ಕುಡಿದುಬಂದು ಸಣ್ಣ ಮಕ್ಕಳೊಂದಿಗೆ ಜಗಳ; ಮದ್ಯದ ಅಮಲಿನಲ್ಲಿ ಮಗಳನ್ನೇ ಕೊಂದ ತಂದೆ ಅರೆಸ್ಟ್
ಕುಡುಕ ತಂದೆಯೊಬ್ಬ ಮದ್ಯದ ಅಮಲಿನಲ್ಲಿ ಹದಿಮೂರು ವರ್ಷದ ಮಗಳನ್ನೇ ಕೊಲೆ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದ್ದು, ಸಂಬಂಧಿಕರು ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸುವಂತೆ ಒತ್ತಾಯಿಸುತ್ತಿದ್ದಾರೆ.
ಮೈಸೂರು: ತಾಯಿ ತಂದೆ ಪ್ರತ್ಯಕ್ಷ ದೈವ ಎನ್ನುವ ಮಾತಿದೆ. ಆದರೆ ಮೈಸೂರಿನಲ್ಲಿ ತಂದೆ ಪ್ರತ್ಯಕ್ಷ ದೈವವಾಗುವ ಬದಲು ಮಗಳ ಪಾಲಿಗೆ ದೆವ್ವವಾಗಿದ್ದಾನೆ. ಕುಡಿದು ಬಂದು ನಿತ್ಯ ಮನೆಯಲ್ಲಿ ಹೊಡಿಬಡಿ ಮಾಡುತ್ತಿದ್ದ ತಂದೆಯೊಬ್ಬ ಮದ್ಯದ ಅಮಲಿನಲ್ಲಿ ತನ್ನ ಹದಿಮೂರು ವರ್ಷದ ಮಗಳನ್ನೇ ಕೊಲೆ (Father kills daughter) ಮಾಡಿ ಜೈಲು ಸೇರಿರುವ ಘಟನೆ ತಾಲೂಕಿನಲ್ಲಿ ನಡೆದಿದೆ. ಉದ್ಬೂರು ಗ್ರಾಮದ ಕುಸುಮ (13 ವರ್ಷ) ಕೊಲೆಯಾದ ಬಾಲಕಿ. ಕುಡಿತದ ಚಟವಿದ್ದ ಸ್ವಾಮಿ ನಾಯಕ ಯಾವುದೇ ಕೆಲಸ ಮಾಡುತ್ತಿರಲ್ಲ. ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಈ ವಿಚಾರವಾಗಿ ಸಾಕಷ್ಟು ಪಂಚಾಯತಿ ಮಾಡಿ ಬುದ್ದಿ ಹೇಳಲಾಗಿತ್ತು. ಆದರೆ ಯಾರು ಎಷ್ಟೇ ಬುದ್ದಿ ಹೇಳಿದರೂ ಬುದ್ದಿ ಕಲಿಯದ ಸ್ವಾಮಿ ನಾಯಕ ಕುಡಿದ ಅಮಲಿನಲ್ಲಿ ತನ್ನ ಮಗಳನ್ನೇ ಕೊಲೆ ಮಾಡಿದ್ದಾನೆ.
ಇದನ್ನೂ ಓದಿ: ಡೇಟಿಂಗ್ ಆ್ಯಪ್ನಲ್ಲಿ ಪ್ರೇಮಾಂಕುರ: ತನನ್ನು ನೋಡಲು ಬಂದ ಪ್ರೇಯಸಿಯನ್ನು ಕೊಂದು ಅಂಗಾಂಗ ಮಾರಿದ ಪ್ರಿಯಕರ..
ಈ ಪ್ರಕರಣ ನಡೆದಿದ್ದು ನವೆಂಬರ್ 17 ರಂದು. ಮೃತ ಕುಸುಮ ತಾಯಿ ಗೀತಾ ಕೆಲಸಕ್ಕೆ ಹೋಗಿದ್ದಾಗ ಮನೆಯಲ್ಲಿ ಕುಸುಮ ಮತ್ತು ಚಿಕ್ಕ ಮಗಳು ಇದ್ದರು. ಮಕ್ಕಳು ಮನೆಯಲ್ಲಿದ್ದ ವೇಳೆಯೇ ಕುಡಿದು ಮನೆಗೆ ಬಂದ ಸ್ವಾಮಿನಾಯಕ ತನ್ನ ಇಬ್ಬರು ಹೆಣ್ಣು ಮಕ್ಕಳ ಜೊತೆ ಜಗಳ ಶುರು ಮಾಡಿದ್ದಾನೆ. ಕುಡಿದ ಅಮಲಿನಲ್ಲಿ ಮಕ್ಕಳಿಬ್ಬರಿಗೂ ಸುತ್ತಿಗೆಯಲ್ಲಿ ಹೊಡೆದಿದ್ದಾನೆ. ಗೀತಾ ಮನೆಗೆ ಬಂದಾಗ ಮಕ್ಕಳು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಈ ವೇಳೆ ಮನೆಗೆ ಬಂದ ಪತ್ನಿ ಗೀತಾ ಮೇಲೂ ಸ್ವಾಮಿ ಹಲ್ಲೆ ಮಾಡಿದ್ದಾನೆ. ತಕ್ಷಣ ಗೀತಾ ಕೂಗಿಕೊಂಡಾಗ ಅಕ್ಕ ಪಕ್ಕದವರು ಬಂದು ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕುಸುಮ ಸಾವನ್ನಪ್ಪಿದ್ದಾಳೆ. ಇದಕ್ಕೆಲ್ಲಾ ಕುಡಿತದ ಕೆಟ್ಟ ಚಟವೇ ಕಾರಣ ಎಂದು ಸಂಬಂಧಿಕರು ಆರೋಪ ಮಾಡುತ್ತಿದ್ದಾರೆ.
ಸದ್ಯ ಆರೋಪಿ ಸ್ವಾಮಿಯನ್ನು ಜಯಪುರ ಪೊಲೀಸರು ಬಂಧಿಸಿದ್ದಾರೆ. ಮತ್ತೊಂದು ಮಗು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಮಗಳನ್ನೇ ಕೊಂದ ಪಾಪಿಗೆ ಜೀವಾವಧಿ ಶಿಕ್ಷೆ ಕೊಡಿ ಅಂತಾ ಸಂಬಂಧಿಕರು ಒತ್ತಾಯಿಸುತ್ತಿದ್ದಾರೆ. ಇದೆಲ್ಲಾ ಏನೇ ಇರಲಿ ಕುಡಿತದ ಚಟಕ್ಕೆ ಬಿದ್ದ ಪಾಪಿ ಬಾಳಿ ಬದುಕಬೇಕಿದ್ದ ಸ್ವಂತ ಮಗಳನ್ನೇ ಕೊಲೆ ಮಾಡಿದ್ದು ಮಾತ್ರ ಅಮಾನವೀಯ.
ವರದಿ: ರಾಮ್, ಟಿವಿ9 ಮೈಸೂರು
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:41 pm, Sat, 26 November 22