ಅದು ಕೇವಲ ಮೈಸೂರು ಅಥವಾ ರಾಜ್ಯವನ್ನು ಮಾತ್ರವಲ್ಲ, ಇಡೀ ದೇಶದ ಜನರನ್ನೇ ಬೆಚ್ಚಿ ಬೀಳಿಸಿದ್ದ ಸಾಮೂಹಿಕ, ಪೈಶಾಚಿಕ ಅತ್ಯಾಚಾರ ಪ್ರಕರಣ (Mysore gang rape). ಸ್ನೇಹಿತನ ಜೊತೆ ವಾಕಿಂಗ್‌ಗೆ ಅಂತಾ ಹೋಗಿದ್ದ ವಿದ್ಯಾರ್ಥಿನಿ ಮೇಲೆ ಕೀಚಕರು ಸೀಳು ನಾಯಿಗಳಂತೆ ಮುಗಿಬಿದ್ದು ಮುಕ್ಕಿ ಹಾಕಿದ್ದರು. ಸಾಲದು ಅಂತಾ ಸ್ನೇಹಿತನ ಮೇಲೆ ಹಲ್ಲೆ ಸಹ ನಡೆಸಿದ್ದರು. ಕಿಂಚಿತ್ತೂ ಸುಳಿವು ಸಿಗದ ಈ ಪ್ರಕರಣವನ್ನು ಮೈಸೂರು ಪೊಲೀಸರು (Mysore police) ಭೇದಿಸಿದ್ದೇ ರೋಚಕ.
ಆಗಸ್ಟ್ 24 2021 ರಾತ್ರಿ 8 ಗಂಟೆ ಸುಮಾರು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಗರಿಕ ಸಮಾಜವೇ ತಲೆ ತಗ್ಗಿಸುವಂತ ಘೋರ ಘಟನೆಯೊಂದು ನಡೆದು ಹೋಗಿತ್ತು. ಮೈಸೂರಿನ ಹೊರವಲಯದ ಲಲಿತಾದ್ರಿಪುರಕ್ಕೆ ಹೋಗುವ ರಸ್ತೆಯ ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಮುಂಬೈ ಮೂಲದ ವಿದ್ಯಾರ್ಥಿನಿ, ಮೈಸೂರಿನ ತನ್ನ ಸ್ನೇಹಿತನ ಜೊತೆ ವಾಕಿಂಗ್‌ಗೆ ಹೋಗಿದ್ದಾಗ ಇವರ ಮೇಲೆ ದಾಳಿ ಮಾಡಿದ ಅಪರಿಚಿತರ ಗುಂಪು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿತ್ತು. ನಂತರ ಸ್ನೇಹಿತನಿಗೆ ಥಳಿಸಿ ಪೊದೆಗೆ ಎಸೆದು ಅಲ್ಲಿಂದ ಪರಾರಿಯಾಗಿದ್ದರು.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣ ಮೈಸೂರಿಗೆ ಒಂದು ಕಪ್ಪು ಚುಕ್ಕೆಯಾಗಿತ್ತು. ಗ್ಯಾಂಗ್ ರೇಪ್ ಪ್ರಕರಣ ಪೊಲೀಸ್ ಇಲಾಖೆಗೆ ತಲೆ ನೋವಾಗಿತ್ತು. ಗ್ಯಾಂಗ್ ರೇಪ್ ಪ್ರಕರಣದ ಸಂಬಂಧ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ರಾಜ್ಯಾದ್ಯಂತ ಜನಾಕ್ರೋಶ ಕೂಡ ವ್ಯಕ್ತವಾಗಿತ್ತು. ಕಾಮುಕರ ಬಂಧನ ಯಾವಾಗ ಅಂತಾ ಟಿವಿ9 ಅಭಿಯಾನ ಆರಂಭಿಸಿತ್ತು. ಟಿವಿ9 ಅಭಿಯಾನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಬೆಂಬಲ ವ್ಯಕ್ತವಾಗಿತ್ತು.
ಮೈಸೂರು ಗ್ಯಾಂಗ್ ರೇಪ್ ಪ್ರಕರಣ ನಡೆದ ನಂತರ ಹೆಚ್ಚಾಗಿ ಒತ್ತಡಕ್ಕೆ ಸಿಲುಕಿದ್ದವರು ಮೈಸೂರು ಪೊಲೀಸರು. ಪ್ರಕರಣ ಮೈಸೂರು ಪೊಲೀಸರಿಗೆ ಸಾಕಷ್ಟು ಸವಾಲಾಗಿ ಪರಿಣಮಿಸಿತ್ತು. ಘಟನೆ ನಂತರ ಸಂತ್ರಸ್ತೆ ಸಾಕಷ್ಟು ಮಾನಸಿಕ ಆಘಾತಕ್ಕೆ ಒಳಗಾಗಿದ್ದಳು. ಆಕೆ ಮತ್ತು ಆಕೆಯ ಪೋಷಕರು ತನಿಖೆಗೆ ಯಾವುದೇ ಸಹಕಾರ ನೀಡುವುದಿಲ್ಲ. ನಮ್ಮನ್ನು ನಮ್ಮ ಪಾಡಿಗೆ ಬಿಟ್ಟು ಬಿಡಿ ಅಂತಾ ಕಡ್ಡಿ ಮುರಿದ ರೀತಿ ಹೇಳಿ ಬಿಟ್ಟಿದ್ದರು.
ಇಷ್ಟಾದರೂ ಪೊಲೀಸರು ಎದೆಗುಂದಿರಲಿಲ್ಲ. ಸಂತ್ರಸ್ತೆ ಸ್ನೇಹಿತ ನೀಡಿದ ಅಲ್ಪಸ್ವಲ್ಪ ಮಾಹಿತಿಯನ್ನೇ ಆಧಾರವಾಗಿಸಿಕೊಂಡು ಪ್ರಕರಣದ ಎಲ್ಲಾ ಆರೋಪಿಗಳನ್ನು ಹೆಡೆಮುರಿ ಕಟ್ಟಿ ತರುವಲ್ಲಿ ಯಶಸ್ವಿಯಾಗಿದ್ದರು.
ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದೇ ರೋಚಕ!
ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ತೆಯ ಹೇಳಿಕೆ ಸಿಗದೆ, ತನಿಖೆ ನಡೆಸಲು ಮುಂದಾದ ಪೊಲೀಸರಿಗೆ ಆರಂಭದಲ್ಲಿ ಈ ಪ್ರಕರಣ ಸವಾಲಾಗಿತ್ತು. ಸ್ಥಳ ಪರಿಶೀಲನೆ ಮಾಡಲು ಹೊರಟ ಪೊಲೀಸರಿಗೆ ಏನಂದರೆ ಏನೂ ಸಿಗಲಿಲ್ಲ. ಘಟನೆ ನಡೆದ ಸ್ಥಳ ನಿರ್ಜನ ಪ್ರದೇಶವಾಗಿತ್ತು. ಕಣ್ಣಿಗೆ ಎಣ್ಣೆಬಿಟ್ಟುಕೊಂಡು ಹುಡುಕಿದರೂ ಏನಂದರೆ ಏನೂ ಸಿಕ್ಕಿರಲಿಲ್ಲ.
ಮುಂದೇನು ಅಂತಾ ಕೈ ಕಟ್ಟಿ ಕುಳಿತಿದ್ದ ಪೊಲೀಸರಿಗೆ ಮರಳುಗಾಡಿನಲ್ಲಿ ಓಯಸಿಸ್ ಹಾಗೆ ಸಿಕ್ಕಿದ್ದು ಆರೋಪಿಗಳು ಸ್ಥಳದಲ್ಲಿ ಬಿಟ್ಟು ಹೋಗಿದ್ದ ಆ ಒಂದೇ ಒಂದು ಬಸ್ ಟಿಕೆಟ್. ಹೌದು ಅದೇ ಟಿಕೆಟ್ ಆರೋಪಿಗಳ ಸುಳಿವು ನೀಡಿತ್ತು. ಬಸ್ ಟಿಕೆಟ್ ಹಿಡಿದು ಹೊರಟ ಪೊಲೀಸರು ಗ್ಯಾಂಗ್ ರೇಪ್ ಪ್ರಕರಣದ ಕಿರಾತಕರನ್ನು ಪಕ್ಕದ ತಮಿಳುನಾಡಿನಿಂದ ಎಳೆದು ತಂದಿದ್ದರು.
ಪ್ರಕರಣದಲ್ಲಿ ಆರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಯಾವುದೇ ಸಿನಿಮಾ ಸ್ಟೋರಿಗಿಂತಲೂ ಕಡಿಮೆಯಿರಲಿಲ್ಲ ಆ ರೋಚಕ ಕಥೆ. ಅರೋಪಿಗಳೆಲ್ಲಾ ತಮಿಳುನಾಡಿನಲ್ಲಿ ನಾನಾ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವರಾಗಿದ್ದರು. ಇವರೆಲ್ಲರೂ ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣದ ರೂವಾರಿಗಳು ಅನ್ನೋದು ಕನ್ಫರ್ಮ್ ಆಗಿತ್ತು.
ಬಂಧಿತ ಆರೋಪಿಗಳು 23 ರಂದು ಮಧ್ಯಾಹ್ನ ತಮಿಳುನಾಡಿನ ತಾಳವಾಡಿಯಿಂದ ಚಾಮರಾಜನಗರಕ್ಕೆ ಬಂದಿದ್ರು. ಬರುವಾಗ ಕೆಎಸ್ಆರ್ಟಿ ಸಿ ಬಸ್ ನಲ್ಲಿ ಬಂದಿದ್ರು. ಸ್ಥಳದಲ್ಲಿ ಸಿಕ್ಕಿದ್ದ ಬಸ್ ಟಿಕೆಟ್ ವಶಕ್ಕೆ ಪಡೆದಿದ್ದ ಪೊಲೀಸರು ಬಸ್ ಟಿಕೆಟ್ ಆಧಾರದಲ್ಲಿ ಮೊಬೈಲ್ ಡಂಪ್ ಪಡೆದು ಪರಿಶೀಲನೆ ನಡೆಸಿದ್ದರು …. ಘಟನೆ ನಡೆದ ಸ್ಥಳ, ಮತ್ತೊಂದು ತಾಳವಾಡಿಯಿಂದ ಚಾಮರಾಜನಗರಕ್ಕೆ ಬಂದ ಬಸ್ ಟವರ್ ಲೊಕೇಶನ್ ಪರಿಶೀಲಿಸಲಾಯ್ತು. ಇದರಲ್ಲಿ ಬಸ್ ಟಿಕೆಟ್ ಖರೀದಿ ಮಾಡಿದ ಸ್ಥಳ ಹಾಗೂ ಘಟನೆ ನಡೆದ ಸ್ಥಳದ ಟವರ್ ಲೊಕೇಶನ್ ನಲ್ಲಿ ಒಂದು ಮೊಬೈಲ್ ನಂಬರ್ ಕಾಮನ್ ಆಗಿರುವುದು ಗೊತ್ತಾಗಿತ್ತು.
ಯಾವಾಗ ಆ ನಂಬರ್ ಸಿಕ್ಕಿತೋ ಪೊಲೀಸರಿಗೆ ಒಂದು ಸಮಾಧಾನವಾಗಿತ್ತು. ಆ ನಂಬರ್ ಹುಡುಕಿಕೊಂಡ ಹೋದ ಪೊಲೀಸರು ಪ್ರಕರಣ ಭೇದಿಸಿದರು. ಟೆಕ್ನಿಕಲ್ ಹಾಗೂ ಸೈಂಟಿಫಿಕ್ ಸಾಕ್ಷ್ಯಗಳ ಮೂಲಕ ತಾಂತ್ರಿಕ ಹಾಗೂ ವೈಜ್ಞಾನಿಕ ಸಾಕ್ಷ್ಯಗಳ ಮೂಲಕ ಬೇಧಿಸಲಾಯಿತು.
ಇನ್ನು ಬಂಧಿತ ಆರೋಪಿಗಳು ಕೂಲಿ ಕಾರ್ಮಿಕರು. ಇವರೆಲ್ಲರೂ ಡ್ರೈವರ್, ಕಾರ್ಪೆಂಟರ್, ವೈರಿಂಗ್ ಕೆಲಸ ಮಾಡುವವರಾಗಿದ್ದರು. ಎಲ್ಲರೂ ತಮಿಳುನಾಡಿನ ತಿರುಪೂರಿನವರಾಗಿದ್ದರು. ಒರ್ವ ಮಾತ್ರ ತಾಳವಾಡಿ ಸಮಿಪದ ಸೂಸೈಪುರಂ ನಿವಾಸಿಯಾಗಿದ್ದ. ಬಂಧಿತರು ಮೈಸೂರಿಗೆ ಆಗಾಗ ಬಂದು ಹೋಗ್ತಾ ಇದ್ರು. ಬಂಡಿಪಾಳ್ಯದ ಎಪಿಎಂಸಿಗೆ ತರಕಾರಿ ಕೊಳ್ಳಲು ಬರುವ ಓರ್ವ ಆರೋಪಿ ಡ್ರೈವರ್ ಜೊತೆ ಇನ್ನುಳಿದ ಐವರು ಬರುತ್ತಾ ಇದ್ರು. ಬಂದು ಹೋಗುವ ವೇಳೆ ಎಲ್ಲರೂ ಕಡ್ಡಾಯವಾಗಿ ಮದ್ಯಪಾನ ಮಾಡಿಯೇ ತೆರಳುತ್ತಿದ್ರು.
ಇವರೆಲ್ಲರೂ ಹೆದ್ದಾರಿಯ ಸುಲಿಗೆಕೋರರಾಗಿದ್ದರು. ಹೀಗೆ 24 ರಂದು ಬಂದ ಆರು ಮಂದಿ ಲಲಿತಾದ್ರಿಪುರ ಸಮೀಪದ ನಿರ್ಜನ ಪ್ರದೇಶಕ್ಕೆ ಬಂದಿದ್ರು. ಇದೇ ವೇಳೆ ಸ್ಥಳಕ್ಕೆ ಬಂದ ಸದರಿ ಕಾಲೇಜು ವಿದ್ಯಾರ್ಥಿನಿ ಹಾಗೂ ಸ್ನೇಹಿತ ಏಕಾಂತದಲ್ಲಿ ಇರೋದನ್ನ ನೋಡಿಯೇ ಅಟ್ಯಾಕ್ ಮಾಡಿದ್ದರು. ಯುವತಿಯ ಸ್ನೇಹಿತನನ್ನು ಥಳಿಸಿ, ಪೊದೆಯೊಳಗೆ ಸಂತ್ರಸ್ತೆಯನ್ನ ಎಳೆದೊಯ್ದು ಅತ್ಯಾಚಾರ ಎಸಗಿದ್ದರು. ಈ ವೇಳೆ ಯುವಕ ಹಾಗೂ ಸಂತ್ರಸ್ತೆಯಿಂದ 3 ಲಕ್ಷ ರೂಪಾಯಿಗಳನ್ನ ಡಿಮ್ಯಾಂಡ್ ಮಾಡಿದ್ದರು. ಹಣ ಪಡೆಯುವುದು ವಿಫಲವಾಗಿ ಸ್ಥಳದಿಂದ ಎಸ್ಕೇಪ್ ಆಗಿದ್ದರು.
ಇನ್ನು ಆರೋಪಿಗಳನ್ನು ಅರೆಸ್ಟ್ ಮಾಡಲು ಹೋದ ಪೊಲೀಸರ ಮೇಲೆ ಇವರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಮುಂದಾಗಿದ್ದರು. ಸ್ಥಳೀಯರು ಸಹಾ ಆರೋಪಿಗಳ ಬೆನ್ನಿಗೆ ನಿಂತಿದ್ದರು. ಆದರೂ ಎದೆಗುಂದದ ಮೈಸೂರು ಪೊಲೀಸರು ಪ್ರಾಣದ ಹಂಗು ತೊರೆದು ಎಲ್ಲಾ ಆರೋಪಿಗಳ ಹೆಡೆಮುರಿ ಕಟ್ಟಿ ಮೈಸೂರಿಗೆ ತಂದಿದ್ದರು.
ಮೈಸೂರು ಪೊಲೀಸರೇನೋ ಯಾವುದೇ ಸುಳಿವು ಇಲ್ಲದೇ ಇದ್ದರೂ ಕಷ್ಟಪಟ್ಟು ಆರೋಪಿಗಳ ಹೆಡೆ ಮುರಿಕಟ್ಟಿ ತಂದಿದ್ದರು. ಆದರೆ ಪೊಲೀಸರು ಎಲ್ಲ ಮುಗೀತು ಅಂತ ಕೂರುವ ಹಾಗಿರಲಿಲ್ಲ. ಯಾಕಂದ್ರೆ ಅದು ಪ್ರಕರಣದ ಅಂತ್ಯವಲ್ಲ, ಆರಂಭವಾಗಿತ್ತು. ಮುಂದೆ ಸಾಕಷ್ಟು ಸವಾಲುಗಳು ತಮ್ಮ ನಿದ್ದೆಗೆಡಿಸಲಿವೆ ಅನ್ನೋದು ಪೊಲೀಸರಿಗೂ ಗೊತ್ತಿತ್ತು.
ಅದಕ್ಕೆ ಪ್ರಮುಖ ಕಾರಣ ಗ್ಯಾಂಗ್ ರೇಪ್ ಪ್ರಕರಣದ ಸಂತ್ರಸ್ತೆ ಹಾಗೂ ಅವರ ಮನೆಯವರ ಅಸಹಕಾರ. ಘಟನೆ ನಡೆದ ದಿನದಿಂದ ಒಂದು ಪದವನ್ನೂ ಪೊಲೀಸರು ಸಂತ್ರಸ್ತೆಯಿಂದ ಪಡೆಯಲು ಸಾಧ್ಯವಾಗಿರಲಿಲ್ಲ. ಇದನ್ನು ಖುದ್ದು ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರೇ ಒಪ್ಪಿಕೊಂಡಿದ್ದರು.
ಅಷ್ಟೇ ಅಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗಳನ್ನು ಪೋಷಕರು ಮುಂಬೈಗೆ ಕರೆದುಕೊಂಡು ಹೊರಟು ಹೋಗಿದ್ರು. ಹೀಗಾಗಿ ಪೊಲೀಸರು ಸಹಜವಾಗಿಯೇ ಚಿಂತೆಗೆ ಒಳಗಾಗಿದ್ದರು. ಅಷ್ಟೊಂದು ಕಷ್ಟಪಟ್ಟು ಭೇದಿಸಿದ ಪ್ರಕರಣ ಹಾಗೂ ರಾಜ್ಯಾದ್ಯಂತ ವ್ಯಕ್ತವಾಗುತ್ತಿದ್ದ ಟೀಕೆ-ಟಿಪ್ಪಣಿಗಳನ್ನು ಕೇರ್ ಮಾಡದೆ ಆರೋಪಿಗಳನ್ನು ಬಂಧಿಸಿ ತಂದ ಪ್ರಕರಣ ಒಂದು ತಾತ್ವಿಕ ಅಂತ್ಯ ಕಾಣಬೇಕು ಅನ್ನೋದು ಪೊಲೀಸರ ಆಶಯವಾಗಿತ್ತು.
ಸಂತ್ರಸ್ತೆ ಯಾವುದೇ ಸಹಕಾರ ನೀಡದೆ ಇದ್ದದ್ದು ಪೊಲೀಸರ ತನಿಖೆಗೆ ಎಲ್ಲೋ ಒಂದು ಕಡೆ ಹಿನ್ನಡೆಯಾಗಿತ್ತಾ ಅನ್ನೋ ಅನುಮಾನ ಕಾಡುತ್ತಿತ್ತು. ಆರೋಪಿಗಳು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಂಡು ಬಿಡುತ್ತಾರೆ ಅನ್ನೋ ಚರ್ಚೆ ಸಹಾ ಆರಂಭವಾಗಿತ್ತು. ಆದರೆ ಮಹತ್ವದ ಬೆಳವಣಿಗೆಯೊಂದರಲ್ಲಿ ಸಂತ್ರಸ್ತೆಯನ್ನು ಮೈಸೂರಿಗೆ ವಾಪಸ್ಸು ಕರೆ ತರುವಲ್ಲಿ ಪೊಲೀಸರು ಯಶಸ್ವಿಯಾದರು!
ಅಷ್ಟೇ ಅಲ್ಲ ನ್ಯಾಯಾಧೀಶರ ಮುಂದೆ ಹೋಗಿ ತನ್ನ ಹೇಳಿಕೆಯನ್ನು ದಾಖಲಿಸುವಂತೆ ಮಾಡಿದ್ರು. ಜೊತೆಗೆ ಆಕೆ ಪೊಲೀಸರ ಮುಂದೆ ತನಗಾದ ಅನ್ಯಾಯದ ಬಗ್ಗೆ ಎಳೆ ಎಳೆಯಾಗಿ ವಿವರಿಸಿ ಹೇಳಿಕೆ ದಾಖಲಿಸುವಂತೆಯೂ ಮಾಡುವಲ್ಲಿ ಪೊಲೀಸರು ಯಶಸ್ವಿಯಾದರು.
ಇದಕ್ಕೆ ಕಾರಣ ಮೈಸೂರು ಪೊಲೀಸರು. ಹೌದು ಎಲ್ಲವೂ ತಣ್ಣಗಾದ ಮೇಲೆ ಮುಂಬೈಗೆ ಹಾರಿದ ಮೈಸೂರು ಪೊಲೀಸರ ತಂಡ ಸಂತ್ರಸ್ತೆ ಹಾಗೂ ಪೋಷಕರನ್ನು ಭೇಟಿ ಮಾಡಿ ಪ್ರಕರಣದ ತನಿಖೆಯ ಬಗ್ಗೆ ಹಾಗೂ ಸಂತ್ರಸ್ತೆ ನೀಡುವ ಸಹಕಾರದ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಇದೆಲ್ಲದರ ಪರಿಣಾಮ ಸಂತ್ರಸ್ತೆಯ ಪೋಷಕರು ಮೈಸೂರಿಗೆ ಬಂದು ಹೇಳಿಕೆ ದಾಖಲಿಸಿದ್ರು.
ಹೇಳಿಕೆ ಅಷ್ಟೇ ಅಲ್ಲ ಯಶಸ್ವಿಯಾದ ಐಡೆಂಟಿಫಿಕೇಶನ್ ಪೆರೇಡ್:
ಎಸ್! ಮುಂಬೈನಿಂದ ಮೈಸೂರಿಗೆ ಬಂದ ಸಂತ್ರಸ್ತೆ ಕೇವಲ ಹೇಳಿಕೆಯನ್ನು ಮಾತ್ರ ದಾಖಲಿಸಲಿಲ್ಲ. ಆರೋಪಿಗಳ ಗುರುತು ಪತ್ತೆಗೂ ಸಹಕಾರ ನೀಡಿದರು. ಮೈಸೂರು ಪೊಲೀಸರು ಸಂತ್ರಸ್ತೆಗೆ ಆರೋಪಿಗಳ ಐಡೆಂಟಿಫಿಕೇಶನ್ ಪೆರೇಡ್ ನಡೆಸಿದರು. ಐಡೆಂಟಿಫಿಕೇಶನ್ ಪೆರೇಡ್ ನಲ್ಲಿ ಸಂತ್ರಸ್ತೆ ಎಲ್ಲಾ ಆರೋಪಿಗಳನ್ನು ಗುರುತು ಹಿಡಿದಿದ್ದು ಪೊಲೀಸರ ಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿತ್ತು. ಇಷ್ಟೆಲ್ಲಾ ಆದ ಮೇಲೆಯೇ ಮೈಸೂರು ಪೊಲೀಸರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು.
ಸದ್ಯ ಎಲ್ಲಾ ಆರೋಪಿಗಳು ಜೈಲಿನಲ್ಲಿದ್ದಾರೆ. ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದ್ದು ಪ್ರಕರಣದ ವಿಚಾರಣೆ ನಡೆಯುತ್ತಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವ ವಿಶ್ವಾಸದಲ್ಲಿ ಮೈಸೂರು ಪೊಲೀಸರಿದ್ದಾರೆ. (ವರದಿ: ರಾಮ್, ಟಿವಿ 9, ಮೈಸೂರು)