ಹಾವೇರಿ: 4 ಮೆಕ್ಕೆಜೋಳ ತೆನೆ ರಾಶಿಗೆ ದುಷ್ಕರ್ಮಿಗಳು ಬೆಂಕಿ (fire) ಇಟ್ಟಿರುವಂತಹ ಘಟನೆ ಜಿಲ್ಲೆಯ ಹಾನಗಲ್ ತಾಲೂಕು ಕೆಲವರಕೊಪ್ಪ ಗ್ರಾಮದಲ್ಲಿ ನಡೆದಿದೆ. ಬಸವರಾಜ್ ಕೊಗಲ್ಲಿ ಎಂಬ ರೈತನಿಗೆ ಸೇರಿದ ತೆನೆಯ ರಾಶಿ ಎನ್ನಲಾಗಿದೆ. ಅಂದಾಜು ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ತೆನೆರಾಶಿ ಬೆಂಕಿಗಾಹುತಿಯಾಗಿದೆ. ರಾತ್ರಿಯ ವೇಳೆ ಜಮೀನಿನಲ್ಲಿ ಮೆಕ್ಕೆಜೋಳ ತೆನೆಯ ರಾಶಿ ಹಾಕಲಾಗಿತ್ತು. ಈ ವೇಳೆ ದ್ವೇಷದಿಂದ ಅಪರಿಚತರು ರಾಶಿಗೆ ಬೆಂಕಿ ಹಾಕಿದ್ದಾರೆ ಎನ್ನಲಾಗಿದೆ. ಬೆಂಕಿ ನಂದಿಸಲು ಎಷ್ಟೇ ಹರಸಾಹಸ ಪಟ್ಟರು ರಾಶಿಗಳು ಸುಟ್ಟು ಹೋಗಿವೆ. ಆಡೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕ್ಲೋಸ್‌ಬರ್ನ್ ಗ್ರಾಮದಲ್ಲಿ ಬೆಂಕಿಯ ತಾಪಮಾನದಿಂದ ಸಿಲಿಂಡರ್ ಸ್ಫೋಟಗೊಂಡಿದ್ದು, ಶಿವಕುಮಾರ್ ಎಂಬುವರ ಮನೆ ಬೆಂಕಿಗಾಹುತಿಯಾಗಿರುವಂತಹ ಘಟನೆ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಸಿಲಿಂಡರ್ ಸ್ಪೋಟದ ಸದ್ದಿಗೆ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಪೀಠೋಪಕರಣಗಳು ಸುಟ್ಟು ಕರಕಲಾಗಿವೆ.
ಇದನ್ನೂ ಓದಿ: ಮಗಳು-ಅಳಿಯನನ್ನು ನೋಡಿಕೊಂಡು ಹೋಗಲು ಬಂದವ ಮನೆ ಮಾಲಕಿಯ ಐಶ್ವರ್ಯಕ್ಕೆ ಮರುಳಾದ; ಮುಂದೇನಾಯ್ತು ನೋಡಿ
ತುಮಕೂರು: ಆಕಸ್ಮಿಕವಾಗಿ ಬೆಂಕಿ ತಗುಲಿ ಹಾಸಿಗೆ ತಯಾರಿಕಾ ಘಟಕ ಸುಟ್ಟು ಬೂದಿಯಾದಂತಹ ಘಟನೆ ಜಿಲ್ಲೆ ತುರುವೇಕೆರೆ ಪಟ್ಟಣದ ಹೊರವಲಯದಲ್ಲಿರುವ ಸೂಳೆಕೆರೆ ಬಳಿ ನಡೆದಿದೆ. ಅಪಾರ ಪ್ರಮಾಣದ ಹತ್ತಿ, ನಾರು, ಯಂತ್ರೋಪಕರಣಗಳು ಭಸ್ಮವಾಗಿವೆ. ವಲೀಭಾಷಾ ಎಂಬುವರಿಗೆ ಹಾಸಿಗೆ ತಯಾರಿಕಾ ಘಟಕ ಸೇರಿದೆ. ಸುಮಾರು 18 ಲಕ್ಷ ರೂ. ಮೌಲ್ಯದ ವಸ್ತುಗಳು ನಷ್ಟ ಸಾಧ್ಯತೆ ಎನ್ನಲಾಗುತ್ತಿದೆ. ತುರುವೇಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಧಾರವಾಡ: ಭಿಕ್ಷೆ ಬೇಡುತ್ತ, ಜನ ಕೊಟ್ಟಿದ್ದನ್ನು ತಿಂದು, ಎಲ್ಲೆಂದರಲ್ಲಿ ಮಲಗಿ ಅನಾಥವಾಗಿ ಜೀವನ ಸಾಗಿಸುತ್ತಿದ್ದ ಭಿಕ್ಷುಕಿಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಕೊಂದು ಹಾಕಿರುವ ಅಮಾನವೀಯ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಕಳೆದ ರಾತ್ರಿ ಮಲಗಿದ್ದ ಭಿಕ್ಷುಕಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಈ ಪರಿಣಾಮ ಭಿಕ್ಷುಕಿ ಪ್ರಾಣಬಿಟ್ಟಿದ್ದಾರೆ.
ಇದನ್ನೂ ಓದಿ: ಪಿಚ್ಚನಕೆರೆ ಏರಿ ಮೇಲೆ ಚಲಿಸುತ್ತಿದ್ದ ಶಾಲಾ ಬಸ್ಸಿನಿಂದ ಚಕ್ರದಡಿಗೆ ಬಿದ್ದು ಯುಕೆಜಿ ವಿದ್ಯಾರ್ಥಿನಿ ಸಾವು
ಧಾರವಾಡದಲ್ಲಿ ಬೀದಿ ನಾಯಿಗಳ ಆವಳಿಗೆ ಜನ ಬೆಚ್ಚಿಬಿದ್ದಿದ್ದಾರೆ. ಎಂದಿನಂತೆ ರಸ್ತೆ ಬದಿ ರಾತ್ರಿ ನಿದ್ದೆಗೆ ಜಾರಿದ್ದ ಭಿಕ್ಷುಕಿ ಮೇಲೆ ಬೀದಿ ನಾಯಿಗಳು ಎರಗಿವೆ. ಭಿಕ್ಷುಕಿಯನ್ನು ಕಚ್ಚಿ ಎಳೆದಾಡಿವೆ. ನಾಯಿ ದಾಳಿಯಿಂದ ಭಿಕ್ಷುಕಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಗ್ರಾಮದ ಖಬರಸ್ತಾನ್ ಬಳಿ ಶವ ಪತ್ತೆಯಾಗಿದ್ದು ಘಟನಾ ಸ್ಥಳಕ್ಕೆ ಗರಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಯಿ ದಾಳಿಗೆ ಮೃತಪಟ್ಟ ಭಿಕ್ಷುಕಿ ಹೆಸರು, ವಿಳಾಸ ಪತ್ತೆಯಾಗಿಲ್ಲ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:48 pm, Wed, 11 January 23