕ್ಕೆ ಕರೆತರುವ ಬಗ್ಗೆ ಇಲ್ಲಿನ ಸರ್ಕಾರಕ್ಕೆ ಈಗ ಆಸಕ್ತಿ ಉಳಿದಿಲ್ಲ. ಅವನನ್ನು ಈಗ ಭಾರತಕ್ಕೆ ಕರೆತರುವುದರಿಂದ ಏನೂ ಪ್ರಯೋಜನವಿಲ್ಲ ಎನ್ನುತ್ತಾರೆ ಅವರು. ದಾವೂದ್​ ವಿರುದ್ಧ ಇರುವ ಪ್ರಕರಣಗಳ ತನಿಖೆ ನಡೆಸಿದ ಎಷ್ಟೋ ಪೊಲೀಸರು ನಿವೃತ್ತರಾಗಿದ್ದಾರೆ, ತೀರಿ ಹೋಗಿದ್ದಾರೆ. ಸಾಕ್ಷಿಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ. ಹೀಗಾಗಿ ಭಾರತದ ನ್ಯಾಯಾಲಯಗಳಲ್ಲಿ ದಾವೂದ್ ವಿರುದ್ಧದ ಆರೋಪಗಳನ್ನು ಸಾಬೀತು ಮಾಡುವುದು ಈಗ ಸಾಧ್ಯವಿಲ್ಲ ಎಂದು ಅಭಿಪ್ರಾಯಪಡುತ್ತಾರೆ ಅವರು.

ಅವನನ್ನು ಈಗ ಬೇಟೆಯಾಡುವ ಬದಲು ಅವನ ಸಾಮ್ರಾಜ್ಯನ್ನು ಛಿದ್ರಗೊಳಿಸವುದೇ ಉತ್ತಮ ಎಂದು ಭಾರತದ ಭದ್ರತಾ ಏಜೆನ್ಸಿಗಳು ಭಾವಿಸಿವೆ. ಈ ಉದ್ದೇಶ ಸಾಧಿಸಲು ಉತ್ತರಾಧಿಕಾರ ವಿವಾದಕ್ಕಿಂತ ಮತ್ತೊಂದು ಸುಸಮಯ ಸಿಗುವುದಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗುಪ್ತಚರ ಏಜೆನ್ಸಿಗಳಿಗೆ ಸಹಯೋಗ ಸಾಧ್ಯವಾದರೆ ಇದು ಅಸಾಧ್ಯವೂ ಅಲ್ಲ. ಅಫ್ಗಾನ್​ನಿಂದ ಅಮೆರಿಕ ಸೇನೆ ಹಿಂದೆ ಸರಿದ ನಂತರವೂ ಅಲ್ಲಿನ ಆಡಳಿತದಲ್ಲಿ ಭಾರತದ ಪಾತ್ರ ಇರಬೇಕು ಎಂಬ ಅಮೆರಿಕ ಅಧ್ಯಕ್ಷ ಜೋ ಬೈಡೆನ್​ರ ಮಾತು ದಾವೂದ್​ನ ಸಾಮ್ರಾಜ್ಯ ಛಿದ್ರಗೊಳಿಸುವ ಭಾರತದ ಯತ್ನಕ್ಕೆ ಸಿಕ್ಕ ಮೊದಲ ಜಯ.

(ಮಾಹಿತಿ: ದಿ ವೀಕ್, ಇಂಡಿಯನ್ ಎಕ್ಸ್​ಪ್ರೆಸ್, ಹಿಂದುಸ್ತಾನ್ ಟೈಮ್ಸ್​, ದಿ ಟ್ರಿಬ್ಯೂನ್ ಮತ್ತು ಡಾನ್ ಜಾಲತಾಣಗಳು)

ಏಕದಿನ ಸರಣಿಗಾಗಿ ಕಾಂಗರೂಗಳ ನಾಡಿಗೆ ಕಾಲಿಟ್ಟ ಟೀಂ ಇಂಡಿಯಾ
ಏಕದಿನ ಸರಣಿಗಾಗಿ ಕಾಂಗರೂಗಳ ನಾಡಿಗೆ ಕಾಲಿಟ್ಟ ಟೀಂ ಇಂಡಿಯಾ
ಅಣ್ಣ 10 ವರ್ಷಗಳಿಂದ ಕಾಯುತ್ತಿದ್ದೇನೆ ಎಂದ ಫ್ಯಾನ್​ಗೆ ನಿರಾಸೆ ಮಾಡದ ರೋಹಿತ್
ಅಣ್ಣ 10 ವರ್ಷಗಳಿಂದ ಕಾಯುತ್ತಿದ್ದೇನೆ ಎಂದ ಫ್ಯಾನ್​ಗೆ ನಿರಾಸೆ ಮಾಡದ ರೋಹಿತ್
ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಬಚಾವ್
ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಬಚಾವ್
ರಾಜಕಾರಣಿಗಳ ನಡುವೆ ಇದ್ದರೊಬ್ಬ ರೀಯಲ್ ಕ್ರಿಕೆಟರ್-ಪ್ರಕಾಶ್ ರಾಠೋಡ್!
ರಾಜಕಾರಣಿಗಳ ನಡುವೆ ಇದ್ದರೊಬ್ಬ ರೀಯಲ್ ಕ್ರಿಕೆಟರ್-ಪ್ರಕಾಶ್ ರಾಠೋಡ್!
ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?
ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?
ಒಂದು ವಾರದೊಳಗೆ ಎಲ್ಲವೂ ಸುಖಾಂತ್ಯವಾಗುತ್ತದೆ ಅಂತ ಅಶೋಕ ಹೇಳಿದ್ಯಾಕೆ?
ಒಂದು ವಾರದೊಳಗೆ ಎಲ್ಲವೂ ಸುಖಾಂತ್ಯವಾಗುತ್ತದೆ ಅಂತ ಅಶೋಕ ಹೇಳಿದ್ಯಾಕೆ?
ವಾರ್ನರ್​ ಬಿಡುಗಡೆ ಬೆನ್ನಲ್ಲೇ ‘ಯುಐ’ ಸಿನಿಮಾ ಸುದ್ದಿಗೋಷ್ಠಿ; ಲೈವ್ ನೋಡಿ..
ವಾರ್ನರ್​ ಬಿಡುಗಡೆ ಬೆನ್ನಲ್ಲೇ ‘ಯುಐ’ ಸಿನಿಮಾ ಸುದ್ದಿಗೋಷ್ಠಿ; ಲೈವ್ ನೋಡಿ..
ಬ್ರೇಕಿಂಗ್ ನ್ಯೂಸ್​ ಮೂಲಕವೂ ಕಳಚಿತು ಗೌತಮಿ ಜಾದವ್ ಪಾಸಿಟಿವ್ ಮುಖವಾಡ
ಬ್ರೇಕಿಂಗ್ ನ್ಯೂಸ್​ ಮೂಲಕವೂ ಕಳಚಿತು ಗೌತಮಿ ಜಾದವ್ ಪಾಸಿಟಿವ್ ಮುಖವಾಡ